ನಟಿ ಕಂಗನಾ ಮುಂಬೈ ಭೇಟಿ : ಭಾರೀ ಬಿಗಿ ಭದ್ರತೆ

ಈ ಸುದ್ದಿಯನ್ನು ಶೇರ್ ಮಾಡಿ

ಮುಂಬೈ, ಸೆ.9-ವಿವಾದಿತ ಬಾಲಿವುಡ್ ಬೆಡಗಿ ಕಂಗನಾ ರನೌತ್ ಮುಂಬೈ ಆಗಮನದ ಹಿನ್ನೆಲೆಯಲ್ಲಿ ವಿಮಾನನಿಲ್ದಾಣ ಸೇರಿದಂತೆ ಅವರು ತೆರಳುವ ಮತ್ತು ವಾಸ್ತವ ಹೂಡುವ ಸ್ಥಳಗಳಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದೆ.

ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ನಂತರ ಪ್ರಕರಣದ ತನಿಖೆ ಕುರಿತು ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರದ ವಿರುದ್ಧ ನಿರಂತರ ಟೀಕೆ ಮಾಡಿರುವ ಕಂಗನಾ ಶಿವಸೇನೆ ಕೆಂಗಣ್ಣಿಗೆ ಗುರಿಯಾಗಿದ್ದಾರೆ.

ಮುಂಬೈನನ್ನು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ) ಹಾಗೂ ಮುಂಬೈ ಪೊಲೀಸರನ್ನು ಸಿನಿಮಾ ಮಾಫಿಯಾಕ್ಕಿಂತಲೂ ಅಪಾಯಕಾರಿ ಎಂದು ಕಂಗನಾ ಟೀಕಿಸಿದ್ದರು. ವಾಲಿವುಡ್ ನಟಿಯ ಹೇಳಿಕೆಗೆ ತೀವ್ರ ಆಕ್ಷೇಪಗಳು ವ್ಯಕ್ತವಾಗಿವೆ.

ಅವರ ಮುಂಬೈ ಭೇಟಿ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆದಂತೆ ತಡೆಯಲು ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ಸಾಣ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಭಾರೀ ಬಂದೋಬಸ್ತ್ ಮಾಡಲಾಗಿದೆ. ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಂಗನಾ ಹಿಮಾಚಲ ಪ್ರದೇಶದಿಂದ ಇಂದು ಅಪರಾಹ್ನ ಮುಂಬೈಗೆ ಆಗಮಿಸಲಿದ್ದಾರೆ. ಅವರು ಕುಲು ಮನಾಲಿಯಿಂದ ಮುಂಬೈಗೆ ತೆರಳವುದಕ್ಕೂ ಮುನ್ನ ಜೈ ಮಹಾರಾಷ್ಟ್ರ ಮತ್ತು ಜೈ ಶಿವಾಜಿ ಮಹಾರಾಜ್ ಎಂದು ಜೈಕಾರ ಮಾಡಿದ್ದಾರೆ.

ನಾನು ದಿಟ್ಟ ಮಹಿಳೆ. ನಾನು ವಾಸ್ತವ ಸಂಗತಿಯನ್ನು ಹೇಳಿದ್ದೇನೆ. ನಾನು ಯಾವ ತಪ್ಪು ಮಾಡಿಲ್ಲ. ಹೀಗಾಗಿ ನಾನು ಯಾರಿಗೂ ಹೆದರುವ ಅಗತ್ಯವಿಲ್ಲ ಎಂದು ಬಾಲಿವುಡ್ ಸಿಡಿಗುಂಡು ಟ್ವೀಟ್ ಮಾಡಿದ್ದಾರೆ.  ಜೀವ ಬೆದರಿಕೆ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ಕಳೆದ ವಾರ ಫೈರ್‍ಬ್ರಾಂಡ್ ನಟಿಗೆ ಕೇಂದ್ರೀಯ ಭದ್ರತಾ ಪಡೆಗಳಿಂದ ವೈ+ ಭದ್ರತೆ ಒದಗಿಸಲಾಗಿದೆ.

ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಇತ್ತೀಚೆಗೆ ಹೇಳಿಕೆ ನೀಡಿದ್ದ ಕಂಗನಾ ಬಾಲಿವುಡ್‍ನಲ್ಲಿ ಡ್ರಗ್ಸ್ ಬಳಕೆ ಹೆಚ್ಚಾಗುತ್ತಿದ್ದು, ಇದರ ಹಿಂದೆ ವ್ಯವಸ್ಥಿತ ಜಾಲವಿದೆ ಎಂದು ಆರೋಪಿಸಿದ್ದರು. ಈ ಹೇಳಿಕೆ ನಂತರ ಮಣಿಕರ್ಣಿಕಾ ಖ್ಯಾತಿಯ ನಟಿಗೆ ಜೀವ ಬೆದರಿಕೆ ಕರೆಗಳು ಬರುತ್ತಿದೆ.

ಈ ಹಿನ್ನೆಲೆಯಲ್ಲಿ ಅವರಿಗೆ ವೈ+ ಭದ್ರತೆ ನೀಡಲಾಗಿದೆ. ವೈ+ ಭದ್ರತೆಯಲ್ಲಿ ರಕ್ಷಣೆಗೆ ಒಳಪಡುವ ಗಣ್ಯರಿಗೆ 10 ಸಶಸ್ತ್ರ ಕಮ್ಯಾಂಡೋಗಳ ಭದ್ರತೆ ನೀಡಲಾಗುತ್ತದೆ.

Facebook Comments