ಬ್ರೇಕಿಂಗ್ : ಕರ್ನಾಟಕ ವಿಧಾನಸಭಾ, ಲೋಕಸಭಾ ಉಪಚುನಾವಣೆಗೆ ಮುಹೂರ್ತ ಫಿಕ್ಸ್

ಈ ಸುದ್ದಿಯನ್ನು ಶೇರ್ ಮಾಡಿ

Rawat--01

ನವದೆಹಲಿ,ಅ.6- ಮಿನಿ ಮಹಾಸಮರ ಎಂದೇ ಬಿಂಬಿತವಾಗಿರುವ ರಾಜ್ಯದ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನ.3ರಂದು ಮತದಾನ ನಡೆದು ಡಿ.11ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.  ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ನಡೆಯುತ್ತಿರುವ ಮೊದಲ ಉಪಚುನಾವಣೆ ಇದಾಗಿರುವುದರಿಂದ ಮೂರು ಪಕ್ಷಗಳಿಗೆ ಇದು ನಿರ್ಣಾಯಕವಾಗಲಿದೆ.   ನವದೆಹಲಿಯಲ್ಲಿ ಶನಿವಾರ ಕೇಂದ್ರ ಚುನಾವಣಾ ಆಯೋಗದ ಮುಖ್ಯ ಆಯುಕ್ತ ಒ.ಪಿ.ರಾವತ್ ಅವರು ಪಂಚರಾಜ್ಯಗಳ ವಿಧಾನಸಭೆ ಜೊತೆಗೆ ಕರ್ನಾಟಕ ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ದಿನಾಂಕವನ್ನು ಘೋಷಿಸಿದರು.

ನವೆಂಬರ್ 3ರಂದು ಬಳ್ಳಾರಿ, ಶಿವಮೊಗ್ಗ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ. ಇನ್ನು ನ.12ರಂದು ರಾಮನಗರ ಮತ್ತು ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಕ್ಷೇತ್ರಕ್ಕೆ ಮತದಾನ ನಡೆಯಲಿದೆ ಎಂದು ರಾವತ್ ತಿಳಿಸಿದರು.  ಡಿಸೆಂಬರ್ 11ರಂದು ಮತ ಎಣಿಕೆ ನಡೆದು ಅಂದೇ ಫಲಿತಾಂಶ ಪ್ರಕಟಗೊಳ್ಳಲಿದೆ.   ಕಳೆದ ಮೇ ತಿಂಗಳಿನಲ್ಲಿ ನಡೆದ ವಿಧಾನಸಭೆ ಚುನಾವಣೆ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಬಳ್ಳಾರಿಯ ಶ್ರೀರಾಮುಲು, ಮಂಡ್ಯದ ಸಿ.ಎಸ್.ಪುಟ್ಟರಾಜು ಸಂಸದರಾಗಿದ್ದು, ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದರು.

ಯಡಿಯೂರಪ್ಪ (ಶಿಕಾರಿಪುರ), ಶ್ರೀರಾಮುಲು(ಮೊಳಕಾಲ್ಮೂರು) ಹಾಗೂ ಪುಟ್ಟರಾಜು(ಮೇಲುಕೋಟೆ) ಸ್ಪರ್ಧಿಸಿ ವಿಜೇತರಾಗಿದ್ದರು. ಶಾಸಕರಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ತಮ್ಮ ಸಂಸತ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತೆರವಾಗಿದ್ದ ಈ ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ.  ಇನ್ನು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ರಾಮನಗರ ಮತ್ತು ಚನ್ನಪಟ್ಟಣದಿಂದ ಗೆದಿದ್ದರು. ಅಭ್ಯರ್ಥಿ ಎಷ್ಟೇ ಕ್ಷೇತ್ರದಲ್ಲಿ ಗೆದ್ದರೂ ಆತ ಒಂದೇ ಕ್ಷೇತ್ರದ ಪ್ರತಿನಿಧಿಯಾಗಿರಬೇಕೆಂಬ ನಿಯಮವಿದೆ.

ಕುಮಾರಸ್ವಾಮಿ ಅವರು ಚನ್ನಪಟ್ಟಣ ಕ್ಷೇತ್ರವನ್ನು ಉಳಿಸಿಕೊಂಡು ರಾಮನಗರ ಕ್ಷೇತ್ರದ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇನ್ನು ಮಾಜಿ ಸಚಿವ ಸಿದ್ದು ನ್ಯಾಮೇಗೌಡ ನಿಧನದ ಹಿನ್ನಲೆಯಲ್ಲಿ ಬಾಗಲಕೋಟೆ ಜಿಲ್ಲೆಯ ಜಮಖಂಡಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನಡೆಯಲಿದೆ.  ಬಾಗಲಕೋಟೆಗೆ ತೆರಳುತ್ತಿದ್ದ ವೇಳೆ ಸಿದ್ದು ನ್ಯಾಮೇಗೌಡ ಅಪಘಾತಕ್ಕೀಡಾಗಿ ಕೊನೆಯುಸಿರೆಳೆದಿದ್ದರು.

