ಸಿನಿಮಾ ತಾರೆಯರು ಅಖಾಡಕ್ಕೆ ಇಳಿದಿಲ್ಲವೇಕೆ..?

ಈ ಸುದ್ದಿಯನ್ನು ಶೇರ್ ಮಾಡಿ

ಸದ್ಯದಲ್ಲೇ ಚಿತ್ರ ಪ್ರದರ್ಶನ ಪುನರಾರಂಭ ಗೊಳ್ಳುವ ಸಾಧ್ಯತೆ ಇದೆ. ಪ್ರದರ್ಶನ ಪ್ರಾರಂಭ ವಾದ ಕೂಡಲೇ ಸಿನಿಮಾ ನೋಡಲು ಜನ ಚಿತ್ರ ಮಂದಿರಕ್ಕೆ ಬರುತ್ತಾರೆಯೇ? ಇಲ್ಲ. ಥಿಯೇಟರ್ ಪ್ರಾರಂಭವಾದ ತರುಣದಲ್ಲೇ ಜನ ಖಂಡಿತವಾಗಿ ಬರುವುದಿಲ್ಲ ಎಂದು ನಿರ್ಮಾಪಕರ ಸಂಘದ ಅಧ್ಯಕ್ಷ ಪ್ರವೀಣ್‍ಕುಮಾರ್ (ಡಿ.ಕೆ.ರಾಮಕೃಷ್ಣ) ಮತ್ತು ಹಿರಿಯ ನಿಮಾಪಕ ಎಂ.ಬಿ.ಬಾಬು ಹೇಳುತ್ತಾರೆ.

ಈ ವಿಷಯದಲ್ಲಿ ಪುನೀತ್ ರಾಜ್‍ಕುಮಾರ್ ಅವರ ಅಭಿಪ್ರಾಯವೇ ಬೇರೆ. ಸದ್ಯಕ್ಕೆ ಜನರು ಒಟಿಟಿ ಮಾಧ್ಯಮದಲ್ಲಿ ಸಿನಿಮಾ ನೋಡುತ್ತಿರು ವುದು ನಿಜ. ಆದರೆ, ಚಿತ್ರಮಂದಿರದಲ್ಲಿ ಕುಳಿತು ಸಿನಿಮಾ ನೋಡುವ ಅನುಭವ ಅದ್ಭುತ.

ಇಂದಲ್ಲ ನಾಳೆ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬಂದೇ ಬರುತ್ತಾರೆ ಎಂದು ಪುನೀತ್ ಹೇಳುತ್ತಾರೆ. ಅವರ ಪ್ರಕಾರ ಕನ್ನಡ ಚಿತ್ರರಂಗ ಖಂಡಿತ ಪುಟಿದೇಳುತ್ತದೆ. ಇವರ ಅಭಿನಯದ ಯುವ ರತ್ನ ಎಂಬ ಚಿತ್ರವು ಬಿಡುಗಡೆಗೆ ಸಿದ್ಧವಾಗುತ್ತಿದ್ದು, ಜೇಮ್ಸ್ ಎಂಬ ಸಿನಿಮಾದ ಕೆಲಸ ಪುನರಾರಂಭ ಆಗಬೇಕು.

ಎಂ.ಬಿ.ಬಾಬು ಅವರು ನಿರ್ಮಿಸಿರುವ ಕೋಟಿಗೊಬ್ಬ-3 ಎಂಬ ಚಿತ್ರವು ಸೆನ್ಸಾರ್‍ಗೆ ಅಣಿಯಾಗುತ್ತಿದೆ. ರಾಜ್ಯ ಸರ್ಕಾರವು ಚಿತ್ರ ಪ್ರದರ್ಶನಕ್ಕೆ ಅನುಮತಿ ಕೊಟ್ಟ ಕೂಡಲೇ ನೀವು ಕೋಟಿಗೊಬ್ಬ-3 ಚಿತ್ರವನ್ನು ಬಿಡುಗಡೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಬಾಬು ಅವರು ನಕಾರಾತ್ಮಕ ಉತ್ತರ ಕೊಟ್ಟರು.

ಅವರು ಹೇಳುವಂತೆ ಕೊರೊನಾ ಭೀತಿ ಶಮನ ಆಗುವವರೆಗೂ ಜನರು ಥಿಯೇಟರ್ ಕಡೆ ಹೆಚ್ಚಿನ ಸಂಖ್ಯೆಯಲ್ಲಿ ಬರುವುದಿಲ್ಲ. ಜನರು ಸಿನಿಮಾ ನೋಡಲು ಬರುತ್ತಾರೆ ಎಂದು ಖಾತ್ರಿ ಆದ ಮೇಲಷ್ಟೇ ರಿಲೀಸ್ ಪ್ರಶ್ನೆ.

