BIG NEWS : ಬರೋಬ್ಬರಿ 1300 ಕೆಜಿ ಗಾಂಜಾ ವಶ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.10- ಬೆಂಗಳೂರು ಪೊಲೀಸ್ ಇಲಾಖೆ ಇತಿಹಾಸದಲ್ಲೇ ಅತ್ಯಧಿಕ ಪ್ರಮಾಣದ ಗಾಂಜಾವನ್ನು ವಶಪಡಿಸಿಕೊಂಡಿರುವ ನಾಲ್ವರು ಆರೋಪಿಗಳನ್ನು ಭೇದಿಸಿದ್ದಾರೆ.

ಮಾದಕ ವಸ್ತುಗಳ ವಿರುದ್ಧ ಸಮರ ಸಾರಿರುವ ಪೊಲೀಸರು 1350.300 ಕೆಜಿ ಗಾಂಜಾವನ್ನು ಜಪ್ತಿ ಮಾಡಿದ್ದು, ಬೆಂಗಳೂರಿನ ಗಾಯತ್ರಿನಗರದ ಆಟೋ ಚಾಲಕ ಜ್ಞಾನ ಶೇಖರ್(37), ವಿಜಯಪುರ ಜಿಲ್ಲೆ ಸಿಂಧಗಿ ತಾಲೂಕಿನ ಸಿದ್ದುನಾಥ ಲಾವಟೆ(22), ಬೀದರ್ ಜಿಲ್ಲೆ ಔರಾದ್ ತಾಲೂಕಿನ ನಾಗನಾಥ್(39), ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ಚಂದ್ರಕಾಂತ್(34) ಅವರುಗಳನ್ನು ಬಂಧಿಸಲಾಗಿದೆ.

ಬಂಧಿತರ ಪೈಕಿ ಸಿದ್ದುನಾಥ, ನಾಗನಾಥ ಎಸ್‍ಎಸ್‍ಎಲ್‍ಸಿ ವ್ಯಾಸಾಂಗ ಮಾಡಿದ್ದು, ಚಂದ್ರಕಾಂತ್ 7ನೇ ತರಗತಿಯವರೆಗೂ ಮಾತ್ರ ಓದಿದ್ದಾನೆ. ಸಿದ್ದುನಾಥ 30 ಎಕರೆಗೂ ಹೆಚ್ಚಿನ ಜಮೀನು ಹೊಂದಿದ್ದು ಆಂಧ್ರಪ್ರದೇಶದಿಂದ ಗಾಂಜಾ ತರಿಸಿಕೊಳ್ಳುತ್ತಿದ್ದ.

ಪೈನಾನ್ಸ್ ವ್ಯವಹಾರ ಮಾಡುತ್ತಿದ್ದ ನಾಗನಾಥ್ ಲಾಕ್‍ಡೌನ್ ವೇಳೆ ನಷ್ಟವಾಗಿ ಮಾದಕ ವಸ್ತು ವ್ಯವಹಾರದತ್ತ ಮುಖ ಮಾಡಿದ್ದ.ಚಂದ್ರಕಾಂತ್ ಕುರಿ ಸಾಕಾಣಿಕೆ ಮಾಡುತ್ತಲೇ ನಾಲ್ಕೈದು ವರ್ಷಗಳಿಂದ ಗಾಂಜಾ ದಂಧೆಯಲ್ಲಿ ತೊಡಗಿದ್ದಾನೆ.

ಆಗಸ್ಟ್ 30 ರಂದು ಶೇಷಾದ್ರಪುರಂ ಠಾಣೆಯ ಇನ್ಸ್‍ಪೆಕ್ಟರ್ ಎಂ.ಎಲ್.ಕೃಷ್ಣಮೂರ್ತಿ ಅವರಿಗೆ ಬಂದ ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದಾಗ ವಿವಿಗಿರಿ ಕಾಲೋನಿ, ಓಂ ಶಕ್ತಿ ದೇಗುಲದ ಹಿಂಭಾಗದಲ್ಲಿ ಆಟೋ ನಿಲ್ಲಿಸಿಕೊಂಡು ಜ್ಞಾನಶೇಖರ್(37) ಎಂಬ ವ್ಯಕ್ತಿ ಗಾಂಜಾ ಮಾರಾಟ ಮಾಡುತ್ತಿದ್ದ. ತಕ್ಷಣ ಆತನನ್ನು ಬಂಧಿಸಿ ಸ್ಥಳದಲ್ಲೇ 2ಕೆಜಿ 100 ಗ್ರಾಂ ಮತ್ತು ಆಟೋ ಜಪ್ತಿ ಮಾಡಲಾಯಿತು.

ಗಾಂಜಾದ ಮೂಲ ಬೆನ್ನತ್ತಿದ ಪೊಲೀಸರಿಗೆ ಜ್ಞಾನಶೇಖರ್ ಮಾಹಿತಿ ಹಿಡಿದು ಸಿದ್ದುನಾಥ ಲಾವಟೆ ಎಂಬಾತ ಗಾಂಜಾ ಪೂರೈಸುತ್ತಿದ್ದುದಾಗಿ ಹೇಳಿದ್ದಾನೆ. ಆತನನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ 200 ಗ್ರಾಂ ಗಾಂಜಾ ಪತ್ತೆಯಾಗಿದೆ. ಸಿದ್ದುನಾಥ ಲಾವಟೆ ಮಾಹಿತಿ ಆಧರಿಸಿ ಬೀದರ್, ಕಲಬುರಗಿಯಲ್ಲಿ ಕಾರ್ಯಾಚರಣೆ ನಡೆಸಲಾಗಿದ್ದು ಕಮಲಾಪುರ ಬಳಿ ಎನ್‍ಎಚ್-50ರಲ್ಲಿ ಕಾರ್ಯಾಚರಣೆ ನಡೆಸಿ 150 ಕೆಜಿ ಗಾಂಜಾ ಜಪ್ತಿ ಮಾಡಲಾಗಿದೆ.

