ಪಕ್ಷದೊಳಗೆನ ಗೊಂದಲ ನಿವಾರಿಸಲು ಸದ್ಯದಲ್ಲೇ ಬಿಜೆಪಿಯ ಸಮನ್ವಯ ಸಮಿತಿ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ನಾಯಕತ್ವ ಗೊಂದಲ, ಶಾಸಕಾಂಗ ಸಭೆ, ಶಾಸಕರ ಅಸಮಾಧಾನ, ಸೇರಿದಂತೆ ಪಕ್ಷದೊಳಗೆ ಉಂಟಾಗಿರುವ ಗೊಂದಲ ನಿವಾರಿಸಲು ಸದ್ಯದಲ್ಲೇ ಬಿಜೆಪಿಯ ಸಮನ್ವಯ ಸಮಿತಿ ಸಭೆ ನಡೆಯಲಿದೆ. ಪಕ್ಷದ ಪ್ರಮುಖ ನೀತಿ- ನಿರೂಪಣೆ, ಹಾಗೂ ತೀರ್ಮಾನವನ್ನು ತೆಗೆದುಕೊಳ್ಳುವ ಸಮನ್ವಯ ಸಮಿತಿ ಸಭೆಯಲ್ಲಿ ಪದೇ ಪದೇ ನಾಯಕತ್ವ ಬದಲಾವಣೆ ಕುರಿತು ಗೊಂದಲದ ಹೇಳಿಕೆ ನೀಡುತ್ತಿರುವವರ ಬಾಯಿಗೆ ಬೀಗ ಹಾಕುವ ಸಾಧ್ಯತೆ ಇದೆ.

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಹಲವು ನಾಯಕರ ಟೀಕೆ ಸೇರಿದಂತೆ ಕೆಲ ಬೆಳವಣಿಗೆಗಳ ನಂತರ 10 ದಿನಗಳ ಹಿಂದೆ ಸಮನ್ವಯ ಸಮಿತಿ ರಚಿಸಲು ಪಕ್ಷ ನಿರ್ಧರಿಸಿತು. ಸಮಿತಿಯಲ್ಲಿ ಹಿರಿಯ ನಾಯಕರುಗಳಾದ ಜಗದೀಶ್ ಶೆಟ್ಟರ್, ಸದಾನಂದಗೌಡ, ಪ್ರಹ್ಲಾದ್ ಜೋಶಿ, ಕೆಎಸ್ ಈಶ್ವರಪ್ಪ ಮತ್ತಿತರರು ಇರಲಿದ್ದಾರೆ.

ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ಲಾಕ್ ಡೌನ್ ನಂತರ ಸಮನ್ವಯ ಸಮಿತಿ ಸಭೆ ನಡೆಸಲು ತೀರ್ಮಾನಿಸಲಾಗಿದೆ. ಜೂನ್ 14 ರ ನಂತರ ಬಿಜೆಪಿ ಸಮನ್ವಯ ಸಮಿತಿ ಸಭೆ ಸೇರಲಿದ್ದು,ಸೋಮವಾರ ಲಾಕ್ ಡೌನ್ ತೆರವುಗೊಳಿಸಿದರೆ, ಮುಂದಿನ ದಿನಗಳಲ್ಲಿ ಬಿಜೆಪಿ ಸಮನ್ವಯ ಸಮಿತಿ ಸಭೆ ಸೇರಲಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ಸಿಎಂ ಅವರ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಅವರು ಪ್ರಸ್ತಾಪಿಸಿದ ಸಹಿ ಅಭಿಯಾನದಂತಹ ಸಮಸ್ಯೆಗಳನ್ನು ಬಗೆಹರಿಸುವ ಸಾಧ್ಯತೆಯಿದೆ. ಸಭೆ ಜೂನ್ 16 ಅಥವಾ 17 ರಂದು ನಡೆಯಬಹುದು ಎಂದು ಹೇಳಲಾಗಿದೆ.

ಸಮನ್ವಯ ಸಮಿತಿ ಸಭೆ ಸೇರಿದಾಗ ಅದು ಪಕ್ಷದೊಳಗಿನ ಗಂಭೀರ ಭಿನ್ನಾಭಿಪ್ರಾಯಗಳನ್ನು ನಿವಾರಿಸಿ ಸದ್ಯ ಎದ್ದಿರುವ ಸಮಸ್ಯೆಗಳನ್ನು ಬಗೆಹರಿಸುವ ಸಾಧ್ಯತೆ ಇದೆ ಪಕ್ಷದ ಪ್ರಮುಖರೊಬ್ಬರು ತಿಳಿಸಿದ್ದಾರೆ.

