ನಾಗರಿಕರ ಭದ್ರತೆ – ಸುರಕ್ಷತೆಗೆ ಆದ್ಯತೆ : ಕಮಲ್‍ಪಂತ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.26- ನಾಗರಿಕರ ಸುರಕ್ಷತೆ ಹಾಗೂ ಭದ್ರತೆ ದೃಷ್ಟಿಯಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಿ ಅಪರಾಧ ಚಟುವಟಿಕೆಗಳು ನಡೆಯದಂತೆ ನಿಗಾವಹಿಸಬೇಕು ಎಂದು ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಕಿವಿಮಾತು ಹೇಳಿದರು. ನಗರ ಹೊರವಲಯದ ಉಲ್ಲಾಳುವಿನಲ್ಲಿರುವ ಬೆಂಗಳೂರು ನಗರ ಸಶಸ್ತ್ರ ಮೀಸಲು ಪಡೆ ಪಶ್ಚಿಮ ಘಟಕದ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಆಯುಕ್ತರು, ಈ ಭಾಗದಲ್ಲಿ ಮೀಸಲು ಪಡೆ ಕಚೇರಿ ಪ್ರಾರಂಭವಾಗಿರುವುದು ಪೊಲೀಸ್ ಇಲಾಖೆಗೆ ಸುದಿನ ಎಂದು ಬಣ್ಣಿಸಿದರು.

2017ರಲ್ಲೇ ಇಲ್ಲಿ ಕಚೇರಿ ಪ್ರಾರಂಭವಾಗಬೇಕಿತ್ತು. ಕಾರಣಾಂತರಗಳಿಂದ ಸಾಧ್ಯವಾಗಿರಲಿಲ್ಲ. ಸಿಎಆರ್ ಡಿಸಿಪಿ ಸಿದ್ದರಾಜು ಅವರ ಪರಿಶ್ರಮದಿಂದ ಸದ್ಯ ಬಾಡಿಗೆ ಕಟ್ಟಡದಲ್ಲಿ ಕಚೇರಿ ತೆರೆಯಲಾಗಿತ್ತು. ಸರ್ಕಾರ ಪೊಲೀಸ್ ಇಲಾಖೆಗೆ ಉಲ್ಲಾಳು ಗ್ರಾಮದ ಬಳಿ ಸುಮಾರು 20 ಎಕರೆ ಜಮೀನನ್ನು ಬಹಳ ಹಿಂದೆಯೇ ಮಂಜೂರು ಮಾಡಿದೆ ಎಂದರು.
ಸಿಎಆರ್ ಡಿಸಿಪಿ ಸಿದ್ದರಾಜು ಮಾತನಾಡಿ, ಸಿಎಆರ್ ಕಚೇರಿ ಈ ಭಾಗದಲ್ಲಿ ಶುರುವಾಗಿರುವುದು ನಾಗರಿಕರಿಗೆ ಸಂತಸ ತಂದಿದೆ. ಅಪರಾಧ ಮುಕ್ತ ಸಮಾಜ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಅಪರ ಪೊಲೀಸ್ ಆಯುಕ್ತ ಮುರುಘನ್, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.

Facebook Comments