ತನಿಖೆಯಲ್ಲಿ ದೊರೆತ ಮಾಹಿತಿ ಆಧರಿಸಿ ಚಂದ್ರಕಾಂತ್ ಮತ್ತು ನಾಗನಾಥ್ ಗಾಗಿ ಹುಡುಕಾಟ ನಡೆಯುತ್ತಿತ್ತು. ಇದೇ ವೇಳೆ ಕಲಬುರಗಿಯ ಮಾಡಗೂಡ್ ಟೋಲ್ ಬಳಿ ಅಡಗಿದ್ದ ಈ ಇಬ್ಬರನ್ನು ಬಂಧಿಸಿ ವಿಚಾರಣೆಗೊಳಪಡಿಸಿದಾಗ ಕುರಿ ಫಾರಂನಲ್ಲಿ ಗಾಂಜಾ ಇರಿಸಿರುವುದಾಗಿ ಮಾಹಿತಿ ನೀಡಿದ್ದಾರೆ.

ಚಂದ್ರಕಾಂತ್‍ಗೆ ಸೇರಿದ್ದ ಕುರಿ ಫಾರಂನಲ್ಲಿ ಕುರಿಗಳು ಇರಲಿಲ್ಲ. ಗಾಂಜಾ ಕೂಡ ಕಂಡುಬರಲಿಲ್ಲ. ಮತ್ತಷ್ಟು ತೀವ್ರ ವಿಚಾರಣೆಗೊಳಪಡಿಸಿದಾಗ ನೆಲದ ಮೇಲಿನ ಮಣ್ಣನ್ನು ಸ್ವಲ್ಪ ಸರಿಸಿದಾಗ ಹಲಗೆಯೊಂದು ಕಂಡು ಬಂದಿತು. ಹಲಗೆಯನ್ನು ತೆಗೆದು ನೋಡಿದಾಗ ಒಳಗೆ 5 ಅಡಿ ಅಂಡರ್ ಗ್ರೌಂಡ್ ನಿರ್ಮಿಸಲಾಗಿದ್ದು ಅಲ್ಲಿ ಗಾಂಜಾ ಪ್ಯಾಕೇಟ್‍ಗಳನ್ನು ಸಂಗ್ರಹಿಸಲಾಗಿತ್ತು. ಸುಮಾರು 600 ಪ್ಯಾಕೆಟ್‍ಗಳಲ್ಲಿ 1200 ಕೆಜಿ ಗಾಂಜಾ ಪತ್ತೆಯಾಗಿದೆ.

ಚಂದ್ರಕಾಂತ್ ಮತ್ತು ನಾಗನಾಥ್ ಐಷರ್ ವಾಹನದಲ್ಲಿ ತರಕಾರಿ ತರುವ ಸಲುವಾಗಿ ತೆಲಂಗಾಣಕ್ಕೆ ಹೋಗಿ ಮಧ್ಯವರ್ತಿಗಳಿಂದ ಗಾಂಜಾ ಪ್ಯಾಕೇಟ್‍ಗಳನ್ನು ತರುತ್ತಿದ್ದರು. ಕೆಳಭಾಗದಲ್ಲಿ ಗಾಂಜಾಗಳನ್ನು ಅಡಗಿಸಿಟ್ಟು ಮೇಲೆ ತರಕಾರಿ ತುಂಬಿ ಚೆಕ್‍ಪೋಸ್ಟ್‍ಗಳಲ್ಲಿ ಪೊಲೀಸರನ್ನು ಯಾಮಾರಿಸಲಾಗುತ್ತಿತ್ತು. ಅಲ್ಲಿಂದ ಕುರಿ ಫಾರಂಗೆ ಸಾಗಿಸಿ ಬಚ್ಚಿಡುತ್ತಿದ್ದರು.

ಆರೋಪಿಗಳು ಆಂಧ್ರಪ್ರದೇಶದಲ್ಲಷ್ಟೇ ಅಲ್ಲ; ಒರಿಸ್ಸಾದಿಂದಲೂ ಗಾಂಜಾ ತರಿಸಿಕೊಳ್ಳುತ್ತಿದ್ದರು. ಒರಿಸ್ಸಾದ ಕೆಲವು ಪ್ರದೇಶಗಳಲ್ಲಿ ಬೆಳೆಯಲಾಗುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚು ಓದಿಲ್ಲದ ಆರೋಪಿಗಳು ಮೇಲ್ನೋಟಕ್ಕೆ ಕುರಿ ಕಾಯುವವರಂತೆ, ಸಣ್ಣ ಪುಟ್ಟ ಕೆಲಸ ಮಾಡುವವರಂತೆ ವೇಷ ತೊಟ್ಟು ಗಾಂಜಾ ದಂಧೆ ನಡೆಸುತ್ತಿದ್ದು, ಶಾಲಾ-ಕಾಲೇಜು ಬಳಿ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ.

Facebook Comments