ಭಾಷಾಭಿಮಾನದ ಪಾಠ ಮಾಡಲು ಬಂದ್ರು ‘ಕನ್ನಡ ಮೇಷ್ಟ್ರು’

ಈ ಸುದ್ದಿಯನ್ನು ಶೇರ್ ಮಾಡಿ

ಬೆಳ್ಳಿ ಪರದೆ ಮೇಲೆ ಕನ್ನಡ ಮೇಷ್ಟ್ರು ಬರಲು ಸಿದ್ಧರಾಗಿದ್ದಾರೆ. ನವರಸ ನಾಯಕ ಜಗ್ಗೇಶ್ ಅಭಿನಯದ ಕಾಳಿದಾಸ ಕನ್ನಡ ಮೇಷ್ಟ್ರು ಚಿತ್ರ ನಾಳೆ ರಾಜ್ಯಾದ್ಯಂತ ಸುಮಾರು 150ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಳ್ಳುತ್ತಿದೆ. ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ನಡೆಯುತ್ತಿರುವ ಹಲವಾರು ಲೋಪ-ದೋಷಗಳನ್ನು ತೆರೆದಿಡುವ ಕಥೆ ಹೊಂದಿದ ಚಿತ್ರ ಕಾಳಿದಾಸ ಕನ್ನಡ ಮೇಷ್ಟು.

ಕವಿರಾಜ್ ನಿರ್ದೇಶನದ ಎರಡನೇ ಚಿತ್ರ ಇದಾಗಿದ್ದು, ನವರಸ ನಾಯಕ ಜಗ್ಗೇಶ್ ಇಲ್ಲಿ ಕಾಳಿದಾಸ ಎಂಬ ಕನ್ನಡದ ಮೇಷ್ಟು ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಾಳಿದಾಸನ ಪತ್ನಿ ಇಂಗ್ಲಿಷ್ ಪ್ರೇಮಿಯಾಗಿ ನಟಿ ಮೇಘನಾ ಗಾಂವಕರ್ ನಟಿಸಿದ್ದಾರೆ.  ಗಂಭೀರ ವಿಚಾರವನ್ನು ಕಾಮಿಡಿಯಾಗಿ ಹೇಳಹೊರಟಿರುವ ಚಿತ್ರ ಇದಾಗಿದೆ. ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೇ ಸೇರಿಸಬೇಕು ಎಂಬ ಧಾವಂತದಲ್ಲಿ ಪೋಷಕರಾದವರು ಲಕ್ಷಗಟ್ಟಲೆ ಡೊನೇಷನ್ ಹಣ ಹೊಂದಿಸಲು ಜೀವನ ಪೂರ್ತಿ ದುಡಿಯಬೇಕಾಗಿರುತ್ತದೆ.

ಈ ಅನಿಷ್ಟ ವ್ಯವಸ್ಥೆಗೆ ಕಡಿವಾಣ ಹಾಕಬೇಕು ಎಂಬ ನಿಟ್ಟಿನಲ್ಲಿ ಈ ಚಿತ್ರ ನಿರ್ಮಾಣವಾಗಿದೆ.ಮೊನ್ನೆ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಕವಿರಾಜ್, ನಾನು ಈ ಸಿನಿಮಾ ಮಾಡಲು ಪತ್ರಿಕೆಯೊಂದರಲ್ಲಿ ಬಂದಿದ್ದ ಆರ್ಟಿಕಲ್ ಪ್ರೇರಣೆಯಾಯಿತು. ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸಲು ಪೋಷಕರು ಎಷ್ಟೆಲ್ಲಾ ಹೈರಾಣಾಗಿ ಹೋಗುತ್ತಾರೆ ಎಂದು ಚಿತ್ರದಲ್ಲಿ ಹೇಳಿದ್ದೇನೆ. ಇಡೀ ಸಿನಿಮಾದಲ್ಲಿಕಾಮಿಡಿ ಹಾಸು ಹೊಕ್ಕಾಗಿದ್ದರೂ ಅಂತ್ಯದಲ್ಲಿ ಒಂದು ಮೆಸೇಜ್ ಹೇಳಿದ್ದೇನೆ ಎಂದು ಹೇಳಿದರು.

