ಬಿಗ್ ನ್ಯೂಸ್ : ICSE-CBSE ಶಾಲೆಗಳಲ್ಲಿ ಕನ್ನಡ ಕಲಿಕೆ ಕಡ್ಡಾಯ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.25- ಕೇಂದ್ರ ಪಠ್ಯಕ್ರಮ (ಸಿಬಿಎಸ್‍ಇ ಹಾಗೂ ಐಸಿಎಸ್‍ಇ) ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸಬೇಕು. ಒಂದು ವೇಳೆ ನ್ಯೂನ್ಯತೆಗಳಿದ್ದರೆ ಬಿಇಒ ಮತ್ತು ಡಿಡಿಪಿಐಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಆರ್.ಶ್ರೀನಿವಾಸ್(ವಾಸು) ಇಂದಿಲ್ಲಿ ತಿಳಿಸಿದರು.

ಇಂದಿಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಬಿಎಸ್‍ಇ ಮತ್ತು ಐಸಿಎಸ್‍ಇ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆಯನ್ನು ಕಲಿಸಬೇಕೆಂಬ ಸರ್ಕಾರದ ನಿರ್ದೇಶನವಿದೆ. ಇದು ಪಾಲನೆಯಾಗದಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುವುದು.

ಕೆಲವು ಶಾಲೆಗಳು ರಾಜ್ಯ ಪಠ್ಯಕ್ರಮಕ್ಕೆ ಅನುಮತಿ ಪಡೆದು ಕೇಂದ್ರ ಪಠ್ಯಕ್ರಮದ ಶಿಕ್ಷಣ ನೀಡುತ್ತಿರುವುದು ಹಾಗೂ ಕೇಂದ್ರ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡವನ್ನು ಒಂದು ಭಾಷೆಯಾಗಿ ಕಲಿಸದಿರುವುದು ಗಮನಕ್ಕೆ ಬಂದಿದೆ. ಸದ್ಯದಲ್ಲೇ ತಾವು ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ಪ್ರವಾಸ ಕೈಗೊಂಡು ಸಭೆಗಳನ್ನು ನಡೆಸುವುದಾಗಿ ಹೇಳಿದರು.

ಶಾಲೆಗಳಿಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ಲೋಪದೋಷ ಕಂಡು ಬಂದರೆ ಸ್ಥಳೀಯ ಬಿಇಒ, ಡಿಡಿಪಿಐಗಳೇ ಹೊಣೆಯಾಗುತ್ತಾರೆ ಎಂದು ಸಚಿವರು ಎಚ್ಚರಿಸಿದರು. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಆಂಗ್ಲ ಶಾಲೆಗಳನ್ನು ಪ್ರಾರಂಭಿಸಿದ್ದಾರೆ. ಅಂತಹ ಶಾಲೆಗಳಿಗೆ ಬೇಡಿಕೆ ಹೆಚ್ಚಿದೆ. ಮುಂದಿನ ದಿನಗಳಲ್ಲಿ ಶಾಲೆಗಳ ಪ್ರಮಾಣವನ್ನು ಹೆಚ್ಚಳ ಮಾಡಲಾಗುವುದು ಎಂದರು.

ವಿದ್ಯಾರ್ಥಿಗಳ ಕೊರತೆಯಿಂದಾಗಿ ಪ್ರತಿ ತಾಲ್ಲೂಕಿನಲ್ಲೂ ಸುಮಾರು 20ರಿಂದ 30 ಶಾಲೆಗಳು ಮುಚ್ಚುವ ಸ್ಥಿತಿಗೆ ತಲುಪುತ್ತಿವೆ. ಕನ್ನಡದ ಜತೆಗೆ ಇಂಗ್ಲಿಷ್ ಭಾಷೆ ಕಲಿಸುವ ಮೂಲಕ ಸರ್ಕಾರಿ ಶಾಲೆಗಳನ್ನು ಮುಚ್ಚುವುದನ್ನು ತಪ್ಪಿಸುವ ಪ್ರಯತ್ನ ಮಾಡಲಾಗುವುದು. ಜತೆಗೆ ಅಗತ್ಯ ಮೂಲಸೌಕರ್ಯ ಕಲ್ಪಿಸುವ ಕಡೆಗೂ ಗಮನ ಹರಿಸಲಾಗುವುದು ಎಂದು ಹೇಳಿದರು.

