ಅಕ್ಷರ ಜಾತ್ರೆಯಲ್ಲಿ ಜವಾರಿ ಊಟದ ಘಮಘಮ

ಈ ಸುದ್ದಿಯನ್ನು ಶೇರ್ ಮಾಡಿ

ಕಲಬುರಗಿ, ಫೆ,5- 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದಿನಿಂದ ಅಧಿಕೃತ ಚಾಲನೆ ದೊರೆತಿದ್ದು, ನುಡಿಜಾತ್ರೆಯಲ್ಲಿ ಕಲಬುರಗಿ ಜಿಲ್ಲೆಯ ವಿಶೇಷ ಭೋಜನದ ಮೂಲಕ ಸಾಹಿತ್ಯಾಸಕ್ತರಿಗೆ ಔತಣ ನೀಡಲು ಸಜ್ಜಾಗಿದೆ. ಇಂದಿನಿಂದ ಮೂರು ದಿನಗಳ ಕಾಲ ನಡೆಯುವ ಸಮ್ಮೇಳನಕ್ಕೆ ಆಗಮಿಸುವ ಸಾಹಿತಿಗಳು, ಸಾಹಿತ್ಯಾಭಿಮಾನಿಗಳು ಮತ್ತು ಗಣ್ಯರಿಗೆ ರುಚಿ-ಶುಚಿಕರ ಊಟ ಉಣಬಡಿಸಲು ಅಡುಗೆ ವ್ಯವಸ್ಥೆ ಮಾಡಲಾಗಿದೆ.

ಸಮ್ಮೇಳನದ ಮೂರು ದಿನ ಸೇರಿ ಸುಮಾರು 4 ಲಕ್ಷ ಜನ ಭಾಗವಹಿಸಬಹುದು ಎಂಬ ನಿರೀಕ್ಷೆಯೊಂದಿಗೆ ಅಡುಗೆ ತಯಾರಿಸಲಾಗಿದೆ. ಊಟಕ್ಕಾಗಿ 200 ಕೌಂಟರ್ ಸಿದ್ಧವಾಗಿದ್ದು, 1300 ಸ್ವಯಂ ಸೇವಕರು ನೇಮಕಗೊಂಡಿದ್ದಾರೆ. ಪ್ರತಿ ಕೌಂಟರ್‍ಗೆ ಒಬ್ಬ ಬಿ ಗ್ರೂಪ್ ಅಧಿಕಾರಿ, ಇಬ್ಬರು ಸಿ ಗ್ರೂಪ್ ನೌಕರರನ್ನು ನೇಮಿಸಲಾಗಿದೆ.

50 ಕೌಂಟರ್‍ಗೆ ಒಬ್ಬ ಅಧಿಕಾರಿ ಮೇಲುಸ್ತುವಾರಿ ವಹಿಸಿದ್ದಾರೆ. ಸರ್ಕಾರಿ ಪದವಿ ಮಹಾ ವಿದ್ಯಾಲಯದ ವಿದ್ಯಾರ್ಥಿಗಳನ್ನು ಸ್ವಯಂ ಸೇವಕರಾಗಿ ನೇಮಿಸಿ ಅವರ ಕರ್ತವ್ಯದ ಬಗ್ಗೆ ಮಾಹಿತಿ ನೀಡಲಾಗಿದೆ. ಮಾಧ್ಯಮಗಳು, ಅಂಗವಿಕಲರು, ವಿಐಪಿ, ಮಹಿಳೆಯರು, 21800 ನೋಂದಾಯಿತ ಸದಸ್ಯರಿಗೆ ಪ್ರತ್ಯೇಕ ಕೌಂಟರ್‍ಗಳಿರಲಿವೆ. ಊಟದ ವೇಳೆ ಗೊಂದಲ ಉಂಟಾಗದಂತೆ ಕ್ರಮ ಕೈಗೊಳ್ಳಲಾಗಿದೆ.

