ಕಮಲೇಶ್ ತಿವಾರಿ ಕೊಲೆ : ಇಬ್ಬರು ಮೌಲನಾ ಸೇರಿ ಐವರು ಆರೋಪಿಗಳ ಸೆರೆ

ಈ ಸುದ್ದಿಯನ್ನು ಶೇರ್ ಮಾಡಿ

ಲಕ್ನೌ, :  ಹಿಂದೂ ಮಹಾಸಭಾದ ಮಾಜಿ ಮುಖಂಡ ಮತ್ತು ಹಿಂದೂ ಸಮಾಜ ಪಾರ್ಟಿ(ಎಚ್‍ಎಸ್‍ಪಿ) ಅಧ್ಯಕ್ಷ ಕಮಲೇಶ್ ತಿವಾರಿ ಹತ್ಯೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಈ ಸಂಬಂಧ ಇಬ್ಬರು ಮೌಲನಾಗಳು ಸೇರಿದಂತೆ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬಂಧಿತರಲ್ಲಿ ಮಹಮ್ಮದ್ ಮುಫ್ತಿ ನಯೀಮ್ ಖಜ್ಮಿ ಮತ್ತು ಅನ್ವರುಲ್ ಹಕ್ ಇವರಿಬ್ಬರು ಇಮಾಮ್ ಮೌಲ್ವಿಗಳು.

ಇದೇ ವೇಳೆ ಸೂರತ್‍ನ ಮೋಹ್ಸೀನ್ ಶೇಖ್, ಫೌಜಾನ್ ಮತ್ತು ರಶೀದ್ ಅಹ್ಮದ್ ಎಂಬ ಇನ್ನೂ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.  ಲಕ್ನೌದಲ್ಲಿಂದು ಸುದ್ದಿಗೋಷ್ಟಿಯಲ್ಲಿ ಈ ವಿವರಗಳನ್ನು ಒದಗಿಸಿದ ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಸಿಂಗ್ ಉತ್ತರಪ್ರದೇಶ ಮತ್ತು ಗುಜರಾತ್ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ತಿಳಿಸಿದರು.

ಈ ಹತ್ಯೆ ಹಿಂದೆ ಭಯೋತ್ಪಾದಕರ ಕೃತ್ಯಯಿದೆ ಎಂಬ ಸಾಧ್ಯತೆಯನ್ನು ತಳ್ಳಿ ಹಾಕಿದರು. ಮುಸ್ಲಿಮರ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡುತ್ತಿದ್ದ ಕಮಲೇಶ್ ತಿವಾರಿ ಅವರನ್ನು ವೈಷಮ್ಯದಿಂದ ಕೊಲ್ಲಲಾಗಿದೆ. ಇದರ ಹಿಂದೆ ಉಗ್ರರ ಕೈವಾಡವಿಲ್ಲ ಎಂದು ಓಂ ಪ್ರಕಾಶ್ ಸಿಂಗ್ ತಿಳಿಸಿದರು.

ನಿನ್ನೆ ಉತ್ತರ ಪ್ರದೇಶದ ಖುರ್ಷಿದಾಬಾದ್‍ನ ನಾಖಾಹಿಂಡಾಲಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ದುಷ್ಕರ್ಮಿಗಳು ತಿವಾರಿಯವರನ್ನು ಹತ್ಯೆ ಮಾಡಿದ್ದರು.

Facebook Comments