ಸಂಪುಟ ವಿಸ್ತರಣೆ : ಮೂವರಿಗೆ ಮಂತ್ರಿ ಕುರ್ಚಿ ಫಿಕ್ಸ್..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.1- ಈ ಬಾರಿ ಸಂಪುಟ ವಿಸ್ತರಣೆಯಾದರೆ ಪಕ್ಷ ಮತ್ತು ಸರ್ಕಾರದಲ್ಲಿ ದೊಡ್ಡ ಅಸಮಾಧಾನ ಭುಗಿಲೇಳಬಹುದೆಂಬ ಹಿನ್ನೆಲೆಯಲ್ಲಿ ಸಿಎಂ ಯಡಿಯೂರಪ್ಪ ಗೌಪತ್ಯೆ ಕಾಪಾಡಿಕೊಂಡಿದ್ದು, ಮೂವರಿಗೆ ಮಾತ್ರ ಸಂಪುಟದಲ್ಲಿ ಅದೃಷ್ಟ ಒಲಿಯುವ ಸಾಧ್ಯತೆ ಇದೆ.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಪ್ರಮುಖ ಪಾತ್ರ ವಹಿಸಿದ್ದ ಮಾಜಿ ಸಚಿವರಾದ ಎಚ್.ವಿಶ್ವನಾಥ್, ಎಂಟಿಬಿ ನಾಗರಾಜ್ ಮತ್ತು ಆರ್.ಶಂಕರ್ ಸಂಪುಟಕ್ಕೆ ಸೇರ್ಪಡೆಯಾಗುವ ಲಕ್ಷಣಗಳಿವೆ.

ಸಂಪುಟದಲ್ಲಿ ಆರು ಸ್ಥಾನಗಳು ಖಾಲಿಯಿದ್ದು, ಮೊದಲ ಹಂತದಲ್ಲಿ ಮೂವರನ್ನು ಭರ್ತಿ ಮಾಡಲು ಮುಖ್ಯಮಂತ್ರಿ ಯಡಿಯೂರಪ್ಪ ಒಲವು ತೋರಿದ್ದಾರೆ.

ಈ ಮೂವರನ್ನು ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಲು ಹೈಕಮಾಂಡ್ ಕೂಡ ಹಸಿರು ನಿಶಾನೆ ತೋರಿದೆ. ಒಂದು ವೇಳೆ ವಿಶ್ವನಾಥ್ ಸೇರ್ಪಡೆಗೆ ದೊಡ್ಡ ಮಟ್ಟದಲ್ಲಿ ಅಪಸ್ವರ ಉಂಟಾದರೆ ಅವರ ಬದಲಿಗೆ ಉತ್ತರಕರ್ನಾಟಕದ ಪ್ರಭಾವಿ ನಾಯಕ, ಹಿರಿಯ ಮಾಜಿ ಸಚಿವ ಉಮೇಶ್ ಕತ್ತಿಗೆ ಅದೃಷ್ಟ ಖುಲಾಯಿಸಬಹುದು.

ಸರ್ಕಾರ ರಚಿಸಲು ತೆರೆಮರೆಯಲ್ಲಿ ಸಾಕಷ್ಟು ಕಸರತ್ತು ನಡೆಸಿ ಇತ್ತೀಚೆಗಷ್ಟೇ ಮೇಲ್ಮನೆಗೆ ನಾಮಕರಣಗೊಂಡಿರುವ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್‍ಗೂ ಕೊನೆ ಕ್ಷಣದಲ್ಲಿ ಮಂತ್ರಿ ಸ್ಥಾನ ಸಿಕ್ಕರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ಕಳೆದ ಬಾರಿ ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಯೋಗೀಶ್ವರ್ ಹೆಸರು ಮುನ್ನಲೆಗೆ ಬಂದಿತ್ತು. ಅವರ ಬೆಂಬಲಿಗರು ಚನ್ನಪಟ್ಟಣದಲ್ಲಿ ಫ್ಲೆಕ್ಸ್‍ಬೋರ್ಡ್‍ಗಳನ್ನು ಹಾಕಿ ಪಟಾಕಿ ಸಿಡಿಸಿ ಸಂಭ್ರಮಿಸಿದ್ದರು.

