ಕನ್ನಡ ಚಿತ್ರೋದ್ಯಮವನ್ನು ಕಾಡುತ್ತಿದೆ ಸೂಕ್ತ ನಾಯಕತ್ವದ ಕೊರತೆ

ಈ ಸುದ್ದಿಯನ್ನು ಶೇರ್ ಮಾಡಿ

# ಎನ್.ಎಸ್.ರಾಮಚಂದ್ರ

ಕೋವಿಡ್ ಕಾರಣದಿಂದ ಹೇರಲಾಗಿದ್ದ ಲಾಕ್‍ಡೌನ್ ಹಂತ ಹಂತವಾಗಿ ಅನ್‍ಲಾಕ್ ಆಗತೊಡಗಿದೆ. ಮಂದಿರ , ಮಸೀದಿಗಳು, ಶಾಪಿಂಗ್ ಮಾಲ್‍ಗಳು, ಉಪಹಾರ ಗೃಹಗಳ ಬಾಗಿಲು ತೆರೆದುಕೊಂಡಿದೆ. ಸೀರಿಯಲ್ ಚಿತ್ರೀಕರಣ ಕೂಡ ಪ್ರಾರಂಭವಾಗಿದೆ. ಆದರೆ ಚಿತ್ರರಂಗ ಮಾತ್ರ ಯಾವುದೇ ಚಟುವಟಿಕೆ ಇಲ್ಲದೆ ಸ್ತಬ್ಧವಾಗಿದೆ. ಏಕೆ? ಇದಕ್ಕೆ ಕಾರಣ ಸಮರ್ಥ ನಾಯಕತ್ವದ ಕೊರತೆ. ಪಟ್ಟು ಹಿಡಿದು ಕೆಲಸ ಮಾಡಿಸಿಕೊಳ್ಳಬೇಕು ಎಂಬ ಇಚ್ಛಾಶಕ್ತಿಯ ಕೊರತೆ.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಕನ್ನಡ ಚಿತ್ರರಂಗದ ಮಾತೃ ಸಂಸ್ಥೆ. ನಿರ್ಮಾಪಕರ ಸಂಘ, ನಿರ್ದೇಶಕರ ಸಂಘ, ಕಲಾವಿದರ ಸಂಘ, ಕಾರ್ಮಿಕರ ಒಕ್ಕೂಟ ಹೀಗೆ ಹಲವು ಸಂಘಟನೆಗಳೂ ಇವೆ. ಈ ಸಂಘಟನೆಗಳ ಪ್ರತಿನಿಧಿಗಳು ಒಗ್ಗಟ್ಟಾಗಿ ನಿಂತು ಸರ್ಕಾರದ ಮೇಲೆ ಒತ್ತಡ ಹೇರಿದ ಪಕ್ಷದಲ್ಲಿ ಚಿತ್ರೀಕರಣ, ಚಿತ್ರ ಪ್ರದರ್ಶನ ಪ್ರಕ್ರಿಯೆಗಳು ಪುನರಾರಂಭವಾಗುತ್ತದೆ. ಆದರೆ ಈ ಕೆಲಸ ಆಗುತ್ತಿಲ್ಲವೇಕೆ?

ಚಲನಚಿತ್ರ ವಾಣಿಜ್ಯ ಮಂಡಳಿಯ ಪದಾಧಿಕಾರಿಗಳು ರಾಜ್ಯದ ಮುಖ್ಯಮಂತ್ರಿಗಳನ್ನು ಒಂದೆರಡು ಬಾರಿ ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ ನಿಜ. ಆದರೆ ಈ ನಿಯೋಗದಲ್ಲಿ ಕಲಾವಿದರು ಇರಲೇಬೇಕು. ಆಗ ಮಾತ್ರ ಅದಕ್ಕೆ ಹೆಚ್ಚಿನ ಬಲ. ಕಲಾವಿದರೇಕೆ ಸುಮ್ಮನಿ ದ್ದಾರೆ? ವಾಣಿಜ್ಯ ಮಂಡಳಿಯೊಂದಿಗೆ ಅವರು ಕೈ ಜೋಡಿಸುತ್ತಿಲ್ಲವೇಕೆ ? ಇದಕ್ಕೆ ಕಾರಣ ನಾಯಕತ್ವ ಹಾಗೂ ಸೂಕ್ತ ಮಾರ್ಗದರ್ಶನದ ಕೊರತೆ.

