ಜೂ.1 ರಿಂದ ಕಿರುತೆರೆಯಲ್ಲಿ ಧಾರಾವಾಹಿಗಳು ಶುರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 25- ಕೊರೊನಾ ಮಹಾಮಾರಿಯಿಂದ ಸಂಕಷ್ಟಕ್ಕೀಡಾಗಿದ್ದ ಧಾರಾವಾಹಿ ಲೋಕದ ಕಾರ್ಮಿಕರಿಗೆ ಇಂದಿನಿಂದ ಹೊಸದೊಂದು ಆಶಾಕಿರಣ ಮೂಡಿದೆ. ಕೊರೊನಾವನ್ನು ತಡೆಗಟ್ಟಲು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದೇಶ ಹಾಗೂ ರಾಜ್ಯಗಳಲ್ಲಿ ಲಾಕ್‍ಡೌನ್ ಘೋಷಿಸಿದ್ದರ ಹಿನ್ನೆಲೆಯಲ್ಲಿ ಸಿನಿಮಾರಂಗ ಹಾಗೂ ಕಿರುತೆರೆ ಲೋಕವು ತನ್ನ ಕಾರ್ಯಚಟುವಟಿಕೆಯನ್ನು ಸ್ಥಗಿತಗೊಳಿಸಿತ್ತು.

ಶೂಟಿಂಗ್, ಡಬ್ಬಿಂಗ್, ಎಡಿಟಿಂಗ್ ಕಾರ್ಯಗಳು ಸ್ಥಗಿತಗೊಂಡಿದ್ದರಿಂದ ಸಣ್ಣ ಪುಟ್ಟ ಕಲಾವಿದರು ಸೇರಿದಂತೆ ತಂತ್ರಜ್ಞರು ಕೂಡ ಸಂಕಷ್ಟಕ್ಕೀಡಾಗಿದ್ದರು. ಮಾರ್ಚ್ 19 ರಿಂದ ಸ್ಥಗಿತಗೊಂಡಿದ್ದ ಚಿತ್ರೀಕರಣಕ್ಕೆ ಇಂದಿನಿಂದ ಗ್ರೀನ್ ಸಿಗ್ನಲ್ ದೊರೆತಿರುವುದರಿಂದ ಕಾರ್ಮಿಕರ ಮೊಗದಲ್ಲಿ ಮತ್ತೆ ಮಂದಹಾಸ ಮನೆ ಮಾಡಿದೆ.

ಲಾಕ್‍ಡೌನ್‍ನಿಂದಾಗಿ ಚಿತ್ರೀಕರಣವು ಸ್ಥಗಿತಗೊಂಡಿದ್ದ ದಿನನಿತ್ಯ ವಿವಿಧ ಚಾನೆಲ್‍ಗಳಲ್ಲಿ ಪ್ರಸಾರವಾಗುತ್ತಿರುವ ಜೊತೊಜೊತೆಯಲಿ, ಸುಬ್ಬಲಕ್ಷ್ಮೀ ಸಂಸಾರ, ನಮ್ಮನೆ ಯುವರಾಣಿ, ಸುಬ್ಬಲಕ್ಷ್ಮೀ ಸಂಸಾರ, ಯಾರೇ ನೀ ಮೋಹಿನಿ, ಮುದ್ದುಲಕ್ಷ್ಮಿ ಸೇರಿದಂತೆ ಸುಮಾರು 120 ಕ್ಕೂ ಹೆಚ್ಚು ಧಾರಾವಾಹಿಗಳ ಪ್ರಸಾರವು ಸ್ಥಗಿತಗೊಂಡಿದ್ದವು. ಕೆಲವು ವಾಹಿನಿಗಳು ಖ್ಯಾತ ಧಾರಾವಾಹಿಗಳ ಹಳೆಯ ಕಂತುಗಳನ್ನು ಪ್ರಸಾರ ಮಾಡುವ ಮೂಲಕ ಪ್ರೇಕ್ಷಕರ ಮನ ತಣಿಸಿದ್ದವು.

ಜೂನ್ 1 ರಿಂದ ಎಲ್ಲಾ ವಾಹಿನಿಗಳಲ್ಲಿ ಪ್ರಸಾರವಾಗುತ್ತಿದ್ದ ಧಾರಾವಾಹಿಗಳ ಹೊಸ ಕಂತುಗಳು ಪ್ರಸಾರವಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ಕಲಾವಿದರು, ತಂತ್ರಜ್ಞರ ಕಷ್ಟವನ್ನು ನಿವಾರಿಸಲು ಟೆಲಿವಿಷನ್ ಅಸೋಸಿಯೇಷನ್ ಅವರು ನೂತನ ಮಾರ್ಗಸೂಚಿಯನ್ನು ಅಳವಡಿಸಿಕೊಂಡು ಚಿತ್ರೀಕರಣ ಆರಂಭಿಸುವಂತೆ ಸೂಚನೆ ನೀಡಿದೆ.

