ಕನ್ನಡ ಚಿತ್ರರಂಗದಲ್ಲಿ ಬಗೆಹರಿಯದ ಸಂದಿಗ್ಧ ಸ್ಥಿತಿ

ಈ ಸುದ್ದಿಯನ್ನು ಶೇರ್ ಮಾಡಿ

# ಎನ್.ಎಸ್.ರಾಮಚಂದ್ರ
ಕನ್ನಡ ಸಿನಿಮಾಗಳ ಚಿತ್ರೀಕರಣ ಹಾಗೂ ಪ್ರದರ್ಶನವನ್ನು ಪುನರಾರಂಭಿಸುವ ಸಲುವಾಗಿ ಉದ್ಯಮದ ಕಡೆಯಿಂದ ಗಂಭೀರ ಹಾಗೂ ನಿರ್ದಿಷ್ಟ ಪ್ರಯತ್ನ ನಡೆಯುತ್ತಿಲ್ಲ. ಇವೆಲ್ಲ ಚಲನಚಿತ್ರ ವಾಣಿಜ್ಯ ಮಂಡಳಿಯ ಕಾರ್ಯಕಾರಿ ಸಮಿತಿಯ ಸಭೆಗಳಿಗೆ ಮಾತ್ರ ಸೀಮಿತವಾಗಿದೆ.

ಪತ್ರಿಕೆಯಲ್ಲಿ ಪ್ರಕಟವಾದ ಅಂಶವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ಮುಖ್ಯಮಂತ್ರಿಗಳನ್ನು ಭೇಟಿ ಮಾಡಲು ತೆರಳುವ ನಿಯೋಗದಲ್ಲಿ ಕಲಾವಿದರನ್ನು ಸೇರಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜಯರಾಜ್ ತಿಳಿಸಿದ್ದಾರೆ.

ತಮ್ಮ ಹೆಸರನ್ನು ಬಹಿರಂಗ ಪಡಿಸಲು ಇಚ್ಛಿಸದ ಚಿತ್ರೋದ್ಯಮಿಯೊಬ್ಬರು ಹೇಳುವ ಪ್ರಕಾರ ಕನ್ನಡದ ಕಲಾವಿದರನ್ನು ಒಗ್ಗೂಡಿಸುವುದು ಸುಲಭವಲ್ಲ. ತೆಲುಗು , ತಮಿಳು, ಮಲಯಾಳಂ ಸಿನಿಮಾ ಕಲಾವಿದರು ಬೇಗ ಒಗ್ಗೂಡುತ್ತಾರೆ.

ಕನ್ನಡದ ಎಲ್ಲಾ ಪ್ರಮುಖ ಕಲಾವಿದರನ್ನು ಒಂದೆಡೆ ಸೇರಿಸುವುದು ಕಷ್ಟ. ನೀವು ಮೊದಲು ಚಿತ್ರ ಪ್ರದರ್ಶನ ಪ್ರಾರಂಭಿಸಿ ಆನಂತರ ಚಿತ್ರೀಕರಣ ಪುನರಾರಂಭದ ಆಲೋಚನೆ ಮಾಡೋಣ ಎಂದು ಕನ್ನಡದ ಖ್ಯಾತ ನಾಯಕ ನಟರೊಬ್ಬರು ಅಭಿಪ್ರಾಯ ಪಟ್ಟಿದ್ದಾರೆ.

ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದರೂ ಕೂಡ ಎಲ್ಲಾ ಕಲಾವಿದರೂ ತಕ್ಷಣವೇ ಶೂಟಿಂಗ್‍ನಲ್ಲಿ ಪಾಲ್ಗೊಳ್ಳಲು ಸಿದ್ಧವಿಲ್ಲ ಎಂಬುದು ಆ ಮಾತಿನ ಗೂಡಾರ್ಥ. ಪ್ರತಿ ಕಲಾವಿದ ತಂತ್ರಜ್ಞರಿಗೂ ತಮ್ಮ ಸುರಕ್ಷತೆಯ ಕಾಳಜಿ ಇರುತ್ತದೆ. ಇದನ್ನು ಬದಿಗೊತ್ತಲು ಯಾರೂ ಸಿದ್ಧರಿಲ್ಲ.