ಬೈರು ಕೆಟರಿಂಗ್: ರುಚಿಕರ ಅಡುಗೆಯಲ್ಲಿ ಹೆಸರು ಮಾಡಿರುವ ಧಾರವಾಡದ ಬೈರು ಕೆಟರಿಂಗ್ ಗುತ್ತಿಗೆ ಪಡೆದಿದ್ದಾರೆ. 2500ಕ್ಕೂ ಹೆಚ್ಚು ಬಾಣಸಿಗರ ತಂಡ ಮೆನು ಪ್ರಕಾರ ಅಡುಗೆ ಕಾರ್ಯಗಳಲ್ಲಿ ತೊಡಗಿಸಿ ಕೊಂಡು ಶೇಂಗಾ ಹೋಳಿಗೆ, ಮೈಸೂರು ಪಾಕ್, ಶೇಂಗಾ ಉಂಡಿ ಸೇರಿ ಬಹುತೇಕ ಐಟಂಗಳು ರೆಡಿಯಾಗಿವೆ. ಖಡಕ್ ರೊಟ್ಟಿ ಲೋಡ್ ಬಂದಿಳಿದಿದೆ.

ಏನೇನು ವಿಶೇಷ: ಉಪಾಹಾರಕ್ಕೆ ಮೊದಲ ದಿನ ಉಪ್ಪಿಟ್ಟು, ಶಿರಾ, ಎರಡನೇ ದಿನ ಚುರಮುರಿ ಸುಸಲಾ, ಮಿರ್ಚಿ ಭಜಿ, ಮೈಸೂರು ಪಾಕ್, ಮೂರನೇ ದಿನ ಜವಿಗೋಧಿ ಉಪ್ಪಿಟ್ಟು, ಶೇಂಗಾ ಚೆಟ್ನಿ, ಮೈಸೂರು ಬಜ್ಜಿ, ಬೇಸನ್ ಉಂಡಿ ನೀಡಲಾಗುತ್ತಿದ್ದು, ಊಟಕ್ಕಾಗಿ ಸಜ್ಜೆ ರೊಟ್ಟಿ, ಜೋಳದ ರೊಟ್ಟಿ, ಚಪಾತಿ, ಬದನೆಕಾಯಿ ಎಡಿಗಾಯಿ, ಮಟಕಿ ಕಾಳು, ಶೇಂಗಾ ಹಿಂಡಿ, ಅನ್ನ, ಸಾಂಬಾರ್, ಉಪ್ಪಿನಕಾಯಿ, ಮಜ್ಜಿಗೆ, ಮೋತಿಚೂರ್ ಪುಂಡಿ ಪಲ್ಯ, ಡೊಣ್ಣಗಾಯಿ ಪಲ್ಯ,ಘಟಬ್ಯಾಳಿ, ಮಿಕ್ಸ್ ತರಕಾರಿ ಪಲ್ಯ, ಗೋಧಿ ಹುಗ್ಗಿಯನ್ನು ಬಡಿಸಲಾಗುತ್ತದೆ. ಇನ್ನು ರಾತ್ರಿ ಊಟಕ್ಕೆ ವಾಂಗಿಬಾತ್, ಬಿಸಿಬೇಳೆ ಭಾತ್, ಅನ್ನ, ರಸಂ, ಉಪ್ಪಿನಕಾಯಿ, ಶಾವಿಗೆ ಪಾಯಸ, ಮೊಸರನ್ನ, ಹೆಸರು ಬೇಳೆ ಪಾಯಸ, ಪಕೋಡಾ, ಚಟ್ನಿ ಪುಡಿ, ಜಿಲೇಬಿ ಇತ್ಯಾದಿ ಖಾದ್ಯಗಳನ್ನು ಸಾಹಿತ್ಯಾಸಕ್ತರಿಗೆ ಉಣಬಡಿಸಲಾಗುವುದು.

Facebook Comments