ಪದ್ಮಭೂಷಣ ಡಾ.ರಾಜ್‍ಕುಮಾರ್ ಅವರು ಕಲಾವಿದರ ಸಂಘವನ್ನು ಕಟ್ಟಿ ಎಲ್ಲಾ ಕಲಾವಿದರನ್ನೂ ಒಂದೇ ವೇದಿಕೆಗೆ ತಂದರು. ಚಿತ್ರರಂಗದ ಸಮಸ್ಯೆಗಳನ್ನು ಮುಂದೆ ನಿಂತು ಬಗೆಹರಿಸುತ್ತಿದ್ದರು.ಡಾ.ರಾಜ್‍ಕುಮಾರ್ ಅವರ ನಂತರ ಅಂಬರೀಷ್ ಅವರು ಸಂಘದ ಅಧ್ಯಕ್ಷ ಸ್ಥಾನ ವಹಿಸಿಕೊಂಡರು. ಅವರ ದನಿಗೂ ಬೆಲೆ ಇತ್ತು. ಅಂಬರೀಷ್ ಅವರು ವಿಧಿವಶರಾದ ನಂತರ ಕಲಾವಿದರ ಸಂಘದ ಅಧ್ಯಕ್ಷ ಸ್ಥಾನ ತೆರವಾಗಿಯೇ ಇದೆ.

ಸಂಘದ ಅಧ್ಯಕ್ಷರಿಲ್ಲ ಅಂದ ಮಾತ್ರಕ್ಕೆ ಕಲಾ ವಿದರಿಗೆ ದನಿಯೇ ಇಲ್ಲವೆ? ಚಿತ್ರರಂಗದ ಪುನರಾರಂಭದ ಕುರಿತು ಮಾತನಾಡಲು ಅವರಿಗೆ ಅವಕಾಶವಿಲ್ಲವೆ? ಇಂತಹ ಪರಿಸ್ಥಿತಿಯಲ್ಲಿ ಸಾಮೂಹಿಕ ಪ್ರಯತ್ನ ಮಾಡುವ ಅವಶ್ಯಕತೆ ಇದೆ. ರಾಜ್ಯ ಸರ್ಕಾರದ ಬಳಿ ತೆರಳುವ ನಿಯೋಗದಲ್ಲಿ ಹಿರಿಯ ಕಲಾವಿದರನ್ನು ಸೇರ್ಪಡೆ ಮಾಡಿಕೊಳ್ಳಬೇಕು. ನಾನು, ನನ್ನದು ಅನ್ನುವುದನ್ನು ಬಿಟ್ಟು ನಾವು, ನಮ್ಮದು ಎಂಬ ಮನೋಭಾವವನ್ನು ಅಳವಡಿಸಿಕೊಳ್ಳಬೇಕು. ಚಿತ್ರರಂಗವು ಸರ್ಕಾರದ ವಿರುದ್ಧ ಹೋರಾಟ ಮಾಡಲು ಹೊರಟಿಲ್ಲ.

ಚಿತ್ರೀಕರಣ ಹಾಗೂ ಚಿತ್ರ ಪ್ರದರ್ಶನಕ್ಕೆ ಅನುಮತಿ ಪಡೆದು ಉದ್ಯಮಕ್ಕೆ ಪುನಃಶ್ಚೇತನ ನೀಡುವ ಪ್ರಯತ್ನವಿದು. ಇದಕ್ಕೆ ಕಲಾವಿದರು ಕೈ ಜೋಡಿಸಬೇಕು. ವಾಣಿಜ್ಯ ಮಂಡಳಿಯು ಕಲಾವಿದರನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳಲೇಬೇಕು. ಕಲಾವಿದರ ಸಂಘಕ್ಕೆ ಈಗ ಮುಖಂಡರಿಲ್ಲ. ಆದರೇನಂತೆ. ಸಾಕಷ್ಟು ಅನುಭವಿ ಹಾಗೂ ಪ್ರಭಾವ ಶಾಲಿ ಕಲಾವಿದರಿದ್ದಾರೆ. ರವಿಚಂದ್ರನ್, ಜಗ್ಗೇಶ್, ಸುಮಲತಾ, ತಾರಾ, ಸುದೀಪ್, ದರ್ಶನ್, ಉಪೇಂದ್ರ, ಶಿವರಾಜ್‍ಕುಮಾರ್, ಯಶ್ ಮುಂತಾದವರನ್ನು ಒಳಗೊಂಡ ನಿಯೋಗದೊಂದಿಗೆ ವಾಣಿಜ್ಯ ಮಂಡಳಿಯು ಮುಖ್ಯಮಂತ್ರಿಗಳನ್ನು ಭೇಟಿ ಮಾಡಬಹುದು. ಆಗ ಉದ್ಯಮದ ದನಿಗೆ ಬಲ ಬರುತ್ತದೆ.

