ಬಿಸಿಲ ನಾಡು ಕಲಬುರಗಿಯಲ್ಲಿ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ದತೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜ.25- ಕಲಬುರಗಿಯಲ್ಲಿ ಫೆ.5ರಿಂದ 7ರವರೆಗೆ ಮೂರು ದಿನಗಳ ಕಾಲ ನಡೆಯಲಿರುವ 85ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನಕ್ಕೆ ಭರದ ಸಿದ್ದತೆಗಳು ನಡೆಯುತ್ತಿವೆ.
ರಾಜ್ಯದ ಎಲ್ಲ ಭಾಗಗಳಿಂದ ಆಗಮಿಸುವ ಸಾಹಿತ್ಯಾಸಕ್ತರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಆಯೋಜಕರು ಸಜ್ಜಾಗಿದ್ದಾರೆ. ಬಿಸಿಲ ನಾಡು ಕಲಬುರಗಿಗೆ ಆಗಮಿಸುವ ಸಾಹಿತ್ಯಾಭಿಮಾನಿಗಳಿಗೆ ಆತಿಥ್ಯ ನೀಡಲು ಕಲಬುರಗಿಯ ಜನತೆ ಸಿದ್ದತೆಯಲ್ಲಿ ತೊಡಗಿದ್ದಾರೆ.

ಹೈದರಾಬಾದ್ ಕರ್ನಾಟಕ ಭಾಗವಾದ ಕಲಬುರಗಿಗೆ ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ಜನ ಆಗಮಿಸುವ ನಿರೀಕ್ಷೆಯಿದೆ. ಕಲಬುರಗಿಯಲ್ಲಿರುವ ಎಲ್ಲ ಲಾಡ್ಜ್‍ಗಳು, ವಸತಿಗೃಹಗಳು, ಕಲ್ಯಾಣ ಮಂಟಪಗಳು, ಹಾಸ್ಟೆಲ್‍ಗಳು, ಸರ್ಕಾರಿ ಹಾಸ್ಟೆಲ್‍ಗಳು, ಶಾಲಾ ಕಾಲೇಜುಗಳನ್ನು ಮೂರು ದಿನಗಳಿಗಾಗಿ ಕಾಯ್ದಿರಿಸಲಾಗಿದೆ.  ಅತಿಗಣ್ಯರು, ಗಣ್ಯರು, ಸಾಹಿತಿಗಳು, ಸನ್ಮಾನಿತರು, ಅತಿಥಿಗಳು, ವಿಶೇಷ ಆಹ್ವಾನಿತರಿಗೆ ವಿಶೇಷ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ. ರಾಯಚೂರು, ಬಿಜಾಪುರದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಊಟೋಪಚಾರದ ವೇಳೆ ಸಾಕಷ್ಟು ಅವ್ಯವಸ್ಥೆ ಉಂಟಾಗಿತ್ತು.

ಸಾಹಿತ್ಯ ಪರಿಷತ್ ಈಗ ಆ ವ್ಯವಸ್ಥೆಯನ್ನು ಸರಿಪಡಿಸಿ ಉತ್ತಮ ವ್ಯವಸ್ಥೆಯನ್ನು ಕಲ್ಪಿಸಿದೆ. ನಂತರ ನಡೆದ ಎಲ್ಲ ಸಮ್ಮೇಳನಗಳಲ್ಲಿ ಯಾವುದೇ ಅವ್ಯವಸ್ಥೆಗೆ ಆಸ್ಪದ ಕೊಡದಂತೆ ಆಯೋಜಕರು, ಸ್ವಯಂಸೇವಕರು ಕಾರ್ಯ ನಿರ್ವಹಿಸಿದ್ದಾರೆ.  ಅದೇ ರೀತಿ ಕಲಬುರಗಿ ಸಾಹಿತ್ಯ ಸಮ್ಮೇಳನದ ಯಶಸ್ವಿಗೂ ಕಲಬುರಗಿ ಜನತೆ ಸ್ವಯಂಪ್ರೇರಿತರಾಗಿ ಮುಂದೆ ಬರುತ್ತಿದ್ದಾರೆ. ಇಲ್ಲಿನ ಜಿಲ್ಲಾ ಪರಿಷತ್ ಘಟಕ, ಸಾಹಿತ್ಯಾಭಿಮಾನಿಗಳು, ಶಾಲಾಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಕೆಲಸಗಳನ್ನು ವಹಿಸಲಾಗುತ್ತಿದೆ.

