ಬ್ರೇಕಿಂಗ್ : 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಮಹೂರ್ತ ಫಿಕ್ಸ್..! ಇಲ್ಲಿದೆ ಫುಲ್ ಡೀಟೇಲ್ಸ್

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಸೆ.21- ಕಾಂಗ್ರೆಸ್-ಜೆಡಿಎಸ್‍ನಿಂದ ಅನರ್ಹಗೊಂಡಿರುವ ಶಾಸಕರ ಕ್ಷೇತ್ರಗಳಿಗೆ ಕೇಂದ್ರ ಚುನಾವಣಾ ಆಯೋಗವು ಮುಹೂರ್ತ ನಿಗದಿಮಾಡಿದ್ದು, ಅ.21ರಂದು 15 ಕ್ಷೇತ್ರಗಳಿಗೆ ಉಪಚುನಾವಣೆ ನಡೆದು ಅ.24ಕ್ಕೆ ಫಲಿತಾಂಶ ಪ್ರಕಟಗೊಳ್ಳಲಿದೆ.  ಬೆಂಗಳೂರಿನ ರಾಜರಾಜೇಶ್ವರಿ ನಗರ ಹಾಗೂ ರಾಜಯಚೂರು ಜಿಲ್ಲೆಯ ಮಸ್ಕಿವಿಧಾನಸಭಾ ಕ್ಷೇತ್ರಗಳಿಗೆ ನ್ಯಾಯಾಲಯದ ತಡೆಯಾಜ್ಞೆ ಇರುವ ಹಿನ್ನೆಲೆಯಲ್ಲಿ ಆಯೋಗ ದಿನಾಂಕವನ್ನು ಘೋಷಣೆ ಮಾಡಿಲ್ಲ.

ವಿಶೇಷವೆಂದರೆ ಅನರ್ಹಗೊಂಡಿರುವ ಶಾಸಕರ ಮುಂದುವರೆದ ಅರ್ಜಿ ವಿಚಾರಣೆ ಸೋಮವಾರ ಸುಪ್ರೀಂಕೋರ್ಟ್‍ನಲ್ಲಿ ನಡೆಯಲಿದೆ. ಈ ಬೆಳವಣಿಗೆಗಳ ನಡುವೆಯೇಕೇಂದ್ರ ಚುನಾವಣಾ ಆಯೋಗದ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆಯನ್ನು ಘೋಷಣೆ ಮಾಡಿರುವುದು ಅತಿ ಮಹತ್ವ ಎನಿಸಿದೆ.

ಒಂದು ವೇಳೆ ಹಿಂದಿನ ವಿಧಾನಸಭೆ ಸ್ಪೀಕರ್ ಅವರ ಆದೇಶಕ್ಕೆ ಸೋಮವಾರ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದರೆ ಮಾತ್ರ ಅನರ್ಹಗೊಂಡಿರುವ ಶಾಸಕರು ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹತೆ ಪಡೆಯುತ್ತಾರೆ. ಇಲ್ಲದಿದ್ದರೆ ಅವರುಗಳ ರಾಜಕೀಯ ಭವಿಷ್ಯ ಅತಂತ್ರವಾಗಲಿದೆ.  ನವದೆಹಲಿಯಲ್ಲಿಂದು ಮಹಾರಾಷ್ಟ್ರ ಮತ್ತು ಹರಿಯಾಣ ರಾಜ್ಯದ ವಿಧಾನಸಭಾ ಕ್ಷೇತ್ರಗಳ ಚುನಾವಣೆ ದಿನಾಂಕವನ್ನು ಘೋಷಣೆ ಮಾಡಿದ ಕೇಂದ್ರಮುಖ್ಯ ಚುನಾವಣಾ ಆಯುಕ್ತ ಸುನಿಲ್ ಅರೋರಾ, ಕರ್ನಾಟಕದ 17 ವಿಧಾನಸಭಾ ಕ್ಷೇತ್ರಗಳಲ್ಲಿ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ದಿನಾಂಕವನ್ನು ಪ್ರಕಟಿಸಿದರು.

