ಕೊರೋನಾದಿಂದ ಕೆಂಪಾದ ಕರ್ನಾಟಕ..! ಈಗ ಇಡೀ ರಾಜ್ಯವೇ ರೆಡ್‍ಝೋನ್..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಜೂ.27- ದಿನೇ ದಿನೇ ಕೊರೊನಾ ಸಾಂಕ್ರಾಮಿಕ ರೋಗ ವ್ಯಾಪಕವಾಗಿ ಹರಡುತ್ತಿದ್ದು, ಚಿತ್ರದುರ್ಗ ಹೊರತುಪಡಿಸಿ ಇಡೀ ಕರ್ನಾಟಕ ಸಂಪೂರ್ಣ ರೆಡ್‍ಝೋನ್ ಆಗಿ ಪರಿವರ್ತನೆಯಾಗಿದೆ. ಕೇಂದ್ರ ಸರ್ಕಾರದ ಮಾನದಂಡಗಳ ಪ್ರಕಾರ, ಯಾವುದೇ ಪ್ರಕರಣಗಳಿಲ್ಲದೆ ಇದ್ದರೆ ಅದನ್ನು ಹಸಿರು ವಲಯ ಎಂದು ಗುರುತಿಸಲಾಗುತ್ತಿದೆ.

15ರ ಒಳಗಿನ ಸಕ್ರಿಯ ಪ್ರಕರಣಗಳಿದ್ದರೆ ಅದನ್ನು ಹಳದಿ ವಲಯ ಎಂದು ಗುರುತಿಸಲಾಗುತ್ತದೆ. 15ಕ್ಕಿಂತ ಮೇಲ್ಪಟ್ಟು ಸಕ್ರಿಯ ಪ್ರಕರಣಗಳಿದ್ದರೆ ಅದನ್ನು ರೆಡ್‍ಝೋನ್ ಎಂದು ಪರಿಗಣಿಸಲಾಗುತ್ತದೆ.

ಚಿತ್ರದುರ್ಗ ಜಿಲ್ಲೆಯಲ್ಲಿ ಏಳು ಸಕ್ರಿಯ ಪ್ರಕರಣಗಳಿವೆ. ಒಟ್ಟು 48 ಮಂದಿಗೆ ಸೋಂಕು ತಗುಲಿದ್ದು, ಅದರಲ್ಲಿ 41 ಮಂದಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ. ಉಳಿದಂತೆ ಎಲ್ಲ ಜಿಲ್ಲೆಗಳಲ್ಲೂ 15ಕ್ಕಿಂತಲೂ ಮೇಲ್ಪಟ್ಟು ಸಕ್ರಿಯ ಪ್ರಕರಣಗಳಿವೆ.

ಬೆಂಗಳೂರು ನಗರದಲ್ಲಿ 1327, ಬಳ್ಳಾರಿಯಲ್ಲಿ 361, ಕಲಬುರಗಿಯಲ್ಲಿ 381, ಕೊಪ್ಪಳದಲ್ಲಿ 59, ದಕ್ಷಿಣ ಕನ್ನಡದಲ್ಲಿ 143, ಧಾರವಾಡದಲ್ಲಿ 117, ರಾಯಚೂರಿನಲ್ಲಿ 100,

ಗದಗ್‍ನಲ್ಲಿ 69, ಸೋಂಕೇ ಇಲ್ಲದೆ ಹಸಿರು ವಲಯದಲ್ಲಿ ಚಾಮರಾಜನಗರದಲ್ಲಿ 19, ಉಡುಪಿಯಲ್ಲಿ 95, ಯಾದಗಿರಿಯಲ್ಲಿ 230, ಮಂಡ್ಯದಲ್ಲಿ 54, ಉತ್ತರ ಕನ್ನಡದಲ್ಲಿ 51, ಬಾಗಲಕೋಟೆಯಲ್ಲಿ 46, ಶಿವಮೊಗ್ಗದಲ್ಲಿ 31, ಕೋಲಾರದಲ್ಲಿ 47, ಮೈಸೂರಿನಲ್ಲಿ 96, ಚಿಕ್ಕಮಗಳೂರಿನಲ್ಲಿ 24, ಕೊಡಗಿನಲ್ಲಿ 27, ಹಾಸನದಲ್ಲಿ 83, ಬೆಂಗಳೂರು ಗ್ರಾಮಾಂತರದಲ್ಲಿ 55, ವಿಜಯಪುರದಲ್ಲಿ 94, ತುಮಕೂರಿನಲ್ಲಿ 18, ಹಾವೇರಿಯಲ್ಲಿ 31, ಬೀದರ್‍ನಲ್ಲಿ 126, ಬೆಳಗಾವಿಯಲ್ಲಿ 20, ದಾವಣಗೆರೆಯಲ್ಲಿ 39, ರಾಮನಗರದಲ್ಲಿ 127, ಚಿಕ್ಕಬಳ್ಳಾಪುರದಲ್ಲಿ 27 ಸಕ್ರಿಯ ಕೋವಿಡ್ ಪ್ರಕರಣಗಳಿವೆ. 180 ಮಂದಿ ಸಾವನ್ನಪ್ಪಿದ್ದಾರೆ.

