ಬೆಂಗಳೂರಲ್ಲಿ ಅಕ್ರಮವಾಗಿ ನೆಲೆಸಿದ್ದ ವಿದೇಶಿಗರ ಬಂಧನ, ಖೋಟಾನೋಟು ವಶ..!

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಆ.3-ವೀಸಾ ಅವಧಿ ಮುಗಿದರೂ ರಾಜಧಾನಿ ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ವಿದೇಶಿ ಪ್ರಜೆಗಳ ಮೇಲೆ ಸಿಸಿಬಿ ಪೊಲೀಸರು ಮಿಂಚಿನ ದಾಳಿ ನಡೆಸಿ ಅಕ್ರಮವಾಗಿ ನೆಲೆಸಿದ್ದ ಹಾಗೂ ಖೋಟಾನೋಟು ದಂಧೆ ನಡೆಸುತ್ತಿದ್ದ 20 ಮಂದಿ ವಿದೇಶಿಗರನ್ನು ಬಂಧಿಸಿದ್ದಾರೆ.

ನಗರದ ಹೆಣ್ಣೂರು, ಬಾಗಲೂರು, ಕೊತ್ತನೂರು ಸೇರಿದಂತೆ ಮತ್ತಿತರ ಕಡೆ ಕಾನೂನು ಬಾಹಿರವಾಗಿ ನೆಲೆಸಿದ್ದ ಒಟ್ಟು 85 ವಿದೇಶಿ ಪ್ರಜೆಗಳನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಲಾಗಿದೆ ಎಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.

ಸಿಸಿಬಿ ಹೆಚ್ವುವರಿ ಆಯುಕ್ತ ಸಂದೀಪ್ ಪಾಟೀಲ್ ನೇತೃತ್ವದಲ್ಲಿ ಡಿಸಿಪಿ ರವಿ ಹಾಗೂ ಕುಲ್‍ದೀಪ್ ಕುಮಾರ್ ಜೈನ್ ಮಾರ್ಗದರ್ಶನದಲ್ಲಿ 120ಕ್ಕೂ ಹೆಚ್ಚು ಪೊಲೀಸರು 85ಕ್ಕೂ ಹೆಚ್ಚು ಮನೆಗಳ ದಿಢೀರ್ ದಾಳಿ ನಡೆಸಿದಾಗ 17 ಮಂದಿ ವೀಸಾ ಅವಧಿ ಮುಗಿದರೂ ನಗರದಲ್ಲಿ ಅಕ್ರಮವಾಗಿ ನೆಲೆಸಿರುವುದು ಪತ್ತೆಯಾಯಿತು.

ಇದರ ಜೊತೆಗೆ ಮೂವರು ವಿದೇಶಿ ಪ್ರಜೆಗಳು ನಕಲಿ ಕರೆನ್ಸಿ ದಂಧೆಯಲ್ಲಿ ತೊಡಗಿಸಿಕೊಂಡಿರುವುದು ಬೆಳಕಿಗೆ ಬಂತು. ಆರೋಪಿಗಳಿಂದ ಲ್ಯಾಪ್‍ಟ್ಯಾಪ್, ಅಮೆರಿಕನ್ ಡಾಲರ್, ಬ್ರಿಟನ್ ಪೌಂಡ್ಸ್ ಸೇರಿದಂತೆ ಮತ್ತಿತರ ಪ್ರಮುಖ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಸದ್ಯ ಪೊಲೀಸರ ವಶದಲ್ಲಿರುವ ಆಫ್ರಿಕಾ ಪ್ರಜೆಗಳು ಬೆಂಗಳೂರು ಸೇರಿದಂತೆ ಮತ್ತಿತರ ಕಡೆ ನಡೆದ ಸೈಬರ್ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿರುವ ಶಂಕೆಯಿದ್ದು, ಈ ಹಿನ್ನೆಲೆಯಲ್ಲಿ ವಿಶೇಷ ಕಾರ್ಯಪಡೆ (ಎಸ್‍ಟಿಎಫ್) ರಚಿಸಿ ತನಿಖೆ ನಡೆಸಬೇಕೆಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂಥ್‍ಗೆ ಸೂಚನೆ ಕೊಡಲಾಗಿದೆ ಎಂದು ಬೊಮ್ಮಾಯಿ ತಿಳಿಸಿದ್ದಾರೆ.

ಹೆಣ್ಣೂರು, ಬಾಗಲೂರು ಮತ್ತು ಕೊತ್ತನೂರಿನಲ್ಲಿ ಕಳೆದ ಹಲವು ತಿಂಗಳಿನಿಂದ ಪಾಸ್‍ಪಾರ್ಟ್ ಅವಧಿ ಮುಗಿದರೂ ಸಹ ಕಾನೂನು ಬಾಹಿರವಾಗಿ ನೆಲೆಯೂರಿ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದರು. ಹೀಗಾಗಿ ಇಂದು ಸಿಸಿಬಿ ಪೊಲೀಸರು ದಿಢೀರ್ ದಾಳಿ ನಡೆಸಿ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಇದೇ ರೀತಿ ವೀಸಾ ಅವಧಿ ಮುಗಿದು ಕಾನೂನು ಬಾಹಿರವಾಗಿ ನೆಲೆಯೂರಿರುವರನ್ನು ವಿಚಾರಣೆಗೊಳಪಡಿಸುವಂತೆ ಬೊಮ್ಮಾಯಿ ಪೊಲೀಸರಿಗೆ ಸೂಚನೆ ಕೊಟ್ಟಿದ್ದಾರೆ.

Facebook Comments

Sri Raghav

Admin