ಆದರೆ ಮೂಲ ಬಿಜೆಪಿಗರು ಹಾಗೂ ಸಚಿವ ಸ್ಥಾನ ಆಕಾಂಕ್ಷಿಗಳು ಭಾರೀ ವಿರೋಧ ವ್ಯಕ್ತಪಡಿಸಿದ್ದರಿಂದ ಕೊನೆಕ್ಷಣದಲ್ಲಿ ಯೋಗೀಶ್ವರ್‍ಗೆ ಮಂತ್ರಿ ಸ್ಥಾನ ಕೈತಪ್ಪಿತ್ತು.

# ಮೂವರಿಗೆ ಅದೃಷ್ಟ:
ಈ ಬಾರಿ ಸಂಪುಟ ವಿಸ್ತರಣೆಯಾದರೆ ಮೂವರು ಸೇರ್ಪಡೆಯಾಗುವ ಸಾಧ್ಯತೆ ಇದೆ. ಪೂರ್ಣ ಪ್ರಮಾಣದಲ್ಲಿ ವಿಸ್ತರಣೆಯಾದರೆ ಅಸಮಾಧಾನ ಭುಗಿಲೇಳುವ ಭೀತಿಯು ಕಾಡಿದೆ. ಜೊತೆಗೆ 20 ನಿಗಮಮಂಡಳಿ ಅಧ್ಯಕ್ಷಗಿರಿಯನ್ನು ಕೇವಲ ಮೂರ್ನಾಲ್ಕು ಮಂದಿ ವಹಿಸಿಕೊಂಡಿದ್ದಾರೆ.

ಮುಂದೆ ಭಿನ್ನಮತ ಉಂಟಾಗಬಹುದೆಂಬ ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಮೂರು ಸ್ಥಾನಗಳನ್ನು ಉಳಿಸಿಕೊಳ್ಳಲು ಮುಖ್ಯಮಂತ್ರಿ ತೀರ್ಮಾನಿಸಿದ್ದಾರೆ. ನಿನ್ನೆ ರಾಜಭವನಕ್ಕೆ ತೆರೆಳಿದ್ದ ಯಡಿಯೂರಪ್ಪ ಸಂಪುಟ ವಿಸ್ತರಣೆಯ ದಿನಾಂಕ ಸಮಯವನ್ನು ನಿಗದಿಪಡಿಸಿಕೊಂಡೇ ಬಂದಿದ್ದಾರೆ ಎನ್ನಲಾಗುತ್ತಿದೆ.

ಆದರೆ ಈ ವಿಷಯವನ್ನು ಯಾರಿಗೂ ಕೂಡ ಬಹಿರಂಗಪಡಿಸದಂತೆ ಆಪ್ತರಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದಾರೆ. ಸಂಪುಟ ವಿಸ್ತರಣೆಯಾಗುವ ದಿನದಂದು ರಾಜಭವನಕ್ಕೆ ಪಟ್ಟಿಯನ್ನು ಕಳುಹಿಸಿಕೊಡಲಾಗುತ್ತದೆ. ಉಳಿದಂತೆ ಸಂಪುಟಕ್ಕೆ ಸೇರ್ಪಡೆಯಾಗುವ ಸಚಿವರ ಬೆಂಬಲಿಗರು, ಸಂಬಂಧಿಕರು, ಹಿತೈಷಿಗಳು, ಕಾರ್ಯಕರ್ತರು ಕೂಡ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಬಾರದಂತೆಯೂ ಸೂಚನೆ ಕೊಡಲಾಗಿದೆ.

ಕೊರೊನಾ ವೈರಸ್ ಹೆಚ್ಚಳವಾಗುತ್ತಿರುವ ಕಾರಣ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂಬ ಕಾರಣಕ್ಕಾಗಿಯೇ ಎಲ್ಲವೂ ಗೌಪ್ಯವಾಗಿಯೇ ನಡೆಯುತ್ತಿದೆ.

Facebook Comments

Sri Raghav

Admin