ಬೈಎಲೆಕ್ಷನ್ ರಿಸಲ್ಟ್ ನಿಂದ ತಲೆಕೆಳಗಾಗಲಿದೆಯೇ ವಿಪಕ್ಷಗಳ ಲೆಕ್ಕಾಚಾರ..?

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.8-ಹದಿನೈದು ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಸರ್ಕಾರದ ಅಳಿವು-ಉಳಿವಿನ ಪ್ರಶ್ನೆಯಾದರೆ, ಇತ್ತ ವಿರೋಧಪಕ್ಷದಲ್ಲೂ ನಾನಾ ರೀತಿಯ ಲೆಕ್ಕಾಚಾರಗಳಿಗೆ ಕಾರಣವಾಗಿದೆ.ನಾಳೆ ಫಲಿತಾಂಶ ಪ್ರಕಟಗೊಂಡು ರಾಜಕೀಯದ ನೈಜ ಚಿತ್ರಣ ಅನಾವರಣಗೊಳ್ಳಲಿದೆ. ಒಂದು ವೇಳೆ ಬಿಜೆಪಿ ಬಹುಮತ ಗಳಿಸಿ ಸರ್ಕಾರ ಸುಭದ್ರವಾದರೆ ವಿರೋಧ ಪಕ್ಷಗಳ ಎಲ್ಲಾ ಲೆಕ್ಕಾಚಾರಗಳು ತಲೆಕೆಳಗಾಗಲಿವೆ.

ಇದ್ದಕ್ಕಿದ್ದಂತೆ ಬಿರುಸಿನ ಚಟುವಟಿಕೆಗಳಿಗಾಗಿ ಅಖಾಡಕ್ಕಿಳಿದಿರುವ ರಾಜಕೀಯ ನಾಯಕರು ಮತ್ತೆ ಚಳಿಗೆ ಮುಸುಕೊದ್ದು ಮಲಗಲಿದ್ದಾರೆ. ಆದರೆ ಫಲಿತಾಂಶದಲ್ಲಿ ಏರುಪೇರಾಗಿ ಬಿಜೆಪಿ ನಿರೀಕ್ಷಿತ ಸ್ಥಾನ ಗೆಲ್ಲದೆ ಇದ್ದರೆ ಸರ್ಕಾರದ ಅಸ್ತಿತ್ವಕ್ಕೆ ಅಪಾಯ ಎದುರಾಗಿದ್ದೇ ಆದರೆ, ಕಾಂಗ್ರೆಸ್‍ನಲ್ಲಿ ದೊಡ್ಡ ಸುನಾಮಿಯೇ ಏಳಲಿದೆ.

ಸರ್ಕಾರ ರಚಿಸುವ ಪ್ರಯತ್ನ ಸದ್ಯಕ್ಕಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುವ ಮೂಲಕ ತಮ್ಮ ವಿರೋಧ ಪಕ್ಷದ ನಾಯಕ ಸ್ಥಾನವನ್ನು ಗಟ್ಟಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ವಿರೋಧಿ ಬಣ ಅವಕಾಶ ಸಿಕ್ಕರೆ ಸರ್ಕಾರ ರಚನೆ ಮಾಡಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ದೂರ ಇಡಬೇಕೆಂದು ತೆರೆ ಮರೆಯ ಕಸರತ್ತಿಗೆ ಚಾಲನೆ ನೀಡಿದೆ.

ಉಪಚುನಾವಣೆ ಪ್ರಚಾರದ ವೇಳೆ ಜೆಡಿಎಸ್ ನಾಯಕರು ಮತ್ತೆ ಜೆಡಿಎಸ್-ಕಾಂಗ್ರೆಸ್ ಮೈತ್ರಿಯ ವಿಷಯ ಪ್ರಸ್ತಾಪಿಸಿದರು. ಇದು ಭಾರೀ ಚರ್ಚೆಗೆ ಕಾರಣವಾಯಿತು. ಕಾಂಗ್ರೆಸ್‍ನಲ್ಲಿ ಮತ್ತೆ ದಲಿತ ಮುಖ್ಯಮಂತ್ರಿಯ ಬೇಡಿಕೆಗಳು ಕೇಳಿ ಬಂದವು. ಮಲ್ಲಿಕಾರ್ಜುನ ಖರ್ಗೆ, ಪರಮೇಶ್ವರ್, ಆರ್.ವಿ.ದೇಶಪಾಂಡೆ, ಡಿ.ಕೆ.ಶಿವಕುಮಾರ್ ಮತ್ತಿತರರು ರಾತ್ರೋರಾತ್ರಿ ಚುರುಕಾಗಿ ಓಡಾಡುವ ಮೂಲಕ ಮರು ಮೈತ್ರಿಯ ಕನಸು ಕಂಡಿದ್ದಾರೆ.