ತೆಲುಗು ನಟ ಚಿರಂಜೀವಿಯವರು ತಮ್ಮ ಮನೆಯಲ್ಲೇ ತೆಲುಗು ಚಿತ್ರರಂಗದ ಪ್ರಮು ಖರ ಸಭೆ ಕರೆದು ವಿಚಾರ ವಿಮರ್ಶೆ ಮಾಡಿ ಉದ್ಯಮದ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿದ್ದಾರೆ. ಆಂಧ್ರ ಹಾಗೂ ತೆಲಂಗಾಣ ಸರ್ಕಾರಗಳು ಚಿತ್ರೀಕರಣಕ್ಕೆ ಸದ್ಯದಲ್ಲೇ ಅನುಮತಿ ನೀಡುವ ನಿರೀಕ್ಷೆ ಇದೆ. ರಜನೀಕಾಂತ್ ಅವರು ತಮಿಳುನಾಡಿನಲ್ಲಿ ಇದೇ ರೀತಿಯ ಪ್ರಯತ್ನ ಮಾಡಿದ್ದಾರೆ. ಕೇರಳದಲ್ಲಿ ಮುಮ್ಮಟಿ, ಮೋಹನ್‍ಲಾಲ್ ಮುಂತಾದ ಪ್ರಮುಖ ಕಲಾವಿದರು ಈ ದಿಸೆಯಲ್ಲಿ ಪ್ರಯತ್ನ ಮಾಡಿ ಈಗಾಗಲೇ ಫಲ ಕಂಡಿದ್ದಾರೆ.

ಅವರು ಇಡೀ ಉದ್ಯಮದ ಹಿತದೃಷ್ಟಿಯಿಂದ ಈ ಕೆಲಸ ಮಾಡಿದ್ದಾರೆ. ಮೊದಲೇ ಹೇಳಿದ ಹಾಗೆ ಈ ಸಮಸ್ಯೆ ಇಡೀ ಚಿತ್ರರಂಗಕ್ಕೆ ಸಂಬಂಧಿಸಿದ್ದೇ ವಿನಃ ಯಾರೊಬ್ಬರ ವೈಯಕ್ತಿಕ ಸಮಸ್ಯೆ ಅಲ್ಲ. ಚಿತ್ರರಂಗವನ್ನು ಅವಲಂಬಿಸಿರುವ ಸಾವಿರಾರು ಕುಟುಂಬಗಳು ಅತಂತ್ರವಾಗಿವೆ. ಉದ್ಯಮದ ಮೇಲೆ ಹೂಡಿರುವ ನೂರಾರು ಕೋಟಿ ಬಂಡವಾಳ ನಿರರರ್ಥಕವಾಗಿದೆ.
ಚಿತ್ರೀಕರಣ ಹಾಗೂ ಚಿತ್ರ ಪ್ರದರ್ಶನ ಪುನರಾರಂಭವಾದಾಗ ಬದುಕು ಕಟ್ಟಿದಂತಾ ಗುತ್ತದೆ. ಹಣಕಾಸಿನ ವಹಿವಾಟು ನಡೆಯುತ್ತದೆ.

ಜನರಿಗೆ ಮನರಂಜನೆ ದೊರೆಯುತ್ತದೆ. ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಆದಾಯ ಬರು ತ್ತದೆ. ಇದೆಲ್ಲಾ ಆಗಬೇಕಾದರೆ ಉದ್ಯಮಕ್ಕೆ ಒಂದು ಗಟ್ಟಿಯಾದ ದನಿ ಬೇಕು. ಸಂಯುಕ್ತ ಪ್ರಯತ್ನ ನಡೆಯಬೇಕು. ಸಮಸ್ಯೆಯನ್ನು ಸಮಸ್ಯೆಯಾಗಿಯೇ ಉಳಿಯ ಬಿಡುವುದು ಅರ್ಥಹೀನ.

ಚಿತ್ರೋದ್ಯಮದ ನಿಯೋಗವು ಸದ್ಯದಲ್ಲೇ ಮುಖ್ಯಮಂತ್ರಿಗಳ ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಲಿದೆ. ಈ ನಿಯೋಗದಲ್ಲಿ ಪ್ರಮುಖ ಕಲಾ ವಿದರು ಇರುವುದು ಅತ್ಯಗತ್ಯ. ಇದು ಕನ್ನಡ ಚಿತ್ರರಂಗದ ಪ್ರಮುಖರನೇಕರ ಅಭಿಪ್ರಾಯ. ಒಟ್ಟಿನಲ್ಲಿ ಸಿನಿಮಾ ಚಟುವಟಿಕೆ ಗಳು ಪುನಃ ಗರಿಗೆದರಬೇಕು ಅದೇ ಸದ್ಯದ ಗುರಿ.

Facebook Comments