ಕಾರ್ಪೊರೇಟ್ ಸಂಸ್ಥೆಗಳು ಸರ್ಕಾರಿ ಶಾಲೆಗಳನ್ನು ದತ್ತು ತೆಗೆದುಕೊಂಡು ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಲು ಅವಕಾಶ ಕಲ್ಪಿಸಲಾಗವುದು ಎಂದರು. ದೇಶ ಹಾಗೂ ರಾಜ್ಯದ ಪ್ರಗತಿಗೆ ಶಿಕ್ಷಣ ಅಗತ್ಯವಾಗಿದೆ. ಗ್ರಾಮೀಣ ಮಕ್ಕಳಿಗೆ ಶಿಕ್ಷಣ ಒದಗಿಸುವಂತಹ ಪ್ರಮುಖ ಖಾತೆ ಇದಾಗಿದ್ದು, ದಕ್ಷತೆಯಿಂದ ಕಾರ್ಯನಿರ್ವಹಿಸಲಾಗುವುದು.

ತಾವೂ ಕೂಡ 1ರಿಂದ 10ನೇ ತರಗತಿವರೆಗೆ ಗ್ರಾಮೀಣ ಶಾಲೆಯಲ್ಲೇ ಓದಿರುವುದಾಗಿ ತಿಳಿಸಿದ ಅವರು, ರೈತರು, ಬಡವರ ಮಕ್ಕಳು ಓದುವಂತಹ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಕೊಡಲು ಅಥವಾ ಒದಗಿಸಲು ಪರಿಪೂರ್ಣವಾದ ಕೆಲಸ ಮಾಡುವುದಾಗಿ ಸಚಿವರು ಭರವಸೆ ನೀಡಿದರು.

ತಾವು ಯಾವುದೇ ಖಾತೆಯನ್ನೂ ಕೇಳಿಲ್ಲ. ಮುಖ್ಯಮಂತ್ರಿಗಳು ವಿಶ್ವಾಸವಿಟ್ಟು ಈ ಹೊಸ ಖಾತೆಯ ಜವಾಬ್ದಾರಿಯನ್ನು ನೀಡಿದ್ದಾರೆ. ಅದನ್ನು ಪಾಲನೆ ಮಾಡಲು ಶ್ರಮವಹಿಸುವುದಾಗಿ ಹೇಳಿದರು.

ಶಿಕ್ಷಕರ ವರ್ಗಾವಣೆ ಮಾರ್ಗಸೂಚಿಯಲ್ಲಿ ನ್ಯೂನ್ಯತೆಗಳಿದ್ದರೆ ಸರಿಪಡಿಸಲಾಗುವುದು ಎಂದರು.
ಹನ್ನೊಂದು ಸಾವಿರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿಯಲ್ಲಿ ಅರ್ಹತೆ ಪಡೆದು ಭರ್ತಿಯಾದವರು 2ಸಾವಿರ ಶಿಕ್ಷಕರು ಮಾತ್ರ. ಕೆಲವು ನಿಬಂಧನೆಗಳಿಂದಾಗಿ ಬಹಳಷ್ಟು ಅಭ್ಯರ್ಥಿಗಳು ಅರ್ಹತೆ ಪಡೆಯಲು ಸಾಧ್ಯವಾಗಿಲ್ಲ. ಈ

ಬಗ್ಗೆ ಮುಖ್ಯಮಂತ್ರಿ ಅವರೊಂದಿಗೆ ಸಮಾಲೋಚನೆ ನಡೆಸಿ ಸಾಧ್ಯವಾದಷ್ಟು ಮಟ್ಟಿಗೆ ಅರ್ಹ ಅಭ್ಯರ್ಥಿಗಳಿಗೆ ಶಿಕ್ಷಕ ಹುದ್ದೆ ನೀಡಲು ಪ್ರಯತ್ನ್ನಿಸಲಾಗುವುದು ಎಂದು ಹೇಳಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin