‘ಕನ್ನಡ್ ಗೊತ್ತಿಲ್ಲ’ ಚಿತ್ರ ಈ ವಾರ ತೆರೆಗೆ

ಈ ಸುದ್ದಿಯನ್ನು ಶೇರ್ ಮಾಡಿ

ಕನ್ನಡದ ಅಭಿಮಾನದೊಂದಿಗೆ ನಿರ್ಮಾಣಗೊಂಡಿರುವ ಕನ್ನಡ್ ಗೊತ್ತಿಲ್ಲ ಚಿತ್ರ ಈ ವಾರ ರಾಜ್ಯಾದ್ಯಂತ ಬೆಳ್ಳಿ ಪರದೆ ಮೇಲೆ ಬಿಡುಗಡೆಗೊಳ್ಳುತ್ತಿದೆ.  ಕರ್ನಾಟಕದಲ್ಲಿರುವ ಬಹುತೇಕರಿಗೆ ಕನ್ನಡ್ ಗೊತ್ತಿಲ್ಲ. ಕೆಲವೊಮ್ಮೆ ಕನ್ನಡಿಗರ ಬಾಯಲ್ಲೂ ಇಂತಹ ಹೇಳಿಕೆಗಳು ಕೇಳಿಸುತ್ತಿರುತ್ತವೆ. ಹೇಳಬೇಕೆಂದರೆ ಕನ್ನಡ್ ಗೊತ್ತಿಲ್ಲ ಕರ್ನಾಟಕದಲ್ಲಿ ಅತಿ ಹೆಚ್ಚಿನ ಜನರಿಗೆ ಚಿರಪರಿಚಿತವಾಗಿರುವ ಆಡುಮಾತು.

ಖ್ಯಾತ ರೇಡಿಯೋ ಜಾಕಿ ಆರ್‍ಜೆ ಮಯೂರ ಅವರು ವಿಶೇಷವಾದ ಶೀರ್ಷಿಕೆಯುಳ್ಳ ಈ ಸಿನಿಮಾ ಪ್ರೇಕ್ಷಕರ ಮುಂದೆ ಬರುತ್ತಿದ್ದು, ಸಾಮಾನ್ಯವಾಗಿ ಕರ್ನಾಟಕದಲ್ಲಿ ಎದುರಾಗುವ ಸಮಸ್ಯೆಯೊಂದರ ಬೆನ್ನು ಹತ್ತಿರುವ ಮಯೂರ ಅವರು ಕನ್ನಡ ಕಲಿಯದ ವಲಸಿಗರ ಬಗ್ಗೆ ಈ ಸಿನಿಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಉದ್ಯೋಗ ಅರಸಿ ಕರ್ನಾಟಕಕ್ಕೆ ಬರುವ ವಲಸಿಗರಲ್ಲಿರುವ ಕನ್ನಡ ಭಾಷೆಯ ಬಗೆಗಿನ ತಾತ್ಸಾರವನ್ನು ಈ ಶೀರ್ಷಿಕೆಯ ಮೂಲಕ ನಿರ್ದೇಶಕರು ವ್ಯಕ್ತಪಡಿಸಿದ್ದಾರೆ.

ಸಾರಿ, ನಮಗೆ ಕನ್ನಡ್ ಗೊತ್ತಿಲ್ಲ ಎಂಬುದು ಬಹು ಸುಲಭವಾಗಿ ಕೇಳಬಹುದಾದ ಮಾತು! ಉತ್ತರದ ಭಾಷೆಯಲ್ಲಿ ಕನ್ನಡ್ ಆದ ಕನ್ನಡ ಭಾಷೆಯ ಸ್ಥಿತಿಯನ್ನು ಬಿಚ್ಚಿಡುವಂತಿದೆ.
ಇಂಥ ಘೋರ ಸ್ಥಿತಿಯನ್ನು ನಾವು ಕನ್ನಡಿಗರು ಅದೆಷ್ಟು ಬಾರಿ ನಮ್ಮ ನಿಜ ಜೀವನದಲ್ಲಿ ಕಂಡು ಮರುಗಿರುತ್ತೇವೆ ಅಲ್ಲವೇ? ಈಗ ಈ ಸಂಗತಿಯನ್ನು ಆಧಾರವಾಗಿಟ್ಟುಕೊಂಡೇ ಆರ್‍ಜೆ ಮಯೂರ ಅವರು ಕನ್ನಡ್ ಗೊತ್ತಿಲ್ಲ ಎಂಬ ಸಿನಿಮಾವನ್ನು ತೆರೆಯ ಮೇಲೆ ತರುತ್ತಿದ್ದಾರೆ. ಈ ಸಿನಿಮಾ ಕಾಮಿಡಿ ಕಮ್ ಥ್ರಿಲ್ಲರ್ ಚಿತ್ರವಾಗಿದೆ.