ಧಾರಾವಾಹಿಗಳ ನಿರ್ಮಾಪಕರು, ನಿರ್ದೇಶಕರು ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಶೂಟಿಂಗ್ ನಡೆಸಲು ಸಜ್ಜಾಗಿದೆ. ಒಂದು ಚಿತ್ರೀಕರಣದ ವೇಳೆ 20ಕ್ಕಿಂತ ಅಧಿಕ ತಂತ್ರಜ್ಞರು, ಕಲಾವಿದರನ್ನು ಬಳಸಿಕೊಳ್ಳದಂತೆ, ಚಿತ್ರೀಕರಣದಲ್ಲಿ ಪಾಲ್ಗೊಳ್ಳುವವರೆಲ್ಲರೂ ಮಾಸ್ಕ್, ಸ್ಯಾನಿಟೈಸರ್‍ಗಳನ್ನು ಕಡ್ಡಾಯವಾಗಿ ಬಳಸಬೇಕು, ಇದರೊಂದಿಗೆ ಎರಡು ಗಂಟೆಗಳಿಗೊಮ್ಮೆ ಚಿತ್ರೀಕರಣದಲ್ಲಿ ಪಾಲ್ಗೊಂಡಿರುವವರ ದೇಹದ ಉಷ್ಣಾಂಶವನ್ನು ಚಾನಲ್‍ಗೆ ಹಾಗೂ ಪ್ರೊಡಕ್ಷನ್ ಕಂಪನಿಗೆ ಕಡ್ಡಾಯವಾಗಿ ನೀಡಲೇಬೇಕೆಂದು ಟೆಲಿವಿಷನ್ ಅಸೋಸಿಯೇಷನ್ ಸೂಚಿಸಿದೆ.

ಈ ಹಿಂದೆ ಕಲಾವಿದರು ಬಳಸುತ್ತಿದ್ದ ಮೇಕಪ್ ಸಾಮಗ್ರಿಗಳನ್ನು ಪ್ರೊಡಕ್ಷನ್ ಹೌಸ್‍ನವರು ಕೊಡುತ್ತಿದ್ದರು, ಇನ್ನು ಮುಂದೆ ಕಲಾವಿದರೇ ಮೇಕಪ್ ಕಿಟ್‍ಗಳನ್ನು ತರಬೇಕು, ಚಿತ್ರೀಕರಣದಲ್ಲಿ ಪಾಲ್ಗೊಳ್ಳುವವರೆಲ್ಲರಿಗೂ ಜೀವವಿಮೆ ಮಾಡಿಸಿ ಅದರ ಮೊತ್ತವನ್ನು ಕಲಾವಿದರ ಸಂಭಾವನೆಯಿಂದ ಬರಿಸಬೇಕೆಂಬ ಸೂಚನೆಯನ್ನು ನೀಡಿದೆ.

ಮನೆಯಲ್ಲಿ ಕುಳಿತು ತಮ್ಮ ನೆಚ್ಚಿನ ಧಾರಾವಾಹಿಯನ್ನು ವೀಕ್ಷಿಸುತ್ತಿದ್ದ ಪ್ರೇಕ್ಷಕರ ಮನ ತಣಿಸಲು ಜೂನ್ 1 ರಿಂದ ಹೊಸ ಕಂತುಗಳು ಪ್ರಸಾರವಾಗಲಿರುವುದರಿಂದ ಇಂದಿನಿಂದ ಆಯಾ ಧಾರಾವಾಹಿಗಳ ಶೂಟಿಂಗ್ ಅನ್ನು ಆರಂಭಿಸಲಾಗಿದೆ. ಇದುವರೆಗೂ ಸೀರಿಯಲ್ ನೋಡಲು ಸಾಧ್ಯವಾಗದ ಕಿರುತೆರೆ ಪ್ರಿಯರು ಜೂ.1 ರಿಂದ ತಮ್ಮ ನೆಚ್ಚಿನ ಸೀರಿಯಲ್‍ಗಳನ್ನು ನೋಡಬಹುದು.

Facebook Comments