‘ಕರ್ನಾಟಕ ಕಾಂಗ್ರೆಸ್ ಬಚಾವೋ’ : ಹೈಕಮಾಂಡ್‍ಗೆ ರಾಜ್ಯ ನಾಯಕರ ಮನವಿ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು, ಡಿ.14-ಭಾರತ್ ಬಚಾವೋ ಆಂದೋಲನದಂತೆ ಕರ್ನಾಟಕ ಕಾಂಗ್ರೆಸ್ ಬಚಾವೋ ಕಾರ್ಯಾಚರಣೆ ಕೈಗೊಳ್ಳಿ ಎಂದು ರಾಜ್ಯ ಕಾಂಗ್ರೆಸ್ ನಾಯಕರು ಹೈಕಮಾಂಡ್‍ಗೆ ದುಂಬಾಲು ಬಿದ್ದಿದ್ದಾರೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕದಲ್ಲಿ ಅತ್ಯಂತ ಪ್ರಬಲವಾಗಿದ್ದ ಸಂಘಟನೆ ಹೊಂದಿತ್ತು. ಇತ್ತೀಚೆಗೆ ನಾನಾ ಕಾರಣಗಳಿಂದಾಗಿ ಪಕ್ಷ ಮೂಲೆಗುಂಪಾಗುತ್ತಿದೆ.

ಇದೇ ಪರಿಸ್ಥಿತಿ ಮುಂದುವರೆದರೆ ಪ್ರಾದೇಶಿಕ ಸ್ಥಾನಮಾನಕ್ಕೆ ಬರುವ ಆತಂಕ ಇದೆ. ಪಕ್ಷದಲ್ಲಿನ ನಾಯಕರುಗಳ ಸ್ವಾರ್ಥ ರಾಜಕಾರಣ, ವೈಯಕ್ತಿಕ ಪ್ರತಿಷ್ಠೆಯ ಹುಂಬುತನ, ವಲಸೆ ನಾಯಕರ ಸಿದ್ಧಾಂತರಹಿತ ಚಟುವಟಿಕೆಗಳು, ಒಳಜಗಳಗಳು, ಪರಸ್ಪರ ಕಾಲೆಳೆಯುವ ಮನಸ್ಥಿತಿಯಿಂದಾಗಿ ಕರ್ನಾಟಕದಲ್ಲಿ ಕಾಂಗ್ರೆಸ್ ನೆಲಕಚ್ಚುವ ಸ್ಥಿತಿಗೆ ಬಂದಿದೆ.

ಪಕ್ಷವನ್ನು ಮತ್ತೆ ಬೇರುಮಟ್ಟದಿಂದ ಕಟ್ಟುವ ಅಗತ್ಯವಿದೆ. ನಾಯಕರ ನಡುವಿನ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಂಡು, ಸೈದ್ಧಾಂತಿಕ ನೆಲೆಗಟ್ಟಿನಲ್ಲಿ ಕಾಂಗ್ರೆಸ್‍ನ್ನು ಪುನಶ್ಚೇತನಗೊಳಿಸಬೇಕಾದರೆ ಹೊಸದಾಗಿಯೇ ಪಕ್ಷ ಸಂಘಟನೆ ಮಾಡಬೇಕು. ಈ ನಿಟ್ಟಿನಲ್ಲಿ ಹೈಕಮಾಂಡ್ ಗಟ್ಟಿ ನಿಲುವು ತೆಗೆದುಕೊಳ್ಳುವಂತೆ ರಾಜ್ಯ ನಾಯಕರು ಮನವಿ ಮಾಡಿದ್ದಾರೆ.

