‘ಆಪರೇಷನ್ ಸಫೇದ್ ಸಾಗರ್’ ಕಾರ್ಯಾಚರಣೆಗೆ ಇಂದಿಗೆ 20 ವರ್ಷ, ವೀರಾಗ್ರಣಿಗಳ ಗುಣಗಾನ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಮೇ 27- ಭಾರತ-ಪಾಕಿಸ್ತಾನದ ನಡುವೆ ಕಾರ್ಗಿಲ್ ಸಮರ ಸಂದರ್ಭದಲ್ಲಿ ಬಟಾಲಿಕ್ ಪ್ರಾಂತ್ಯವನ್ನು ಆಕ್ರಮಿಸಿಕೊಂಡಿದ್ದ ಪಾಕ್ ಬೆಂಬಲಿತ ಮುಜಾಹಿದ್ದೀನ್ ಉಗ್ರರನ್ನು ಬಡಿದಟ್ಟಲು ಭಾರತೀಯ ವಾಯುಪಡೆ ನಡೆಸಿದ ಆಪರೇಷನ್ ಸಫೇದ್ ಸಾಗರ್ ಯಶಸ್ವಿ ಕಾರ್ಯಾಚರಣೆಗೆ ಇಂದು 20 ವರ್ಷ (27ನೆ ಮೇ 1999).

ಜಮ್ಮು-ಕಾಶ್ಮೀರದ ಕಾರ್ಗಿಲ್ ದ್ರಾಸ್ ಮತ್ತು ಬೆಟಾಲಿಕ್ ಪ್ರಾಂತ್ಯಗಳನ್ನು ಪಾಕಿಸ್ತಾನ ಸೇನೆಯ ಕುಮ್ಮಕ್ಕಿನಿಂದ ಉಗ್ರಗಾಮಿಗಳು ವಶ ಮಾಡಿಕೊಂಡಿದ್ದರು.
ಇವರನ್ನು ಆ ಪ್ರದೇಶಗಳಿಂದ ಹೊಡೆದೋಡಿಸಲು ಭಾರತ ಸರ್ಕಾರ ಮೇ 26ರಂದು ಆಪರೇಷನ್ ಸಫೇದ್ ಸಾಗರ್ ಕಾರ್ಯಾಚರಣೆಗೆ ಅನುಮತಿ ನೀಡಿತ್ತು.

ಭೂಸೇನೆ ಸಹಕಾರದೊಂದಿಗೆ ಭಾರತೀಯ ವಾಯುಪಡೆ ಈ ಮೂರೂ ಪ್ರದೇಶಗಳ ಮೇಲೆ ಮಿಂಚಿನ ದಾಳಿ ನಡೆಸಿ ಉಗ್ರಗಾಮಿಗಳನ್ನು ದಮನ ಮಾಡಿದರು. ಆದರೆ, ಉಗ್ರರ ಬೆಂಬಲಕ್ಕೆ ನಿಂತಿದ್ದ ಪಾಕ್ ಸೇನೆ ಭಾರತದ ವಾಯುದಾಳಿಯನ್ನು ಪ್ರತಿರೋಧಿಸಿತು.

ಈ ಸಂದರ್ಭದಲ್ಲಿ ಫ್ಲೈಟ್ ಲೆಫ್ಟಿನೆಂಟ್ ಕಂಬಮ್‍ಪಟ್ಟಿ ನಚಿಕೇತ ಮತ್ತು ಸ್ಕ್ವಾಡ್ರನ್ ಲೀಡರ್ ಅಜಯ್ ಅಹುಜಾ ಪಾಕಿಸ್ಥಾನಿ ಸೇನೆಯ ಯುದ್ಧಕೈದಿಯಾದರು. ಈ ಘಟನೆ ಬಾಲಕೋಟ್ ವಾಯುದಾಳಿ ನಂತರ ಪಾಕಿಸ್ಥಾನದ ಆಕ್ರಮಣವನ್ನು ಹಿಮ್ಮೆಟ್ಟಿಸಲು ಭಾರತೀಯ ವಾಯುಪಡೆಯ ವೀರ ಯೋಧ ಅಭಿಮನ್ಯು ವರ್ತಮಾನ್ ಅವರ ಸಾಹಸವನ್ನು ನೆನಪಿಸುವಂತಿದೆ.

