ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ಸಿಬ್ಬಂದಿಗಳಿಗೆ ಸೂಕ್ತ ಭದ್ರತೆ : ಕಮಲ್ ಪಂತ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.8- ಮುಷ್ಕರದ ಸಂದರ್ಭದಲ್ಲಿ ಕರ್ತವ್ಯಕ್ಕೆ ಹಾಜರಾಗುವ ಸಾರಿಗೆ ಸಿಬ್ಬಂದಿಗಳಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಭರವಸೆ ನೀಡಿದ್ದಾರೆ. ನಗರದಲ್ಲಿ ಇಂದು ವಿವಿಧ ಬಸ್ ನಿಲ್ದಾಣಗಳು ಮತ್ತು ಡಿಪೋಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಖಾಸಗಿ ಬಸ್ ಹಾಗೂ ಇತರ ವಾಹನಗಳು ಸಂಚಾರ ನಡೆಯುತ್ತಿರುವುದರಿಂದ ಮುಷ್ಕರದಿಂದ ಜನ ಸಾಮಾನ್ಯರಿಗೆ ಹೆಚ್ಚಿನ ತೊಂದರೆಯಾಗಿಲ್ಲ ಎಂದು ಸ್ಪಷ್ಟ ಪಡಿಸಿದರು.

ಕರ್ತವ್ಯಕ್ಕೆ ಹಾಜರಾಗುವ ಚಾಲಕರು, ನಿರ್ವಾಹಕರು ಸೇರಿದಂತೆ ನಿಗಮಗಳ ಸಿಬ್ಬಂದಿಗಳಿಗೆ ಸೂಕ್ತ ಭದ್ರತೆ ಒದಗಿಸಲಾಗುವುದು. ಯಾವುದೇ ರೀತಿಯ ಬೆದರಿಕೆಗಳಿದ್ದರೆ ಪೊಲೀಸರಿಗೆ ತಿಳಿಸುವಂತೆ ಸೂಚನೆ ನೀಡಲಾಗಿದೆ. ಸಾರಿಗೆ ಬಸ್‍ಗಳ ಸಂಚಾರ ಆರಂಭಗೊಂಡಿದೆ. ಪ್ರಯಾಣಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.

ಇದಕ್ಕೂ ಮುನ್ನ ಬನಶಂಕರಿ, ಶಾಂತಿನಗರ ಬಸ್ ನಿಲ್ದಾಣಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಕೆಂಪೇಗೌಡ ಬಸ್‍ನಿಲ್ದಾಣಕ್ಕೆ ಆಗಮಿಸಿ ಖಾಸಗಿ ಬಸ್‍ಗಳ ಚಾಲಕ ಸಿಬ್ಬಂದಿಗಳ ಜೊತೆ ಮಾತುಕತೆ ನಡೆಸಿದರು. ಹೊರ ರಾಜ್ಯಗಳಿಗೆ ತೆರಳಲು ಸಿದ್ದವಾಗಿದ್ದ ಬಸ್‍ಗಳ ಪ್ರಯಾಣಿಕರ ಜೊತೆಯೂ ಸಮಾಲೋಚನೆ ನಡೆಸಿದರು. ಭದ್ರತೆ ಹಾಗೂ ಬಸ್ ಸೌಲಭ್ಯಗಳ ಕುರಿತು ಪರಿಶೀಲಿಸಿದರು.

ಸಾರಿಗೆ ನಿಗಮಗಳ ಸಿಬ್ಬಂದಿ ಜೊತೆ ಚರ್ಚೆ ನಡೆಸಿದ ಆಯುಕ್ತರು, ನಿಮಗೆ ಕೆಲಸ ಮಾಡಲು ಯಾರಾದರೂ ಅಡ್ಡಿ ಪಡಿಸುತ್ತಿದ್ದಾರೆಯೇ, ಅನಪೇಕ್ಷಿತ ಒತ್ತಡ ಇದೆಯೇ ಎಂದು ಪ್ರಶ್ನಿಸಿದರು. ನೀವು ಕೆಲಸಕ್ಕೆ ಹಾಜರಾದರೆ ಎಲ್ಲಾ ರೀತಿಯ ಭದ್ರತೆ ಒದಗಿಸುತ್ತೇವೆ ಎಂದು ಸಿಬ್ಬಂದಿಗಳಿಗೆ ಭರವಸೆ ನೀಡಿದರು.

Facebook Comments

Sri Raghav

Admin