ನೆರೆ ಚರ್ಚೆಗೆ ಸಿಗದ ಅವಕಾಶ, ಸದನದಲ್ಲಿ ಕೋಲಾಹಲ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಅ.10- ನೆರೆಸಂತ್ರಸ್ತರ ಚರ್ಚೆಗೆ ಅವಕಾಶ ಸಿಗದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಜೆಡಿಎಸ್ ಧರಣಿ ನಡೆಸಿದ್ದರಿಂದ ವಿಧಾನಸಭೆಯಲ್ಲಿ ಕೋಲಾಹಲದ ವಾತಾವರಣ ನಿರ್ಮಾಣವಾಗಿ ಕಲಾಪ ಮುಂದೂಡಿಕೆಯಾದ ಪ್ರಸಂಗ ನಡೆಯಿತು.

ಬಜೆಟ್ ಅಂಗೀಕಾರಕ್ಕಾಗಿ ಕರೆಯಲಾಗಿದ್ದ ಮೂರು ದಿನಗಳ ಅಧಿವೇಶನದ ಆರಂಭ ದಿನವಾದ ಇಂದು ಮೊದಲು ಇತ್ತೀಚೆಗೆ ಅಗಲಿದ ಗಣ್ಯರಿಗೆ ಸಂತಾಪ ಸೂಚಿಸಲಾಯಿತು. ಅನಂತರ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು, ಕಾರ್ಯಕಲಾಪಗಳ ಪಟ್ಟಿ ಅನುಸಾರವಾಗಿ ವರದಿಗಳ ಮಂಡನೆಗೆ ಮುಂದಾದರು.

ಇದನ್ನು ತೀವ್ರವಾಗಿ ವಿರೋಧಿಸಿದ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಅರ್ಧಭಾಗದಷ್ಟು ಕರ್ನಾಟಕ ರಾಜ್ಯ ಪ್ರವಾಹದಲ್ಲಿ ಮುಳುಗಿ ಹೋಗಿದೆ. ಅದರ ಬಗ್ಗೆ ಚರ್ಚಿಸಲು ನಿಲುವಳಿ ಸೂಚನೆಯನ್ನು ಕಳುಹಿಸಿದ್ದೇನೆ. ನನಗೆ ಪ್ರಾಥಮಿಕ ವಾದ ಮಂಡಿಸಲು ಅವಕಾಶ ಕೊಡಿ. ನೆರೆ, ಬರಕ್ಕಿಂತಲೂ ವರದಿ ಮಂಡನೆ, ಕಾಗದಪತ್ರಗಳ ಸಲ್ಲಿಕೆ ಮುಖ್ಯ ಅಲ್ಲ ಎಂದು ಪ್ರತಿಪಾದಿಸಿದರು.

ಎರಡು ನಿಮಿಷ ಅವಕಾಶ ಕೊಡಿ, ವರದಿ ಮಂಡನೆ ಮತ್ತು ಕಾಗದಪತ್ರಗಳ ಸಲ್ಲಿಕೆ ಕಲಾಪವನ್ನು ಮುಗಿಸಿಬಿಡೋಣ. ಅನಂತರ ನೀವು ಸಲ್ಲಿಸಿರುವ ನಿಲುವಳಿ ಸೂಚನೆಯ ಚರ್ಚೆಗೆ ಅವಕಾಶ ಕೊಡುತ್ತೇನೆ ಎಂದು ಸಭಾಧ್ಯಕ್ಷರು ಮನವೊಲಿಸುವ ಪ್ರಯತ್ನ ಮಾಡಿದರು. ಸ್ಪೀಕರ್ ನೆರವಿಗೆ ಬಂದ ಸಚಿವ ಆರ್.ಅಶೋಕ್, ಕಾರ್ಯಕಲಾಪಗಳ ಪಟ್ಟಿಯಂತೆ ಅಧಿವೇಶನ ನಡೆಯಲಿ ಎಂದು ಸಲಹೆ ನೀಡಿದರು.

