ಧಾರಾವಾಹಿಗಳ ಚಿತ್ರೀಕರಣಕ್ಕೆ ಸರ್ಕಾರ ಅಸ್ತು, ಮೇ.25ರಿಂದ ಶೂಟಿಂಗ್ ಶುರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 7- ಕೊರೊನಾ ಹಿನ್ನೆಲೆಯಲ್ಲಿ ಇಡೀ ವಿಶ್ವವೇ ಸ್ತಬ್ದವಾಗಿದ್ದು, ಬಹಳ ದಿನಗಳ ನಂತರ ಕಿರುತೆರೆ ಚಿತ್ರೀಕರಣಕ್ಕೆ ಸರ್ಕಾರ ಅನುಮತಿ ನೀಡಿದೆ. ದೇಶಾದ್ಯಂತ ಲಾಕ್‍ಡೌನ್ ವಿಧಿಸಿದ್ದ ಹಿನ್ನೆಲೆಯಲ್ಲಿ ಸ್ತಬ್ದವಾಗಿದ್ದ ಕಿರುತೆರೆ ಧಾರವಾಹಿಗಳ ಚಿತ್ರೀಕರಣವು ಮೇ 25ರಿಂದ ಕಾರ್ಯಾರಂಭವಾಗಲಿದೆ.

ಕಿರುತೆರೆ ಚಿತ್ರೀಕರಣಕ್ಕೆ ಅವಕಾಶ ನೀಡುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗಿತ್ತು. ಕಂದಾಯ ಸಚಿವ ಆರ್.ಅಶೋಕ್ ಅವರ ಸಹಕಾರದೊಂದಿಗೆ ನಮಗೆ ಧಾರವಾಹಿಗಳ ಚಿತ್ರೀಕರಣಕ್ಕೆ ಒಪ್ಪಿಗೆ ದೊರೆತಿದೆ.

ಈ ನಿಟ್ಟಿನಲ್ಲಿ ನಮ್ಮ ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ಕೆಲವು ವಾಹಿನಿಗಳು, ನಿರ್ಮಾಪಕರು, ತಂತ್ರಜ್ಞರ ಜೊತೆ ಚರ್ಚಿಸಿ ಕಾರ್ಯಸಮಿತಿಯ ಒಪ್ಪಿಗೆಯನ್ನು ಪಡೆಯುವ ಮೂಲಕ ಚಿತ್ರೀಕರಣ ನಡೆಸಲು ತೀರ್ಮಾನಿಸಿದ್ದೇವೆ ಎಂದು ಕೆಟಿವಿಎ ಅಧ್ಯಕ್ಷರಾದ ಎಸ್.ವಿ.ಶಿವಕುಮಾರ್ ತಿಳಿಸಿದ್ದಾರೆ.

ಮುಕ್ತವಾಗಿ ಚರ್ಚಿಸುವ ಮೂಲಕ ತತ್‍ಕ್ಷಣವೇ ಚಿತ್ರೀಕರಣ ಆರಂಭಿಸದೆ ಕಾಲಾವಕಾಶವನ್ನು ಪಡೆದು ಕಲಾವಿದರು, ತಂತ್ರಜ್ಞರು ಬೇರೆಡೆ ಇರುವುದರಿಂದ ಎಲ್ಲರನ್ನು ಒಂದೆಡೆ ಸೇರಿಸಿ ಚಿತ್ರೀಕರಣದ ರೂಪುರೇಷೆಗಳನ್ನು ರೂಪಿಸಿಕೊಂಡು ಯಾವುದೇ ಆಡಂಬರವಿಲ್ಲದೆ ಚಿತ್ರೀಕರಣ ಮಾಡಲು ನಿರ್ಧರಿಸಲಾಗಿದೆ.

ಈ ವಿಚಾರವಾಗಿ ವಾಹಿನಿಗಳ ಮುಖ್ಯಸ್ಥರೊಂದಿಗೆ ಚರ್ಚೆ ಮಾಡಿದ್ದೇವೆ. ಸಾಮಾಜಿಕ ಬದ್ದತೆಯೊಂದಿಗೆ ಎಲ್ಲರ ಆರೋಗ್ಯದ ದೃಷ್ಟಿಯಿಂದ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಂಡು ಚಿತ್ರೀಕರಣದಲ್ಲಿ ತೊಡಗುವಂತೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.

Facebook Comments

Sri Raghav

Admin