ಒಂದೇ ಹಂತದಲ್ಲಿ 15 ಕ್ಷೇತ್ರಗಳಿಗೂ ಮತದಾನ ನಡೆಯಲಿದ್ದು, ಇಂದಿನಿಂದಲೇ ನೀತಿ ಸಂಹಿತೆ ಜಾರಿಯಾಗಿದೆ. ಸೆ.23ರಂದು ಅಧಿಸೂಚನೆ ಹೊರಡಲಿದ್ದು, ಸೆ.30ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ. ಸೆ.30 ನಾಮಪತ್ರ ಸಲ್ಲಿಸಲು ಕೊನೆಯ ದಿನವಾಗಿದೆ.  ಅಕ್ಟೋಬರ್ 1ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದ್ದು, ಅ.3 ನಾಮಪತ್ರಹಿಂಪಡೆಯಲು ಕೊನೆಯ ದಿನವಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ದೋಸ್ತಿ ಸರ್ಕಾರ ಅಸ್ತಿತ್ವದಲ್ಲಿದ್ದ ವೇಳೆ ಅಂದಿನ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ದ ಬಂಡೆದ್ದು 17 ಶಾಸಕರು ರಾಜೀನಾಮೆ ನೀಡಿದ್ದರು.
ಶಾಸಕರು ಪಕ್ಷದ ನಿಯಮಗಳನ್ನು ಉಲ್ಲಂಘನೆ ಮಾಡಿರುವ ಹಿನ್ನೆಲೆಯಲ್ಲಿ ಪಕ್ಷಾಂತರ ನಿಷೇಧ ಕಾಯ್ದೆ ಪ್ರಕಾರ ಇವರ ಸದಸ್ಯತ್ವವನ್ನು ಅನರ್ಹಗೊಳಿಸಬೇಕೆಂದು ಕಾಂಗ್ರೆಸ್-ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿ ಅವರುಗಳು ಸ್ಪೀಕರ್ ರಮೇಶ್‍ಕುಮಾರ್ ಅವರಿಗೆ ಮನವಿ ಸಲ್ಲಿಸಿದ್ದರು.

ವಾದವಿವಾದ ಆಲಿಸಿದ್ದ ರಮೇಶ್‍ಕುಮಾರ್ ಅಂತಿಮವಾಗಿ ಎಲ್ಲ 17 ಮಂದಿ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸಿ ಐತಿಹಾಸಿಕ ತೀರ್ಪು ನೀಡಿದ್ದರು.  ಅನರ್ಹಗೊಂಡಿರುವವರು ಈ ವಿಧಾನಸಭೆ ಚುನಾವಣೆ ಅವಧಿ ಮುಗಿಯುವವರೆಗೂ ಸಂವಿಧಾನಬದ್ದ ಯಾವುದೇ ಹುದ್ದೆಗಳನ್ನು ಅಲಂಕರಿಸಲು ಅರ್ಹರಲ್ಲ ಎಂದು ತೀರ್ಪು ನೀಡಿದ್ದರು.

ಇದೀಗ ಸ್ಪೀಕರ್ ಅವರ ಆದೇಶವನ್ನು ಪ್ರಶ್ನಿಸಿ 17 ಮಂದಿ ಅನರ್ಹಗೊಂಡಿರುವವರು ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆಯನ್ನು ತುರ್ತಾಗಿ ನಡೆಸಬೇಕೆಂದು ಮನವಿ ಮಾಡಿದ್ದರೂ ನ್ಯಾಯಾಲಯ ಮನ್ನಣೆ ಮಾಡಿರಲಿಲ್ಲ.

