ಪೊಲೀಸರಿಗೆ ಶರಣಾದ 12 ಮಂದಿ ಕರವೇ ಕಾರ್ಯಕರ್ತರ ಬಂಧನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.8-ಮಿಂಟೋ ಆಸ್ಪತ್ರೆ ವೈದ್ಯರಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇರೆಗೆ ವಿವಿಪುರಂ ಠಾಣೆ ಪೊಲೀಸರು ಸಂಘಟನೆಯೊಂದರ 12 ಮಂದಿ ಕಾರ್ಯಕರ್ತರನ್ನು ಬಂಧಿಸಿದ್ದಾರೆ.  ಇತ್ತೀಚೆಗೆ ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಚಿಕಿತ್ಸೆ ಪಡೆದಿದ್ದ 21 ಮಂದಿಗೆ ದೃಷ್ಟಿದೋಷ ಉಂಟಾಗಿತ್ತು. ಈ ಹಿನ್ನೆಲೆಯಲ್ಲಿ ಅವರಿಗೆ ಪರಿಹಾರ ಸಿಕ್ಕಿರಲಿಲ್ಲ.

ವಿಷಯ ತಿಳಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಆಸ್ಪತ್ರೆ ಮುಂದೆ ಪ್ರತಿಭಟನೆ ನಡೆಸಿ ಪರಿಹಾರಕ್ಕಾಗಿ ಒತ್ತಾಯಿಸಿದ್ದರು. ಆ ಸಂದರ್ಭದಲ್ಲಿ ವೈದ್ಯರು ಸ್ಪಂದಿಸಲಿಲ್ಲ. ಈ ವಿಷಯವಾಗಿ ವೈದ್ಯರು ಹಾಗೂ ಕರವೇ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದು ತಳ್ಳಾಟ ನೂಕಾಟ ಉಂಟಾಗಿತ್ತು.

ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ಮಿಂಟೋ ಆಸ್ಪತ್ರೆ ಹಿರಿಯ ವೈದ್ಯರು ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಕರವೇ ಕಾರ್ಯಕರ್ತರ ವಿರುದ್ದ ವಿವಿಪುರಂ ಠಾಣೆಗೆ ದೂರು ನೀಡಿದ್ದರು.

ಈ ಘಟನೆಯನ್ನು ಖಂಡಿಸಿ ಆಸ್ಪತ್ರೆಯ ಕಿರಿಯ ವೈದ್ಯರು ಒಪಿಡಿ ಬಂದ್ ಮಾಡಿ ನಿರಂತರ ಪ್ರತಿಭಟನೆ ನಡೆಸುತ್ತಿದ್ದರು. ಕರವೇ ಕಾರ್ಯಕರ್ತರ ವಿರುದ್ಧ ಕ್ರಮ ಕೈಗೊಳ್ಳುವವರೆಗೂ ಪ್ರತಿಭಟನೆ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದಿದ್ದರು.  ಈ ಹಿನ್ನೆಲೆಯಲ್ಲಿ ಇಂದು ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಅವರ ನೇತೃತ್ವದಲ್ಲಿ ಅಂದು ಪ್ರತಿಭಟನೆ ನಡೆಸಿದ್ದ ಕಾರ್ಯಕರ್ತರು ಠಾಣೆಗೆ ಹಾಜರಾಗಿ ಶರಣಾದರು. ನಂತರ ಪೊಲೀಸರು ಅವರನ್ನು ಬಂಧಿಸಿದರು.

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ನಾರಾಯಣಗೌಡ ಬಡ ರೋಗಿಗಳಿಗೆ ತೊಂದರೆಯಾಗಬಾರದೆಂದು ಸ್ವಯಂ ಪ್ರೇರಣೆಯಿಂದ ಬಂಧನಕ್ಕೆ ಒಳಗಾಗುತ್ತಿದ್ದೇವೆ. ಆದರೆ ನಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಎಚ್ಚರಿಸಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