ಉಪಚುನಾವಣೆ ಫಲಿತಾಂಶ ಕಾಂಗ್ರೆಸ್‍ನಲ್ಲಿ ಹಲವು ರೀತಿಯ ಕನಸುಗಳನ್ನು ಹುಟ್ಟುಹಾಕಿದೆ. ಒಂದು ವೇಳೆ ಹೆಚ್ಚು ಸ್ಥಾನ ಗಳಿಸಿದ್ದೇ ಆದರೆ ಅದು ತಮ್ಮದೇ ಶ್ರಮ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಪಾದಿಸಿಕೊಂಡು ಮತ್ತೊಮ್ಮೆ ಮುಖ್ಯಮಂತ್ರಿಯ ರೇಸ್‍ಗೆ ಇಳಿಯಲಿದ್ದಾರೆ.

ಲೋಕಸಭೆ ಚುನಾವಣೆಯಲ್ಲಿ ಸೋತು ಸದ್ಯಕ್ಕೆ ಯಾವುದೇ ಹುದ್ದೆ ಇಲ್ಲದೆ ಇರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಮುಖ್ಯಮಂತ್ರಿ ಹುದ್ದೆಯ ಪ್ರಬಲ ಆಕಾಂಕ್ಷಿಯಾಗಿದ್ದು, 2013ರ ಸಂದರ್ಭದಲ್ಲಿ ಸುಲಭವಾಗಿ ಅವಕಾಶ ಬಿಟ್ಟುಕೊಟ್ಟಂತೆ ಈ ಬಾರಿ ತ್ಯಾಗಮಯಿಯಾಗಲು ಸಿದ್ಧರಿಲ್ಲ. ಶತಾಯಗತಾಯ ರಾಜಕಾರಣದ ಅಖಾಡಕ್ಕಿಳಿದು ಹೈಕಮಾಂಡ್ ಮೇಲೆ ಪ್ರಭಾವ ಬೀರಿ ಅಧಿಕಾರ ಗಿಟ್ಟಿಸಲು ಪ್ರಯತ್ನಿಸಲಿದ್ದಾರೆ.

ಹೀಗಾಗಿ ಉಪಚುನಾವಣೆ ಆಡಳಿತ ಪಕ್ಷ ಬಿಜೆಪಿಗಿಂತಲೂ ವಿರೋಧ ಪಕ್ಷ ಕಾಂಗ್ರೆಸ್ ಅಲ್ಲೇ ದೊಡ್ಡ ಸಂಚಲನ ಸೃಷ್ಟಿಸಬಹುದು. ಕಾಂಗ್ರೆಸ್‍ನ ಒಳ ಸಂಘರ್ಷಗಳನ್ನು ಬಗೆಹರಿಸಲು ಜೆಡಿಎಸ್ ಮಧ್ಯಸ್ಥಿಕೆ ವಹಿಸಿದರೂ ಆಶ್ಚರ್ಯಪಡಬೇಕಿಲ್ಲ.

ಒಂದು ವೇಳೆ ಬಿಜೆಪಿ ಹೆಚ್ಚು ಸ್ಥಾನ ಗಳಿಸಿದರೆ ಎಲ್ಲಾ ಸಾಧ್ಯಸಾಧ್ಯತೆಗಳು ತಲೆಕೆಳಗಾಗಿ ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿ ಮುಂದುವರೆಯಲಿದ್ದಾರೆ, ಜೆಡಿಎಸ್ ತನ್ನ ಪಾಡಿಗೆ ತಾನಿರಲಿದೆ. ಬಿಜೆಪಿ ಇನ್ನೂ ಆರು ತಿಂಗಳು ನಿರಾಂತಕವಾಗಿ ಆಡಳಿತ ನಡೆಸುವ ಅವಕಾಶ ಪಡೆದುಕೊಳ್ಳಲಿದೆ.

Facebook Comments

Sri Raghav

Admin