600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ನಟ ಸತ್ಯಜಿತ್ ಇನ್ನಿಲ್ಲ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.10- ಕನ್ನಡ ಚಿತ್ರರಂಗದ ಹಿರಿಯ ನಟ ಸತ್ಯಜಿತ್ (72) ಇಂದು ಮುಂಜಾನೆ ವಿವಶರಾಗಿದ್ದಾರೆ. ಸುಮಾರು 600ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿರುವ ಅವರು ಕಳೆದ ಹಲವು ದಿನಗಳಿಂದ ಗ್ಯಾಂಗ್ರಿನ್ ರೋಗದಿಂದಾಗಿ ಬಳಲುತ್ತಿದ್ದರು. ನಡೆದಾಡಲು ಕೂಡ ಆಗದಂತಹ ಪರಿಸ್ಥಿತಿಯಲ್ಲಿ ಇದ್ದರು.

ಹಲವು ದಿನಗಳ ಹಿಂದೆ ಬೌರಿಂಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆಯಲ್ಲಿ ಹೃದಯಾಘಾತ ಸಂಭವಿಸಿತ್ತು. ವೈದ್ಯರ ಸತತ ಪ್ರಯತ್ನದಿಂದ ಆಗ ಜೀವ ಉಳಿಯುತ್ತಾದರೂ ಗ್ಯಾಂಗ್ರಿನ್‍ನಿಂದ ಬಹಳಷ್ಟು ನೊಂದಿದ್ದರು. ಆರೋಗ್ಯ ಹದಗೆಟ್ಟು ಹಾಸಿಗೆ ಹಿಡಿದಿದ್ದ ಅವರಿಗೆ ಚಿಕಿತ್ಸೆ ಕೊಡಿಸಲು ಕುಟುಂಬಸ್ಥರು ಕೂಡ ಹಿಂದೇಟು ಹಾಕುತ್ತಿದ್ದರು.

ಇತ್ತೀಚೆಗೆ ಈ ಸಂಜೆ ಯೂ ಟ್ಯೂಬ್ ಚಾನೆಲ್ ಜತೆ ಮಾತನಾಡಿದ್ದ ಸತ್ಯಜಿತ್ ಅವರು ಕಷ್ಟ ಕಾಲದಲ್ಲಿ ಯಾರೂ ಕೂಡ ನೆರವಿಗೆ ಬರುವುದಿಲ್ಲ. ಕೆಲವರು 500, 1000, 2000 ರೂ.ಗಳನ್ನು ನೀಡಿ ಸಮಾಧಾನ ಮಾಡುತ್ತಿದ್ದರು. ಅದೆಲ್ಲಾ ವೆಚ್ಚವಾಗುತ್ತಿತ್ತು.ಔಷಧಕ್ಕಾಗಿ ಪ್ರತಿ ತಿಂಗಳು 30 ರಿಂದ 40 ಸಾವಿರ ರೂ. ಬೇಕಾಗುತ್ತಿತ್ತು. ಅದನ್ನು ಹೊಂಚಿ ಕೊಳ್ಳುವುದೇ ಪ್ರಯಾಸವಾಗಿತ್ತು ಎಂದು ನೋವು ತೋಡಿಕೊಂಡಿದ್ದರು.

ಮೂಲತಃ ಅವರ ಹೆಸರು ಸಯ್ಯದ್ ನಿಜಾಮುದ್ಜೀನ್ ಸತ್ಯಜಿತ್ ಎಂದಿದ್ದರು ಕೂಡ ಅವರನ್ನು ಸತ್ಯಜಿತ್ ಎಂಬ ಹೆಸರಿನಲ್ಲಿ ಖಳನಾಯಕ ಹಾಗೂ ಪೋಷಕ ಪಾತ್ರಗಳಲ್ಲಿ ಹಲವಾರು ಚಿತ್ರಗಳಲ್ಲಿ ಮನೋಜ್ಞ ಅಭಿನಯವನ್ನು ನೀಡಿದ್ದರು.ಕೇವಲ 10ನೆ ತರಗತಿ ಓದಿದ್ದರೂ ಕೂಡ ಅವರಿಗೆ ಬಣ್ಣದ ಲೋಕದ ಮೇಲೆ ಅಪಾರವಾದಂತಹ ಆಸಕ್ತಿ ಇತ್ತು. ಒಂದು ಕಾಲದಲ್ಲಿ ಬಹು ಬೇಡಿಕೆಯ ನಟರಾಗಿದ್ದ ಅವರು ಕೊನೆಯ ದಿನಗಳಲ್ಲಿ ಅನಾರೋಗ್ಯದಿಂದ ನರಳಿ ಕೊನೆಯುಸಿರೆಳೆದಿರುವುದು ವಿಪರ್ಯಾಸ.

ಪತ್ನಿ ಮೂವರು ಮಕ್ಕಳು ಹಾಗೂ ಅಪಾರ ಅಭಿಮಾನಿಗಳನ್ನು ಸತ್ಯಜಿತ್ ಅಗಲಿದ್ದಾರೆ. 1986ರಲ್ಲಿ ಅರುಣರಾಗ ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ಖ್ಯಾತ ನಟರ ಜತೆ ನಟಿಸಿ ಸೈ ಎನಿಸಿಕೊಂಡಿದ್ದರು. ಕಳೆದ 4 ವರ್ಷಗಳ ಹಿಂದೆ ಅವರಿಗೆ ಗ್ಯಾಂಗ್ರಿನ್‍ಗೆ ತುತ್ತಾಗಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಆಗ ರಾಜ್ಯ ಸರ್ಕಾರ ಧನ ಸಹಾಯ ಮಾಡಿತ್ತು.

Facebook Comments

Sri Raghav

Admin