ಡ್ರಗ್ಸ್ ವಿವಾದ : ಚಲನಚಿತ್ರ ವಾಣಿಜ್ಯ ಮಂಡಳಿ ಎಂಟ್ರಿ, ಇಲ್ಲಿದೆ ಸುದ್ದಿಘೋಷ್ಠಿಯ ಹೈಲೈಟ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಸೆ.2- ಚಂದನವನಕ್ಕೆ ಕಳಂಕವೆನಿ ಸಿರುವ ಈ ಡ್ರಗ್ಸ್ ವಿಚಾರವಾಗಿ ಸದ್ಯದ ಪರಿಸ್ಥಿತಿಯಲ್ಲಿ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ತಿಳಿಸಿದ್ದಾರೆ.

ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜ್ ನೇತೃತ್ವದಲ್ಲಿ ಚಿತ್ರರಂಗದಲ್ಲಿ ಡ್ರಗ್ಸ್ ಮಾಫಿಯಾ ಕುರಿತು ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಾಗಲೇ ಈ ವಿಷಯದ ಬಗ್ಗೆ ಕಂಪ್ಲೈಂಟ್ ಆಗಿದೆ.

ಈಗಾಗಲೇ ತನಿಖೆ ಹಂತದಲ್ಲಿದೆ. ಯಾರು, ಯಾವ ಕಾರಣಕ್ಕೆ ಇದನ್ನು ಅವಲಂಬಿಸಿದರು ಎಂಬೆಲ್ಲ ವಿಷಯಗಳು ಹೊರಬರಬೇಕಿದೆ. ಆನಂತರವಷ್ಟೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯ ಎಂದರು. ಆರೋಪಗಳು ವೈಯಕ್ತಿಕವಾಗಿ ಬಂದಿವೆ. ಆದರೆ ಇಂತಹ ವಿಷಯದಲ್ಲಿ ತನಿಖೆ ನಡೆದು ಆರೋಪ ಸಾಬೀತಾಗ ಬೇಕಿದೆ. ನಂತರವಷ್ಟೇ ಏನು ಮಾಡಬೇಕೆಂಬುದನ್ನು ಚಿಂತನೆ ನಡೆಸಲಿದ್ದೇವೆ.

ಕೊರೊನಾ ಹಿನ್ನೆಲೆಯಲ್ಲಿ ಕನ್ನಡ ಚಿತ್ರೋದ್ಯಮದ ಬೆಳವಣಿಗೆ ಸಾಕಷ್ಟು ಕುಂಠಿತವಾಗಿವೆ. ಚಿತ್ರೋದ್ಯಮದ ಚಟುವಟಿಕೆಗಳು ಆರಂಭವಾದರೆ ಸಾಕು ಎಂದು ಕಲಾವಿದರಾದಿಯಾಗಿ ಎಲ್ಲರೂ ಕಾಯುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಇಂತಹ ವಿಚಾರ ಪ್ರಾಮುಖ್ಯತೆ ಪಡೆಯುವುದು ಬೇಡ ಎಂದು ಹೇಳಿದರು.

ನಾಲ್ಕು ಜನ ಮಾಡಿದ ತಪ್ಪಿಗೆ ಇಡೀ ಚಿತ್ರೋದ್ಯಮಕ್ಕೆ ಕಳಂಕ ಹೊರಿಸುವುದು ಬೇಡ ಎಂದು ಹಿರಿಯ ನಟ ದೊಡ್ಡಣ್ಣ ಮನವಿ ಮಾಡಿದ್ದಾರೆ. ಚಿತ್ರರಂಗ ಸಾಕಷ್ಟು ಕಷ್ಟದಲ್ಲಿದೆ. ಇಂತಹ ವಿಚಾರ ದೊಡ್ಡದಾಗುವುದು ಬೇಡ ಎಂದ ಅವರು ಈ ಹಿಂದೆ ಚಿತ್ರೀಕರಣದ ಸಂದರ್ಭದಲ್ಲಿ ಒಂದು ಸಿಗರೇಟ್ ಸೇದಲು ನಾವು ಹೆದರುತ್ತಿದ್ದೆವು.

ಇನ್ನು ಮದ್ಯಪಾನ ಸೇವಿಸಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುವುದಂತೂ ದೂರದ ಮಾತಾಗಿತ್ತು. ಆದರೆ ಇಂದು ಕೇಳಿಬರುತ್ತಿರುವ ಈ ಡ್ರಗ್ಸ್ ವಿಚಾರ ನಿಜಕ್ಕೂ ಬೇಸರ ತರಿಸಿದೆ.

