ಬೇಕಾಬಿಟ್ಟಿ ಸಂಚರಿಸಿದರೆ ವಾಹನ ಜೊತೆಗೆ ಸವಾರರನ್ನು ವಶಕ್ಕೆ: ಕಮಲ್ ಪಂತ್ ಎಚ್ಚರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 22- ಇನ್ನೂ ಮುಂದೆ ಅನಗತ್ಯವಾಗಿ ಸಂಚಾರ ಮಾಡುವ ವಾಹನಗಳನ್ನು ಜಪ್ತಿ ಮಾಡುವ ಜೊತೆಗೆ ವಾಹನಗಳ ಸವಾರರು ಮತ್ತು ಚಾಲಕರನ್ನು ವಶಕ್ಕೆ ತೆಗೆದುಕೊಳ್ಳಲು ನಿರ್ಧರಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ ನೀಡಿದ್ದಾರೆ.

ಮೇ 24ರವರೆಗೆ ಘೋಷಣೆಯಾಗಿದ್ದ ಲಾಕ್ ಡೌನ್ ಅನ್ನು ಮತ್ತೆ 14 ದಿನಗಳ ಕಾಲ ಅಂದರೆ ಜೂನ್ 7ರವರೆಗೆ ವಿಸ್ತರಣೆ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಅದರ ಬೆನ್ನಲ್ಲೆ ನಿನ್ನೆ ಸಂಜೆ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬಿಗಿಯಾದ ಲಾಕ್ ಡೌನ್ ಜಾರಿಗೆ ತರಲು ಸೂಚನೆ ನೀಡಿದ್ದರು. ಬೆಂಗಳೂರು ನಗರ ಹಾಗೂ ಸುತ್ತ ಮುತ್ತ ಜನ ಅನಗತ್ಯವಾಗಿ ಸಂಚರಿಸುತ್ತಿದ್ದಾರೆ. ಅದನ್ನು ತಡೆಯಲು ಪೊಲೀಸರು ಬಿಗಿ ಕ್ರಮ ಕೈಗೊಳ್ಳಲಿದ್ದಾರೆ ಎಂದು ಹೇಳಿದರು.

ಅದರಂತೆ ಇಂದು ಬೆಳಗ್ಗೆ ನಗರ ಪೊಲೀಸ್ ಆಯುಕ್ತರು ನಗರ ಸಂಚಾರ ನಡೆಸಿದರು. ಹಡ್ಸನ್ ವೃತ್ತ, ಚಾಲುಕ್ಯ ವೃತ್ತ, ಮೆಕ್ರಿ ವೃತ್ತ, ಕೋಗಿಲು ಕ್ರಾಸ್, ಆರ್ ಎಂ ವಿ ಎಕ್ಸ್ ಟೆನ್ಷನ್ ಸೇರಿದಂತೆ ಹಲವೆಡೆ ಸಂಚಾರ ಮಾಡಿದರು. ಇಂದು ಬೆಂಗಳೂರಿನ ಎಲ್ಲಾ ಪೊಲೀಸರು ತಪಾಸಣೆಯಲ್ಲಿ ತೊಡಗಿದ್ದರು.

ಈ ಕುರಿತು ಮಾಹಿತಿ ನೀಡಿದ ಆಯುಕ್ತರು ನಿನ್ನೆಯವರೆಗೂ ಅನಗತ್ಯವಾಗಿ ಸಂಚರಿಸುವ ವಾಹನಗಳನ್ನು ಜಪ್ತಿ ಮಾಡಲಾಗುತ್ತಿತ್ತು. ಇಂದಿನಿಂದ ಅನಗತ್ಯವಾಗಿ ಸಂಚರಿಸುವ ವಾಹನಗಳ ಜಪ್ತಿಯ ಜೊತೆಗೆ ವಾಹನಗಳ ಚಾಲಕರನ್ನು, ಹಿಂಬದಿ ಸವಾರರನ್ನು ವಶಕ್ಕೆ ಪಡೆಯಲಾಗುವುದು ಎಂದು ತಿಳಿಸಿದ್ದಾರೆ.

ನಮ್ಮಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಪರಿಶೀಲನೆಯಲ್ಲಿ ತೊಡಗಿದ್ದಾರೆ, ಪ್ರತಿಯೊಂದು ವಾಹನವನ್ನು ಪರಿಶೀಲನೆ ನಡೆಸಲಾಗುತ್ತದೆ. ನಿಗದಿತ ಉದ್ದೇಶವಿಲ್ಲದೆ ಅನಗತ್ಯವಾಗಿ ಸಂಚರಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಹೇಳಿದರು.

ವಶ ಪಡಿಸಿಕೊಂಡವರನ್ನು ತೀವ್ರ ವಿಚಾರಣೆಗೆ ಒಳಪಡಿಸಿ ಅನಗತ್ಯವಾಗಿ ಸಂಚರಿಸುವುದು ದೃಢವಾದರೆ ಪ್ರಕೃತಿ ವಿಕೋಪ ಕಾಯ್ದೆಯ ಅಡಿ ಕ್ರಮ ಜರುಗಿಸುವ ಸಾಧ್ಯತೆ ಇದೆ ಎಂದು ತಿಳಿಸಲಾಗಿದೆ.

Facebook Comments