ಬಿಜೆಪಿಯಲ್ಲಿ ಮತ್ತೆ ನಾಯಕತ್ವದ ಕೂಗು : ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾದ ವರಿಷ್ಟರು

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಸೆ.9-ಪಕ್ಷವನ್ನು ಯಾರು ಮುನ್ನಡೆಸಬೇಕು ಎಂಬುದರ ಬಗ್ಗೆ ಉಂಟಾಗಿರುವ ಅಸಮಾಧಾನವನ್ನು ಹೋಗಲಾಡಿಸಲು ಮುಂದಾಗಿರುವ ಕೇಂದ್ರ ಬಿಜೆಪಿ ವರಿಷ್ಠರು ಸಾಮೂಹಿಕ ನಾಯಕತ್ವಕ್ಕೆ ಮನ್ನಣೆ ನೀಡಲು ಮುನ್ನಡಿ ಇಟ್ಟಿದ್ದಾರೆ. 2023ರ ವಿಧಾನಸಭೆ ಚುನಾವಣೆಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲೇ ನಡೆಯಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದರು. ಇದು ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್ ಸೇರಿದಂತೆ ಮೂಲ ಬಿಜೆಪಿಗರ ಕಣ್ಣು ಕೆಂಪಾಗುವಂತೆ ಮಾಡಿತ್ತು.

ಇದೀಗ ಡ್ಯಾಮೇಜ್ ಕಂಟ್ರೋಲ್‍ಗೆ ಮುಂದಾಗಿರುವ ದೆಹಲಿ ವರಿಷ್ಟರು ಏಕವ್ಯಕ್ತಿ ನಾಯಕತ್ವಕ್ಕೆ ಬ್ರೇಕ್ ಹಾಕಲು ಪ್ರಕ್ರಿಯೆಯಲ್ಲಿ ನಿರತರಾಗಿದ್ದು, ಮೂವರು ಮಾಜಿ ಸಿಎಂಗಳು ಹಾಗೂ ರಾಜ್ಯಾಧ್ಯಕ್ಷರ ನೇತೃತ್ವದಲ್ಲಿ ಚುನಾವಣೆ ಎದುರಿಸಲಾಗುವುದು ಹಾಗೂ ಪಕ್ಷ ಸಂಘಟನೆಗೆ ಒತ್ತು ನೀಡಲಾಗುವುದು ಎಂದಿದ್ದಾರೆ.

ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ, ಜಗದೀಶ್‍ಶೆಟ್ಟರ್, ಡಿ.ವಿ.ಸದಾನಂದಗೌಡ, ಹಾಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಾಧ್ಯಕ್ಷ ನಳೀನ್‍ಕುಮಾರ್ ಕಟೀಲ್ ಮುಂದಾಳತ್ವದಲ್ಲೇ ಪಕ್ಷ ಸಂಘಟನೆ ಹಾಗೂ ರಾಜ್ಯ ಪ್ರವಾಸ ನಡೆಯಲಿದೆ. ಯಾರೇ ಪ್ರವಾಸ ಕೈಗೊಂಡರೂ ಪಕ್ಷದ ಚಿಹ್ನೆಯಡಿ ಕೈಗೊಳ್ಳಬೇಕು. ಸಂಘಟನೆಯೂ ಸಹ ಪಕ್ಷದ ಹೆಸರಿನಲ್ಲೇ ನಡೆಯಬೇಕು. ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳಿಗೆ ಭೇಟಿ ಕೊಟ್ಟಾಗ ಪಕ್ಷದ ಕಚೇರಿಗಳಲ್ಲೇ ಕಾರ್ಯಕರ್ತರನ್ನು ಭೇಟಿಯಾಗಿ ಅಲ್ಲಿಯೇ ಪತ್ರಿಕಾಗೋಷ್ಠಿ ನಡೆಸಬೇಕೆಂದು ಹೈಕಮಾಂಡ್ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಸದ್ಯದಲ್ಲೇ ಹಾನಗಲ್, ಸಿಂಧಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ, ನಂತರ ಜಿಪಂ ಹಾಗೂ ತಾಪಂ ಚುನಾವಣೆ ಸೇರಿದಂತೆ ಸಾಲು ಸಾಲು ಸ್ಥಳೀಯ ಸಂಸ್ಥೆ ಚುನಾವಣೆಗಳು ಎದುರಾಗಲಿವೆ. ಇವೆಲ್ಲವನ್ನು ಗಮನದಲ್ಲಿಟ್ಟುಕೊಂಡಿರುವ ವರಿಷ್ಠರು ಏಕವ್ಯಕ್ತಿ ಪ್ರದರ್ಶನ ಬಿಜೆಪಿಯಲ್ಲಿ ನಡೆಯುವುದಿಲ್ಲ ಎಂಬ ಸಂದೇಶವನ್ನು ರವಾನಿಸಿದ್ದಾರೆ.

ಗಣಪತಿ ಹಬ್ಬದ ನಂತರ ಮಾಜಿ ಸಿಎಂ ಯಡಿಯೂರಪ್ಪ ರಾಜ್ಯ ಪ್ರವಾಸಕ್ಕೆ ಹೊರಡಲು ಸಿದ್ಧತೆ ನಡೆಸಿದ್ದರು. ಇದಕ್ಕಾಗಿ ಒಂದು ಕೋಟಿ ಬೆಲೆ ಬಾಳುವ ಅತ್ಯಾಧುನಿಕ ಸೌಲಭ್ಯವುಳ್ಳ ಕಾರನ್ನು ಖರೀದಿ ಮಾಡಿದ್ದರು. ಈಗ ಸಾಮೂಹಿಕ ನಾಯಕತ್ವಕ್ಕೆ ಒತ್ತು ಕೊಟ್ಟಿರುವುದರಿಂದ ಪಕ್ಷದಲ್ಲಿ ಎದುರಾಗಿದ್ದ ಸಣ್ಣಪುಟ್ಟ ಗೊಂದಲಗಳು ಬಗೆಹರಿಯುವ ಸಾಧ್ಯತೆ ಇದೆ.

ಪ್ರತಿಯೊಬ್ಬರೂ ಪಕ್ಷ ಸಂಘಟನೆಗೆ ಗಮನ ಹರಿಸಬೇಕೆಂದು ವರಿಷ್ಠರು ಸೂಚಿಸಿರುವುದರಿಂದ ಯಾವುದೇ ಅಪಸ್ವರ ಇಲ್ಲದಂತೆ ಸಾಮೂಹಿಕ ನಾಯಕತ್ವದಡಿ ಬಿಜೆಪಿ ಸಂಘಟನೆಯಲ್ಲಿ ತೊಡಗಿಸಿಕೊಳ್ಳುವ ಸಾಧ್ಯತೆ ಇದೆ. ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿ ಹಾಗೂ ನಳೀನ್‍ಕುಮಾರ್ ಕಟೀಲ್ ಅವರು ರಾಜ್ಯಾಧ್ಯಕ್ಷರಾಗಿರುವುದರಿಂದ ಇವರಿಬ್ಬರಿಗೂ ಹೆಚ್ಚಿನ ಆದ್ಯತೆ ಸಿಗುವ ಸಂಭವವಿದೆ.

Facebook Comments