ಹ್ಯಾಕರ್ ಶ್ರೀಕಿ ಸಂಪರ್ಕದಲ್ಲಿದ್ದವರಿಗೆ ನಡುಕ ಶುರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.13- ಬಿಟ್‍ಕಾಯಿನ್ ಹಗರಣ ದಿನೇ ದಿನೇ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿ ರುವುದರಿಂದ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕಿಯೊಂದಿಗೆ ಡಿಜಿಟಲ್ ಕರೆನ್ಸಿ ವ್ಯವಹಾರ ಮಾಡಿದ ಅನೇಕರಲ್ಲಿ ನಡುಕ ಉಂಟಾಗಿದೆ. ಇತ್ತೀಚೆಗೆ ನಡೆಯುತ್ತಿರುವ ಚರ್ಚೆಗಳನ್ನು ಗಮನಿಸಿದರೆ ಬಿಟ್‍ಕಾಯಿನ್ ಹಗರಣ ಸುಲಭಕ್ಕೆ ಮುಗಿದು ಹೋಗುವಂತೆ ಕಾಣುತ್ತಿಲ್ಲ.

ಶ್ರೀಕಿಯನ್ನು ಬಂಧಿಸಿದ ವೇಳೆ ಕೆಲವು ಗಣ್ಯ ವ್ಯಕ್ತಿಗಳು ಪ್ರಭಾವ ಬೀರಿ ಡಿಜಿಟಲ್ ಕರೆನ್ಸಿಯನ್ನು ಬೇನಾಮಿ ಖಾತೆಗಳಿಗೆ ವರ್ಗಾವಣೆ ಮಾಡಿಸಿದ್ದಾರೆ ಎಂಬ ಮಾಹಿತಿ ಇದೆ. ಯಾರ್ಯಾರ ಖಾತೆಗೆ ವರ್ಗಾವಣೆ ಮಾಡಿಸಲಾಗಿದೆ ಎಂಬ ಮಾಹಿತಿಯನ್ನು ತನಿಖಾಧಿಕಾರಿಗಳು ಪ್ರತಿಪಕ್ಷಗಳ ನಾಯಕರಿಗೆ ನೀಡಿದ್ದು, ಅದನ್ನೇ ಆಧಾರವಾಗಿಟ್ಟುಕೊಂಡು ಕಾಂಗ್ರೆಸ್ ಉನ್ನತ ಮಟ್ಟದ ತನಿಖೆಗೆ ಪಟ್ಟು ಹಿಡಿದಿದೆ.

ಆರಂಭದಲ್ಲಿ ಬಿಟ್‍ಕಾಯಿನ್ ಡಿಜಿಟಲ್ ಕರೆನ್ಸಿ ಬಗ್ಗೆ ಹೆಚ್ಚು ಮಾಹಿತಿ ಇರಲಿಲ್ಲ. ಆಗಾಗಿ ಯಾವುದೇ ಸಾಕ್ಷಾದಾರಗಳು ದೊರೆಯುವುದಿಲ್ಲ ಎಂಬ ದೃಢವಿಶ್ವಾಸದಲ್ಲಿ ಗಣ್ಯ ವ್ಯಕ್ತಿಗಳು ಹ್ಯಾಕ್ ಮಾಡಿ ಶ್ರೀಕಿ ಗಳಿಸಿದ ಬಿಟ್‍ಕಾಯಿನ್‍ನನ್ನುಬೇರೆ ಬೇರೆ ಖಾತೆಗಳಿಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ ಎಂಬ ಆರೋಪಗಳಿವೆ.

ಆದರೆ, ಇತ್ತೀಚೆಗೆ ಕಾಂಗ್ರೆಸ್ ಹಂತ ಹಂತವಾಗಿ ದಾಖಲಾತಿಗಳನ್ನು ಪೇರಿಸುತ್ತಿದೆ. ಮುಂದಿನ ದಿನಗಳಲ್ಲಿ ಗಂಭೀರ ಸ್ವರೂಪದ ತನಿಖೆಯಾದರೆ ಶ್ರೀಕಿಯಿಂದ ಹಣ ವರ್ಗಾವಣೆ ಮಾಡಿಸಿಕೊಂಡವರು ಸಂಕಷ್ಟಕ್ಕೆ ಸಿಲುಕುವುದು ಖಚಿತವಾಗುತ್ತದೆ. ಹೀಗಾಗಿ ಬಹಳಷ್ಟು ಮಂದಿ ಹೆದರಿದ್ದು, ಮುಂದೆ ಯಾವ ಪರಿಣಾಮ ಕಾದಿದೆಯೋ ಎಂಬ ದುಗುಡದಲ್ಲಿದ್ದಾರೆ ಎನ್ನಲಾಗಿದೆ.

ಬಿಟ್‍ಕಾಯಿನ್ ವ್ಯವಹಾರ ದೇಶದಲ್ಲಿ ನಿಷೇತವಲ್ಲ. 2008ರಲ್ಲಿ ಆರ್‍ಬಿಐ ಡಿಜಿಟಲ್ ಕರೆನ್ಸಿ ಮೇಲೆ ನಿಷೇಧ ಏರಿದಾಗ ಸುಪ್ರೀಂಕೋರ್ಟ್ ಅದಕ್ಕೆ ತಡೆಯಾಜ್ಞೆ ನೀಡಿದೆ. ಹಾಗಾಗಿ ಬಹಳಷ್ಟು ಮಂದಿ ಈ ವ್ಯವಹಾರದಲ್ಲಿ ತೊಡಗಿಸಿಕೊಂಡಿದ್ದಾರೆ.

