“ಬಜೆಟ್‍ನಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಘೋಷಿಸಿದ್ದಾರೆ ವಿಷ ಕುಡಿದು ಆತ್ಮಹತ್ಯೆ”

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.13- ಡಾ.ಸರೋಜಿನಿ ಮಹಿಷಿ ವರದಿಯ ಶಿಫಾರಸ್ಸಿನಂತೆ ಕನ್ನಡಿಗರಿಗೆ ಶೇ.85ರಷ್ಟು ಉದ್ಯೋಗ ನೀಡುವ ಮೀಸಲಾತಿ ಕಾಯ್ದೆಯನ್ನು ಬಜೆಟ್‍ನಲ್ಲಿ ಘೋಷಣೆ ಮಾಡದಿದ್ದರೆ ವಿಷ ಕುಡಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕನ್ನಡಪರ ಸಂಘಟನೆಗಳ ಮುಖಂಡರು ಬೆದರಿಕೆ ಹಾಕಿದ್ದಾರೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಇಂದು ಡಾಲರ್ಸ್ ಕಾಲೋನಿಯಲ್ಲಿ ಭೇಟಿ ಮಾಡಿದ ವಿವಿಧ ಕನ್ನಡಪರ ಸಂಘಟನೆಗಳ ಮುಖಂಡರು, ಮುಂಬರುವ ಬಜೆಟ್‍ನಲ್ಲಿ ಕನ್ನಡಿಗರಿಗೆ ಶೇ.85ರಷ್ಟು ಉದ್ಯೋಗ ನೀಡುವ ಮೀಸಲಾತಿ ಕಾಯ್ದೆಯನ್ನು ಜಾರಿ ಮಾಡದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲು ಹಿಂದೆ-ಮುಂದೆ ನೋಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.

ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ಆಗಮಿಸಿದ್ದ ಮುಖಂಡರು, ಕೂಡಲೇ ಡಾ.ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನ ಮಾಡಬೇಕೆಂದು ಒತ್ತಾಯಿಸಿದರು. ಈ ಹಿಂದೆ ಆಡಳಿತ ನಡೆಸಿದ ಸರ್ಕಾರಗಳು ಕೇವಲ ಆಶ್ವಾಸನೆಯನ್ನು ನೀಡಿವೆಯೇ ಹೊರತು ಯಾರೊಬ್ಬರೂ ಪ್ರಾಮಾಣಿಕವಾಗಿ ಅನುಷ್ಠಾನ ಮಾಡುವಂತಹ ಧೈರ್ಯ ತೋರಲಿಲ್ಲ. ಈಗಲಾದರೂ ನೀವು ಈ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಬೇಕೆಂದು ಮನವಿ ಮಾಡಿದರು. ಸಂಘಟನೆಗಳ ಮುಖಂಡರಿಂದ ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಯಡಿಯೂರಪ್ಪ, ವರದಿ ಅನುಷ್ಠಾನದ ಬಗ್ಗೆ ಯಾವುದೇ ಸ್ಪಷ್ಟ ಭರವಸೆ ಕೊಡಲಿಲ್ಲ. ಕೇವಲ ಮನವಿಯನ್ನು ಆಲಿಸಿ ವಿಧಾನಸೌಧಕ್ಕೆ ತೆರಳಿದರು.

# ಸಂಘಟನೆಗಳ ಮುಖಂಡರು ತಬ್ಬಿಬ್ಬಾದ ಪ್ರಸಂಗ :
ಡಾ.ಸರೋಜಿನಿ ಮಹಿಷಿ ವರದಿ ಅನುಷ್ಠಾನ ಮಾಡಬೇಕೆಂದು ಒತ್ತಾಯಿಸಿ ಮುಖ್ಯಮಂತ್ರಿಗಳ ಬಳಿ ಮನವಿ ಸಲ್ಲಿಸಲು ಬಂದಿದ್ದ ಕನ್ನಡ ಪರ ಸಂಘಟನೆಗಳ ಮುಖಂಡರು ತಬ್ಬಿಬ್ಬಾದ ಪ್ರಸಂಗ ಜರುಗಿತು. ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಸರೋಜಿನಿ ಮಹಿಷಿ ವರದಿಯನ್ನು ಅನುಷ್ಠಾನ ಮಾಡುವ ಸಂಬಂಧ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಶಿವಕುಮಾರ್ ನೇತೃತ್ವದಲ್ಲಿ ಅನೇಕ ಮುಖಂಡರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರಿಗೆ ಮನವಿ ಪತ್ರ ಸಲ್ಲಿಸಲು ಡಾಲರ್ಸ್ ಕಾಲೋನಿ ಸಿಎಂ ನಿವಾಸಕ್ಕೆ ತೆರಳಿದ್ದರು.

ಈ ವೇಳೆ ಅನೇಕ ಮುಖಂಡರಿಗೆ ವರದಿಯ ಬಗ್ಗೆಯೇ ಸರಿಯಾದ ಮಾಹಿತಿ ಇಲ್ಲದೆ ಕೆಲ ಕಾಲ ಗೊಂದಲಕ್ಕೆ ಸಿಲುಕಿದರು. ಸರೋಜಿನಿ ಮಹಿಷಿ ವರದಿ ಯಾವಗ ಬಂದಿತ್ತು, ವರದಿಯನ್ನು ಯಾವಾಗ ಪರಿಷ್ಕರಿಸಲಾಗಿತ್ತು, ವರದಿ ಬರೆದವರ ಹೆಸರು, ಅದರ ಉದ್ದೇಶ, ಅದರಲ್ಲಿನ ಅಂಶಗಳು, ವರದಿಯನ್ನು ನೀಡಿದಾಗ ಯಾರು ಮುಖ್ಯಮಂತ್ರಿಯಾಗಿದ್ದರು ಎಂಬಿತ್ಯಾದಿ ಬಗ್ಗೆ ಎಳ್ಳಷ್ಟು ಮಾಹಿತಿ ಇರಲಿಲ್ಲ. ಡಾ.ಸರೋಜಿನಿ ಮಹಿಷಿ ವರದಿ ಬಗ್ಗೆ ಒಬ್ಬೊಬ್ಬರು ಒಂದೊಂದು ಹೇಳಿಕೆಗಳನ್ನು ಕೊಟ್ಟು ಅಪಹಾಸ್ಯಕ್ಕೀಡಾದರು. ವರದಿಯನ್ನು ಅನುಷ್ಠಾನ ಮಾಡುವಂತೆ ಬಂದಿದ್ದವರಿಗೆ ವರದಿ ಬಗ್ಗೆಯೇ ಮಾಹಿತಿ ಇರಲಿಲ್ಲ.

Facebook Comments

Sri Raghav

Admin