ಅಜೆಂಡಾದಲ್ಲಿ ನೆರೆ ಸಂತ್ರಸ್ತರ ವಿಷಯದ ಪ್ರಸ್ತಾಪವೇ ಇಲ್ಲ. ಅಜೆಂಡಾ ಪ್ರಕಾರ ಕಲಾಪ ನಡೆಸಲು ಸಾಧ್ಯವೇ ಇಲ್ಲ ಎಂದು ಸಿದ್ದರಾಮಯ್ಯ ಹಾಗೂ ಕೃಷ್ಣಭೈರೇಗೌಡ ಪ್ರತಿಪಾದಿಸಿದರು. ಎಲ್ಲಾ ನಿಯಮಾವಳಿಗಳನ್ನು ಬದಿಗೊತ್ತಿ ಸಾರ್ವಜನಿಕ ಮಹತ್ವದ ವಿಷಯಗಳನ್ನು ಕೈಗೆತ್ತಿಕೊಳ್ಳಬೇಕೆಂದು ನಿಯಮದಲ್ಲಿದೆ ಎಂದಾಗ ಮುಖ್ಯಮಂತ್ರಿ ಯಡಿಯೂರಪ್ಪ ಮಧ್ಯಪ್ರವೇಶಿಸಿ, ಇಂದು ಅಜೆಂಡಾ ಪ್ರಕಾರವೇ ಕಲಾಪ ನಡೆಯಲಿ.

ನೆರೆ ಸಂತ್ರಸ್ತರ ಕುರಿತು ನೀವು ಚರ್ಚೆ ಮಾಡುವುದನ್ನು ನಾವು ಬೇಡ ಎನ್ನುವುದಿಲ್ಲ ಎಂದು ಸಮರ್ಥಿಸಿಕೊಂಡರು. ಮಾಜಿ ಸ್ಪೀಕರ್ ರಮೇಶ್‍ಕುಮಾರ್ ಎದ್ದು ನಿಂತು, ಸಾಮಾನ್ಯವಾಗಿ ನಿಲುವಳಿ ಸೂಚನೆ ಬಂದಾಗ ಪ್ರಶ್ನೋತ್ತರ ಮತ್ತು ಶೂನ್ಯವೇಳೆ ನಂತರ ನಿಲುವಳಿ ಸೂಚನೆಯ ಪ್ರಾಥಮಿಕ ವಾದ ಮಂಡನೆಗೆ ಅವಕಾಶ ಕೊಡಬೇಕಿದೆ. ಇಂದು ಪ್ರಶ್ನೋತ್ತರವೂ ಇಲ್ಲ, ಶೂನ್ಯ ವೇಳೆಯೂ ಇಲ್ಲ. ಹಾಗಾಗಿ ವಿಪಕ್ಷ ನಾಯಕರಿಗೆ ನೆರೆ ಸಂತ್ರಸ್ತರ ವಿಷಯ ಮಾತನಾಡಲು ಅವಕಾಶ ಕೊಡಬೇಕು. ವರದಿ ಮಂಡನೆಗೆ ಮುಂದಾದರೆ ಅದು ಸರಿಹೋಗುವುದಿಲ್ಲ. ಯಾರ ಮುಲಾಜು, ಕೃಪೆಯಲ್ಲೂ ಕೆಲಸ ಮಾಡಬಾರದು ಎಂದು ಒತ್ತಾಯಿಸಿದರು.

ವಿಪಕ್ಷ ಶಾಸಕ ಕೃಷ್ಣಭೈರೇಗೌಡ ಮಾತನಾಡಿ, ನಿಯಮ 64ರಲ್ಲಿ ನಿಲುವಳಿ ಸೂಚನೆ ಬಗ್ಗೆ ಸ್ಪಷ್ಟತೆ ಇದೆ. ಸೂಚನೆ ಕ್ರಮಬದ್ಧವಾಗಿದ್ದರೆ ಅದಕ್ಕೆ ಸಭಾಧ್ಯಕ್ಷರು ಅವಕಾಶ ಕೊಟ್ಟರೆ ಪ್ರಶ್ನೋತ್ತರ ಮತ್ತು ಶೂನ್ಯವೇಳೆ ನಂತರ ಹಾಗೂ ಬೇರೆ ವಿಷಯಗಳನ್ನು ಪ್ರಾರಂಭಿಸುವ ಮೊದಲು ಪ್ರಾಥಮಿಕ ವಾದ ಮಂಡನೆಗೆ ಅವಕಾಶ ನೀಡಬೇಕು. ಒಂದು ವೇಳೆ ನಿಲುವಳಿ ಸೂಚನೆ ತಿರಿಸ್ಕರಿಸುವುದಾದರೆ ಸಕಾರಣಗಳನ್ನು ನೀಡಬೇಕು ಎಂದು ಉಲ್ಲೇಖಿಸಲಾಗಿದೆ ಎಂದಾಗ, ಕಾಂಗ್ರೆಸ್ ಹಿರಿಯ ಶಾಸಕ ಎಚ್.ಕೆ.ಪಾಟೀಲ್ ಮಾತನಾಡಿ, ಸಭಾಧ್ಯಕ್ಷರು ನಿಯಮಾವಳಿ ಪ್ರಕಾರ ಅಧಿವೇಶನ ನಡೆಸಲಿ. ಕಾಗದಪತ್ರಗಳ ಮಂಡನೆಗೆ ಅವಕಾಶ ಕೊಟ್ಟರೆ ನಿಯಮಬಾಹಿರವಾಗಿ ಅಧಿವೇಶನ ನಡೆದಂತಾಗುತ್ತದೆ ಎಂದು ವಾದಿಸಿದರು.

ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಅವರು ಬಜೆಟ್ ಅಂಗೀಕಾರಕ್ಕೆ ಸದನ ಕರೆದಿದ್ದೇವೆ. ಐದು ನಿಮಿಷ ಕಾಗದಪತ್ರಗಳ ಮಂಡನೆಗೆ ಅವಕಾಶ ಕೊಟ್ಟರೆ ಸಮಸ್ಯೆಯೇನೂ ಆಗುವುದಿಲ್ಲ. ತರಾತುರಿಯಲ್ಲಿ ಯಾವ ಚರ್ಚೆ, ನಿರ್ಧಾರವೂ ಸರಿಯಲ್ಲ ಎಂದರು. ಇದನ್ನು ವಿಪಕ್ಷ ನಾಯಕ ಸಿದ್ದರಾಮಯ್ಯ, ಜೆಡಿಎಸ್ ನಾಯಕ ಎಚ್.ಡಿ.ರೇವಣ್ಣ, ಕಾಂಗ್ರೆಸ್ ªಶಾಸಕರಾದ ಎಚ್.ಕೆ.ಪಾಟೀಲ್, ತನ್ವೀರ್ ಸೇಠ್, ಪಿ.ಟಿ.ಪರಮೇಶ್ವರ್‍ನಾಯಕ್ ಮತ್ತಿತರರು ತೀವ್ರವಾಗಿ ವಿರೋಧಿಸಿದರು.

ಸರ್ಕಾರಕ್ಕೆ ನೆರೆ ಸಂತ್ರಸ್ತರಿಗಿಂತಲೂ ಕಾಗದ ಮಂಡನೆಯೇ ಪ್ರಮುಖವೇ ಎಂದು ಕಾಂಗ್ರೆಸ್ ಶಾಸಕ ತನ್ವೀರ್ ಸೇಠ್ ಪ್ರಶ್ನಿಸಿದರು. ಇದಕ್ಕೆ ಸ್ಪಷ್ಟನೆ ನೀಡಿದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಅಧಿವೇಶನದಲ್ಲಿ ನಿಯಮ 60 ಮತ್ತು 96ರ ಚರ್ಚೆಗೆ ಗಂಟೆಗಟ್ಟಲೆ ಸಮಯ ವ್ಯರ್ಥವಾಗುತ್ತಿದೆ. ಇದಕ್ಕೆಒಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ ಎಂದು ಹೇಳಿದರು.

ಪ್ರತಿಪಕ್ಷಗಳ ವಿರೋಧ, ಆಡಳಿತ ಪಕ್ಷದ ಸಮರ್ಥನೆ ನಡುವೆ ವರದಿಗಳ ಮಂಡನೆಗೆ ಸಭಾಧ್ಯಕ್ಷರು ಅವಕಾಶ ಕೊಟ್ಟಾಗ ಪ್ರತಿಪಕ್ಷಗಳ ನಾಯಕರು ಕೆರಳಿದರು. ಇದನ್ನು ಪ್ರತಿಷ್ಠೆ ಪ್ರಶ್ನೆಯಾಗಿ ತೆಗೆದುಕೊಳ್ಳಬಾರದು,. ಸುಮಾರು ಏಳು ಲಕ್ಷ ಜನ ಪ್ರವಾಹದಲ್ಲಿ ಸಂತ್ರಸ್ತರಾಗಿದ್ದಾರೆ. ಅವರ ಸಂಕಷ್ಟಗಳ ಚರ್ಚೆಗೆ ಅವಕಾಶ ಕೊಡದೆ ಸಭಾಧ್ಯಕ್ಷರು ಸರ್ಕಾರದ ಜೊತೆ ಶಾಮೀಲಾಗಿದ್ದಾರೆ. ಕಾಗದಪತ್ರಗಳನ್ನು ಕೈಗೆತ್ತಿಕೊಳ್ಳುವ ಮೂಲಕ ಪ್ರತಿಪಕ್ಷದ ಶಾಸಕರ ದನಿಯನ್ನುಅಡಗಿಸುವ ಪ್ರಯತ್ನ ನಡೆಯುತ್ತಿದೆ. ನಮ್ಮ ಹಕ್ಕುಗಳು ಮೊಟಕುಗೊಳುತ್ತಿದೆ. ಇಟ್ ಈಸ್ ಟೂ ಮಚ್ ಎಂದು ಸಿದ್ದರಾಮಯ್ಯ ಅಬ್ಬರಿಸಿದರು. ರಾಮಲಿಂಗಾರೆಡ್ಡಿ, ಕೃಷ್ಣಭೈರೇಗೌಡ ಅವರು ಸಭಾಧ್ಯಕ್ಷರ ನಿಲುವುಗಳನ್ನು ಖಾರವಾಗಿ ಪ್ರಶ್ನಿಸಿದರು.

