ಹಾನಗಲ್‍ನಲ್ಲಿ ಸಿಎಂ ಬೊಮ್ಮಾಯಿ ಮತ್ತು ಬಿಎಸ್‌ವೈ ಜಂಟಿ ಪ್ರಚಾರ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಅ.22- ರಾಜ್ಯದ ಎರಡು ಪ್ರತಿಷ್ಠಿತ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಬಹಿರಂಗ ಪ್ರಚಾರಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆ ಮುಖ್ಯಮಂತ್ರಿ ಹಾಗೂ ಮಾಜಿ ಸಿಎಂ ಇಂದು ಹಾನಗಲ್‍ನಲ್ಲಿ ಜಂಟಿ ಪ್ರಚಾರ ನಡೆಸಿ ಮತದಾರರನ್ನು ಓಲೈಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಸಚಿವರಾದ ಮುರುಗೇಶ್ ನಿರಾಣಿ, ಬಿ.ಸಿ.ಪಾಟೀಲ್, ಮುನಿರತ್ನ, ಶಂಕರಪಟೇಲ ಮುನೇನಕೊಪ್ಪ, ಶಾಸಕರು ಸೇರಿದಂತೆ ಘಟಾನುಘಟಿಗಳು ಹಾನಗಲ್‍ನಲ್ಲಿ ಧೂಳೆಬ್ಬಿಸಿದರು.

ಕ್ಷೇತ್ರದ ಬಮ್ಮನಹಳ್ಳಿ , ಬೆಳಗಾಲ ಪೇಟೆ(ನರೆಗಲ್ಲ), ಅಕ್ಕಿ ಹಾಲೂರು, ಚಿಕ್ಕಾಂಶಿ ಹೊಸೂರ(ಹಿರೂರ), ಮಕರವಳ್ಳಿ(ತಿಳುವಳ್ಳಿ), ಹೆರೂರ(ಅಡೂರ) ಸೇರಿದಂತೆ ನಾನಾ ಕಡೆ ಉಭಯ ನಾಯಕರು ಬಹಿರಂಗ ಪ್ರಚಾರ, ರೋಡ್ ಶೋ ಮೂಲಕ ಮತಯಾಚನೆ ಮಾಡಿದರು.

ಹಾಲಿ ಮತ್ತು ಮಾಜಿ ಸಿಎಂ ಹಾನಗಲ್‍ನಲ್ಲಿ ಇಂದು ಜಂಟಿ ಪ್ರಚಾರ ನಡೆಸಿದ್ದರ ಹಿನ್ನೆಲೆಯಲ್ಲಿ ಕ್ಷೇತ್ರ ಬಹುತೇಕ ಕೇಸರಿಮಯವಾಗಿತ್ತು.
ಸಿಂಧಗಿಯಲ್ಲಿ ಎರಡು ದಿನ ಪ್ರಚಾರ ನಡೆಸಿ ನೇರವಾಗಿ ಹಾನಗಲ್‍ಗೆ ಆಗಮಿಸಿದ ಯಡಿಯೂರಪ್ಪ, ಅಭ್ಯರ್ಥಿ ಶಿವರಾಜ ಸಜ್ಜನವರ ಪರವಾಗಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿ ಹೆಚ್ಚಿನ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಮನವಿ ಮಾಡಿದರು.

ಚುನಾವಣೆ ಘೋಷಣೆಯಾದ ಬಳಿಕ ಕ್ಷೇತ್ರಕ್ಕೆ ಮೊದಲ ಬಾರಿಗೆ ಆಗಮಿಸಿದ ಯಡಿಯೂರಪ್ಪ ಅವರನ್ನು ಕಾರ್ಯಕರ್ತರು ಅದ್ಧೂರಿಯಾಗಿ ಬರಮಾಡಿಕೊಂಡರು. ನಂತರ ಉಭಯ ನಾಯಕರು ಜಂಟಿ ಪ್ರಚಾರ ಆರಂಭಿಸಿ ಕ್ಷೇತ್ರದಲ್ಲಿ ಮಾಜಿ ಸಚಿವ ದಿವಂಗತ ಸಿ.ಎಂ.ಉದಾಸೀ ಅವರ ಅಭಿವೃದ್ಧಿ ಕಾರ್ಯಗಳು ಮುಂದುವರೆಯಲು ಬಿಜೆಪಿಯನ್ನು ಗೆಲ್ಲಿಸಬೇಕೆಂದು ಮತದಾರರಲ್ಲಿ ಮನವಿ ಮಾಡಿಕೊಂಡರು.

