ಅನರ್ಹ ಶಾಸಕರ ರಾಜಕೀಯ ಭವಿಷ್ಯ ಇನ್ನೂ ಜೀವಂತ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ನ.13-ಅನರ್ಹ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಬಹುದು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿರುವುದರಿಂದ ಈಗಾಗಲೇ ಘೋಷಣೆಯಾಗಿರುವ ಹದಿನೈದು ಕ್ಷೇತ್ರಗಳ ಉಪಚುನಾವಣೆಗಳು ಅಬಾಧಿತವಾಗಿ ಮುಂದುವರೆಯಲಿವೆ.

ಸುಪ್ರೀಂಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಚುನಾವಣೆ ನಡೆಯಲಿದೆಯೋ ಇಲ್ಲವೋ ಎಂಬ ಗೊಂದಲ ವ್ಯಾಪಕವಾಗಿತ್ತು. ಈ ಮೊದಲು ಅಕ್ಟೋಬರ್ 21ಕ್ಕೆ ನಿಗದಿಯಾಗಿದ್ದ ಚುನಾವಣೆಯನ್ನು ಸುಪ್ರೀಂಕೋರ್ಟ್ ಮುಂದೂಡಿತ್ತು. ಕೇಂದ್ರ ಚುನಾವಣಾ ಆಯೋಗ ಪರಿಷ್ಕøತ ವೇಳಾಪಟ್ಟಿ ಪ್ರಕಟ ಮಾಡಿ ಡಿಸೆಂಬರ್ 5 ರಂದು ಚುನಾವಣೆಯನ್ನು ನಿಗದಿ ಮಾಡಿತ್ತು.

ಅದಕ್ಕಾಗಿ ಈಗಾಗಲೇ ಅಧಿಸೂಚನೆ ಜಾರಿಯಾಗಿದ್ದು, ನವೆಂಬರ್ 11 ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದೆ. ನಾಮಪತ್ರ ಸಲ್ಲಿಕೆ ಆರಂಭಗೊಂಡು ಎರಡು ದಿನಗಳು ಕಳೆದರೂ ಅನರ್ಹರು ನಾಮಪತ್ರ ಸಲ್ಲಿಸಬೇಕೋ, ಬೇಡವೋ ಎಂಬ ಗೊಂದಲದಲ್ಲೇ ಇದ್ದರು.

ಒಂದೆಡೆ ಬಿಜೆಪಿಯ ಆಂತರಿಕವಾಗಿ ಎದುರಾಗುತ್ತಿರುವ ಬಂಡಾಯದಿಂದ ಹೈರಾಣಾಗಿರುವ ಅನರ್ಹ ಶಾಸಕರು ಒಂದು ವೇಳೆ ಸುಪ್ರೀಂಕೋರ್ಟ್ ಸ್ಪೀಕರ್ ಆದೇಶವನ್ನು ಪೂರ್ಣಪ್ರಮಾಣದಲ್ಲಿ ಎತ್ತಿ ಹಿಡಿದು ಚುನಾವಣೆಗೆ ಸ್ಪರ್ಧಿಸಲು ಅವಕಾಶ ನಿರಾಕರಿಸುವುದೇ ಎಂಬ ದುಗುಡ ಕಾಡುತ್ತಿತ್ತು. ಹೀಗಾಗಿ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ 17 ಮಂದಿ ಅನರ್ಹರು ಗೊಂದಲದಲ್ಲಿದ್ದರು.