ಚಾಮರಾಜನಗರ, ಮಂಡ್ಯ, ಉತ್ತರ ಕನ್ನಡ, ಕೊಡಗು, ಹಾವೇರಿ, ಚಿತ್ರದುರ್ಗ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಲ್ಲೂ ಸಾವು ಸಂಭವಿಸಿದೆ. ಬೆಂಗಳೂರಿನಲ್ಲಿ 81, ಬೀದರ್‍ನಲ್ಲಿ 16, ಕಲಬುರಗಿಯಲ್ಲಿ 15, ಬಳ್ಳಾರಿಯಲ್ಲಿ 9, ದಕ್ಷಿಣ ಕನ್ನಡದಲ್ಲಿ 8, ದಾವಣಗೆರೆಯಲ್ಲಿ 7 ಮಂದಿ ಸಾವನ್ನಪ್ಪಿದರೆ ಉಳಿದ ಜಿಲ್ಲೆಗಳಲ್ಲಿ ನಾಲ್ಕೈದು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಅತಿ ಹೆಚ್ಚು ಪ್ರಕರಣಗಳು ವರದಿಯಾಗಿರುವುದು ಬೆಂಗಳೂರು ನಗರದಲ್ಲಿ 1935, ಕಲಬುರಗಿಯಲ್ಲಿ 1331, ಉಡುಪಿಯಲ್ಲಿ 1125, ಬೀದರ್‍ನಲ್ಲಿ 538. ಈ ಜಿಲ್ಲೆಗಳಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗುವ ಪ್ರಮಾಣ ಕೂಡ ಸಮಾಧಾನಕರವಾಗಿದೆ.  ಲಾಕ್‍ಡೌನ್-3ರ ಅಂತ್ಯದ ವೇಳೆಗೆ ಕರ್ನಾಟಕದಲ್ಲಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ ಮತ್ತು ಮೈಸೂರು ಜಿಲ್ಲೆಗಳು ಮಾತ್ರ ರೆಡ್‍ಝೋನ್‍ಗಳಾಗಿದ್ದವು. ಈಗ ರಾಜ್ಯಕ್ಕೆ ರಾಜ್ಯವೇ ಪೂರ್ತಿ ಕೆಂಪಾಗಿದೆ.

ಚಿತ್ರದುರ್ಗ ಹೊರತುಪಡಿಸಿ ಉಳಿದ ಎಲ್ಲ ಜಿಲ್ಲೆಗಳೂ ರೆಡ್‍ಝೋನ್‍ಗಳಾಗಿವೆ. ಸಾವಿನ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಸರ್ಕಾರ ಲಾಕ್‍ಡೌನ್ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಜನಸಾಮಾನ್ಯರು ಕೂಡ ಪರಿಸ್ಥಿತಿಯನ್ನು ಗಂಭೀರವಾಗಿ ತೆಗೆದುಕೊಳ್ಳದೆ ಉಡಾಫೆಯಿಂದ ನಡೆದುಕೊಳ್ಳುತ್ತಿದ್ದಾರೆ. ಹೀಗಾಗಿ ಸೋಂಕು ಯಾವ ಪ್ರಮಾಣಕ್ಕೆ ತಲುಪಲಿದೆ ಎಂಬುದು ಆತಂಕ ಸೃಷ್ಟಿಸಿದೆ.

ರಾಜ್ಯದಲ್ಲಿ 178 ಮಂದಿ ಐಸಿಯುನಲ್ಲಿದ್ದು, ಬೆಂಗಳೂರಿನಲ್ಲಿ 123 ಮಂದಿ, ಕಲಬುರಗಿ, ಧಾರವಾಡದಲ್ಲಿ ತಲಾ 8, ಬಳ್ಳಾರಿಯಲ್ಲಿ 6, ವಿಜಯಪುರ, ದಕ್ಷಿಣ ಕನ್ನಡದಲ್ಲಿ ತಲಾ 5, ಬೀದರ್, ಗದಗ, ತುಮಕೂರು, ಹಾಸನದಲ್ಲಿ ತಲಾ 3, ದಾವಣಗೆರೆ, ರಾಮನಗರ ತಲಾ 2, ಚಾಮರಾಜನಗರ, ಹಾವೇರಿ, ಬೆಳಗಾವಿ, ರಾಯಚೂರು, ಕೊಡಗು, ಚಿಕ್ಕಮಗಳೂರು, ಉತ್ತರ ಕನ್ನಡದಲ್ಲಿ ತಲಾ ಒಬ್ಬೊಬ್ಬರು ತುರ್ತು ನಿಗಾ ಘಟಕದಲ್ಲಿದ್ದು, ಜೀವನ್ಮರಣದ ಜತೆ ಹೋರಾಡುತ್ತಿದ್ದಾರೆ.

 

 

Facebook Comments