ಸಿನಿಮಾ ಸಂಕಷ್ಟ ಪರಿಹಾರವಾದೀತೆ..?

ಈ ಸುದ್ದಿಯನ್ನು ಶೇರ್ ಮಾಡಿ

#-ಎನ್.ಎಸ್.ರಾಮಚಂದ್ರ
ಈ ಮುನ್ನ ಉಂಟಾಗಿದ್ದ ಒಂದು ಸಂದೇಹ ನಿಜವಾಗಿದೆ. ಕನ್ನಡದ ಸ್ಟಾರ್ ಕಲಾವಿದರು ಕರ್ನಾಟಕದಲ್ಲಿ ತಮ್ಮ ಸಿನಿಮಾಗಳ ಚಿತ್ರೀಕರಣ ಮುಂದುವರಿಸುವ ಬದಲು ಹೈದರಾಬಾದ್ ಕಡೆ ಒಲವು ತೋರುತ್ತಿದ್ದಾರೆ. ವಲಸೆ ಪ್ರಕ್ರಿಯೆ ಪ್ರಾರಂಭವಾಗಿದೆ.

ಲಾಕ್‍ಡೌನ್ ತೆರವಿನ ನಂತರ ಸಿನಿಮಾ ಚಿತ್ರೀಕರಣ ಮುಂದುವರಿಸಲು ಅನುಮತಿ ನೀಡಲಾಗಿತ್ತು. ಆದರೆ, ಕನ್ನಡದ ಸ್ಟಾರ್ ಹೀರೋಗಳು ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ಹಿಂಜರಿದರು. ದಾರಿಯಾವುದಯ್ಯಾ ವೈಕುಂಠಕ್ಕೆ ಮುಂತಾದ ಕೆಲ ಸೀಮಿತ ಬಜೆಟ್‍ನ ಚಿತ್ರಗಳ ಚಿತ್ರೀಕರಣವನ್ನು ಮಾತ್ರ ಮಾಡಿ ಮುಗಿಸಿದ್ದಾರೆ. ಕೆಜಿಎಫ್-2 ಮುಂತಾದ ಕೆಲ ಅದ್ಧೂರಿ ಸಿನಿಮಾಗಳ ಶೂಟಿಂಗ್ ಮುಂದುವರಿದಿಲ್ಲ.

ಕಿಚ್ಚ ಸುದೀಪ್ ನಾಯಕರಾಗಿರುವ ಫ್ಯಾಂಟಮ್ ಚಿತ್ರದ ಕೆಲಸಗಳಿಗೆ ಮರು ಚಾಲನೆ ದೊರೆಯಲಿದೆ. ಇದು ಇತರ ಸ್ಟಾರ್ ಫಿಲಂಗಳ ಚಟುವಟಿಕೆಗಳಿಗೆ ನಾಂದಿ ಆಗಬಹುದು. ಅನೂಪ್ ಭಂಡಾರಿ ನಿರ್ದೇಶನದ ಫ್ಯಾಂಟಮ್‍ಗೆ ಹೈದರಾಬಾದ್‍ನಲ್ಲಿ ಚಿತ್ರೀಕರಣ ನಡೆಯಲಿದೆ.

ಈ ಚಿತ್ರಕ್ಕೆ ಕೆಲಸ ಮಾಡುವ ತಂತ್ರಜ್ಞರೆಲ್ಲರೂ ಕರ್ನಾಟಕದವರೇ ಆಗಿರಬೇಕು ಎಂದು ಸುದೀಪ್ ಅವರು ಸಲಹೆ ಮಾಡಿರುವುದರಿಂದ ಸುಮಾರು ನೂರು ಜನರನ್ನೊಳಗೊಂಡ ಚಿತ್ರತಂಡವು ಹೈದರಾಬಾದ್‍ಗೆ ಹೊರಡಲಿದೆ. ಅಲ್ಲಿ ಅತ್ಯಂತ ಸುರಕ್ಷಿತ ವಾತಾವರಣ ಸೃಷ್ಟಿಸಿಕೊಂಡು ಕೆಲಸ ಮಾಡಲಿದ್ದಾರೆ.

