ಬಿಜೆಪಿಗೆ ಬಹುಪರಾಕ್ ಎಂದ ಚುನಾವಣೋತ್ತರ ಸಮೀಕ್ಷೆಗಳು ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು : ಭಾರೀ ಹಣಾಹಣಿಯಿಂದ ಕೂಡಿದ್ದ ರಾಜ್ಯದ 15 ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಆಡಳಿತಾರೂಢ ಬಿಜೆಪಿ ಸ್ಪಷ್ಟ ಜನಾದೇಶ ಪಡೆಯಲಿದೆ ಎಂದು ಚುನಾವಣೋತ್ತರ ಸಮೀಕ್ಷೆಗಳಿಂದ ಬಹಿರಂಗಗೊಂಡಿದೆ.

ಮತಗಟ್ಟೆ ಸಮೀಕ್ಷೆ ಪ್ರಕಾರ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸೇಫ್‌ ಆಗಲಿದೆ. ಗುರುವಾರ ಮತದಾನ ನಡೆದ ಬಳಿಕ ವಿವಿಧ ಖಾಸಗಿ ಸುದ್ದಿ ಸಂಸ್ಥೆಗಳು ನಡೆಸಿರುವ ಸಮೀಕ್ಷೆ ಪ್ರಕಾರ ಬಿಜೆಪಿ 9-12 ರಿಂದ ಕ್ಷೇತ್ರಗಳನ್ನು ಗೆದ್ದು ಬಹುಮತ ಪಡೆಯಲಿದೆ ಎಂದು ಸಮೀಕ್ಷೆಯಲ್ಲಿ ತಿಳಿದು ಬಂದಿದೆ.

ಕಾಂಗ್ರೆಸ್- 3-6 , ಜೆಡಿಎಸ್ 1-2 ಸ್ಥಾನಗಳಲ್ಲಿ ಗೆಲ್ಲಲಿದೆ. ಐದು ಖಾಸಗಿ ಸುದ್ದಿ ವಾಹಿನಿಗಳು ನಡೆಸಿರುವ ಸಮೀಕ್ಷೆ ಪ್ರಕಾರ ಬಹುತೇಕ ಸಮೀಕ್ಷೆಗಳಲ್ಲಿ ಬಿಜೆಪಿ ಹೆಚ್ಚಿನ ಸ್ಥಾನ ಪಡೆಯಲಿದೆ ಎಂದು ಗೊತ್ತಾಗಿದೆ. ಮತದಾನ ನಡೆದ ರಾಜ್ಯದ 15 ಕ್ಷೇತ್ರಗಳಲ್ಲಿ ನಡೆಸಿರುವ ಸಮೀಕ್ಷೆ  ಪ್ರಕಾರ, ಅನರ್ಹತೆ ಚರ್ಚೆಯ ವಿಷಯವಾಗಿಲ್ಲ.

ಸರಕಾರದ ಅಸ್ತಿತ್ವದ ದೃಷ್ಟಿಯಿಂದ ತೀರಾ ಮಹತ್ವದ್ದಾಗಿದ್ದ ಈ ಉಪ ಸಮರದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಜಯಶಾಲಿಯಾಗಲಿದ್ದು, ಬಹುಮತಕ್ಕೆ ಅಗತ್ಯ ಸಂಖ್ಯೆ ಸ್ಥಾನಗಳನ್ನು ಗೆದ್ದು ತಮ್ಮ ಸ್ಥಾನ ಉಳಿಸಿಕೊಳ್ಳಲಿದ್ದಾರೆ ಎನ್ನುತ್ತಿವೆ ಮತಗಟ್ಟೆ ಸಮೀಕ್ಷೆಗಳು.

ಹಿರೇಕೆರೂರು ಕ್ಷೇತ್ರದಲ್ಲಿ ಬಿಸಿ ಪಾಟೀಲ್‌ಗೆ ಸ್ಪಷ್ಟ ಮುನ್ನಡೆ ದೊರೆಯುವ ನಿರೀಕ್ಷೆ ಇದೆ. ಬಿಜೆಪಿಯ ಬಿಸಿ ಪಾಟೀಲ್‌ಗೆ ಕಾಂಗ್ರೆಸ್‌ನ ಬಿಎಚ್‌ ಬನ್ನಿಕೋಡ್‌ಗಿಂತ ಹೆಚ್ಚು ಮತ ಬೀಳುವ ನಿರೀಕ್ಷೆ ಇದೆ.  ಯಶವಂತಪುರದಲ್ಲಿ ಎಸ್‌ಟಿ ಸೋಮಶೇಖರ್‌ಗೆ ಮತದಾರ ಕೈ ಹಿಡಿಯಲಿದ್ದಾನೆ ಎಂದು ಸಮೀಕ್ಷೆ ವರದಿ ತಿಳಿಸಿದೆ.