ಇಂತಹ ವಿಚಾರಗಳನ್ನು ಬೆಳೆಯಲು ಬಿಡಬಾರದು. ಇಂತಹ ತಪ್ಪು ಹೆಜ್ಜೆ ಇಟ್ಟಿರುವ ನಾಲ್ಕಾರು ಮಂದಿಯಿಂದ ಇಡೀ ಚಿತ್ರೋದ್ಯಮಕ್ಕೆ ಕೆಟ್ಟ ಹೆಸರು ತರುವುದು ಬೇಡ ಎಂದು ಹೇಳಿದರು. ಸಾ.ರಾ.ಗೋವಿಂದು ಮಾತನಾಡಿ, ಮಾಫಿಯಾದಲ್ಲಿ ಚಿತ್ರರಂಗದ ಕೆಲವರು ಇರುವ ವಿಚಾರವನ್ನು ಮೊದಲೇ ಇಂದ್ರಜಿತ್ ನಮ್ಮೊಂದಿಗೆ ಹೇಳಿದ್ದರೆ ಅವರನ್ನು ಕರೆಸಿ ಒಂದು ಹಂತದಲ್ಲಿ ಇದನ್ನು ನಿಯಂತ್ರಿಸಬಹುದಾಗಿತ್ತು.

ಈಗ ಈ ಸಮಸ್ಯೆ ಬೃಹದಾಕಾರವಾಗಿದೆ. ಇದನ್ನು ಬಗೆಹರಿಸಲು ಕಷ್ಟ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ವಹಿಸುತ್ತದೆ. ಅವರನ್ನು ಹೇಗೆ ಎಲ್ಲಿಡಬೇಕು ಎಂಬುದನ್ನು ನಾವು ನಿರ್ಧಾರ ಮಾಡುತ್ತೇವೆ ಎಂದರು.  15 ಜನರ ಹೆಸರಗಳನ್ನು ಇಂದ್ರಜಿತ್ ಹೇಳಿದ್ದಾರೆ ಎನ್ನಲಾಗಿದೆ. ಆದರೆ ಅವರ ವಿರುದ್ಧ ನೀಡಿರುವ ಸಾಕ್ಷಿಗಳು ಸೂಕ್ತವಾಗಿಲ್ಲ ಎಂದರು.

ಸ್ಯಾಂಡಲ್‍ವುಡ್‍ನಲ್ಲಿ ಜೋರಾಗಿರುವ ಡ್ರಗ್ಸ್ ಮಾಫಿಯಾ ಬಗ್ಗೆ ಹಲವು ಆರೋಪ ಕೇಳಿಬಂದಿರುವುದಲ್ಲದೆ ಈಗಾಗಲೇ ಈ ಪ್ರಕರಣ ಕುರಿತಂತೆ ತನಿಖೆಯು ನಡೆಯುತ್ತಿದೆ. ಇಡೀ ಚಿತ್ರರಂಗವೇ ಇದರಿಂದ ಒಂದು ರೀತಿಯ ಆತಂಕದಲ್ಲಿ ಮುಳುಗಿದ್ದು, ಇದುವರೆಗೂ ಕೊರೊನಾ ಹಿನ್ನೆಲೆಯಲ್ಲಿ ಚಿತ್ರರಂಗ ಸಾಕಷ್ಟು ಸಂಕಷ್ಟಕ್ಕೆ ಸಿಲುಕಿತ್ತು.

ಇದೀಗ ತಾನೆ ಚಿತ್ರೀಕರಣ ಆರಂಭಗೊಂಡಿದ್ದು, ಇನ್ನಷ್ಟು ಚಟುವಟಿಕೆಗಳು ಆರಂಭವಾಗಬೇಕಿದೆ. ಆಗ ಮಾತ್ರ ಚಿತ್ರೋದ್ಯಮದ ಎಲ್ಲರಿಗೂ ಉದ್ಯೋಗ ಸಿಗಲಿದೆ. ಅದರೆ ಇಂತಹ ಸಂದರ್ಭದಲ್ಲಿ ಈ ವಿಚಾರ ಇಡೀ ಚಿತ್ರೋದ್ಯಮಕ್ಕೆ ಕಂಟಕವಾಗಿ ಪರಿಣಮಿಸುವ ಭೀತಿಯೂ ಎದುರಾಗಿದೆ.

ಪತ್ರಕರ್ತ ಹಾಗೂ ನಿರ್ದೇಶಕ ಇಂದ್ರಜಿತ್ ಲಂಕೇಶ್ ಈಗಾಗಲೇ ಈ ವಿಚಾರವಾಗಿ ಮಾಹಿತಿ ನೀಡಿದ್ದು, ಪೊಲೀಸರನ್ನು ತನಿಖೆಯನ್ನು ಕೈಗೊಂಡಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈ ಮಾಫಿಯಾ ಯಾವ ರೂಪ ಪಡೆಯಲಿದೆ ಎಂಬುದು ನಿಗೂಢವಾಗಿದೆ.

ಸಭೆಯಲ್ಲಿ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜಯರಾಜ್, ಉಪಾಧ್ಯಕ್ಷ ಉಮೇಶ್ ಬಣಕಾರ್, ಕಾರ್ಯದರ್ಶಿ ಎಂ.ಜಿ.ರಾಮಮೂರ್ತಿ, ಎಂ.ಎಂ.ಸುರೇಶ್, ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‍ಕುಮಾರ್, ವಾಣಿಜ್ಯ ಮಂಡಳಿ ಪದಾಧಿಕಾರಿಗಳಾದ ಎ.ಗಣೇಶ್, ನರಸಿಂಹಲು, ನಾಗಣ್ಣ ಮತ್ತಿತರರು ಪಾಲ್ಗೊಂಡಿದ್ದರು.

Facebook Comments