ನಾಳೆ ಕಂಪ್ಲೀಟ್ ಲಾಕ್‍ಡೌನ್ ಹಿನ್ನೆಲೆ ಹಿನ್ನೆಲೆಯಲ್ಲಿ ಇಂದು ಮಾರ್ಕೆಟ್‌ಗಳು ಫುಲ್ ರಶ್

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಮೇ 23- ನಾಳೆ ಸಂಪೂರ್ಣ ಲಾಕ್‍ಡೌನ್ ಹಾಗೂ ಸೋಮವಾರ ರಂಜಾನ್ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳನ್ನು ಕೊಳ್ಳಲು ಜನ ಮುಗಿಬಿದ್ದರು.

ಬೆಂಗಳೂರಿನ ಶಿವಾಜಿನಗರ, ಮಲ್ಲೇಶ್ವರ, ಜಯನಗರ, ಜೆ.ಪಿ.ನಗರ ಸೇರಿದಂತೆ ವಿವಿಧೆಡೆ ಖರೀದಿ ಭರಾಟೆ ಜೋರಾಗಿತ್ತು. ಇಂದು ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 7 ಗಂಟೆಯವರೆಗೆ ಸಂಪೂರ್ಣ ಲಾಕ್‍ಡೌನ್ ಇರುತ್ತದೆ.

ಮನೆಯಿಂದ ಯಾರೂ ಹೊರ ಬರುವಂತಿಲ್ಲ. ಅಗತ್ಯ ವಸ್ತುಗಳು ಲಭ್ಯವಿರುತ್ತವೆ ಎಂದು ಹೇಳಿದರೂ ಕೂಡ ಜನ ವಸ್ತುಗಳನ್ನು ಕೊಳ್ಳಲು ಇಂದು ಭಾರೀ ಸಂಖ್ಯೆಯಲ್ಲಿ ಬೆಳಗ್ಗೆಯಿಂದ ಆಗಮಿಸಿದ್ದರು.

ಚಿಕನ್, ಮಟನ್ ಖರೀದಿ ಭರಾಟೆ ಕೂಡ ಜೋರಾಗಿತ್ತು. ಕೆಲವರು ಮಾಂಸವನ್ನು ಇಂದೇ ಖರೀದಿಸಿ ಇಟ್ಟುಕೊಳ್ಳುತ್ತಿದ್ದರು. ಮೈಸೂರು ರಸ್ತೆ, ಮಾಗಡಿ ರಸ್ತೆ, ಶಿವಾಜಿನಗರ, ಕೆ.ಆರ್.ಮಾರುಕಟ್ಟೆ ವಿವಿಧೆಡೆ ಮಾಂಸದಂಗಡಿಗಳ ಮುಂದೆ ಮುಸಿಂ ಬಾಂಧವರು ಸಾಲಾಗಿ ನಿಂತು ಚಿಕನ್, ಮಟನ್ ಖರೀದಿಸುತ್ತಿದ್ದರು.

ರಾಜಾಜಿನಗರದ ಬಾಷ್ಯಂ ವೃತ್ತ, ಮಲ್ಲೇಶ್ವರಂ ಹಲವೆಡೆ ಮಹಿಳೆಯರು ರಂಜಾನ್‍ಗೆ ಬೇಕಾದ ಅಗತ್ಯ ವಸ್ತುಗಳ ಖರೀದಿಯಲ್ಲಿ ತೊಡಗಿದ್ದರು. ಸಂಜೆ 7 ಗಂಟೆಗೆ ಎಲ್ಲಾ ಅಂಗಡಿ ಮುಂಗಟ್ಟುಗಳನ್ನು ಮುಚ್ಚಬೇಕಾದ ಹಿನ್ನೆಲೆಯಲ್ಲಿ ಬಟ್ಟೆ, ಅಲಂಕಾರಿಕ ವಸ್ತುಗಳನ್ನು ಖರೀದಿಸುತ್ತಿದ್ದು ಕಂಡು ಬಂತು.