ಕೆಜಿಎಫ್-2 ಚಿತ್ರದ ಬಾಕಿ ಉಳಿದಿರುವ ಕೆಲಸ ಕೂಡ ಹೈದರಾಬಾದ್‍ನಲ್ಲಿ ಮುಂದುವರಿಯುತ್ತದೆ. ಇದೆಲ್ಲ ಏನೇ ಇರಲಿ, ಚಿತ್ರದ ನಿರ್ಮಾಪಕರಿಗೆ ಆದಾಯ ಮೂಲ ಅತ್ಯಗತ್ಯ. ತಾನು ತಯಾರಿಸಿದ ಸಿನಿಮಾಗಳು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿ ಜನಭರಿತ ಪ್ರದರ್ಶನ ಕಂಡಾಗ ಮಾತ್ರ ನಿರ್ಮಾಪಕರಿಗೆ ಆದಾಯ. ಆದರೆ, ಸದ್ಯದ ಪರಿಸ್ಥಿತಿಯಲ್ಲಿ ಚಿತ್ರಮಂದಿರಗಳನ್ನು ತೆರೆಯುವ ಸಾಧ್ಯತೆ ಕಡಿಮೆ. ಅದಕ್ಕಿನ್ನೂ ಕಾಲಾವಕಾಶ ಬೇಕು.

ಈ ನಡುವೆ ಈಗಾಗಲೇ ಸಿದ್ಧವಾಗಿರುವ ಕೆಲವು ಸಿನಿಮಾಗಳು ಒಟಿಟಿ ವೇದಿಕೆಯಲ್ಲಿ ಪ್ರದರ್ಶನಗೊಂಡಿವೆ. ಈ ವೇದಿಕೆಗಳ ಮೂಲಕ ನಿರ್ಮಾಪಕರಿಗೆ ನಿರೀಕ್ಷಿತ ಆದಾಯ ಬರುವುದಿಲ್ಲ. ಆದರೂ ನಿರ್ವಾಹವಿಲ್ಲದೆ ಬಿಡುಗಡೆ ಮಾಡುತ್ತಿದ್ದಾರೆ. ತೆಲುಗಿನ ಅತ್ಯಂತ ಅದ್ಧೂರಿ ಚಿತ್ರಗಳನ್ನೂ ಇದೇ ವೇದಿಕೆಯಲ್ಲಿ ಬಿಡುಗಡೆ ಮಾಡಿ ಎಂದು ತೆಲುಗು ಚಿತ್ರ ರಸಿಕರು ಆಗ್ರಹಿಸುತ್ತಿದ್ದಾರೆ.

ಪುನೀತ್ ರಾಜ್‍ಕುಮಾರ್ ಅರ್ಪಿಸಿ ಅವರ ಪತ್ನಿ ಅಶ್ವಿನಿ ನಿರ್ಮಿಸಿರುವ `ಲಾ’ ಎಂಬ ಚಿತ್ರವು ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಲಿದೆ. ಪ್ರಜ್ವಲ್ ದೇವರಾಜ್ ಅವರ ಪತ್ನಿ ರಾಗಿಣಿ ಚಂದ್ರನ್ ಈ ಚಿತ್ರದ ನಾಯಕಿ. ಇದೊಂದು ಕ್ರೈಂ ಥ್ರಿಲ್ಲರ್. ರಾಗಿಣಿಯವರು ಪೂರ್ಣ ಪ್ರಮಾಣದ ನಾಯಕಿಯಾಗಿ ಅಭಿನಯಿಸುತ್ತಿರುವ ಮೊದಲ ಚಿತ್ರ. ಇದನ್ನು ರಘು ಸಮರ್ಥ್ ನಿರ್ದೇಶಿಸಿದ್ದಾರೆ.

ನೂರಾರು ಕೋಟಿ ಬಂಡವಾಳ ಹೂಡಿ ತಯಾರಿಸಿರುವ ಚಿತ್ರಗಳನ್ನು ಚಿತ್ರಮಂದಿರಗಳಿಗಿಂತ ಮೊದಲು ಒಟಿಟಿ ವೇದಿಕೆಯಲ್ಲಿ ಬಿಡುಗಡೆ ಮಾಡುವುದು ನಿರ್ಮಾಪಕನಿಗೆ ಮಾರಕವೇ ಸರಿ. ಇಂತಹ ಸಿನಿಮಾಗಳಿಗೆ ಚಿತ್ರಮಂದಿರಗಳ ಮೂಲಕವೇ ಆದಾಯ ಬರಬೇಕು ಎಂದು ನಿರ್ಮಾಪಕ ಅಪೇಕ್ಷಿಸುತ್ತಾನೆ.

ಅದು ಸಹಜ ಕೂಡ. ಅದ್ಧೂರಿ ಸಿನಿಮಾ ಮೇಲೆ ಹಾಕುವ ಬಂಡವಾಳದ ಬಹುದೊಡ್ಡ ಮೊತ್ತವು ಸ್ಟಾರ್ ಕಲಾವಿದರ ಪಾಲಾಗುತ್ತದೆ. ಚಿತ್ರ ತಯಾರಕರು ಈಗ ತೀವ್ರ ಸಂಕಷ್ಟದಲ್ಲಿರುವುದರಿಂದ ಕಲಾವಿದರು ತಮ್ಮ ಸಂಭಾವನೆಯನ್ನು ಕಡಿಮೆ ಮಾಡಿಕೊಳ್ಳಬೇಕು ಎಂದು ನಿರ್ಮಾಪಕರು ಆಗ್ರಹಿಸುತ್ತಿದ್ದಾರೆ.