ಸಿಎಂ ಯಡಿಯೂರಪ್ಪ, ನಳಿನ್ ಕುಮಾರ್ ಕಟೀಲ್, ಪಕ್ಷದ ಪ್ರಧಾನ ಕಾರ್ಯದರ್ಶಿಗಳು ರವಿ ಕುಮಾರ್, ಎಂಎಲ್ ಸಿ ಅಶ್ವತ್ಥ ನಾರಾಯಣ್, ಸಿದ್ದರಾಜ್ ಮತ್ತು ಅರುಣ್ ಕುಮಾರ್, ಸಚಿವರುಗಳಾದ ಡಿ.ಸಿ.ಎಂ ಸಿ.ಎನ್.ಅಶ್ವತ್ಥ್ ನಾರಾಯಣ್, ಆರ್ ಅಶೋಕ ಮತ್ತು ಅರವಿಂದ ಲಿಂಬಾವಳಿ ಸಮನ್ವಯ ಸಮಿತಿಯ ಭಾಗವಾಗಲಿದ್ದಾರೆ, ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಜೊತೆಗೆ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಕೂಡ ಸಮಿತಿಯಲ್ಲಿರಲಿದ್ದಾರೆ.

ಪಕ್ಷವನ್ನು ಬಲಪಡಿಸಲು ಅಧಿಕೃತ ಪ್ರವಾಸದಲ್ಲಿರುವ ರವಿ ಅವರು ಬೆಂಗಳೂರಿನಲ್ಲಿದ್ದರೆ ಸಭೆಯಲ್ಲಿ ಪಾಲ್ಗೊಳ್ಳುವುದಾಗಿ ತಿಳಿಸಿದ್ದಾರೆ. ಪಕ್ಷದ ಕಾರ್ಯಚಟುವಟಿಕೆಯನ್ನು ಸುಗಮಗೊಳಿಸಲು ಸಮಿತಿಯನ್ನು ರಚಿಸುವಂತೆ ಕೇಂದ್ರ ನಾಯಕತ್ವವು ಪಕ್ಷಕ್ಕೆ ನಿರ್ದೇಶನ ನೀಡಿದೆ ಎಂದು ತಿಳಿದು ಬಂದಿದೆ.

# ಬಗೆಹರಿಯದ ಗೊಂದಲ :
ಪಕ್ಷದೊಳಗೆ ಏನೂ ನಡೆಯುತ್ತಿಲ್ಲ; ಯಡಿಯೂರಪ್ಪ ಬದಲಾವಣೆಯ ಪ್ರಶ್ನೆಯೇ ಇಲ್ಲ’ ಎಂದು ಬಿಜೆಪಿಯ ಎಲ್ಲ ನಾಯಕರು ಬಹಿರಂಗವಾಗಿ ಉದ್ಘೋಷ ಮಾಡುತ್ತಿದ್ದರೂ ಒಳಗಡೆ ಅಸಹನೆಯ ಕುದಿ ತಣ್ಣಗಾಗಿಲ್ಲ ಎಂಬುದಕ್ಕೆ ಈ ಹೊಸ ಬೆಳವಣಿಗೆ ಸಾಕ್ಷಿಯಾಗಿದೆ.

ನಾಯಕತ್ವ ಬದಲಾವಣೆ ಕುರಿತ ಹೇಳಿಕೆಗಳು ಮುಗಿಯಿತು ಎನ್ನುವಾಗಲೇ, ‘ಎಲ್ಲ ಶಾಸಕರ ಅಭಿಪ್ರಾಯ ಆಲಿಸಲು ಪ್ರತ್ಯೇಕ ಸಭೆ ನಡೆಸಬೇಕು’ ಎಂದು ಆಡಳಿತ ಪಕ್ಷದ ಮುಖ್ಯ ಸಚೇತಕ ವಿ. ಸುನಿಲ್‌ಕುಮಾರ್‌ ಒತ್ತಾಯಿಸುವ ಮೂಲಕ ಬಿಜೆಪಿ ಆಂತರಿಕ ಸಂಘರ್ಷಕ್ಕೆ ಹೊಸ ತಿರುವು ನೀಡಿದ್ದಾರೆ.

ಕಳೆದ 3 ದಿನದಿಂದ ಮಾಧ್ಯಮದಲ್ಲಿ ಬರುತ್ತಿರುವ ಹೇಳಿಕೆಗಳು ಪಕ್ಷದ ಹಿತದೃಷ್ಟಿಯಿಂದ ಒಳಿತಲ್ಲ. ಈ ಅಭಿಪ್ರಾಯಗಳು ಎಲ್ಲ ಶಾಸಕರು ಮತ್ತು ಕಾರ್ಯಕರ್ತರ ಅಭಿಪ್ರಾಯವೂ ಅಲ್ಲ. ನಮ್ಮ ಅಭಿಪ್ರಾಯಗಳನ್ನು ಮಾಧ್ಯಮದ ಮುಂದೆ ಹೇಳಲು ಸಾಧ್ಯವಿಲ್ಲವಾದ್ದರಿಂದ, ಪಕ್ಷದ ವರಿಷ್ಠರು ಅಭಿಪ್ರಾಯ ಆಲಿಸಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕು’ ಎಂದು ಅವರು ಅಧ್ಯಕ್ಷ ನಳಿನ್ ಕುಮಾರ್‌ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಅವರಿಗೆ ಟ್ವೀಟ್‌ ಟ್ಯಾಗ್‌ ಮಾಡಿದ್ದಾರೆ.