ಕಾಂಗ್ರೆಸ್‍ನ ಪುನರ್‍ರಚನೆಗೆ ಇದು ಸೂಕ್ತ ಸಮಯ. ಸದ್ಯಕ್ಕೆ ನಮ್ಮ ಸರ್ಕಾರ ಅಧಿಕಾರದಲ್ಲಿಲ್ಲ. ಯಾವುದೇ ಚುನಾವಣೆಗಳೂ ಕೂಡ ನಡೆಯುತ್ತಿಲ್ಲ. ಹೀಗಾಗಿ ಪಕ್ಷಸಂಘಟನೆಯಲ್ಲಿ ಸಮಗ್ರ ಬದಲಾವಣೆ ತರಲು ಕರಾರುವಕ್ಕಾದ ಸಮಯವಾಗಿದೆ. ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿಯುವ ನಾಯಕರನ್ನು ಗುರುತಿಸಿ ಹೊಸ ತಂಡ ರಚನೆ ಮಾಡಿ. ಮೂಲ, ವಲಸೆ ಎಲ್ಲವನ್ನೂ ಬದಿಗಿಟ್ಟು ಪಕ್ಷದ ಹಿತಕ್ಕಾಗಿ ದುಡಿಯುವವರನ್ನು ಗುರುತಿಸಿ.  ಹಣ ಹಾಗೂ ಜಾತಿಯ ಪ್ರಭಾವಗಳಿಗೆ ಜೋತುಬಿದ್ದು ನಾಯಕರಿಗೆ ಅವಕಾಶ ನೀಡಬೇಡಿ. ಜನರ ನಡುವೆ ಇದ್ದು ಕಾಂಗ್ರೆಸ್ ಸಿದ್ಧಾಂತವನ್ನು ಕಟ್ಟು ನಿಟ್ಟಾಗಿ ಪಾಲಿಸುವ ಮತ್ತು ಸಂಘಟನೆಗಾಗಿ ಸಮಯ ನೀಡುವ ಮುಖಂಡರುಗಳಿಗೆ ಮಣೆ ಹಾಕಿ ಎಂದು ಮನವಿ ಮಾಡಲಾಗಿದೆ.

ದೆಹಲಿಯಲ್ಲಿ ನಡೆಯುತ್ತಿರುವ ಭಾರತ್ ಬಚಾವೋ ಆಂದೋಲನದಲ್ಲಿ ಭಾಗವಹಿಸಲು ಕರ್ನಾಟಕದಿಂದ ಹಿರಿಯ, ಕಿರಿಯ ಸೇರಿದಂತೆ ಸಾವಿರಾರು ನಾಯಕರು ತೆರಳಿದ್ದರು. ಅವರಲ್ಲಿ ಆಯ್ದ ಪ್ರಮುಖ ನಾಯಕರು ಇಂದು ಹೈಕಮಾಂಡ್ ವರಿಷ್ಠರನ್ನು ಭೇಟಿ ಮಾಡಿದ್ದರು. ಈ ಸಂದರ್ಭದಲ್ಲಿ ಕೆಪಿಸಿಸಿಯ ಪುನರ್‍ರಚನೆ ಸಂಬಂಧಪಟ್ಟಂತೆ ಚರ್ಚಿಸಲಾಗಿದೆ. ಪಕ್ಷದ ಉಳಿವಿಗಾಗಿ ಪ್ರಾಮಾಣಿಕರಿಗೆ, ಪಕ್ಷ ನಿಷ್ಠರಿಗೆ ಅವಕಾಶ ನೀಡಿ ಎಂದು ಮನವಿ ಸಲ್ಲಿಸಿದ್ದಾರೆ.

ಬಹುತೇಕ ಎಲ್ಲಾ ಪ್ರಮುಖ ನಾಯಕರು ಒಂದೇ ವೇದಿಕಯಲ್ಲಿ ಇದ್ದಿದ್ದರಿಂದ ಹೈಕಮಾಂಡ್ ಬಳಿ ಚರ್ಚೆಗೆ ಅನುಕೂಲವಾಗಿದೆ. ಈ ಸದಾವಕಾಶ ಬಳಸಿಕೊಂಡು ಕಾಂಗ್ರೆಸ್ಸಿಗರು ಪಕ್ಷ ಸಂಘಟನೆಯಲ್ಲಿ ಬದಲಾವಣೆ ತರಬೇಕು ಎಂದು ಮನವಿ ಮಾಡಿದ್ದಾರೆ.

Facebook Comments