ಕಾಂಗ್ರೆಸ್‍ನಲ್ಲಿ ಅಸಮಾಧಾನ ಉಲ್ಬಣ, ಪತ್ಯೇಕ ಸಭೆ, ಗುಂಪುಗಾರಿಕೆ

ಈ ಸುದ್ದಿಯನ್ನು ಶೇರ್ ಮಾಡಿ

M-B-Patil--01

ಬೆಂಗಳೂರು, ಜೂ.11- ಸಮ್ಮಿಶ್ರ ಸರ್ಕಾರದ ಅಂಗಪಕ್ಷವಾದ ಕಾಂಗ್ರೆಸ್‍ನಲ್ಲಿ ಸಮಸ್ಯೆಗಳು ದಿನೇ ದಿನೇ ಉಲ್ಬಣಿಸುತ್ತಿದ್ದು, ಪ್ರಮುಖ ನಾಯಕರು ತಮ್ಮ ಬಣದ ಶಾಸಕರೊಂದಿಗೆ ಪತ್ಯೇಕ ಸಭೆಗಳನ್ನು ನಡೆಸುವ ಮೂಲಕ ಗುಂಪುಗಾರಿಕೆಗೆ ಮುಂದಾಗಿದ್ದಾರೆ. ಸಚಿವ ಸಂಪುಟದಲ್ಲಿ ಅವಕಾಶ ಸಿಗಲಿಲ್ಲ ಎಂಬ ಕಾರಣಕ್ಕಾಗಿ ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಅವರು ಪ್ರತ್ಯೇಕ ಸಭೆಗಳನ್ನು ನಡೆಸಿ ಬಂಡಾಯದ ಬಾವುಟ ಹಾರಿಸಿದ್ದಾರೆ.

ಕಾಂಗ್ರೆಸ್ ಪಾಲಿಗೆ ಅದು ಬಿಸಿ ತುಪ್ಪವಾದ ಬೆನ್ನಲ್ಲೇ ಕಾಂಗ್ರೆಸ್ ಪರವಾದ ಶಾಸಕರು ಪ್ರತ್ಯೇಕ ಸಭೆಗಳನ್ನು ನಡೆಸುವ ಮೂಲಕ ಭಿನ್ನಮತೀಯ ಶಾಸಕರಿಗೆ ಟಾಂಗ್ ನೀಡಲು ಮುಂದಾಗಿದ್ದಾರೆ. ಹೀಗಾಗಿ ಕಾಂಗ್ರೆಸ್‍ನಲ್ಲಿ ಗುಂಪುಗಾರಿಕೆ ತೀವ್ರಗೊಳ್ಳುತ್ತಿದೆ. ಎಂ.ಬಿ.ಪಾಟೀಲ್, ಸತೀಶ್ ಜಾರಕಿಹೊಳಿ ಅವರ ಪ್ರತ್ಯೇಕ ಸಭೆಗಳಿಗೆ ತಿರುಗೇಟು ನೀಡುವಂತೆ ಬೆಂಗಳೂರಿನ ಪಕ್ಷ ನಿಷ್ಠ ಶಾಸಕರಾದ ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜು, ಮುನಿರತ್ನ, ಬೈರತಿ ಸುರೇಶ್ ಅವರು ಪ್ರತ್ಯೇಕ ಸಭೆ ನಡೆಸಲು ಮುಂದಾಗಿದ್ದಾರೆ. ಇದರಿಂದಾಗಿ ಪಕ್ಷದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿ ಗುಂಪುಗಾರಿಕೆ ಪ್ರಧಾನವಾಗುತ್ತಿದೆ.

ಎಂ.ಬಿ.ಪಾಟೀಲ್ ಮತ್ತು ಸತೀಶ್ ಜಾರಕಿಹೊಳಿ ಅವರ ಬಣಗಳು ಸಚಿವ ಸ್ಥಾನಕ್ಕಾಗಿ ಮತ್ತು ತಮ್ಮ ವಿರೋಧಿಗಳಿಗೆ ಅಧಿಕಾರ ತಪ್ಪಿಸಲು ಗುಂಪುಗಾರಿಕೆ ಮಾಡುತ್ತಿದ್ದರೆ, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್ ಅವರ ತಂಡ ಪಕ್ಷಕ್ಕೆ ಬೆಂಬಲವಾಗಿ ಸಭೆ ನಡೆಸುತ್ತಿದೆ. ನಾವೂ ಕೂಡ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದೇವೆ. ಹಾಗೆಂದು ಗುಂಪುಗಾರಿಕೆ ಮಾಡಿ ಪಕ್ಷವನ್ನು ಮುಜುಗರಕ್ಕೆ ಸಿಲುಕಿಸುವುದು ನಮ್ಮ ಉದ್ದೇಶವಲ್ಲ. ಸಮ್ಮಿಶ್ರ ಸರ್ಕಾರದಲ್ಲಿ ಹೊಂದಾಣಿಕೆ ಮೂಲಕ ಉತ್ತಮ ಆಡಳಿತ ನಡೆಸಬೇಕು. ಅದಕ್ಕಾಗಿ ನಾವು ಕಾಂಗ್ರೆಸ್ ಜತೆ ನಿಲ್ಲುತ್ತೇವೆ ಎಂದು ಬೆಂಗಳೂರಿನ ಶಾಸಕರು ಹೇಳಿಕೊಂಡಿದ್ದಾರೆ.