ಜಾಗತಿಕವಾಗಿ ಸುಮಾರು 927 ಬಿಲಿಯನ್ ಡಾಲರ್ ವಹಿವಾಟು ನಡೆಯುತ್ತಿದ್ದು, 20 ಮಿಲಿಯನ್‍ಗೂ ಅಕ ಬಿಟ್‍ಕಾಯಿನ್‍ಗಳು ಚಾಲ್ತಿಯಲ್ಲಿವೆ. ಭಾರತ ಒಂದರಲ್ಲೇ ಸುಮಾರು 7 ಬಿಲಿಯನ್ ಡಾಲರ್ ವಹಿವಾಟು ನಡೆದಿರುವ ಅಂದಾಜಿದೆ. ಶ್ರೀಕಿ ಪ್ರಕರಣದಲ್ಲಿ ಸುಮಾರು ಎರಡೂವರೆ ಸಾವಿರ ಕೋಟಿ ರೂ. ಮೊತ್ತದಷ್ಟು ಬಿಟ್‍ಕಾಯಿನ್‍ಗಳ ವಹಿವಾಟು ನಡೆದಿವೆ ಎಂಬ ಆರೋಪಗಳಿವೆ.

ಪೊಲೀಸರು ಅಕೃತವಾಗಿ ಹೇಳಿದ ಮಾಹಿತಿ ಪ್ರಕಾರವೇ 9ಕೋಟಿ ರೂ. ಮೊತ್ತದ 31 ಬಿಟ್‍ಕಾಯಿನ್‍ಗಳನ್ನು ಶ್ರೀಕಿಯಿಂದ ಜಪ್ತಿ ಮಾಡಲಾಗಿತ್ತು. ನ್ಯಾಯಾಲಯಕ್ಕೆ ಹಾಜರುಪಡಿಸಲು ಸಂಗ್ರಹಿಸಲಾಗಿದ್ದ ಮುಚ್ಚಿದ ಲಕೋಟೆಯಲ್ಲಿದ್ದ ದಾಖಲಾತಿಗಳನ್ನು ತೆರೆದಾಗ ಜಪ್ತಿ ಮಾಡಿದ ಬಿಟ್‍ಕಾಯಿನ್‍ಗಳ ಸಂಖ್ಯೆ 186.8 ಎಂಬ ಆಘಾತಕಾರಿ ಅಂಶ ಬೆಳಕಿಗೆ ಬಂದಿತ್ತು. ಇವುಗಳ ಸರಾಸರಿ ಮೌಲ್ಯ ಪ್ರಸ್ತುತ ಮಾರುಕಟ್ಟೆಯಲ್ಲಿ 100 ಕೋಟಿ ರೂ. ದಾಟಲಿದೆ. ಆ ಬಿಟ್‍ಕಾಯಿನ್‍ಗಳು ಈ ನಾಪತ್ತೆಯಾಗಿವೆ.

ಆರೋಪಿ ಶ್ರೀಕಿ ಪೊಲೀಸರಿಗೆ ಐಡಿ, ಪಾಸ್‍ವರ್ಡ್ ನೀಡಿದ್ದ ಪಬ್ಲಿಕ್ ಕೀ ಬಳಸಿ ತಜ್ಞರ ಸಹಾಯದಲ್ಲಿ ಪೊಲೀಸರು ಬಿಟ್‍ಕಾಯಿನ್‍ಗಳನ್ನು ಇಲಾಖೆಯ ಖಾತೆಗೆ ವರ್ಗಾವಣೆ ಮಾಡಿಸಿಕೊಳ್ಳಲು ಪ್ರಯತ್ನಿಸಿದರು. ಆದರೆ,ಅತ್ಯಗತ್ಯವಾದ ಪ್ರವೇಟ್ ಕೀ ಇಲ್ಲದೆ ಇದ್ದುದ್ದರಿಂದ ವರ್ಗಾವಣೆ ವಿಫಲವಾಗಿದೆ.
ಯಾರಿಂದ ಬಿಟ್‍ಕಾಯಿನ್‍ಗಳನ್ನು ಸಂಗ್ರಹಿಸಲಾಗಿತ್ತು. ಯಾರಿಗೆ ವರ್ಗಾವಣೆ ಮಾಡಲಾಗಿದೆ ಎಂಬೆಲ್ಲಾ ಸ್ಪಷ್ಟ ಮಾಹಿತಿಗಳು ಸಿಗಬೇಕಾದರೆ ಪ್ರವೇಟ್ ಕೀ ಅಗತ್ಯವಿದೆ. ಅದು ಶ್ರೀಕಿ ಬಳಿ ಮಾತ್ರ ಇರುವುದರಿಂದ ಆತನನ್ನು ಗಂಭೀರ ವಿಚಾರಣೆಗೊಳಪಡಿಸುವ ಅನಿವಾರ್ಯತೆ ಇದೆ.

ಒಂದು ವೇಳೆ ಉನ್ನತ ಮಟ್ಟದ ತನಿಖೆ ನಡೆದು ಬಿಟ್‍ಕಾಯಿನ್ ವರ್ಗಾವಣೆಗಳ ಮಾಹಿತಿಗಳು ಬೆಳಕಿಗೆ ಬಂದಿದ್ದೇ ಆದರೆ ಘಟಾನುಘಟಿ ಪ್ರಭಾವಿಗಳು ಕಾನೂನಿನ ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

Facebook Comments