ನಾಯಕ ನಟ ಜಗ್ಗೇಶ್ ಮಾತನಾಡಿ, ನಾವು ಎರಡು ವಾರಗಳ ಹಿಂದೆಯೇ ಬರಬೇಕಿತ್ತು. ಆಗಲಿಲ್ಲ. ನಿರ್ದೇಶಕ ಕವಿರಾಜ್ ಒಳ್ಳೇ ಪ್ರತಿಭಾವಂತ. ಒಬ್ಬ ಕನ್ನಡ ಮೇಷ್ಟ್ರು ಪಾತ್ರ ನನ್ನದು. ಹೆಂಡತಿಯ ಆಸೆಯಂತೆ ಮಗನನ್ನು ಆಂಗ್ಲ ಶಾಲೆಗೆ ಸೇರಿಸಲು ಹೋದಾಗ ಏನೇನೆಲ್ಲ ನಡೆಯಿತು. ಈ ವ್ಯವಸ್ಥೆಯನ್ನು ಆತ ಹೇಗೆ ಎದುರಿಸುತ್ತಾನೆ ಎನ್ನುವುದು ಈ ಚಿತ್ರದ ಕಥೆ ಎಂದು ಹೇಳಿದರು.

ನಿರ್ಮಾಪಕ ಉದಯಕುಮಾರ್ ಮಾತನಾಡಿ, ಕಥೆ ರೆಡಿ ಆದ ಮೇಲೆ ಈ ಪಾತ್ರಕ್ಕೆ ಜಗ್ಗೇಶ್ ಅವರೇ ಬೇಕು ಎಂದು ಹೋಗಿ ಕೇಳಿದಾಗ ಅವರು ಒಪ್ಪಿದರು. 35 ದಿನ ಶೂಟ್ ಮಾಡಿದ್ದೇವೆ ಎಂದು ಹೇಳಿದರು. ನಟಿ ಮೇಘನಾ ಗಾಂವಕರ್ ಮಾತನಾಡಿ, ಒಂದು ವಿಶೇಷವಾದ ಚಿತ್ರದಲ್ಲಿ ಮಾಡಿರುವ ತೃಪ್ತಿ ನನಗಿದೆ.

ಜಗ್ಗೇಶ್‍ರಂತಹ ಅನುಭವಿ ಕಲಾವಿದರೊಂದಿಗೆ ನಟಿಸಿದ್ದು ನನಗೆ ಬಹಳ ಸಂತೋಷವಾಗಿದ್ದು, ಅವರಿಂದ ತುಂಬಾ ಕಲಿತಿದ್ದೇನೆ. ಒಟ್ಟಾರೆ ಈ ಚಿತ್ರ ಎಜುಕೇಷನ್ ಸಿಸ್ಟಮ್‍ಗೆ ಕನ್ನಡಿಯಂತೆ ಹೊರಬರುತ್ತಿದೆ. ನಿಮ್ಮೆಲ್ಲರ ಪ್ರೋತ್ಸಾಹ ಬೇಕು ಎಂದು ಕೇಳಿಕೊಂಡರು. ಉಳಿದಂತೆ ಚಿತ್ರದ ಸಂಗೀತ ನಿರ್ದೇಶಕ ಗುರು ಕಿರಣ್, ಛಾಯಾಗ್ರಾಹಕ ಗುಂಡ್ಲುಪೇಟೆ ಸುರೇಶ್ ಸೇರಿದಂತೆ ತಂಡದವರು ಕುರಿತು ಮಾತನಾಡಿದರು. ಸಿನಿ ಪ್ರಿಯರು ಈ ಕನ್ನಡ ಮೇಷ್ಟ್ರನ್ನು ಯಾವ ರೀತಿ ಬರಮಾಡಿಕೊಳ್ಳುತ್ತಾರೆ ಎಂಬುದನ್ನು ನೋಡಬೇಕಿದೆ.

Facebook Comments