ಆರ್‌ಎಸ್‌ಎಸ್ ನಾಯಕರೊಂದಿಗೆ ಬಿಜೆಪಿ ಮುಖಂಡರ ಸಭೆ

ಈ ಸುದ್ದಿಯನ್ನು ಶೇರ್ ಮಾಡಿ

RSS-01

ಬೆಂಗಳೂರು, ಜೂ.22- ರಾಜ್ಯ ಬಿಜೆಪಿ ನಾಯಕರು ಇಂದು ಆರ್‍ಎಸ್‍ಎಸ್ ನಾಯಕರೊಂದಿಗೆ ಮಹತ್ವದ ಮಾತುಕತೆ ನಡೆಸಿದರು. ಚಾಮರಾಜಪೇಟೆಯ ಆರ್‍ಎಸ್‍ಎಸ್ ಕಚೇರಿ ಕೇಶವಕೃಪಾದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಅನಂತ್‍ಕುಮಾರ್, ಹಿರಿಯ ಮುಖಂಡ ಕೆ.ಎಸ್.ಈಶ್ವರಪ್ಪ ಸೇರಿದಂತೆ ಇನ್ನೂ ಕೆಲವು ನಾಯಕರು ಆರ್‍ಎಸ್‍ಎಸ್‍ನ ನಾಯಕರೊಂದಿಗೆ ಚರ್ಚೆ ನಡೆಸಿದರು.  ಇತ್ತೀಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಪಕ್ಷಕ್ಕೆ ಆದ ಹಿನ್ನಡೆ, ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಪಕ್ಷದ ಗೆಲುವಿಗಾಗಿ ಕೈಗೊಳ್ಳಬೇಕಾದ ಕಾರ್ಯತಂತ್ರಗಳು, ಹಿಂದಿನ ಚುನಾವಣೆಯಲ್ಲಿ ಸ್ಪಷ್ಟ ಜನಾದೇಶ ದೊರೆಯದಿರಲು ಕಾರಣ ಸೇರಿದಂತೆ ಇನ್ನಿತರೆ ವಿಷಯಗಳ ಅವಲೋಕನ ನಡೆಸಲಾಯಿತು.

ಇದೇ ಅಲ್ಲದೆ ರಾಜ್ಯದ ಕೆಲವು ಕಡೆ ಬಿಜೆಪಿ ಪ್ರಬಲವಾಗಿದ್ದರೂ ಪ್ರಯೋಜನವಾಗದ ಪರಿಸ್ಥಿತಿ ನಿರ್ಮಾಣಕ್ಕೆ ಕಾರಣವೇನು? ಬೆಂಗಳೂರು ಸೇರಿದಂತೆ ಬೆಳಗಾವಿ, ಬಳ್ಳಾರಿ, ಬೀದರ್, ವಿಜಯಪುರ ಮತ್ತಿತರ ಕಡೆಗಳಲ್ಲಿ ಪಕ್ಷ ಸಾಕಷ್ಟು ಹಿನ್ನಡೆ ಸಾಧಿಸಿತ್ತು. ಎಲ್ಲಾ ರೀತಿಯ ಕಾರ್ಯತಂತ್ರಗಳನ್ನು ಅನುಷ್ಠಾನಗೊಳಿಸಿದ್ದರೂ ಹೈದರಾಬಾದ್ ಕರ್ನಾಟಕ ಸೇರಿದಂತೆ ಕೆಲವೆಡೆ ನಿರೀಕ್ಷಿತ ಫಲಿತಾಂಶ ದೊರೆಯದಿರಲು ಯಾವ ಲೋಪವಾಗಿದೆ ಎಂಬುದರ ಬಗ್ಗೆ ಸಲಹೆ, ಸೂಚನೆಗಳನ್ನು ಪಡೆಯಲಾಯಿತು.

ಕರಾವಳಿ, ಮಧ್ಯಕರ್ನಾಟಕಗಳಲ್ಲಿ ಬಿಜೆಪಿಯ ರಣತಂತ್ರದಿಂದಾಗಿ ಸಾಕಷ್ಟು ಪರಿಣಾಮ ಬೀರಿದ್ದರೂ ಗುರಿ ತಲುಪಲು ಸಾಧ್ಯವಾಗಲಿಲ್ಲ. ಇದರ ಹಿಂದಿನ ಮೂಲ ಕಾರಣವೇನು? ಮುಂದಿನ ಚುನಾವಣೆಗಳಲ್ಲಿ ಇಂತಹ ಯಾವುದೇ ಕಾರಣಗಳು ಪಕ್ಷದ ಬೆಳವಣಿಗೆಗೆ ಮಾರಕವಾಗಬಾರದು ಎಂಬ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗುವ ಬಗ್ಗೆಯೂ ಚಿಂತನೆ ನಡೆಸಲಾಯಿತು.

ಲೋಕಸಭೆ ಚುನಾವಣೆಯಲ್ಲಿ ದೋಸ್ತಿ ಸರ್ಕಾರವನ್ನು ಎದುರಿಸುವ ಕಾರ್ಯತಂತ್ರ, ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳ ಮೈತ್ರಿ ಬಿಜೆಪಿಗೆ ಲಾಭವಾಗಲಿದೆಯೋ ಅಥವಾ ನಷ್ಟವಾಗಲಿದೆಯೋ ಎಂಬೆಲ್ಲ ವಿಚಾರಗಳ ಕೂಲಂಕಷ ವಿಷಯಗಳನ್ನು ಪರಿಶೀಲಿಸಿ ಸ್ಪರ್ಧೆ ಮಾಡುವ ಬಗ್ಗೆಯೂ ನಾಯಕರು ಮಾತುಕತೆ ನಡೆಸಿದರು. ಪ್ರಸ್ತುತ ಇರುವ ಅಭ್ಯರ್ಥಿಗಳ ಸಾಮಥ್ರ್ಯ ಸೇರಿದಂತೆ ಎಲ್ಲೆಲ್ಲಿ ಸಂಘಟನೆಯ ಅವಶ್ಯಕತೆ ಇದೆ, ಎಲ್ಲೆಲ್ಲಿ ಪಕ್ಷವನ್ನು ಬಲಪಡಿಸಬೇಕಿದೆ ಎಂಬೆಲ್ಲ ವಿಚಾರವಾಗಿ ಸುದೀರ್ಘ ಸಭೆ ನಡೆಸಲಾಯಿತು.

Facebook Comments

Sri Raghav

Admin