ದೈಹಿಕ ಅಂತರ ಕಾಪಾಡಿಕೊಂಡು ಚಿತ್ರೀಕರಣ ಮಾಡಬೇಕಾಗುತ್ತದೆ. ಅಭಿನಯಿಸು ವಾಗ ಮಾಸ್ಕ್ ಹಾಕಿಕೊಳ್ಳಲು ಸಾಧ್ಯವಿಲ್ಲ. ಇವೇ ಮುಂತಾದ ಸಮಸ್ಯೆಗಳು ಕಲಾವಿದರನ್ನು ಬಾಧಿಸುತ್ತಿವೆ.

ಸೆನ್ಸಾರ್ ಪ್ರಕ್ರಿಯೆ ಮಾತ್ರ ಈಗಾಗಲೇ ಪ್ರಾರಂಭವಾಗಿದೆ. ಉಪೇಂದ್ರ ಅವರ ಹೋಂ ಮಿನಿಸ್ಟರ್ , ಎಂಬ ಸಿನಿಮಾ ಸೇರಿದಂತೆ ಹಲವು ಸಿನಿಮಾಗಳು ಸೆನ್ಸಾರ್ ಮನ್ನಣೆ ಪಡೆದಿವೆ. ದರ್ಶನ್ ಅಭಿನಯದ ರಾಬರ್ಟ್, ಸುದೀಪ್ ಅವರ ಕೋಟಿಗೊಬ್ಬ-3, ವಿಜಯ್ ಅಭಿನಯದ ಸಲಗ, ಪುನೀತ್ ಅವರ ಯುವರತ್ನ, ಪ್ರಜ್ವಲ್ ಅಭಿನಯದ ಅರ್ಜುನ್‍ಗೌಡ ,ಯಶ್ ಅವರ ಕೆಜಿಎಫ್-2, ಧೃವಸರ್ಜ ಅವರ ಪೊಗರು ಸೇರಿದಂತೆ ಹಲವು ಕನ್ನಡ ಸಿನಿಮಾಗಳು ಸೆನ್ಸಾರ್‍ಗೆ ಸಿದ್ಧವಾಗುತ್ತಿವೆ.

ಈ ಚಿತ್ರಗಳನ್ನು ಒಂದರ ಹಿಂದೊಂದರ ಹಾಗೆ ತರಾತುರಿಯಲ್ಲಿ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಪ್ಲ್ಯಾನ್ ಮಾಡಬೇಕು. ಈ ನಡುವೆ ಲಾಕ್‍ಡೌನ್ ಹೇರಿಕೆಯಿಂದ ಸ್ಥಗಿತಗೊಂಡ ಶಿವಾರ್ಜುನ ಮುಂತಾದ ಸಿನಿಮಾಗಳ ಪ್ರದರ್ಶನ ಮುಂದುವರಿಕೆಗೆ ಅನುವು ಮಾಡಿ ಕೊಡಬೇಕಾಗಿದೆ. ಒಟ್ಟಿನಲ್ಲಿ ಕನ್ನಡ ಸಿನಿಮಾ ಚಟುವಟಿಕೆಗಳ ಪುನರಾರಂಭ ಕಗ್ಗಂಟಾಗಿಯೇ ಮುಂದುವರೆದಿದೆ.

ಅತ್ತ ತೆಲುಗು ಚಿತ್ರರಂಗದಲ್ಲಿ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಅವರು ಕಲಾವಿದರ ಒತ್ತಡಕ್ಕೆ ಮಣಿದು ಚಿತ್ರೀಕರಣ ಮುಂದುವರೆಸಲು ಅನುಮತಿ ಕೊಟ್ಟಿದ್ದಾರೆ. ಆದರೆ ತೆಲುಗು ರಾಜ್ಯಗಳನ್ನು ಹೊರತುಪಡಿಸಿ ಬೇರೆಡೆ ಶೂಟಿಂಗ್ ಮಾಡುವಂತಿಲ್ಲ ಎಂದು ನಿರ್ಬಂಧ ಹೇರಲಾಗಿದೆ.