ಸೆರೆಸಿಕ್ಕ ಇಬ್ಬರು ವೀರ ಯೋಧರಲ್ಲಿ ಪಾಕಿಸ್ಥಾನದ ಕ್ರೂರ ಸೈನಿಕರು ಅಹುಜಾ ಅವರಿಗೆ ಚಿತ್ರಹಿಂಸೆ ನೀಡಿ ಕೊಂದು ಹಾಕಿದ್ದರು. ನಚಿಕೇತ್ ಸುರಕ್ಷಿತವಾಗಿ ಪಾರಾದರು. ಈ ಘಟನೆಯಿಂದ ತೀವ್ರ ಕುಪಿತರಾದ ಭಾರತೀಯ ಯೋಧರು ಮತ್ತಷ್ಟು ಪ್ರಬಲ ದಾಳಿಯೊಂದಿಗೆ ಕಾರ್ಗಿಲ್ ಗಡಿಯಲ್ಲಿ ಪಾಕಿಸ್ಥಾನ ಮತ್ತು ಉಗ್ರರ ಮೇಲೆ ಮುಗಿಬಿದ್ದರು. ನಂತರ ನಡೆದ ದೀರ್ಘ ಸಮರದ ನಂತರ ಭಾರತ ದುಷ್ಟ ಶಕ್ತಿಗಳ ವಿರುದ್ಧ ಜಯ ಸಾಧಿಸಿತು.

ಪಾಕ್ ವಶವಾಗಿದ್ದ ಕಾರ್ಗಿಲ್ ಪ್ರದೇಶವನ್ನು ಯುದ್ಧದಲ್ಲಿ ಗೆದ್ದು ಭಾರತ ಜುಲೈ 26ರಂದು ವಾಪಸ್ ಪಡೆಯಿತು. ದೇಶವು ಪ್ರತಿ ವರ್ಷ ಈ ದಿನವನ್ನು ಕಾರ್ಗಿಲ್ ವಿಜಯ ದಿವಸ ಎಂದು ಆಚರಿಸಿಕೊಂಡು ಬರುತ್ತಿದೆ. 1999ರಲ್ಲಿ ಎರಡು ತಿಂಗಳಿಗೂ ಹೆಚ್ಚು ಕಾಲ ನಡೆದ ಕಾರ್ಗಿಲ್ ಸಮರದಲ್ಲಿ ಜುಲೈ 26ರಂದು ಭಾರತ ಪಾಕ್ ವಿರುದ್ಧ ವಿಜಯ ದುಂದುಭಿ ಮೊಳಗಿಸಿತು. ಈ ಯುದ್ಧದಲ್ಲಿ ಎರಡು ದೇಶಗಳ 3,500ಕ್ಕೂ ಹೆಚ್ಚು ಯೋಧರು ಪ್ರಾಣ ತೆತ್ತರು.

ದೇಶದ ಗಡಿಯಲ್ಲಿರುವ ಕಾರ್ಗಿಲ್ ಔಟ್ ಫೋಸ್ಟ್ ರಕ್ಷಣೆಗಾಗಿ ಹುತಾತ್ಮರಾದ ವೀರ ಯೋಧರ ಗೌರವಾರ್ಥ ಅಂದು ದೇಶಾದ್ಯಂತ ಕಾರ್ಗಿಲ್ ವಿಜಯೋತ್ಸವ ದಿನವನ್ನು ಆಚರಿಸಲಾಗುತ್ತದೆ.

