ಕೊರೊನಾ ಉಲ್ಬಣ: ಕಸಾಪ ಚುನಾವಣೆ ಮುಂದೂಡಲು ಒತ್ತಾಯ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಏ.22- ಕೊರೊನಾ ಸೋಂಕು ಉಲ್ಬಣಿಸುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಯನ್ನು ಮುಂದೂಡಬೇಕೆಂದು ಬೆಂಗಳೂರು ನಗರ ಜಿಲ್ಲಾ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಕುವೆಂಪು ಪ್ರಕಾಶ್ ಒತ್ತಾಯಿಸಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಕೊರೊನಾ ಸೋಂಕು ಮತ್ತು ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಅಭ್ಯರ್ಥಿಗಳಾದ ನಾವು ಸದಸ್ಯರ ಮನೆಗಳಿಗೆ ಹೋಗಿ ಮತ ಕೇಳಲು ಸಾಧ್ಯವಾಗುತ್ತಿಲ್ಲ.

ಮೇ 9ರಂದು ಚುನಾವಣೆ ನಡೆಯಲಿದ್ದು, ತಜ್ಞರ ಪ್ರಕಾರ ಆ ವೇಳೆಗೆ ಕೊರೊನಾ ಮತ್ತಷ್ಟು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಯಾವ ಸದಸ್ಯರೂ ಸರಿಯಾಗಿ ಮತದಾನ ಮಡಲು ಸಾಧ್ಯವಾಗುವುದಿಲ್ಲ. ಹಾಗಾಗಿ ಕನಿಷ್ಠ ಎರಡರಿಂದ ಮೂರು ತಿಂಗಳು ಚುನಾವಣೆಯನ್ನು ಮುಂದೂಡಬೇಕು. ಕೊರೊನಾ ಮುಗಿದ ಮೇಲೆ ದಿನಾಂಕ ನಿಗದಿ ಮಾಡಿ ಈಗಿನ ಪ್ರಕ್ರಿಯೆಯಲ್ಲೇ ಚುನಾವಣೆ ನಡೆಸಬೇಕು ಎಂದು ಚುನಾವಣಾಕಾರಿಗಳಿಗೆ ಅವರು ಮನವಿ ಮಾಡಿದ್ದಾರೆ.

ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳು ಮತ್ತು ಆನೇಕಲ್ ಸೇರಿದಂತೆ ಬೂತ್‍ಗಳು ಹೆಚ್ಚಾಗಿವೆ. ಮೂರೂವರೆ ಲಕ್ಷ ಮತದಾರರಿರುವ ಕನ್ನಡ ಸಾಹಿತ್ಯ ಪರಿಷತ್‍ನಲ್ಲಿ ರಾಜಧಾನಿ ಬೆಂಗಳೂರಿನಲ್ಲಿ ಹೆಚ್ಚು ಮತದಾರರಿದ್ದಾರೆ. ಬೆಂಗಳೂರಿನಲ್ಲಿಯೇ ಕೊರೊನಾ ತನ್ನ ಅಟ್ಟಹಾಸ ಮೆರೆಯುತ್ತಿದೆ. ಹೀಗಾಗಿ ತಾತ್ಕಾಲಿಕವಾಗಿ ಸಾಹಿತ್ಯ ಪರಿಷತ್ ಚುನಾವಣೆಯನ್ನು ಮುಂದೂಡಬೇಕು ಎಂದು ಅವರು ಚುನಾವಣಾಕಾರಿಗಳಿಗೆ ಮನವಿ ಮಾಡಿದ್ದಾರೆ.
ಒಂದು ವೇಳೆ ಚುನಾವಣೆ ಮುಂದೂಡದೆ ಹೋದರೆ ಕಸಾಪ ಎದುರು ಏ.26ರಂದು ಮುಷ್ಕರ ನಡೆಸುವುದಾಗಿ ಅವರು ಹೇಳಿದ್ದಾರೆ.

Facebook Comments