ಭಾರಿ ಬಂಡವಾಳದ ಚಿತ್ರಗಳನ್ನು ಮಾಡಿರುವ ಹತ್ತು ಮಂದಿ ನಿರ್ಮಾಪಕರು ಒಂದು ಟೀಮ್ ಮಾಡಿಕೊಂಡಿದ್ದೇವೆ. ಚಿತ್ರವನ್ನು ಯಾವಾಗ ಬಿಡುಗಡೆ ಮಾಡಬಹುದು ಎಂಬ ಬಗ್ಗೆ ಚರ್ಚೆ ಮಾಡುತ್ತಿದ್ದೇವೆ. ಯಾವುದೇ ಕಾರಣಕ್ಕೂ ತರಾತುರಿಯಲ್ಲಿ ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದು ಬಾಬು ತಿಳಿಸಿದರು.

ಕೊರೊನಾ ಸೋಂಕಿಗೆ ಖಾಯಂ ಔಷಧಿ ಕಂಡು ಹಿಡಿಯುವವರೆಗೂ ಜನರ ಭೀತಿ, ಆತಂಕ ದೂರವಾಗುವುದಿಲ್ಲ. ಜನರಿಗೆ ಮನರಂಜನೆ ಬೇಕು. ಆದರೆ ಅದೇ ಅವರ ಆದ್ಯತೆ ಅಲ್ಲ. ಅವರಿಗೆ ಆಹಾರ ಧಾನ್ಯಗಳು, ಮೊಬೈಲ್ ಮುಖ್ಯ. ಜನರು ಬೀದಿಯಲ್ಲಿ ಓಡಾಡುತ್ತಾರೆ ನಿಜ. ಆದರೆ ಎಲ್ಲರಲ್ಲೂ ಆತಂಕ ಇರುತ್ತದೆ.

ಹೊಟೇಲ್, ಮಾಲ್‍ಗಳು ಪ್ರಾರಂಭವಾಗಿದ್ದರೂ ಅವು ಖಾಲಿ ಹೊಡೆಯುತ್ತಿವೆ. ಹಾಗಿರುವಾಗ ಚಿತ್ರಮಂದಿರದಲ್ಲಿ ಎರಡು-ಮೂರು ಗಂಟೆ ಕುಳಿತು ಸಿನಿಮಾ ನೋಡುತ್ತಾರೆಯೇ ?

ಚಿತ್ರ ಪ್ರದರ್ಶನ ಕರ್ನಾಟಕದಲ್ಲಿ ಮಾತ್ರ ಪ್ರಾರಂಭವಾದರೆ ಸಾಲದು. ದೇಶದಾದ್ಯಂತ ಓಪನ್ ಆಗಬೇಕು. ನಮ್ಮಲ್ಲಿ ಕನ್ನಡ ಸಿನಿಮಾಗಳು ಮಾತ್ರವಲ್ಲದೆ ತಮಿಳು, ತೆಲುಗು, ಹಿಂದಿ, ಮಲಯಾಳಂ, ಇಂಗ್ಲಿಷ್ ಫಿಲಂಗಳೂ ರಿಲೀಸ್ ಆಗುತ್ತವೆ.

ಹೊಸ ಸಿನಿಮಾ ತಯಾರಿಸಿರುವ ಪರಭಾಷೆಯವರು ಕರ್ನಾಟಕದಲ್ಲಿ ತಮ್ಮ ಸಿನಿಮಾ ಬಿಡುಗಡೆ ಮಾಡಬೇಕು. ವಿದೇಶೀ ಸಿನಿಮಾ ಮಾರುಕಟ್ಟೆಯೂ ತೆರೆದುಕೊಳ್ಳಬೇಕು. ಇದು ಬಹಳ ಸಂಕೀರ್ಣವಾದ ಸಂಗತಿ ಎಂದು ಪ್ರವೀಣ್‍ಕುಮಾರ್ ಹೇಳುತ್ತಾರೆ. ರಾಬರ್ಟ್ ಎಂಬ ಸಿನಿಮಾ ಬಿಡುಗಡೆಯಾಗಿ ಗೆದ್ದರೆ ಆಗ ಚಿತ್ರರಂಗ ಗೆದ್ದ ಹಾಗೆ ಅನ್ನುತ್ತಾರೆ ಅವರು.

ಅರ್ಧಕ್ಕೆ ಸ್ಥಗಿತಗೊಂಡಿರುವ ಸಿನಿಮಾ ಚಿತ್ರೀಕರಣವನ್ನು ಮುಂದುವರೆಸಲು ಸರ್ಕಾರ ಅನುಮತಿ ಕೊಟ್ಟು ಒಂದು ವಾರ ಆಗಿದೆ. ಆದರೆ ಸ್ಟಾರ್ ಹೀರೋಗಳು ಇನ್ನೂ ಚಿತ್ರೀಕರಣಕ್ಕೆ ಹಾಜರಾಗಿಲ್ಲ. ಅಖಾಡಕ್ಕೆ ಇಳಿದಿಲ್ಲ. ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ಕೊಟ್ಟಿರುವುದು ನಿಜ.

