ಕರ್ನಾಟಕ ಬಂದ್ (Live Updates)

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಫೆ.13-ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ನೀಡುವ ಸರೋಜಿನಿ ಮಹಿಷಿ ವರದಿ ಕೂಡಲೇ ಜಾರಿಯಾಗಬೇಕು ಎಂದು ಒತ್ತಾಯಿಸಿ ಇಂದು ಕರೆ ನೀಡಲಾಗಿರುವ ಬಂದ್‍ಗೆ 700ಕ್ಕೂ ಹೆಚ್ಚು ಕನ್ನಡ ಪರ ಸಂಘಟನೆಗಳು ಬೆಂಬಲ ಘೋಷಿಸಿವೆ. ಬೆಂಗಳೂರಿನ ಆನಂದ್‍ರಾವ್ ವೃತ್ತದಲ್ಲಿ ಕಳೆದ 100 ದಿನಗಳಿಂದಲೂ ನಿರಂತರವಾಗಿ ಧರಣಿ ನಡೆಸುತ್ತಿದ್ದ ಕನ್ನಡ ಪರ ಸಂಘಟನೆಗಳು ಸರ್ಕಾರದ ಗಮನ ಸೆಳೆಯುವ ಸಲುವಾಗಿ ಬಂದ್‍ಗೆ ಕರೆ ನೀಡಿವೆ.

# ಕೆಲವು ಸಂಘಟನೆಗಳು ಬಂದ್‍ಗೆ ಬೆಂಬಲ ನೀಡದೆ ತಟಸ್ಥವಾಗಿ ಉಳಿದಿವೆ. ಆದರೆ 700ಕ್ಕೂ ಹೆಚ್ಚು ಸಂಘಟನೆಗಳು ಬೆಂಬಲ ನೀಡಿದ್ದು, ದಲಿತ ಸಂಘಟನೆಗಳು, ರೈತ ಸಂಘಟನೆಗಳು, ಮಹಿಳಾ ಹೋರಾಟಗಾರ್ತಿಯರು, ಓಲಾ, ಊಬರ್ ಟ್ಯಾಕ್ಸಿ ಡ್ರೈವರ್ಸ್ ಅಸೋಸಿಯೇಷನ್, ಲಾರಿ ಮಾಲೀಕರ ಸಂಘ, ಆಟೋ ಚಾಲಕರ ಸಂಘ, ಖಾಸಗಿ ವಾಹನ ಮಾಲೀಕರ ಸಂಘ, ಸರ್ಕಾರಿ ವಾಹನ ಚಾಲಕರ ಸಂಘ ಸೇರಿದಂತೆ ಹಲವಾರು ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ.

# ಕೆಎಸ್‍ಆರ್‍ಟಿಸಿ, ಬಿಎಂಟಿಸಿ ಬಸ್‍ಗಳು ಬಂದ್ ವೇಳೆ ಎಂದಿನಂತೆ ಸಂಚರಿಸುತ್ತಿವೆ. ಶಾಲಾ-ಕಾಲೇಜುಗಳಿಗೂ ರಜೆ ನೀಡಲಾಗಿಲ್ಲ. ಹಾಲು, ಮೊಸರು ಉತ್ಪನ್ನಗಳ ಮಾರಾಟ ಸಂಸ್ಥೆಗಳು, ಸರ್ಕಾರಿ, ಖಾಸಗಿ ಆಸ್ಪತ್ರೆಗಳ ಸೇವೆ, ಔಷಧಿ ಅಂಗಡಿಗಳು, ಪೆಟ್ರೋಲ್ ಬಂಕ್‍ಗಳು, ಸಿನಿಮಾ ಮಂದಿರಗಳು, ಮಾರುಕಟ್ಟೆಗಳು ಎಂದಿನಂತೆ ಕರ್ತವ್ಯ ನಿರ್ವಹಿಸುತ್ತಿವೆ. ಆದರೆ ಕೊನೆ ಕ್ಷಣದಲ್ಲಿನ ಪರಿಸ್ಥಿತಿ ಆಧರಿಸಿ ಎಲ್ಲಾ ಸೇವೆಗಳು ಏರುಪೇರಾಗುವ ಸಾಧ್ಯತೆ ಇದೆ.

# ಸರೋಜಿನಿ ಮಹಿಷಿ ವರದಿ ಆಧರಿಸಿ ಕನ್ನಡಿಗರಿಗೆ ಉದ್ಯೋಗ ನೀಡಲು ಕಾನೂನು ರೂಪಿಸಬೇಕು ಎಂದು ಕನ್ನಡಪರ ಸಂಘಟನೆಗಳು ಒತ್ತಾಯಿಸಿವೆ. ಆದರೆ ಇದಕ್ಕೆ ಕೆಲವು ಸಂಘಟನೆಗಳು ಕೈಜೋಡಿಸಿಲ್ಲ. ತಮ್ಮದೇ ಹಾದಿಯಲ್ಲಿ ಪ್ರತ್ಯೇಕ ಹೋರಾಟಕ್ಕೆ ಮುಂದಾಗಿವೆ. ಕನ್ನಡ ಸಂಘಟನೆಗಳ ನಡುವೆಯೇ ಬಂದ್ ವಿಷಯದಲ್ಲಿ ದ್ವಂದ್ವಗಳಿವೆ. ನಿರೀಕ್ಷೆಗೂ ಮೀರಿ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಈಗಾಗಲೇ 700 ಸಂಘಟನೆಗಳು ಬೆಂಬಲ ಘೋಷಿಸಿವೆ. ಇನ್ನೂ 500ಕ್ಕೂ ಹೆಚ್ಚು ಸಂಘಟನೆಗಳು ಕರೆ ಮಾಡಿ ಬೆಂಬಲ ನೀಡುವುದಾಗಿ ಹೇಳುತ್ತಿವೆ. ನಾವು ಏಕಾಏಕಿ ಬಂದ್ ಆಚರಿಸುತ್ತಿಲ್ಲ. ಈ ಮೊದಲು ಧರಣಿ ನಡೆಸಿದಾಗ 48 ದಿನ ಗಡುವು ನೀಡಿದ್ದೆವು. ಸರ್ಕಾರ ಗಂಭೀರವಾಗಿ ಪರಿಗಣಿಸದೆ ಇದ್ದುದರಿಂದ ಬಂದ್‍ಗೆ ಕರೆ ನೀಡಬೇಕಾಯಿತು ಎಂದಿದ್ದಾರೆ.