ಕಳೆದ ಮಂಗಳವಾರವಷ್ಟೇ ಸುಪ್ರೀಂಕೋರ್ಟ್‍ನಲ್ಲಿ ವಿಚಾರಣೆ ಕೈಗೆತ್ತಿಕೊಂಡಿದ್ದು, ಪುನಃ ಸೋಮವಾರಕ್ಕೆ ಮುಂದೂಡಿದೆ. ಇದೀಗ ನ್ಯಾಯಾಲಯ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿಯಲಿದೆಯೋ ಇಲ್ಲವೇ ಅನೂರ್ಜಿತಗೊಳಿಸಲಿದೆಯೇ ಎಂಬುದರ ಮೇಲೆ ಅನರ್ಹರ ರಾಜಕೀಯ ಭವಿಷ್ಯ ತೀರ್ಮಾನವಾಗಲಿದೆ.

# ಚುನಾವಣೆ ನಡೆಯುವ ಕ್ಷೇತ್ರಗಳು:  1. ಯಶವಂತಪುರ,  2. ಮಹಾಲಕ್ಷ್ಮಿ ಲೇಔಟ್, 3. ಕೆ.ಆರ್.ಪುರಂ,  4. ಶಿವಾಜಿನಗರ, 5. ಹೊಸಕೋಟೆ,  6. ಚಿಕ್ಕಬಳ್ಳಾಪುರ, 7. ಹುಣಸೂರು,  8. ಕೆ.ಆರ್.ಪೇಟೆ, 9. ಹಿರೇಕೆರೂರು,  10. ರಾಣಿಬೆನ್ನೂರು,  11. ಅಥಣಿ,  12. ಗೋಕಾಕ್,  13. ಕಾಗವಾಡ, 14. ವಿಜಯನಗರ,  15. ಯಲ್ಲಾಪುರ

# ಅಧಿಸೂಚನೆ: ಸೆ.23
ನಾಮಪತ್ರ ಸಲ್ಲಿಕೆ ಪ್ರಾರಂಭ- ಸೆ.23
ನಾಮಪತ್ರ ಸಲ್ಲಿಸಲು ಕೊನೆ ದಿನ -ಸೆ.30
ನಾಮಪತ್ರಗಳ ಪರಿಶೀಲನೆ- ಅ.1
ನಾಮಪತ್ರ ಹಿಂಪಡೆಯಲು ಕೊನೆಯ ದಿನ- ಅ.3
ಮತದಾನ -ಅ.21
ಮತ ಎಣಿಕೆ-ಅ.24

# ಚುನಾವಣೆ ನಡೆಯದ ಕ್ಷೇತ್ರಗಳು : 1. ರಾಜರಾಜೇಶ್ವರಿ ನಗರ,  2. ಮಸ್ಕಿ

# ಅನರ್ಹಗೊಂಡವರು : 1. ಪ್ರತಾಪ್‍ಗೌಡ ಪಾಟೀಲ್,  2. ಬಿ.ಸಿ.ಪಾಟೀಲ್,  3. ಅರೆಬೈಲು ಶಿವರಾಮ್‍ಹೆಬ್ಬಾರ್,  4. ಎಸ್.ಟಿ.ಸೋಮೇಶಕರ್,  5. ಭೈರತಿಬಸವರಾಜ್,  6. ಆನಂದ್ ಸಿಂಗ್
7. ಆರ್.ರೋಷನ್ ಬೇಗ್,  8. ಮುನಿರತ್ನ,  9.ಡಾ.ಕೆ.ಸುಧಾಕರ್,  10. ಎಂ.ಟಿ.ನಾಗರಾಜ್,  11 .ಶ್ರೀಮಂತಬಾಳ ಸಾಹೇಬ ಪಾಟೀಲ್,  12. ಎಚ್.ವಿಶ್ವನಾಥ್,  13. ನಾರಾಯಣಗೌಡ
14. ಕೆ.ಗೋಪಾಲಯ್ಯ,  15. ರಮೇಶ್ ಜಾರಕಿಹೊಳಿ,  16. ಕೆ.ಗೋಪಾಲಯ್ಯ,  17. ಆರ್.ಶಂಕರ್

 

Facebook Comments

Sri Raghav

Admin