ಇದರ ನಡುವೆ ಮುಖ್ಯಮಂತ್ರಿ ಯಡಿಯೂರಪ್ಪ ಸೇರಿದಂತೆ ಎಲ್ಲಾ ಸಚಿವರು ಕಾಗದ ಪತ್ರಗಳನ್ನು ಮಂಡಿಸಿ ಶಾಸಕರು ವರದಿಗಳನ್ನು ಸದನದ ಮುಂದಿಟ್ಟಾಗ ಜೆಡಿಎಸ್ ಶಾಸಕರು ಸಿಟ್ಟಿಗೆದ್ದು, ಸಭಾಧ್ಯಕ್ಷರ ಮುಂದಿನ ಬಾವಿಗಿಳಿದು ಧರಣಿ ಆರಂಭಿಸಿದರು. ಕಾಂಗ್ರೆಸ್ ಶಾಸಕರು ತಮ್ಮ ಕುರ್ಚಿಯಿಂದ ಎದ್ದು ನಿಂತು ಶೇಮ್ ಶೇಮ್ ಎಂದು ಘೋಷಣೆ ಕೂಗಿದರು.
ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಒಂದು ಹೆಜ್ಜೆ ಮುಂದೆ ಹೋಗಿ ಜೆಡಿಎಸ್ ಶಾಸಕರ ಜೊತೆ ಧರಣಿಯಲ್ಲಿ ನಿಂತರು. ಆದರೆ ಕಾಂಗ್ರೆಸ್‍ನ ಇತರೆ ಶಾಸಕರ್ಯಾರೂ ಧರಣಿಗೆ ಆಗಮಿಸದೆ ಇದ್ದರಿಂದ ಅವರು ವಾಪಸ್ ಬಂದರು.

ಕಾಂಗ್ರೆಸ್-ಜೆಡಿಎಸ್ ಶಾಸಕರ ಗದ್ದಲದ ನಡುವೆಯೇ ವರದಿಗಳು ಮಂಡನೆಯಾದವು. ಸಭಾಧ್ಯಕ್ಷರ ನಿಲುವನ್ನು ಆಡಳಿತ ಪಕ್ಷದ ಶಾಸಕರಾದ ಸಿ.ಟಿ.ರವಿ, ಬಸವರಾಜ್‍ಬೊಮ್ಮಾಯಿ ಮತ್ತಿತರರು ಸಮರ್ಥಿಸಿಕೊಂಡರು. ಇದರಿಂದ ಕೋಲಾಹಲ ವಾತಾವರಣ ನಿರ್ಮಾಣವಾದಾಗ ಕಲಾಪವನ್ನು ಮಧ್ಯಾಹ್ನ 2 ಗಂಟೆಗೆ ಮುಂದೂಡಿದ ಸಭಾಧ್ಯಕ್ಷರು ಮುಂದಿನ ಕಲಾಪಗಳ ಚರ್ಚೆ ನಡೆಸಲು ಸಂಸದೀಯ ಕಲಾಪಗಳ ಸಭೆಗೆ ಆಗಮಿಸುವಂತೆ ಆಡಳಿತ ಮತ್ತು ವಿಪಕ್ಷ ಶಾಸಕರಿಗೆ ಆಹ್ವಾನ ನೀಡಿ ಕಲಾಪ ಮುಂದೂಡಿದರು.

Facebook Comments