ಸಮ್ಮೇಳನದಲ್ಲಿ ಭಾಗವಹಿಸಲು ನೋಂದಣಿ ಮಾಡಿಸಿಕೊಳ್ಳಲು ಜ.14 ಕೊನೆಯ ದಿನಾಂಕವನ್ನು ನಿಗದಿ ಮಾಡಲಾಗಿತ್ತು. ಅಷ್ಟರೊಳಗೆ ರಾಜ್ಯದ ವಿವಿಧೆಡೆಯಿಂದ ಸುಮಾರು 20 ಸಾವಿರದಷ್ಟು ಸಾಹಿತ್ಯಾಭಿಮಾನಿಗಳು ನೋಂದಣಿ ಮಾಡಿಸಿಕೊಂಡಿದ್ದಾರೆ.  ಇಷ್ಟಲ್ಲದೆ ಅತಿಥಿಗಳು, ವಿಶೇಷ ಆಹ್ವಾನಿತರು, ಗಣ್ಯರು, ಅವರ ಬೆಂಬಲಿಗರು, ಕುಟುಂಬದವರು ಸೇರಿದಂತೆ ಇನ್ನು ಸಾವಿರಾರು ಮಂದಿಗೆ ವಸತಿ ಊಟೋಪಾಚಾರದ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಬೇಕಾಗಿದೆ. ಇದಕ್ಕಾಗಿ ಈಗಿನಿಂದಲೇ ಸಿದ್ದತೆಯಲ್ಲಿ ತೊಡಗಿದೆ.

ಸ್ಥಳೀಯರಿಗೆ ವಸತಿ ವ್ಯವಸ್ಥೆ ಇಲ್ಲ. ಆದರೆ ಹೊರಗಿನಿಂದ ಬರುವವರಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ. ನೋಂದಾಯಿತರು ಸರ್ಕಾರಿ ನೌಕರರಾಗಿದ್ದರೆ ಅವರಿಗೆ ಒಒಡಿ ಸವಲತ್ತು ಕೊಡಲಾಗುತ್ತದೆ.  ದೂರದ ನಾಡು ಬಿಸಿಲ ನಾಡು ಗುಲ್ಬರ್ಗದಲ್ಲಿ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆಯಾದರೂ ಸಾಹಿತ್ಯಾಭಿಮಾನಿಗಳಿಗೇನೂ ಕೊರತೆ ಇಲ್ಲ. ಸಾವಿರಾರು ಜನ ಸಮ್ಮೇಳನದಲ್ಲಿ ಪಾಲ್ಗೊಳ್ಳಲು ನೋಂದಣಿ ಮಾಡಿಕೊಂಡಿದ್ದಾರೆ.

ಪುಸ್ತಕ ಮಳಿಗೆಗಳನ್ನು ಹಾಕಲು ಪ್ರಕಾಶನದವರು ಮುಗಿಬಿದ್ದಿದ್ದಾರೆ. ಲಕ್ಷಾಂತರ ಜನ ಈ ಸಮ್ಮೇಳನಕ್ಕೆ ಆಗಮಿಸಲಿರುವುದರಿಂದ ಈ ಭಾಗದಲ್ಲಿ ಇದು ಜಾತ್ರೆಯ ರೂಪದಲ್ಲಿ ನಡೆಯುತ್ತದೆ. ಸ್ಥಳೀಯ ರಾಜಕಾರಣಿಗಳು, ಮಠಾಧೀಶರು, ವರ್ತಕರು, ವಿವಿಧ ಸಂಘಟನೆಗಳವರು ಸಮಾರಂಭದ ಯಶಸ್ವಿಗೆ ಕೈ ಜೋಡಿಸಲು ಮುಂದಾಗಿದ್ದಾರೆ.

Facebook Comments