ಮಹಾರಾಷ್ಟ್ರದಲ್ಲಿ ಕೋವಿಡ್-19 ಸಮಸ್ಯೆ ಅತ್ಯಂತ ಭೀಕರವಾಗಿರುವುದರಿಂದ ಹಿಂದಿ ಸಿನಿಮಾಗಳ ಚಿತ್ರೀಕರಣವನ್ನು ಮುಂದುವರಿಸುವ ಬಗ್ಗೆ ಹಿಂದೆ ಮುಂದೆ ನೋಡುತ್ತಾರೆ. ಸುರಕ್ಷತಾ ಕ್ರಮಗಳ ಬಗ್ಗೆ ಪಕ್ಕಾ ಪ್ಲಾನ್ ಮಾಡಿಕೊಂಡ ನಂತರವಷ್ಟೇ ಶೂಟಿಂಗ್ ಪುನರಾರಂಭ ಸಾಧ್ಯ ಎಂದು ನಿರ್ದೇಶಕ ಶಬ್ಬೀರ್ ಖಾನ್ ಹೇಳಿದ್ದಾರೆ. ಮುಂಬೈನ ಫಿಲಂಸಿಟಿಗಳು ಭಣಗುಟ್ಟುತ್ತಿವೆ.

ಕೊರೊನಾ ವೈರಸ್ ಹಾವಳಿಯ ಸಂದರ್ಭದಲ್ಲಿ ಚಿತ್ರರಂಗದ ಎಲ್ಲಾ ಕಾರ್ಮಿಕ ಕಲಾವಿದರ ಯೋಗಕ್ಷೇಮಕ್ಕೆ ನಮ್ಮ ಮೊದಲ ಆದ್ಯತೆ ಎಂದು ಹಿಂದಿಯ ಸ್ಟಾರ್ ಹೀರೋ ಅಕ್ಷಯ್‍ಕುಮಾರ್ ಹೇಳಿದ್ದಾರೆ. ನಾನೂ ಕೂಡ ಸುರಕ್ಷತಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದೇನೆ ಎಂದು ಕೂಡ ಅವರು ತಿಳಿಸಿದ್ದಾರೆ.

ಇವರ ಬಹು ನಿರೀಕ್ಷಿತ ಸೂರ್ಯವಂಶಿ ಎಂಬ ಚಿತ್ರ ಬಿಡುಗಡೆಗೆ ಕಾಯುತ್ತಿದೆ. ಭೂಲ್ ಭುಲೈಯ್ಯ -2, ಪೃಥ್ವೀರಾಜ್ , ಅತ್ರಂಗಿರೇ, ನಿಕಮ್ಮಾ, ಮುಂಬೈ ಸಾಗಾ, ಮೈದಾನ್, ಗಂಗೂಬಾಯಿ ಕಾಥಿಯಾವಾಡಿ ಎಂಬ ಬಹುಕೋಟಿ ಬಂಡವಾಳದ ಸಿನಿಮಾಗಳ ಕೆಲಸ ವಿವಿಧ ಹಂತಗಳಲ್ಲಿವೆ.

ಒಟ್ಟಿನಲ್ಲಿ ಚಿತ್ರರಂಗದಲ್ಲಿ ಒಂದು ರೀತಿ ಬೆಕ್ಕಿಗೆ ಗಂಟೆ ಕಟ್ಟುವವರು ಯಾರು ಎಂಬ ಪರಿಸ್ಥಿತಿ ನಿರ್ಮಾಣವಾಗಿರುವುದು ಸತ್ಯ ಎಂದು ಚಿತ್ರೋದ್ಯಮಿಯೊಬ್ಬರ ಅನಿಸಿಕೆ. ಒಂದೇ ನಿಲುವಿನೊಂದಿಗೆ ಸರ್ಕಾರದ ಮೇಲೆ ಒತ್ತಡ ಹೇರಿ ತಮ್ಮ ಕೆಲಸ ಮಾಡಿಸಿಕೊಳ್ಳಲೇ ಬೇಕಾಗಿರುವುದೊಂದೇ ಬಾಕಿ.

Facebook Comments