ಜನಪ್ರಿಯ ಬಹುಭಾಷಾ ನಟಿ ರಾಕುಲ್ ಪ್ರೀತ್‍ಸಿಂಗ್ ಅವರು ನಿರ್ಮಾಪಕರ ಮನವಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಮೊದಲಿಗರಾಗಿದ್ದಾರೆ. ಅವರು ಚಿತ್ರವೊಂದಕ್ಕೆ ಒಂದೂವರೆ ಕೋಟಿ ಸಂಭಾವನೆ ಪಡೆಯುತ್ತಾರೆ ಎಂಬ ಮಾತಿದೆ. ಅದು ಕಡಿತಗೊಂಡರೆ ಸಂಭಾವನೆಯ ಮೊತ್ತ 75 ಲಕ್ಷಕ್ಕೆ ಇಳಿಯುತ್ತದೆ. ಇತರ ಕಲಾವಿದರಿಗೆ ಇದು ಎಷ್ಟರ ಮಟ್ಟಿಗೆ ಸ್ಫೂರ್ತಿಯಾಗುತ್ತದೆಯೋ ನೋಡಬೇಕು.

ಆಗಲೇ ಹೇಳಿದ ಹಾಗೆ ಚಿತ್ರಮಂದಿರಗಳಲ್ಲಿ ಪ್ರದರ್ಶನ ಪುನರಾರಂಭ ಮಾತ್ರ ಈ ಉದ್ಯಮಕ್ಕೆ ಉಳಿಗಾಲ. ಚಿತ್ರ ಪ್ರದರ್ಶನಕ್ಕೆ ಅನುಮತಿ ದೊರೆತ ಮರುಕ್ಷಣವೇ ಚಿತ್ರವನ್ನು ನೋಡಲು ಪ್ರೇಕ್ಷಕರು ನುಗ್ಗಿ ಬರುತ್ತಾರೆ ಅನ್ನುವುದು ಸದ್ಯದ ಪರಿಸ್ಥಿತಿಯಲ್ಲಿ ಬರೀ ಕಲ್ಪನೆ.

ಕಾಲಾಯ ತಸ್ಮೈ ನಮಃ ಅನ್ನುತ್ತಾರಲ್ಲ ಹಾಗೆ. ಇಂದಲ್ಲ ನಾಳೆ ಚಿತ್ರೋದ್ಯಮಕ್ಕೆ ಒಳ್ಳೆಯ ಕಾಲ ಬಂದೇ ಬರುತ್ತದೆ. ನಾವು ಭರವಸೆ ಕಳೆದುಕೊಳ್ಳಬಾರದು. ಜನಪ್ರಿಯ ಕಲಾವಿದರೂ ಸೇರಿದಂತೆ ಪ್ರತಿಯೊಬ್ಬರೂ ಕೂಡ ಚಿತ್ರೋದ್ಯಮದ ಒಳಿತಿಗಾಗಿ ಶ್ರಮಿಸಬೇಕು ಎಂದು ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಜಯರಾಜ್ ಹೇಳುತ್ತಾರೆ.

ಅತೀವ ಸಂಕಷ್ಟಕ್ಕೆ ಸಿಲುಕಿರುವ ಸಿನಿಮಾ ಈಗಲೂ ಕೂಡ ಒಂದು ಪ್ರಭಾವಶಾಲಿ ಮಾಧ್ಯಮ ಎಂಬುದು ಹಲವರ ಅಭಿಮತ. ಇಂದಲ್ಲ ನಾಳೆ ಕೊರೊನಾ ಕಾರ್ಕೋಟಕ ಸರಿಯುತ್ತದೆ, ಚಿತ್ರರಂಗವು ಮತ್ತೆ ಪ್ರಜ್ವಲಿಸುತ್ತದೆ ಎಂಬುದು ಅವರ ಭರವಸೆ. ಚಿತ್ರರಂಗ ಚೇತರಿಕೆ ಕಾಣಬೇಕು. ಇದರ ಸಲುವಾಗಿ ಸ್ಟಾರ್ ಕಲಾವಿದರು, ಪ್ರದರ್ಶಕರು ಸ್ವಲ್ಪಮಟ್ಟಿನ ತ್ಯಾಗ ಮಾಡಬೇಕು ಎಂದು ಉದ್ಯಮದ ಪ್ರಮುಖರೊಬ್ಬರು ಹೇಳುತ್ತಾರೆ.

Facebook Comments