ಶತಾಯಗತಾಯ ಕ್ಷೇತ್ರವನ್ನು ತನ್ನ ತೆಕ್ಕೆಗೆ ಉಳಿಸಿಕೊಳ್ಳಲು ಸರ್ವ ಪ್ರಯತ್ನ ಮಾಡುತ್ತಿರುವ ಬಿಜೆಪಿ ತನ್ನೆಲ್ಲ ಶಕ್ತಿಯನ್ನು ಧಾರೆ ಎರೆದು ಮತದಾರರನ್ನು ನಾನಾ ರೀತಿಯಲ್ಲಿ ಓಲೈಸುತ್ತಿದೆ. ಗ್ರಾಮಪಂಚಾಯ್ತಿಯಿಂದ ಹಿಡಿದು ಹೋಬಳಿ, ತಾಲ್ಲೂಕು ಮಟ್ಟದವರೆಗೂ ಸಚಿವರು, ಶಾಸಕರು, ಕಾರ್ಯಕರ್ತರು ಪಕ್ಷದ ಪ್ರಮುಖರು ಸೇರಿದಂತೆ ಘಟಾನುಘಟಿ ನಾಯಕರಿಂದ ಜಾತಿವಾರು ಮತದಾರರನ್ನು ಸೆಳೆಯಲು ಮುಂದಾಗಿದೆ. ನಾಳೆಯು ಕೂಡ ಯಡಿಯೂರಪ್ಪ ಮತ್ತು ಬೊಮ್ಮಾಯಿ ಅವರು ಹಾನಗಲ್‍ನಲ್ಲಿ ಮತ ಬೇಟೆಯನ್ನು ಮುಂದುವರೆಸಲಿದ್ದಾರೆ.

# ಸಿಂಧಗಿಯಲ್ಲಿ ವಿಜಯೇಂದ್ರ ಅಬ್ಬರ:
ಇತ್ತ ಹಾನಗಲ್‍ನಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬೊಮ್ಮಾಯಿ ಪ್ರಚಾರದಲ್ಲಿ ಅಬ್ಬರಿಸುತ್ತಿದ್ದಾರೆ. ಅತ್ತ ಸಿಂಧಗಿಯಲ್ಲಿ ಬಿಜೆಪಿ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ, ಅಭ್ಯರ್ಥಿ ರಮೇಶ್ ಭೂಸನೂರ ಪರವಾಗಿ ಪ್ರಚಾರ ನಡೆಸಿದರು.

ಕ್ಷೇತ್ರ ಉಸ್ತುವಾರಿಗಳಾದ ಗೋವಿಂದ ಕಾರಜೋಳ, ಸಿ.ಸಿ.ಪಾಟೀಲ್, ಶಶಿಕಲಾ ಜೊಲ್ಲೆ, ವಿ.ಸೋಮಣ್ಣ, ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಸೇರಿದಂತೆ ಮತ್ತಿತರರ ಜೊತೆಗೂಡಿ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಸಿಂಧಗಿಯಲ್ಲೂ ಬಿಜೆಪಿ ಗ್ರಾಮಪಂಚಾಯ್ತಿಯಿಂದ ಹಿಡಿದು ತಾಲ್ಲೂಕು ಮಟ್ಟದವರೆಗೂ ರೋಡ್ ಶೋ, ಮನೆ ಮನೆಗೆ ತೆರಳುವುದು, ಬಹಿರಂಗ ಪ್ರಚಾರ ಸೇರಿದಂತೆ ಸಮುದಾಯಗಳ ಓಲೈಕೆ, ಜಾತಿ ಸಮಾವೇಶ ಸೇರಿದಂತೆ ನಾನಾ ರೀತಿಯಲ್ಲಿ ಪ್ರಚಾರ ನಡೆಸುತ್ತಿದೆ.

 

Facebook Comments