# ವಾಟಾಳ್ ಬೆಂಬಲವಿಲ್ಲ :
ನಾಳೆ ವಿವಿಧ ಸಂಘಟನೆಗಳು ಕರೆ ನೀಡಿರುವ ಬಂದ್‍ಗೆ ನಮ್ಮ ಬೆಂಬಲ ಇಲ್ಲ ಎಂದು ಕನ್ನಡ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಸ್ಪಷ್ಟಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರೋಜಿನಿ ಮಹಿಷಿ ವರದಿ ಜಾರಿಯಾಗಲೇಬೇಕೆಂದು ನಮ್ಮ ದೃಢವಾದ ನಿಲುವು. ಅದರಲ್ಲಿ ಯಾವುದೇ ಬದಲಾವಣೆ ಇಲ್ಲ. ಕಳೆದ 30 ವರ್ಷಗಳಿಂದಲೂ ಈ ವಿಷಯವಾಗಿ ಹೋರಾಟ ಮಾಡುತ್ತಾ ಬಂದಿದ್ದೇವೆ. ವಿಧಾನಸಭೆಯ ಚುನಾವಣೆಯ ಅಧಿವೇಶನ ಆರಂಭವಾದ ಮೇಲೆ ಮಾರ್ಚ್ 5 ರಂದು ವಿಧಾನಸಭೆಗೆ ಮುತ್ತಿಗೆ ಹಾಕಿ ಒತ್ತಡ ತರುವ ಪ್ರಯತ್ನವನ್ನೂ ನಮ್ಮ ಸಂಘಟನೆ ಮಾಡಲಿದೆ ಎಂದರು. ಬಂದ್‍ಗೆ ನಮ್ಮ ಬೆಂಬಲ ಇಲ್ಲ. ನಾವು ಯಾವುದೇ ಬಂದ್‍ಗೆ ಕರೆ ನೀಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

# ಬಂದ್‍ಗೆ ಚಿತ್ರ್ಯೋದ್ಯಮ ಬಾಹ್ಯ ಬೆಂಬಲ :
ಕನ್ನಡ ಒಕ್ಕೂಟಗಳು ಕರೆ ನೀಡಿರುವ ಕರ್ನಾಟಕ ಬಂದ್‍ಗೆ ಚಿತ್ರೋದ್ಯಮ ಬಾಹ್ಯ ಬೆಂಬಲ ನೀಡಲಿದೆ. ಆದರೆ ಎಂದಿನಂತೆ ಚಿತ್ರೀಕರಣಗಳು ನಡೆಯಲಿದೆ ಎಂದು ಕರ್ನಾಟಕ ವಾಣಿಜ್ಯ ಮಂಡಳಿ ಅಧ್ಯಕ್ಷ ಜಯರಾಜು ತಿಳಿಸಿದ್ದಾರೆ. ಈ ಸಂಜೆ ಪತ್ರಿಕೆಯೊಂದಿಗೆ ಮಾತನಾಡಿದ ಅವರು, ಚಿತ್ರೋದ್ಯಮ ಬಂದ್ ಆಗುವುದಿಲ್ಲ. ಚಿತ್ರೀಕರಣ ಎಂದಿನಂತೆ ನಡೆಯಲಿದೆ. ಚಲನಚಿತ್ರಗಳೂ ಪ್ರದರ್ಶನಗೊಳ್ಳಲಿವೆ ಎಂದು ಹೇಳಿದರು. ಕಳೆದ ವಾರ ಸುಮಾರು 9 ಚಿತ್ರಗಳು ಬಿಡುಗಡೆಯಾಗಿವೆ. ಈ ವಾರವೂ ಏಳೆಂಟು ಸಿನಿಮಾಗಳು ತೆರೆಗೆ ಬರಲಿವೆ. ನಾವು ಬಂದ್ ಮಾಡಿದರೆ ಚಿತ್ರೀಕರಣದಲ್ಲಿ ತೊಡಗುವವರಿಗೆ, ಚಿತ್ರರಂಗದ ಕಾರ್ಮಿಕರಿಗೆ ತೊಂದರೆ ಆಗಲಿದೆ. ಅಲ್ಲದೆ ಚಲನಚಿತ್ರಗಳಿಗೂ ತೊಡಕಾಗಲಿದೆ.ಹಾಗಾಗಿ ಎಲ್ಲರ ಹಿತದೃಷ್ಟಿಯಿಂದ ಬಂದ್‍ನಲ್ಲಿ ಭಾಗಿಯಾಗುವುದಿಲ್ಲ. ಆದರೆ ಚಿತ್ರ್ಯೋದ್ಯಮ ಬಾಹ್ಯ ಬೆಂಬಲ ನೀಡಲಿದೆ ಎಂದು ಜಯರಾಜು ಸ್ಪಷ್ಟಪಡಿಸಿದರು.

Facebook Comments

Sri Raghav

Admin