# ಕಣದಲ್ಲಿ ಯರ್ಯಾರು..?
ಅನಿರೀಕ್ಷಿತವಾಗಿ ಎದುರಾಗಿರುವ ಉಪಸಮರದಲ್ಲಿ ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಂಡರೆ ಬಿಜೆಪಿ ಏಕಾಂಗಿಯಾಗಿ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದೆ.  ರಾಮನಗರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪತ್ನಿ ಅನಿತಾ ಕುಮಾರಸ್ವಾಮಿ ಸ್ಪರ್ಧಿಸಿದರೆ, ಬಿಜೆಪಿಯಿಂದ ರುದ್ರೇಶ್ ಇಲ್ಲವೆ ಮಾಜಿ ಶಾಸಕ ಸಿ.ಪಿ.ಯೋಗೇಶ್ವರ್ ಸ್ಪರ್ಧಿಸುವುದು ಖಚಿತವಾಗಿದೆ.   ರಾಮನಗರದಲ್ಲಿ ಕಾಂಗ್ರೆಸ್, ಜೆಡಿಎಸ್‍ಗೆ ಬೆಂಬಲ ನೀಡಲಿದೆ. ಇನ್ನು ಜಮಖಂಡಿಯಲ್ಲಿ ಮಾಜಿ ಸಚಿವ ಸಿದ್ದು ನ್ಯಾಮೇಗೌಡರ ಪುತ್ರ ಆನಂದ್ ನ್ಯಾಮೇಗೌಡ ಕಾಂಗ್ರೆಸ್ ಹುರಿಯಾಳಾದರೆ ಬಿಜೆಪಿಯಿಂದ ಮಾಜಿ ಶಾಸಕ ಶ್ರೀಕಾಂತ್ ಕುಲಕರ್ಣಿ ಇಲ್ಲವೇ ಹನುಮಂತ ನಿರಾಣಿ ಅಭ್ಯರ್ಥಿಯಾಗುವ ಸಂಭವವಿದೆ. ಇಲ್ಲಿ ಜೆಡಿಎಸ್, ಕಾಂಗ್ರೆಸ್‍ಗೆ ಬೆಂಬಲ ನೀಡಲಿದೆ.

# ಲೋಕಸಮರಕ್ಕೆ ಯರ್ಯಾರು..?

ಮೂರು ಲೋಕಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ವತಿಯಿಂದ ಯಾರ್ಯಾರು ಕಣಕ್ಕಿಳಿಯಲಿದ್ದಾರೆ ಎಂಬುದು ಅಂತಿಮಗೊಂಡಿಲ್ಲ. ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಇರುವುದರಿಂದ ಇಲ್ಲಿ ಕೂಡ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಸಂಭವವೇ ದಿಟವಾಗಿದೆ.
ಮಂಡ್ಯ ಕ್ಷೇತ್ರವನ್ನು ಜೆಡಿಎಸ್‍ಗೆ ಬಿಟ್ಟುಕೊಟ್ಟರೆ, ಶಿವಮೊಗ್ಗ ಮತ್ತು ಬಳ್ಳಾರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಕಣಕ್ಕಿಳಿಯುವ ನಿರೀಕ್ಷೆ ಇದೆ. ಇನ್ನು ಪ್ರತಿಷ್ಠೆಯ ಕಣವಾಗಿರುವ ಶಿವಮೊಗ್ಗ ಕ್ಷೇತ್ರದಲ್ಲಿ ಬಿಜೆಪಿ ವಿರುದ್ದ ಕಾಂಗ್ರೆಸ್ ಇಲ್ಲವೇ ಜೆಡಿಎಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬುದು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದೆ.
ಬಿಜೆಪಿಯಿಂದ ರಾಜ್ಯ ಬಿಜೆಪಿ ಅಧ್ಯಕ್ಷ ಯಡಿಯೂರಪ್ಪನವರ ಪುತ್ರ ಬಿ.ವೈ.ರಾಘವೇಂದ್ರ ಅಭ್ಯರ್ಥಿಯಾಗುವುದು ದಿಟವಾಗಿದೆ. ಇನ್ನು ಜೆಡಿಎಸ್‍ನಿಂದ ಮಾಜಿ ಶಾಸಕ ಮಧುಬಂಗಾರಪ್ಪ, ಕಾಂಗ್ರೆಸ್‍ನಿಂದ ಮಂಜುನಾಥ್ ಬಂಡಾರಿ ಹೆಸರು ಕೇಳಿಬರುತ್ತಿದೆ.

ಒಂದು ವೇಳೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಏರ್ಪಟ್ಟರೆ ಬಿಜೆಪಿಯಿಂದ ಒಮ್ಮತದ ಅಭ್ಯರ್ಥಿ ಕಣಕ್ಕಿಳಿಯುವ ಸಂಭವ ಹೆಚ್ಚಾಗಿದೆ.  ಗಣಿನಾಡು ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಮಾಜಿ ಸಂಸದ ಎನ್.ವೈ.ಹನುಮಂತಪ್ಪ, ಶಾಸಕ ಶ್ರೀ ರಾಮುಲು ಸಹೋದರಿ ಜಯಶಾಂತ ಅವರ ಹೆಸರುಗಳು ಚಾಲ್ತಿಯಲ್ಲಿವೆ.   ಕಾಂಗ್ರೆಸ್‍ನಿಂದ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕಾದ ಅನಿವಾರ್ಯತೆಯಿದೆ. ಸಕ್ಕರೆ ಜಿಲ್ಲೆ ಮಂಡ್ಯ ಜಿಲ್ಲೆಯಲ್ಲಿ ಜೆಡಿಎಸ್‍ನಿಂದ ಹಲವಾರು ಹೆಸರುಗಳು ಕೇಳಿಬಂದಿದೆ.

Facebook Comments

Sri Raghav

Admin