ಕಾರ್ಗಿಲ್ ಕದನದ ವಿವರ:
ಜಮ್ಮು-ಕಾಶ್ಮೀರ ರಾಜ್ಯದ ಕಾರ್ಗಿಲ್ ಪ್ರದೇಶದಲ್ಲಿ ಪಾಕಿಸ್ಥಾನಿ ಸೈನಿಕರು ಅಂತಾರಾಷ್ಟ್ರೀಯ ಗಡಿಯನ್ನು ಮೀರಿ ಕಾಶ್ಮೀರ ಕಣಿವೆಗಳ ಮುಖಾಂತರ ಒಳನುಸುಳುತ್ತಿರುವುದು 1999ರಲ್ಲಿ ಆರಂಭದಲ್ಲಿ ಜನಸಾಮಾನ್ಯರಿಗೆ ಹಾಗೂ ಗಡಿ ಭದ್ರತಾ ಪಡೆಯ ಸಿಬ್ಬಂದಿಗಳಿಗೆ ಖಾತ್ರಿಯಾಗಿ ಅದೇ ಸುದ್ದಿ ಭಾರತೀಯರಲ್ಲಿ ಆಕ್ರೋಶ ಮೂಡಿಸಿತು.

ಕಾರ್ಗಿಲ್ ಪ್ರದೇಶ ಮಾತ್ರವಲ್ಲದೆ ಮಾನವ ರಹಿತ ಚೆಕ್‍ಫೋಸ್ಟ್‍ಗಳ ಮುಖಾಂತರ ಸಿಯಾಚಿನ ಗಡಿವರೆಗೂ ಒಳನುಸುಳುವಿಕೆ ಅವ್ಯಾಹತವಾಗಿ ನಡೆಯುತ್ತಿದ್ದುದು ಭಾರತಕ್ಕೆ ಸಹಿಸಲಸಾಧ್ಯವಾಯಿತು. ಅದೇ ಸಮಯಕ್ಕೆ ಪಾಕಿಸ್ಥಾನಿ ನಾಯಕರ ಹೇಳಿಕೆಗಳು ಪಾಕಿಸ್ಥಾನ ಯುದ್ಧಕ್ಕೆ ತಯಾರಾಗಿದೆ ಎಂಬ ಸ್ಪಷ್ಟ ಸಂದೇಶವನ್ನು ಅದಾಗಲೇ ರವಾನಿಸಿಯಾಗಿತ್ತು.

ಕೇಂದ್ರ ಸರ್ಕಾರ ಜೂನ್ 1999ರಲ್ಲಿ ಭಾರತೀಯ ಸೇನೆಗೆ ಒಳನುಸುಳುಕೋರರನ್ನು ಪ್ರತಿರೋಧಿಸಲು ಆಪರೇಷನ್ ವಿಜಯ್ ಹೆಸರಿನ ಯುದ್ಧ ಆರಂಭಿಸುವಂತೆ ಅಪ್ಪಣೆ ಕೊಟ್ಟಿತು. ಕಾಶ್ಮೀರ ಗಡಿಯಲ್ಲಿನ ತೀವ್ರ ಕಡಿಮೆ ತಾಪಮಾನ, ವಿರೋಧಿ ಬಣದಿಂದ ಮಳೆಯಂತೆ ಬಂದು ಸುರಿಯುತ್ತಿದ್ದ ಗ್ರೆನೇಡುಗಳು, ಸಮುದ್ರ ಮಟ್ಟದಿಂದ ಅತೀ ಎತ್ತರದಲ್ಲಿದ್ದು ಆಗಾಗ ಉಸಿರಾಡಲೂ ಕಷ್ಟವಾಗುವಂತಹ ಕ್ಲಿಷ್ಟ ಪರಿಸ್ಥಿತಿಗಳಲ್ಲಿ ಭಾರತೀಯ ಯೋಧರು ಪಾಕಿಸ್ಥಾನಕ್ಕೆ ಎದಿರೇಟು ಕೊಡುವಲ್ಲಿ ಸಫಲರಾಗುತ್ತಿದ್ದರು.