ಯಲ್ಲಾಪುರದಲ್ಲಿ ಬಿಜೆಪಿಯ ಶಿವರಾಮ್‌ ಹೆಬ್ಬಾರ್ ಅಬ್ಬರಿಸಲಿದ್ದಾರೆ. ಭೀಮಣ್ಣ ನಾಯ್ಕ್‌ ವಿರುದ್ಧ ಶಿವರಾಮ್‌ ಹೆಬ್ಬಾರ್‌ ಮುನ್ನಡೆ ಪಡೆಯಲಿದ್ದಾರೆ. ಮಹಾಲಕ್ಷ್ಮಿ ಲೇಔಟ್‌ನಲ್ಲಿ ಗೋಪಾಲಯ್ಯ ಅವರಿಗೆ ಆಂಜನೇಯ, ಮಹಾಲಕ್ಷ್ಮಿ ಹಾಗೂ ಮತದಾರನ ಆಶೀರ್ವಾದ ದೊರೆಯಲಿದೆ. ಕಾಂಗ್ರೆಸ್‌ನ ಎಂ. ಶಿವರಾಜ್‌ ವಿರುದ್ಧ ಗೋಪಾಲಯ್ಯ ಮೇಲುಗೈ ಸಾಧಿಸಲಿದ್ದಾರೆ ಎನ್ನಲಾಗಿದೆ.

ಕೆಆರ್‌ ಪುರಂ ಕ್ಷೇತ್ರದಲ್ಲಿ ಬೈರತಿ ಬಸವರಾಜ್‌ ಮತ್ತೆ ಕಿಂಗ್‌ ಆಗಲಿದ್ದಾರೆ. ಕಾಂಗ್ರೆಸ್‌ನ ನಾರಾಯಣಸ್ವಾಮಿಗೆ ಹಿನ್ನಡೆ ಉಂಟಾಗಲಿದೆ ಎಂದು ಸಮೀಕ್ಷೆಯಲ್ಲಿ ತಿಳಿಸಲಾಗಿದೆ. ಕೆಆರ್‌ ಪುರಂನಲ್ಲಿ ಕಮಲ ಅರಳಲಿದೆ. ಗೋಕಾಕದಲ್ಲಿ ಮತ್ತೆ ರಮೇಶ್‌ ಜಾರಕಿಹೊಳಿ ‘ಸಾಹುಕಾರ’ ಆಗಲಿದ್ದಾರೆ. ಸಹೋದರ, ಕಾಂಗ್ರೆಸ್‌ ಅಭ್ಯರ್ಥಿ ಲಖನ್‌ಗಿಂತಲೂ ರಮೇಶ್‌ ಜಾರಕಿಹೊಳಿ ಪರವಾಗಿ ಮತದಾರ ಒಲವು ತೋರಿದ್ದಾರೆ ಎಂದು ಹೇಳಲಾಗಿದೆ.

ಅಥಣಿಯಲ್ಲಿ ಮತ್ತೆ ಮತದಾರ ಮನಸ್ಸು ಗೆಲ್ಲುವಲ್ಲಿ ಮಹೇಶ್ ಕುಮಟಳ್ಳಿ ಯಶಸ್ವಿಯಾಗಲಿದೆ ಎಂದು ಸಿವೋಟರ್‌ ಸಮೀಕ್ಷೆ ತಿಳಿಸಿದೆ. ಕಾಂಗ್ರೆಸ್‌ನ ಗಜಾನನ ಮಂಗಸೂಳಿಗೆ ಹಿನ್ನಡೆಯಾಗಲಿದೆ. ವಿಜಯನಗರದಲ್ಲಿ ಆನಂದ್‌ ಸಿಂಗ್‌ಗೆ ಗೆಲುವಿನ ಆನಂದ ಬೀರಲಿದ್ದಾರೆ. ಮತದಾರ ಆನಂದ್‌ ಪರವಾಗಿ ಜೈ ಎನ್ನುವ ಸಾಧ್ಯತೆಯೇ ಹೆಚ್ಚಾಗಿದೆ. ವೆಂಕಟರಾವ್‌ ಘೋರ್ಷಡೆ ಹಿನ್ನಡೆ ಅನುಭವಿಸಲಿದ್ದಾರೆ ಎಂದು ಸಮೀಕ್ಷಾ ವರದಿಗಳು ತಿಳಿಸಿವೆ.