ದೆಹಲಿಗೆ ಹೋಗಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರನ್ನು ಭೇಟಿ ಮಾಡಿ ಬಂದ ಎಂ.ಬಿ.ಪಾಟೀಲ್, ತಾವು ಒಂಟಿಯಲ್ಲ. ತಮ್ಮೊಂದಿಗೆ 20 ಮಂದಿ ಶಾಸಕರಿದ್ದಾರೆ ಎಂದು ಪದೇ ಪದೇ ಹೇಳಿಕೊಳ್ಳಲು ಆರಂಭಿಸಿದ್ದಾರೆ. ಇದು ಸಮ್ಮಿಶ್ರ ಸರ್ಕಾರದ ಅಸ್ಥಿತ್ವಕ್ಕೆ ದಕ್ಕೆಯುಂಟು ಮಾಡುವ ಸಾಧ್ಯತೆಯನ್ನು ಮನಗಂಡ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಖುದ್ದಾಗಿ ಪಾಟೀಲ್ ಅವರ ಮನೆಗೆ ಭೇಟಿ ಮಾಡಿ ಮನವೊಲಿಸುವ ಪ್ರಯತ್ನ ನಡೆಸಿದ್ದರು. ಆದರೆ, ಅದೂ ಯಶಸ್ವಿಯಾಗಿಲ್ಲ.

ರಾಹುಲ್‍ಗಾಂಧಿ ಭೇಟಿ ನಂತರ ಎಂ.ಬಿ.ಪಾಟೀಲ್ ಸ್ವಲ್ಪ ತಣ್ಣಗಾದಂತೆ ಕಂಡುಬಂದರೂ ಪ್ರತ್ಯೇಕ ಸಭೆಗಳನ್ನು ಮುಂದುವರೆಸುವ ಮುನ್ಸೂಚನೆ ನೀಡಿದ್ದಾರೆ. ರಾಹುಲ್‍ಗಾಂಧಿ ಭೇಟಿ ವೇಳೆ ಉಪ ಮುಖ್ಯಮಂತ್ರಿ ಸ್ಥಾನವನ್ನಾಗಲಿ, ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನಾಗಲಿ ನಾನು ಕೇಳಿಲ್ಲ ಎಂದು ಹೇಳಿರುವ ಎಂ.ಬಿ.ಪಾಟೀಲ್, ಮತ್ಯಾವ ಕಾರಣಕ್ಕೆ ಸಭೆ ನಡೆಸುತ್ತಿದ್ದಾರೆ ಎಂಬುದನ್ನು ಈ ವರೆಗೂ ಸ್ಪಷ್ಟಪಡಿಸಿಲ್ಲ. ಇನ್ನೊಂದು ಉಪಮುಖ್ಯಮಂತ್ರಿ ಹುದ್ದೆಯನ್ನು ಸೃಷ್ಟಿಸಲು ಹೈಕಮಾಂಡ್ ಸ್ಪಷ್ಟವಾಗಿ ನಿರಾಕರಿಸಿದೆ. ಹೀಗಾಗಿ ಸಚಿವ ಸ್ಥಾನ ಅಥವಾ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಪಾಟೀಲ್ ಲಾಬಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.

ಒಂದು ವೇಳೆ ಎಂ.ಬಿ.ಪಾಟೀಲ್ ಅವರಿಗೆ ಸಚಿವ ಸ್ಥಾನ ಸಿಕ್ಕರೆ ಅವರ ಬಣದಲ್ಲಿ ಗುರುತಿಸಿಕೊಂಡಿರುವ ಇತರೆ ಶಾಸಕರ ಸ್ಥಾನಮಾನಗಳೇನು ಎಂಬ ಪ್ರಶ್ನೆ ಉದ್ಭಿವಿಸಿದೆ. ಮತ್ತೊಂದೆಡೆ ಶ್ಯಾಮನೂರು ಶಿವಶಂಕರಪ್ಪ, ಬಿ.ಸಿ.ಪಾಟೀಲ್ ಮತ್ತಿತರರು ಪ್ರತ್ಯೇಕ ಸಭೆಗಳನ್ನು ನಡೆಸುತ್ತಿದ್ದಾರೆ. ಈ ಎಲ್ಲಾ ಬೆಳವಣಿಗೆಗಳು ಕಾಂಗ್ರೆಸ್‍ನಲ್ಲಿ ತಳಮಳವನ್ನು ಹುಟ್ಟುಹಾಕಿವೆ. ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಉತ್ತಮ ಹೊಂದಾಣಿಕೆ ಇದ್ದು, ಸುಗಮ ಸರ್ಕಾರ ನಡೆಸುವ ಹಂತದಲ್ಲೇ ಕಾಂಗ್ರೆಸ್‍ನೊಳಗೆ ಹುಟ್ಟಿಕೊಂಡಿರುವ ಆಂತರಿಕ ಬೇಗುದಿ ಸರ್ಕಾರಕ್ಕೆ ಹೆಜ್ಜೆ ಹೆಜ್ಜೆಗೂ ಅಡ್ಡಗಾಲಾಗಿ ಪರಿಣಮಿಸುತ್ತಿದೆ. ಇಂದು ಸಂಜೆ ಎಂ.ಬಿ.ಪಾಟೀಲ್ ಮತ್ತು ಬೆಂಗಳೂರಿನ ಶಾಸಕರು ಪ್ರತ್ಯೇಕ ಸಭೆ ನಡೆಸಿದ ಬಳಿಕ ರಾಜಕೀಯ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Facebook Comments

Sri Raghav

Admin