ಮೂರು ತಿಂಗಳ ಪರ್ಯಂತ ನಡೆದ ಕಾರ್ಗಿಲ್ ಯುದ್ಧದಲ್ಲಿ ಸುಮಾರು 500 ಜನ ಭಾರತೀಯ ಯೋಧರು ಹುತಾತ್ಮರಾದರು ಹಾಗೂ ಪಾಕಿಸ್ಥಾನ ಬಣದಲ್ಲಿ ಸುಮಾರು 600-4000 ಸೈನಿಕರು ಹತರಾಗಿರುವ ಬಗ್ಗೆ ಅಂದಾಜಿಸಲಾಗಿದೆ.

ಒಳನುಸುಳುಕೋರರನ್ನು ಹಿಮ್ಮೆಟ್ಟಿಸುವಲ್ಲಿ ಭಾರತ ಸಫಲವಾಗಿದ್ದರಿಂದ ಪಾಕಿಸ್ಥಾನಕ್ಕೆ ತೀವ್ರ ಮುಖಭಂಗವಾಯಿತು. ಇದರಿಂದ ತಪ್ಪಿಸಿಕೊಳ್ಳಲು ಪಾಕಿಸ್ಥಾನ ಆಗಷ್ಟೇ ತಾನೇ ಸಿದ್ಧಪಡಿಸಿಕೊಂಡಿದ್ದ ಅಣು ಬಾಂಬ್‍ಅನ್ನು ಭಾರತದ ಮೇಲೆ ಪ್ರಯೋಗಿಸುವ ಬಗ್ಗೆ ಮಾತುಗಳು ಕೇಳಿ ಬರಲಾರಂಬಿಸಿದವು.

ವಿಷಯ ತಿಳಿದ ಆಗಿನ ಅಮೇರಿಕಾ ಅಧ್ಯಕ್ಷ ಬಿಲ್ ಕ್ಲಿಂಟನ್ ಅಣುಬಾಂಬ್ ಬಳಸಿ ಜಾಗತೀಕವಾಗಿ ಕಠಿಣ ಪರಿಸ್ಥಿತಿ ನಿರ್ಮಾಣ ಮಾಡದಂತೆ ಪಾಕಿಸ್ಥಾನಕ್ಕೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ಯುದ್ಧ ಸಂಬಂಧಿ ಪರಿಕರಗಳನ್ನೆಲ್ಲ ಪರದೇಶದಿಂದ ಅಮದು ಮಾಡಿಕೊಂಡಿದ್ದ ಪಾಕಿಸ್ಥಾನಕ್ಕೆ ಯುದ್ಧದಲ್ಲಿ ಸೋತಿದ್ದು ಅಪಾರ ನಷ್ಟವಾಯಿತು. ಅಮೆರಿಕಾ ಹಾಗೂ ಚೀನಾ ತಾವು ಮಧ್ಯ ಪ್ರವೇಶಿಸಲು ಹಿಂದೇಟು ಹಾಕಿದವು. ಇಷ್ಟೆಲ್ಲಾ ನಡೆಯುತ್ತಿದ್ದರೂ ಭಾರತದ ಕಡೆಯಿಂದ ಆಗುತ್ತಿದ್ದ ದಾಳಿ ಇನ್ನೂ ನಿಂತಿರಲಿಲ್ಲ, ಪಾಕಿಸ್ಥಾನಿ ಸೈನಿಕರು ಬಂದ ದಾರಿಗೆ ಸುಂಕವಿಲ್ಲದಂತೆ ಅಂತಾರಾಷ್ಟ್ರೀಯ ಗಡಿ ದಾಟಿ ಹಿಂದೆ ಸರಿಯುವ ವರೆವಿಗೂ ಯುದ್ಧ ನಿಲ್ಲುವ ಯಾವ ಲಕ್ಷಣಗಳೂ ಗೋಚರಿಸಲಿಲ್ಲ.