ಈ ಚಿತ್ರದಲ್ಲಿ ಹರಿಪ್ರಿಯ ನಾಯಕಿಯಾಗಿದ್ದುಅವರ ಪ್ರಕಾರ, ನಿರ್ದೇಶಕರು ಹಾಗೂ ನಿರ್ಮಾಪಕ ಕುಮಾರ ಕಂಠೀರವ ಅವರು ಅಪ್ಪಟ ಕನ್ನಡ ಭಾಷಾ ಪ್ರೇಮಿಗಳು. ಈ ಕಾನ್ಸೆಪ್ಟ್ ನನಗೂ ಇಂಟ್ರೆಸ್ಟಿಂಗ್ ಎನ್ನಿಸಿತು. ಜೊತೆಗೆ ಕನ್ನಡ ನಾಡಲ್ಲೇ ಇದ್ದುಕೊಂಡು ಅದ್ಹೇಗೆ ಕನ್ನಡ ಕಲಿಯುವುದಿಲ್ಲ ಎಂದು ನಾನು ಕೂಡ ಯೋಚಿಸಿದ್ದೇನೆ. ಪ್ರತಿಯೊಬ್ಬರೂ ಕನ್ನಡವನ್ನು ಕಲಿಯುವುದು ಬಹಳ ಮುಖ್ಯವಾಗಿದೆ. ಏನೇ ಆಗಲಿ ಕನ್ನಡ್ ಗೊತ್ತಿಲ್ಲ ಎಂಬ ತಾತ್ಸಾರ ಸಿನಿಮಾ ಮೂಲಕವಾದರೂ ಕಡಿಮೆಯಾಗಲಿ ಎಂಬುದು ನಮ್ಮ ಸಿನಿಮಾದ ಆಶಯ ಎಂದು ಹೇಳಿದ್ದಾರೆ.

ಕನ್ನಡ ಭಾಷೆ, ಕನ್ನಡ ನಾಡು ನಮಗೆ ದೇವರ ಸಮಾನ. ಹಾಗಾಗಿ ಇಂಥ ವಿಷಯದ ಮೇಲೆ ಮೂಡಿಬರುತ್ತಿರುವ ಚಿತ್ರವನ್ನು ನಾನು ನಿರ್ಮಾಣ ಮಾಡುತ್ತಿರುವುದು ಸಂತಸ ತಂದಿದೆ. ಚಿತ್ರವನ್ನು ನೋಡಿದ ಮೇಲೆ ಕನ್ನಡ ಭಾಷೆಯ ಮೇಲೆ ಜನರ ಗೌರವ ಇನ್ನಷ್ಟು ಹೆಚ್ಚಾಗಲಿದೆ ಎಂಬ ನಂಬಿಕೆ ನನಗಿದೆ ಎನ್ನುತ್ತಾರೆ ನಿರ್ಮಾಪಕ ಕುಮಾರ ಕಂಠೀರವ.

ಉಳಿದಂತೆ ಈ ಚಿತ್ರದಲ್ಲಿ ಸುಧಾರಾಣಿ, ಪವನ್ ಕುಮಾರ್, ಧರ್ಮಣ್ಣ, ಸಂತೋಷ್ ಕರ್ಕಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ. ಈ ಚಿತ್ರಕ್ಕೆ ಗಿರಿಧರ್ ದಿವಾನ್ ಅವರ ಛಾಯಾಗ್ರಹಣ ಹಾಗೂ ಸಂಕಲನವಿದೆ. ನಕುಲ್ ಅಭಯಂಕರ ಅವರ ಸಂಗೀತ ಸಂಯೋಜನೆಯಿದೆ.  ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿರುವ ಈ ಚಿತ್ರ ಇದೇ ವಾರ ರಾಜ್ಯಾದ್ಯಂತ 100ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿದೆ.

Facebook Comments