ರಂಜಾನ್‍ನಲ್ಲಿ ಸಾಮೂಹಿಕ ಪ್ರಾರ್ಥನೆಗೆ ಅವಕಾಶ ಇಲ್ಲ. ಮನೆಯಲ್ಲೇ ಪ್ರಾರ್ಥನೆ ಮಾಡಬೇಕೆಂದು ಸೂಚಿಸಲಾಗಿದೆ. ಆದರೆ, ಹಬ್ಬ ಆಚರಣೆಗೆ ಅಡ್ಡಿಯಿಲ್ಲ. ಹಾಗಾಗಿ ಅಗತ್ಯ ವಸ್ತುಗಳ ಖರೀದಿಗೆ ಮಹಿಳೆಯರು, ಮಕ್ಕಳು ಮುಗಿಬಿದಿದ್ದಾರೆ.

ಲಾಕ್‍ಡೌನ್ ಇರುವ ಹಿನ್ನೆಲೆಯಲ್ಲಿ ನಾಳೆ (ಭಾನುವಾರ ) ಹಲವು ಅಂಗಡಿಗಳು ತೆರೆಯದಿರುವ ಹಿನ್ನೆಲೆಯಲ್ಲಿ ಹಬ್ಬಕ್ಕೆ ಅಗತ್ಯವಾದ ವಸ್ತುಗಳನ್ನು ಖರೀದಿಸಲು ಇಂದೇ ತೆರಳಿದ್ದರಿಂದ ಹಲವೆಡೆ ಜನಜಂಗುಳಿ ಕಂಡು ಬಂತು.

ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಅನುಸರಿಸಿದಂತೆ ಕಂಡು ಬಂದಿರಲಿಲ್ಲ. ಕೇವಲ ಮುಖಕ್ಕೆ ಮಾಸ್ಕ್ ಧರಿಸಿದ್ದನ್ನು ಬಿಟ್ಟರೆ ಬೇರೆ ಯಾವುದೇ ನಿಯಮಾವಳಿಗಳನ್ನು ಜನ ಪಾಲಿಸಿದಂತೆ ಕಂಡು ಬಂದಿರಲಿಲ್ಲ.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಮದ್ಯ ಮಾರಾಟಕ್ಕೂ ನಿಬರ್ಂಧ ಇರುವುದರಿಂದ ಮದ್ಯ ಪ್ರಿಯರು ಇಂದೇ ತಮಗೆ ಬೇಕಾದ ಮದ್ಯವನ್ನು ಖರೀದಿಸುತಿದುದ್ದು ಕಂಡು ಬಂತು.

ಬೆಲೆ ಏರಿಕೆ ಹಿನ್ನೆಲೆಯಲ್ಲಿ ಮದ್ಯ ಮಾರಾಟದಲ್ಲಿ ಇಳಿಕೆಯಾಗಿದೆಯಾದರೂ ಮದ್ಯ ಖರೀದಿ ಪ್ರಮಾಣವೇನೂ ಕಡಿಮೆಯಾಗಿಲ್ಲ. ನಾಳೆ ಮದ್ಯ ಸಿಗುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಇಂದೇ ತಮಗೆ ಬೇಕಾದ ಮದ್ಯವನ್ನು ಖರೀದಿಸಿಟ್ಟುಕೊಳ್ಳುತ್ತಿದುದ್ದು ಹಲವೆಡೆ ಕಂಡು ಬಂತು.

ಹಣ್ಣು, ತರಕಾರಿ, ಚಿಕನ್, ಮಟನ್, ರೇಷನ್ ಅಂಗಡಿಗಳು ನಾಳೆ ತೆರೆಯಲಿವೆ ಎಂದು ಸರ್ಕಾರ ತಿಳಿಸಿದೆಯಾದರೂ ಜನ ಸಂಪೂರ್ಣ ಬಂದ್ ಆಗಲಿವೆ ಎಂಬ ಹಿನ್ನೆಲೆಯಲ್ಲಿ ಇಂದೇ ತಮಗೆ ಬೇಕಾದ ವಸ್ತುಗಳನ್ನು ಖರೀದಿಸಲು ಬೆಳಗ್ಗೆಯೇ ಮಾರುಕಟ್ಟೆಗಳಿಗೆ ಆಗಮಿಸಿದ್ದರು.

Facebook Comments

Sri Raghav

Admin