Saturday, April 20, 2024
Homeರಾಜ್ಯಅಗಲಿದ ಕೆ.ಶಿವರಾಮ್‍ಗೆ ಗಣ್ಯರ ಅಶ್ರುತರ್ಪಣ

ಅಗಲಿದ ಕೆ.ಶಿವರಾಮ್‍ಗೆ ಗಣ್ಯರ ಅಶ್ರುತರ್ಪಣ

ಬೆಂಗಳೂರು, ಮಾ.1- ನಿನ್ನೆ ನಿಧನರಾದ ನಿವೃತ್ತ ಐಎಎಸ್ ಅಧಿಕಾರಿ ಚಿತ್ರನಟ ರಾಜಕಾರಣಿ ಕೆ. ಶಿವರಾಮ್ ಅವರ ಅಂತಿಮ ದರ್ಶನಕ್ಕೆ ಅಪಾರ ಅಭಿಮಾನಿ ಬಳಗ ಹರಿದು ಬಂದಿತ್ತು. ರವೀಂದ್ರ ಕಲಾಕ್ಷೇತ್ರದಲ್ಲಿ ಮಧ್ಯಾಹ್ನದ ವರೆಗೆ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಚಿತ್ರರಂಗ, ರಾಜಕೀಯ ಕ್ಷೇತ್ರದ ಗಣ್ಯರು, ಅಧಿಕಾರಿ ವರ್ಗದವರು ಆಗಮಿಸಿ ಶಿವರಾಮ್ ಅವರಿಗೆ ಅಂತಿಮ ನಮನ ಸಲ್ಲಿಸಿದರು.

ಸಚಿವರಾದ ಈಶ್ವರ ಖಂಡ್ರೆ, ಪ್ರಿಯಾಂಕ ಖರ್ಗೆ, ಸಂಸದ ಡಿ.ಕೆ.ಸುರೇಶ್, ಮಾಜಿ ಸಚಿವ ಎಚ್. ಆಂಜನೇಯ, ಮಾಜಿ ಶಾಸಕ ನೆ.ಲ. ನರೇಂದ್ರ ಬಾಬು, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ. ವಿಜಯೇಂದ್ರ ವಿಧಾನ ಪರಿಷತ್ ಸದಸ್ಯ, ಬಿಜೆಪಿ ಮುಖಂಡ ಛಲವಾದಿ ನಾರಾಯಣ ಸ್ವಾಮಿ, ಡಾ. ರಾಜ್‍ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷ ಎನ್.ಎಂ. ಸುರೇಶ್, ನಿರ್ದೇಶಕ ತರುಣ್ ಸುದೀರ್ ಸೇರಿದಂತೆ ಹಲವಾರು ಗಣ್ಯರು ಆಗಮಿಸಿ ಅಂತಿಮ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದರು.

ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದ ಕೆ. ಶಿವರಾಮ್ ಅವರು ಸಿನಿಮಾ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತಮ್ಮ ಛಾಪು ಮೂಡಿಸಿದ್ದು, ಸಾಮಾಜಿಕ ಕ್ಷೇತ್ರದಲ್ಲೂ ಸೇವೆ ಸಲ್ಲಿಸಿದ್ದರು. ಎಲ್ಲಾ ಕ್ಷೇತ್ರಗಳಿಂದ ಆಗಮಿಸಿದ್ದ ಗಣ್ಯರು ಅವರಿಗೆ ನಮನ ಸಲ್ಲಿಸಿದರು. ಶಿವರಾಮ್ ಅವರ ಅಂತ್ಯಕ್ರಿಯೆಯನ್ನು ಕೆಂಗೇರಿಯ ಛಲವಾದಿ ಮಹಾಸಭಾ ಆವರಣದಲ್ಲಿ ನಡೆಸಬೇಕೆಂದು ಬೆಂಬಲಿಗರು ಒತ್ತಾಯಿಸಿದ್ದು, ಈ ಕುರಿತು ಸಚಿವ ಎಚ್.ಸಿ. ಮಹದೇವಪ್ಪ ಅವರಿಗೆ ಮನವಿ ಮಾಡಿದ್ದಾರೆ. ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

ಸರಕಾರದಿಂದ ಅನುಮತಿ ಸಿಕ್ಕರೆ ಕೆಂಗೇರಿಯಲ್ಲಿರುವ ಛಲವಾದಿ ಮಹಾಸಭಾ ಆವರಣದಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಲಿದೆ. ಇಲ್ಲದಿದ್ದರೆ ಬಿಡದಿ ಸಮೀಪದ ಶಿವರಾಮ್ ಅವರ ಸ್ವಗ್ರಾಮ ಊರಗಳ್ಳಿಯ ಜಮೀನಿನಲ್ಲಿ ಅಂತ್ಯಕ್ರಿಯೆ ನೆರವೇರಲಿದೆಯೆಂದು ಅವರ ಕುಟುಂಬದ ಮೂಲಗಳು ತಿಳಿಸಿವೆ.

ಶಿವರಾಮ್ ಅವರು ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ಐಎಎಸ್ ಪರೀಕ್ಷೆ ಬರೆದು ಐಎಎಸ್ ಅಧಿಕಾರಿಯಾದ ಹಿರಿಮೆಗೆ ಪಾತ್ರರಾಗಿದ್ದರು. ಇವರು ಐಎಎಸ್ ಅಧಿಕಾರಿಯಾಗಿ ಜನಮನ್ನಣೆ ಗಳಿಸಿದ್ದಲ್ಲದೆ, ಸಿನಿಮಾ ರಂಗದಲ್ಲಿ ನಾಡಿನಾದ್ಯಂತ ಮನೆಮಾತಾಗಿದ್ದರು. ಸರ್ಕಾರಿ ಸೇವೆಯಿಂದ ಸ್ವಯಂ ನಿವೃತ್ತಿ ನಂತರ ರಾಜಕಾರಣಿ ಆಗಬೇಕೆಂಬ ಹಂಬಲದೊಂದಿಗೆ ಬಿಜೆಪಿ ಪಕ್ಷ ಸೇರಿ ಛಲವಾದಿ ಮಹಾಸಭಾ ಹುಟ್ಟು ಹಾಕಿ ಕೆಳ ಸಮುದಾಯಕ್ಕೆ ಆಸರೆಯಾಗಿದ್ದರು.

RELATED ARTICLES

Latest News