ಕೂಡಲೇ ಪಾಕಿಸ್ಥಾನದ ಸೇನಾ ಅಧ್ಯಕ್ಷ ಜನರಲ್ ಮುಷರಫ್ ಪಾಕಿಸ್ಥಾನದ ಪ್ರಧಾನಿ ನವಾಜ್ ಶರೀಫ್‍ರಲ್ಲಿ ಪಾಕಿಸ್ಥಾನಿ ಸೈನಿಕರನ್ನು ಹಿಂದಕ್ಕೆ ಕರೆಸಿ ಮೊದಲಿನಂತೆ ನಿಯಂತ್ರಣ ರೇಖೆಯಲ್ಲಿ ನಿಲ್ಲಿಸಲು ಮನವಿ ಮಾಡಿದರು. ಪಾಕಿಸ್ಥಾನದಲ್ಲಿ ಸರ್ಕಾರಕ್ಕೂ ಹಾಗು ಸೇನೆಗೂ ತಮ್ಮ ರಾಷ್ಟ್ರೀಯ ಕಾರ್ಯ ನಿರ್ವಹಣೆಯ ವಿಚಾರದಲ್ಲಿ ವಿಧಿತ ಕಟ್ಟುಪಾಡುಗಳು ಇಲ್ಲದ ಕಾರಣ ಎರಡೂ ಬೇರೆ ಬೇರೆಯಾಗಿ ಕಾರ್ಯ ನಿರ್ವಹಿಸುವುದೇ ಹೆಚ್ಚು.

ಇಲ್ಲೂ ಹಾಗೆ ನಡೆದು ನವಾಜ್ ಶರೀಫರು ಮಾಡಿದ ಆಜ್ಞಾಯನ್ನು ಒಪ್ಪಲು ಯಾರೂ ತಯಾರಿರಲಿಲ್ಲ. ಆದರೆ, ಅಷ್ಟರಲ್ಲಾಗಲೇ ತಮ್ಮ ಶಕ್ತಿ-ಸಾಮಥ್ರ್ಯಗಳನ್ನು ಅರಿತುಕೊಂಡಿದ್ದ ಪಾಕಿಸ್ಥಾನದ ಒಂದು ಸೇನಾ ತುಕಡಿ (ಎನ್‍ಎಲ್‍ಐ) ತಾನು ಯುದ್ಧ ಭೂಮಿಯಿಂದ ಹಿಂದೆ ಸರಿಯಿತು. ಕೊನೆಗೆ ಸೇನೆ ಹಿಂದೆ ಸರಿಯುವ ವಿಚಾರದಲ್ಲಿ ಪಾಕಿಸ್ಥಾನ ಸೇನೆಯೊಳಗೆ ಭಿನ್ನಾಭಿಪ್ರಾಯ ಸ್ಫೋಟವಾಯಿತು.

ಭಿನ್ನಾಭಿಪ್ರಾಯ ಎಷ್ಟರ ಮಟ್ಟಿಗೆ ಮುಂದುವರಿಯಿತೆಂದರೆ ಪಾಕಿಸ್ಥಾನ ಸೇನೆ ಒಳಜಗಳಗಳಿಗೆ ಸಾಕ್ಷಿಯಾಯಿತು ಹಾಗೂ ಹಲವಾರು ಸಾವು-ನೋವುಗಳನ್ನು ಕಂಡಿತು. ಎಲ್ಲದರ ಫಲವಾಗಿ ಪಾಕಿಸ್ಥಾನದ ಸೈನಿಕರು ಯುದ್ಧದಲ್ಲಿ ಸಫಲರಾಗದೆ ಹಿಂದಿರುಗಿದರು, ಭಾರತ ವಿಜಯೋತ್ಸವ ಆಚರಿಸಿತು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