ಕೇಂದ್ರ ಚುನಾವಣಾ ಆಯೋಗ 15 ಕ್ಷೇತ್ರಗಳಿಗೆ ಚುನಾವಣೆ ಘೋಷಣೆ ಮಾಡಿದೆ. ಉಪಚುನಾವಣೆಯಲ್ಲಿ ಈಗ ಮಹಾಲಕ್ಷ್ಮಿ ಲೇಔಟ್‍ನಿಂದ ಗೋಪಾಲಯ್ಯ, ಯಶವಂತಪುರದಿಂದ ಎಸ್.ಟಿ.ಸೋಮಶೇಖರ್, ಕೆ.ಆರ್.ಪುರಂನಿಂದ ಭೈರತಿ ಬಸವರಾಜ್, ಶಿವಾಜಿನಗರದಿಂದ ರೋಷನ್‍ಬೇಗ್, ಹೊಸಕೋಟೆಯಿಂದ ಎಂ.ಟಿ.ಬಿ.ನಾಗರಾಜ್, ಚಿಕ್ಕಬಳ್ಳಾಪುರದಿಂದ ಡಾ.ಸುಧಾಕರ್, ಕೆ.ಆರ್.ಪೇಟೆಯಿಂದ ನಾರಾಯಣಗೌಡ, ಹುಣಸೂರಿನಿಂದ ಎಚ್.ವಿಶ್ವನಾಥ್, ರಾಣೆಬೆನ್ನೂರಿನಿಂದ ಆರ್.ಶಂಕರ್, ಹಿರೆಕೇರೂರಿನಿಂದ ಬಿ.ಸಿ.ಪಾಟೀಲ್, ಯಲ್ಲಾಪುರದಿಂದ ಶಿವರಾಮ್ ಹೆಬ್ಬಾರ್, ಗೋಕಾಕ್‍ನಿಂದ ರಮೇಶ್ ಜಾರಕಿಹೊಳಿ, ಕಾಗವಾಡದಿಂದ ಶ್ರೀಮಂತ ಪಾಟೀಲ್, ವಿಜಯನಗರದಿಂದ ಆನಂದ್‍ಸಿಂಗ್ ಅವರು ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಂತಾಗಿದೆ.

ಬಿಜೆಪಿ 15 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡದಿರುವುದರಿಂದ ಎಲ್ಲ ಅನರ್ಹ ಶಾಸಕರಿಗೂ ಟಿಕೆಟ್ ನೀಡುವ ಸಾಧ್ಯತೆ ಇದೆ. ಈ ಕ್ಷೇತ್ರಗಳಿಗೆ ಚುನಾವಣೆ ನಡೆದು ಫಲಿತಾಂಶ ಏನೇ ಬಂದರೂ 15 ಮಂದಿಯ ರಾಜಕೀಯ ಭವಿಷ್ಯ ಒಂದು ನಿರ್ದಿಷ್ಟ ದಾರಿಯಲ್ಲಿ ಸಾಗುತ್ತದೆ. ಆದರೆ ಮಸ್ಕಿಯ ಪ್ರತಾಪ್‍ಗೌಡ ಪಾಟೀಲ್ ಹಾಗೂ ರಾಜರಾಜೇಶ್ವರಿನಗರದ ಮುನಿರತ್ನ ಅವರ ಕ್ಷೇತ್ರಗಳಿಗೆ ಉಪಚುನಾವಣೆ ಘೋಷಣೆಯಾಗಿಲ್ಲ.

ಚುನಾವಣಾ ಪ್ರಕ್ರಿಯೆ ಬಗ್ಗೆ ಹೈಕೋರ್ಟ್‍ನಲ್ಲಿ ತಕರಾರು ಅರ್ಜಿಗಳು ಇರುವುದರಿಂದ ಈ ಎರಡೂ ಕ್ಷೇತ್ರಗಳಿಗೆ ಚುನಾವಣೆಗಳು ನಡೆಯುತ್ತಿಲ್ಲ. ಸ್ಪೀಕರ್ ಈ ಇಬ್ಬರನ್ನೂ ಕೂಡ ಅನರ್ಹಗೊಳಿಸಿದ್ದಾರೆ. ಸುಪ್ರೀಂಕೋರ್ಟ್ ಸ್ಪೀಕರ್ ಆದೇಶ ಎತ್ತಿಹಿಡಿದಿದೆ. ಅತ್ತ ಶಾಸಕ ಸ್ಥಾನವೂ ಇಲ್ಲ, ಇತ್ತ ಉಪಚುನಾವಣೆಯೂ ಇಲ್ಲ ಎಂಬ ತ್ರಿಶಂಕು ಸ್ಥಿತಿಗೆ ಪ್ರತಾಪ್‍ಗೌಡ ಹಾಗೂ ಮುನಿರತ್ನ ತಲುಪಿದ್ದಾರೆ.

ಒಟ್ಟಿನಲ್ಲಿ ಚುನಾವಣೆ ನಡೆಯಲಿದೆಯೇ ಇಲ್ಲವೋ ಎಂಬ ಗೊಂದಲ ನಿವಾರಣೆಯಾಗುವ ಮೂಲಕ ಉಪಚುನಾವಣಾ ಕಣಗಳು ಇಂದಿನ ರಂಗು ಪಡೆಯಲಿವೆ.

Facebook Comments

Sri Raghav

Admin