ಆದರೆ ನಾವು ಎಲ್ಲಾ ರೀತಿಯ ಮುನ್ನೆಚ್ಚರಿಕೆ ತೆಗೆದುಕೊಂಡು ಕೆಲಸ ಮುಂದುವರೆಸಬೇಕು ಎಂದು ಉಪೇಂದ್ರ ಅಭಿನಯದ ಕಬ್ಜ ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಆರ್.ಚಂದ್ರು ಹೇಳುತ್ತಾರೆ.

ನಿರ್ಮಾಪಕರ ಸಂಘದ ಅಧ್ಯಕ್ಷರೂ ಸೇರಿದಂತೆ ಇನ್ನಿತರ ಕೆಲ ಪ್ರಮುಖರು ಹೇಳುವಂತೆ ಚಿತ್ರ ಪ್ರದರ್ಶನ ಪುನರಾರಂಭಿಸಲು ಪ್ರದರ್ಶಕರಿಗೆ ಆಸಕ್ತಿ ಇಲ್ಲ. ಈಗ ನಿರ್ಮಾಪಕರು, ಥಿಯೇಟರ್‍ಗಳಿಗೆ ಪೂರ್ಣ ಪ್ರಮಾಣದ ಬಾಡಿಗೆ ಕೊಡುವ ಸ್ಥಿತಿಯಲ್ಲಿಲ್ಲ. ಬಾಡಿಗೆ ಕಡಿಮೆ ಮಾಡಿ ಅಥವಾ ಶೇಕಡಾವಾರು ಹಂಚಿಕೆ ಮಾಡಿಕೊಳ್ಳಿ ಎಂದು ನಿರ್ಮಾಪಕರು ಒತ್ತಾಯಿಸಬಹುದು.

ಚಿತ್ರಮಂದಿರ ಮಾಲೀಕರು ಇದಕ್ಕೆ ಒಪ್ಪುವ ಸಾಧ್ಯತೆ ಕಡಿಮೆ. ಮೊದಲಿನ ಹಾಗೆ ಚಿತ್ರಮಂದಿರವು ಜನರಿಂದ ಭರ್ತಿಯಾಗಲು ಸರ್ಕಾರವು ಅನುಮತಿ ನೀಡುವುದು ಅನುಮಾನ. ಇಂತಹ ಹಲವು ಸಮಸ್ಯೆಗಳ ಸಮಗ್ರ ಚರ್ಚೆ ಆಗಬೇಕಾಗಿದೆ.

ಈಗ ಒಟಿಟಿ ವೇದಿಕೆಗಳ ಸಂಖ್ಯೆ ಏರುತ್ತಿದೆ. ಅಮೆಜಾನ್, ನೆಟ್‍ಫ್ಲಿಕ್ಸ್‍ಗಳ ಹಾಗೆ. ಇತರ ಹಲವು ವೇದಿಕೆಗಳು ಮೊಳೆಯುತ್ತಿವೆ. ಹಲವು ನಿರ್ಮಾಪಕರು ತಮ್ಮ ಹೊಸ ಸಿನಿಮಾಗಳನ್ನು ಈ ವೇದಿಕೆ ಮೂಲಕ ನೇರವಾಗಿ ಬಿಡುಗಡೆ ಮಾಡುತ್ತಿದ್ದಾರೆ.

ನಾನೂ ಕೂಡ ನನ್ನ ಒಂದು ಹೊಸ ಚಿತ್ರವನ್ನು ಒಟಿಟಿಗೆ ಕೊಟ್ಟಿದ್ದೇನೆ ಎಂದು ಪುನೀತ್‍ರಾಜ್‍ಕುಮಾರ್ ಹೇಳಿದ್ದಾರೆ. ಈ ಮೂಲದಿಂದ ನಿರ್ಮಾಪಕರಿಗೆ ಸೂಕ್ತ ಆದಾಯ ಬರುತ್ತಿಲ್ಲ. ಅದರ ಸಲುವಾಗಿ ಕಾನೂನಾತ್ಮಕ ಹೋರಾಟ ಮಾಡಲು ನಿರ್ಮಾಪಕರ ಸಂಘವು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಕನ್ನಡ ಚಿತ್ರರಂಗ ಈಗ ಅತೀವ ನಷ್ಟ ಅನುಭವಿಸುತ್ತಿರುವುದು ನಿಜ. ತಿಂಗಳಿಗೆ ಕನಿಷ್ಠ ಪಕ್ಷ ನೂರು ಕೋಟಿ ನಷ್ಟವಾಗುತ್ತಿದೆ. ಆದರೆ ಪರಿಸ್ಥಿತಿ ಹೀಗೆಯೇ ಇರುವುದಿಲ್ಲ. ಖಂಡಿತವಾಗಿಯೂ ಸುಧಾರಿಸುತ್ತದೆ. ನಾವು ನಮ್ಮ ಪ್ರಯತ್ನ ಮಾಡುತ್ತಿದ್ದೇವೆ. ಕಾಯುವುದು ಅನಿವಾರ್ಯ ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜೈರಾಜ್ ಅವರ ಅಭಿಪ್ರಾಯ. #ಎನ್.ಎಸ್.ರಾಮಚಂದ್ರ

 

Facebook Comments