ಕಾಗವಾಡದಲ್ಲಿ ಕಾಂಗ್ರೆಸ್‌ಗೆ ಮುನ್ನಡೆಯಾಗಲಿದೆ. ಚುನಾವಣೆ ಸಮಯದಲ್ಲಿ ಕಾಂಗ್ರೆಸ್‌ ಸೇರಿದ ರಾಜು ಕಾಗೆಗೆ ಮತದಾರ ಒಲವು ತೋರಲಿದ್ದಾನೆ ಎಂದು ತಿಳಿದುಬಂದಿದೆ. ಬಿಜೆಪಿಯ ಶ್ರೀಮಂತ ಪಾಟೀಲ್‌ಗೆ ಹಿನ್ನಡೆಯಾಗಲಿದೆ.  ಹೊಸಕೋಟೆಯಲ್ಲಿ ಎಂಟಿಬಿ ನಾಗರಾಜ್‌ ಮತ್ತೆ ತಮ್ಮ ದರ್ಬಾರು ಮುಂದುವರಿಸಲಿದ್ದಾರೆ.

ಪಕ್ಷೇತರ ಅಭ್ಯರ್ಥಿ ಶರತ್‌ ಬಚ್ಚೇಗೌಡಗಿಂತ ಭಾರಿ ಮುನ್ನಡೆ ಪಡೆಯಲಿದ್ದಾರೆ ಎಂಟಿಬಿ ನಾಗರಾಜ್‌. ಕಾಂಗ್ರೆಸ್‌ನ ಪದ್ಮಾವತಿ ಸುರೇಶ್‌ಗಿಂತಲೂ ಶರತ್‌ ಹಿನ್ನಡೆ ಅನುಭವಿಸಲಿದ್ದಾರೆ.  ಕೆಆರ್‌. ಪೇಟೆಯಲ್ಲಿ ಸಮಬಲದ ಹೋರಾಟ ಕಂಡುಬರಲಿದೆ. ಬಿಜೆಪಿಯ ನಾರಾಯಣ ಗೌಡ ಹಾಗೂ ಜೆಡಿಎಸ್‌ನ ಬಿಎಲ್‌ ದೇವರಾಜ್‌ ನಡುವೆ ಜಿದ್ದಾಜಿದ್ದಿ ಹೋರಾಟ ಇರಲಿದೆ ಎನ್ನಲಾಗಿದೆ.

ಚಿಕ್ಕಬಳ್ಳಾಪುರದಲ್ಲಿಯೂ ನೆಕ್‌ ಟು ನೆಕ್‌ ಫೈಟ್‌ ಇರಲಿದೆ. ಬಿಜೆಪಿಯ ಡಾ. ಕೆ ಸುಧಾಕರ್‌ ಮತ್ತು ಕಾಂಗ್ರೆಸ್‌ನ ಎಂ ಆಂಜಿನಪ್ಪ ನಡುವೆ ಭಾರಿ ಪೈಪೋಟಿ ಇರಲಿದೆ. ಶಿವಾಜಿನಗರ ವಿಧಾನಸಭಾ ಕ್ಷೇತ್ರದಲ್ಲಿಯೂ ಫಲಿತಾಂಶ ಕುತೂಹಲ ಕೆರಳಿಸಲಿದೆ. ಕಾಂಗ್ರೆಸ್‌ ರಿಜ್ವಾನ್‌ ಅರ್ಷದ್‌ ಮತ್ತು ಬಿಜೆಪಿಯ ಎಂ ಸರವಣ ನಡುವೆ ದಂಗಲ್‌ ಏರ್ಪಡಲಿದೆ.

ರಾಣೆಬೆನ್ನೂರು ಕ್ಷೇತ್ರದಲ್ಲಿಯೂ ಸಮಬಲದ ಹೋರಾಟ ಇದೆ. ಕಾಂಗ್ರೆಸ್‌ನ ಕೆಬಿ ಕೋಳಿವಾಡ, ಬಿಜೆಪಿಯ ಅರುಣ್‌ ಕುಮಾರ್‌ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಡೆದಿದೆ. ಹುಣಸೂರು ಕ್ಷೇತ್ರದಲ್ಲಿ ಕಾಂಗ್ರೆಸ್‌ ಮುನ್ನಡೆ ಪಡೆಯುವ ಸಾಧ್ಯತೆ ಇದೆ. ಹಳ್ಳಿಹಕ್ಕಿ ಎಚ್‌ ವಿಶ್ವನಾಥ್‌ ಕೂಗು ಮತದಾರನಿಗೆ ಕೇಳಿಸಲಿಲ್ಲ ಎಂದು ಕಾಣಿಸುತ್ತದೆ. ಕಾಂಗ್ರೆಸ್‌ನ ಎಚ್‌ಪಿ ಮಂಜುನಾಥ್‌ ಮೇಲುಗೈ ಸಾಧಿಸಲಿದ್ದಾರೆ.