ಶಾಸಕಾಂಗ ಪಕ್ಷದ ಸಭೆಯನ್ನು ಕರೆಯಿರಿ ಎಂದು ಅವರು ನೇರವಾಗಿ ಹೇಳಿಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ನಾಯಕತ್ವದ ಬಗ್ಗೆಯೂ ಪ್ರಸ್ತಾಪಿಸದೇ, ಶಾಸಕರ ಅಭಿಪ್ರಾಯ ಹಂಚಿಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಬೇಕೆಂದು ಅವರು ಬೇಡಿಕೆ ಮಂಡಿಸಿರುವುದು ನಾನಾ ರೀತಿಯ ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.

ಕೆಲವೇ ತಿಂಗಳುಗಳ ಹಿಂದೆ ಸುನೀಲ್ ಕುಮಾರ್ ಪಕ್ಷದ ಮುಖಂಡರಿಗೆ ಸಭೆ ಕರೆಯಲು ಮತ್ತು ಸಮಸ್ಯೆಗಳನ್ನು ಚರ್ಚಿಸಲು ವೇದಿಕೆಗೆ ಅವಕಾಶ ನೀಡುವಂತೆ ಪತ್ರ ಬರೆದಿದ್ದರು. ಸರ್ಕಾರ ಮತ್ತು ರಾಜ್ಯ ಘಟಕದ ನಡುವಿನ ಸಮನ್ವಯದ ಕೊರತೆಯ ಬಗ್ಗೆ ಮತ್ತು ನಿಗಮ-ಮಂಡಳಿಗಳಿಗೆ ನೇಮಕಾತಿಗಳ ನಿರ್ಧಾರಗಳು ಪಕ್ಷದಲ್ಲಿ ಅನೇಕರನ್ನು ನಿರಾಶೆಗೊಳಿಸಿದ್ದರ ಬಗ್ಗೆ ಪತ್ರದಲ್ಲಿ ಉಲ್ಲೇಖಿಸಿದ್ದರು.

ಮುಖ್ಯಮಂತ್ರಿಯಾಗಿ ಮುಂದುವರಿಯಲು ಯಡಿಯೂರಪ್ಪ ಅವರನ್ನು ಬೆಂಬಲಿಸಿ ಸಹಿ ಅಭಿಯಾನವನ್ನು ಆಯೋಜಿಸುತ್ತಿರುವುದಾಗಿ ಸಿಎಂ ರಾಜಕೀಯ ಕಾರ್ಯದರ್ಶಿ ರೇಣುಕಾಚಾರ್ಯ ಹೇಳಿಕೊಂಡ ಒಂದು ದಿನದ ನಂತರ ಪ್ರತಿಕ್ರಿಯಿಸಿದ್ದ ಸುನೀಲ್ ಕುಮಾರ್, ಒಬ್ಬ ಶಾಸಕರ ಹೇಳಿಕೆಯು ಎಲ್ಲಾ ಶಾಸಕರ ನಿಲುವು ಎಂದು ಒಬ್ಬರು ಭಾವಿಸಬಾರದು ಎಂದಿದ್ದರು. ಯಾರಾದರೂ ಮಾಧ್ಯಮದಲ್ಲಿ ಹೇಳಿಕೆಗಳನ್ನು ನೀಡುತ್ತಿರುವುದರಿಂದ, ಇದು ಜನಪ್ರಿಯ ಅಭಿಪ್ರಾಯ ಎಂದು ಅರ್ಥವಲ್ಲ ಎಂದು ತಿವಿದಿದ್ದರು.

ಕೇಂದ್ರ ನಾಯಕತ್ವಕ್ಕೆ ತಿಳಿಸಬೇಕಾದ ಕಾಳಜಿ ನಮ್ಮಲ್ಲಿದೆ, ಎಂದು ವೇದಿಕೆಯ ಬೇಡಿಕೆಯನ್ನು ಬೆಂಬಲಿಸುವ ನಾಯಕರೊಬ್ಬರು ಹೇಳಿದ್ದಾರೆ. ಸರ್ಕಾರ, ಸಿಎಂ ಮತ್ತು ಅವರ ನಿರ್ಧಾರಗಳ ಬಗ್ಗೆ ವಿಮರ್ಶಿಸಲು ಅರುಣ್ ಸಿಂಗ್ ಕರ್ನಾಟಕದ ಭೇಟಿಗಾಗಿ ಕುತೂಹಲದಿಂದ ಕಾಯುತ್ತಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

Facebook Comments

Sri Raghav

Admin