ಕರ್ನಾಟಕದಲ್ಲಿ ಭಾರೀ ಸದ್ದು ಮಾಡುತ್ತಿದೆ ಕೋಳಿ ಮೊಟ್ಟೆ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಡಿ.4- ಕರ್ನಾಟಕದಲ್ಲಿ ಕೋಳಿ ಮೊಟ್ಟೆ ಭಾರೀ ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ ಶಾಲಾ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ನೀಡಲು ಸರ್ಕಾರ ಮುಂದಾಗಿರುವುದು. ಸಾಮಾಜಿಕ ಜಾಲತಾಣದಲ್ಲಿ ಈಗ ಮೊಟ್ಟೆ ಪೂರೈಕೆ ಬಗ್ಗೆ ಪರ-ವಿರೋಧ ಮಾತುಗಳು ಕೇಳಿಬರುತ್ತಿವೆ.

ಈ ಸಂದರ್ಭದಲ್ಲಿ 57 ಮಂದಿ ತಜ್ಞರು, ನಾಗರಿಕರು ಮತ್ತು 17 ಸಂಘ-ಸಂಸ್ಥೆಯವರು ನನ್ನ ಆಹಾರ-ನನ್ನ ಹಕ್ಕು-ಕರ್ನಾಟಕ ಎಂಬ ತಲೆಬರಹದಡಿ ಶಿಕ್ಷಣ ಸಚಿವರಿಗೆ ಬಹಿರಂಗ ಪತ್ರ ಬರೆದು ರಾಜ್ಯದ ಎಲ್ಲಾ 31 ಜಿಲ್ಲೆಗಳಲ್ಲಿ ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟದಲ್ಲಿ ಪ್ರತಿದಿನ ಕಡ್ಡಾಯವಾಗಿ ಬಿಸಿಯೂಟ ನೀಡಬೇಕೆಂದು ಒತ್ತಾಯಿಸಿದ್ದಾರೆ.

ರಾಜ್ಯ ಸರ್ಕಾರ ಯೋಜನೆ ರೂಪಿಸಿದ್ದು ರಾಜ್ಯದ 7 ಜಿಲ್ಲೆಗಳ 14 ಲಕ್ಷದ 44 ಸಾವಿರದ 322 ಮಕ್ಕಳಿಗೆ 46 ಶಾಲಾ ದಿನಗಳಲ್ಲಿ. ಹೀಗಿರುವಾಗ ಉಳಿದ ಜಿಲ್ಲೆಗಳ ಮಕ್ಕಳು ಏನು ತಪ್ಪು ಮಾಡಿದ್ದಾರೆ, ಎಲ್ಲಾ ಮಕ್ಕಳನ್ನು ಸಮಾನವಾಗಿ ಕಾಣಿ ಎಂದು ಇವರು ಶಿಕ್ಷಣ ಸಚಿವರಿಗೆ ಪತ್ರ ಬರೆದಿದ್ದಾರೆ.

ಶಿಕ್ಷಣ ತುರ್ತು ಪರಿಸ್ಥಿತಿಯ ರಾಷ್ಟ್ರೀಯ ಒಕ್ಕೂಟ, ಸಫಾಯಿ ಕರ್ಮಾಚಾರಿ ಕಾವಲು ಸಮಿತಿ- ಕರ್ನಾಟಕ, ಇಂಡಿಯನ್ ಸೋಶಿಯಲ್ ಇನ್‍ಸ್ಟಿಟ್ಯೂಟ್ ಬೆಂಗಳೂರು, ರೈಟ್ ಟು ಫುಡ್ ಅಭಿಯಾನದ ಸ್ವಾತಿ ನಾರಾಯಣ್ ಮತ್ತು ವಿದ್ಯಾ ದಿನಕರ್ ಸೇರಿದಂತೆ ಇತರ ವ್ಯಕ್ತಿಗಳು ಪತ್ರ ಬರೆದಿದ್ದಾರೆ.

ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ವಿತರಿಸುವ ತನ್ನ ಯೋಜನೆಯಿಂದ ಸರ್ಕಾರ ಹಿಂದೆ ಸರಿಯಬೇಕೆಂದು ಹಲವು ಲಿಂಗಾಯತ ಸಮುದಾಯಗಳು ಒತ್ತಾಯಿಸುತ್ತಿರುವ ಸಂದರ್ಭದಲ್ಲಿ ಈ ಸಂಘ-ಸಂಸ್ಥೆಗಳ ಸದಸ್ಯರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಪತ್ರದಲ್ಲಿ ಮಕ್ಕಳಿಗೆ ಮಧ್ಯಾಹ್ನ ಊಟದ ಜೊತೆಗೆ ಮೊಟ್ಟೆ ಏಕೆ ನೀಡಬೇಕೆಂದು ವಿವರಿಸಲಾಗಿದೆ.

ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ 5ನೇ ಸುತ್ತಿನ ಪ್ರಕಾರ, ಬಹುತೇಕ ಮಕ್ಕಳು ಆಯಾ ಪ್ರಾಯಕ್ಕೆ ಸರಿಯಾದ ಉದ್ದ ಮತ್ತು ತೂಕ ಹೊಂದಿರುವುದಿಲ್ಲ. ಮಕ್ಕಳ ವಯಸ್ಸಿಗಿಂತ ಶೇಕಡಾ 35.4ರಷ್ಟು ಮಕ್ಕಳು ಕಡಿಮೆ ಎತ್ತರ ಮತ್ತು ಶೇಕಡಾ 32.9ರಷ್ಟು ಮಕ್ಕಳು ಕಡಿಮೆ ತೂಕ ಹೊಂದಿರುತ್ತಾರೆ.

ಬಡವರು, ದುರ್ಬಲ ವರ್ಗದ ಸಮುದಾಯದ ಪೋಷಕರ ಮಕ್ಕಳಲ್ಲಿ ಈ ಸಮಸ್ಯೆ ಹೆಚ್ಚು. ಕೊರೋನಾ ಲಾಕ್ ಡೌನ್ ಸಮಯದಲ್ಲಿ ಪೋಷಕರ ಆರ್ಥಿಕ ಸಮಸ್ಯೆಯಿಂದ ಮಕ್ಕಳ ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಉಂಟುಮಾಡಿರಬಹುದು, ಹೀಗಾಗಿ ಮಕ್ಕಳ ದೇಹಕ್ಕೆ ಉತ್ತಮ ಪೋಷಕಾಂಶ ಸಿಗಲು ಮೊಟ್ಟೆ ನೀಡಬೇಕೆಂದು ಪತ್ರದಲ್ಲಿ ಶಿಕ್ಷಣ ಸಚಿವರಿಗೆ ಒತ್ತಾಯಿಸಲಾಗಿದೆ.

Facebook Comments