ಅಭ್ಯರ್ಥಿಗಳ ಭವಿಷ್ಯ ಈಗ ಮತಯಂತ್ರದಲ್ಲಿ ಅಡಗಿದೆ. ‘ಅನರ್ಹತೆ’ ವರ್ಸಸ್‌ ‘ಅರ್ಹತೆ’ಯ ಸಮರದಲ್ಲಿ ಯಾರಿಗೆ ಜಯ ಒಲಿಯಲಿದೆ ಎಂಬುದು ಸೋಮವಾರ (ಡಿಸೆಂಬರ್‌ 9) ಗೊತ್ತಾಗಲಿದೆ. ಇದೇ ವೇಳೆ ಕಣದಲ್ಲಿದ್ದ 13 ಅನರ್ಹ ಶಾಸಕರ ಪೈಕಿ ಒಂಬತ್ತು ಮಂದಿ ಶಾಪಮುಕ್ತರಾದರೇ ಉಳಿದ ನಾಲ್ವರು ಸೋಲು ಕಾಣುವ ಮೂಲಕ ತಮ್ಮ ರಾಜಕೀಯ ಭವಿಷ್ಯವನ್ನು ಮಸುಕಾಗಿಸಿಕೊಂಡಿದ್ದಾರೆ.

ಅನರ್ಹ ಶಾಸಕರನ್ನು ತಿರಸ್ಕರಿಸಿ ಎಂದು ವಿರೋಧಪಕ್ಷಗಳ ನಾಯಕರು ಮತ್ತು ಬಿಜೆಪಿ ವಿರೋಧಿಗಳು ಸಾಮಾಜಿಕ ಜಾಲತಾಣಗಳಲ್ಲಿ ದೊಡ್ಡ ಅಭಿಯಾನವನ್ನೇ ನಡೆಸಿದ್ದರು. ಇತ್ತ ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಾಗದಂತೆ ತಡೆಯಲು, ಸುಭದ್ರ ಹಾಗೂ ಸ್ಥಿರ ಸರ್ಕಾರಕ್ಕಾಗಿ ತಮ್ಮ ಪಕ್ಷದ ಅಭ್ಯರ್ಥಿಗಳಿಗೆ ಮತ ನೀಡಿ ಎಂದು ಬಿಜೆಪಿ ನಾಯಕರು ತಮ್ಮ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣರಾದ ಅನರ್ಹ ಶಾಸಕರನ್ನು ಗೆಲ್ಲಿಸಿ ಎಂದು ಮನವಿ ಮಾಡಿದ್ದರು.

ಇನ್ನು ಗುರುವಾರ ನಡೆದ ಮತದಾನದಲ್ಲಿ ಶೇ. 61ರಷ್ಟು ಮತದಾರರು ತಮ್ಮ ಹಕ್ಕು ಚಲಾಯಿಸಿದರು.ಡಿಸೆಂಬರ್‌ 9 ರಂದು 15 ಕ್ಷೇತ್ರಗಳಲ್ಲಿ ಮತ ಎಣಿಕೆ ನಡೆಯಲಿದ್ದು, ಫಲಿತಾಂಶ ಹೊರಬೀಳಲಿದೆ.

# ಯಾವ ಪಕ್ಷಕ್ಕೆ ಎಷ್ಟು ಸ್ಥಾನ :
* ಟಿ.ವಿ.9 -ಸಿ ವೋಟರ್ ಸಮೀಕ್ಷೆ :
ಬಿಜೆಪಿ- 9 ರಿಂದ 12, ಕಾಂಗ್ರೆಸ್- 3 ರಿಂದ 6, ಜೆಡಿಎಸ್- 1, ಪಕ್ಷೇತರ- 0

* ಬಿಟಿವಿ ಸಮೀಕ್ಷೆ :
ಬಿಜೆಪಿ- 9, ಕಾಂಗ್ರೆಸ್- 3, ಜೆಡಿಎಸ್- 2, ಇತರೆ- 1

* ಪಬ್ಲಿಕ್ ಟಿವಿ ಸಮೀಕ್ಷೆ :
ಬಿಜೆಪಿ- 8 ರಿಂದ 10, ಕಾಂಗ್ರೆಸ್- 3 ರಿಂದ 5, ಜೆಡಿಎಸ್- 1 ರಿಂದ 2, ಪಕ್ಷೇತರ- 0 ರಿಂದ 1

* ದಿಗ್ವಿಜಯ ಸಮೀಕ್ಷೆ :
ಬಿಜೆಪಿ- 9 ರಿಂದ 11, ಕಾಂಗ್ರೆಸ್- 2 ರಿಂದ 4, ಜೆಡಿಎಸ್- 0 ರಿಂದ 2, ಪಕ್ಷೇತರ- 0 ರಿಂದ 1

Facebook Comments

Sri Raghav

Admin