2 ವಾರಗಳ ಹೈಡ್ರಾಮಾಗೆ ತೆರೆ, ವಿಶ್ವಾಸ ಕಳೆದುಕೊಂಡ ಸಿಎಂ, ಮೈತ್ರಿ ಸರ್ಕಾರ ಪತನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜು.23-ಕಳೆದ ಎರಡು ವಾರಗಳಿಂದ ನಡೆಯುತ್ತಿದ್ದ ರಾಜಕೀಯ ಹೈಡ್ರಾಮಾಕ್ಕೆ ಇಂದು ತೆರೆಬಿದ್ದಿದ್ದು, ವಿಶ್ವಾಸಮತ ಯಾಚನೆಯಲ್ಲಿ ಆಡಳಿತ ಪಕ್ಷಕ್ಕೆ ಸೋಲುಂಟಾಗಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರಿಂದ ಕಳೆದ 13 ತಿಂಗಳಿನಿಂದ ಅಸ್ತಿತ್ವದಲ್ಲಿದ್ದ ಕಾಂಗ್ರೆಸ್ – ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನಗೊಂಡಿದೆ.

ವಿಧಾನಸಭೆಯಲ್ಲಿ ನಡೆದ ಸುದೀರ್ಘ ಚರ್ಚೆ ಬಳಿಕ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರು ವಿಶ್ವಾಸ ಮತಯಾಚನೆ ಪ್ರಸ್ತಾವನೆಯನ್ನು ಮತದಾನಕ್ಕೆ ಕೋರಿದರು. ಬಳಿಕ ವಿಧಾನಸಭೆಯ ಪ್ರತಿಪಕ್ಷದ ನಾಯಕ ಬಿ. ಎಸ್. ಯಡಿಯೂರಪ್ಪ ಅವರು ಪ್ರತ್ಯೇಕವಾಗಿ ಮತಎಣಿಕೆ ನಡೆಸುವಂತೆ ಸ್ಪೀಕರ್ ಕೆ. ಆರ್. ರಮೇಶ್ ಕುಮಾರ್ ಅವರಿಗೆ ಮನವಿ ಮಾಡಿದರು.

ನಂತರ ಸರತಿಯಂತೆ ಒಬ್ಬೊಬ್ಬ ಶಾಸಕರನ್ನು ಎಣಿಕೆ ಮಾಡಲಾಯಿತು. ವಿಶ್ವಾಸ ಮತ ಪ್ರಸ್ತಾವನೆಯ ಪರ 99 ಮತಗಳು ಹಾಗೂ ವಿರುದ್ಧವಾಗಿ 105 ಮತಗಳು ಬಂದವು. ಪ್ರಕ್ರಿಯೆ ಮುಗಿದ ನಂತರ ರಮೇಶ್ ಕುಮಾರ್ ಅವರು ಫಲಿತಾಂಶವನ್ನು ಪ್ರಕಟಿಸಿ ವಿಶ್ವಾಸಮತ ಬಿದ್ದುಹೋಗಿದೆ ಎಂದು ಅಧಿಕೃತವಾಗಿ ಘೋಷಿಸಿದರು. ‘

ವಿಶ್ವಾಸಮತಯಾಚನೆಯಲ್ಲಿ ಸೋಲು ಉಂಟಾಗುತ್ತಿದ್ದಂತೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು ರಾಜಭವನಕ್ಕೆ ತೆರಳಿ ತಮ್ಮ ರಾಜೀನಾಮೆ ಪಾತ್ರವನ್ನು ಸಲ್ಲಿಸುವರು. ನಂತರ ಸದನವನ್ನು ಅನಿರ್ಧಾವಧಿ ವರೆಗೆ ಮುಂದೂಡಲಾಯಿತು.

# “ಇಲ್ನೋಡಿ ರಾಜೀನಾಮೆ ಪತ್ರ ನನ್ನ ಜೇಬಲ್ಲೇ ಇದೆ” : ಸ್ಪೀಕರ್ ರಮೇಶ್‍ಕುಮಾರ್ : 


ಬೆಂಗಳೂರು, ಜು.23-ಮಾತಿಗೆ ತಪ್ಪಬಾರೆಂದು ಬೆಳಗ್ಗೆಯಿಂದಲೇ ರಾಜೀನಾಮೆ ಪತ್ರ ಜೇಬಿನಲ್ಲೇ ಇಟ್ಟುಕೊಂಡು ಬಂದಿದ್ದೇನೆ ಎಂದು ವಿಧಾನ ಸಭಾಧ್ಯಕ್ಷ ರಮೇಶ್‍ಕುಮಾರ್ ನೊಂದು ನುಡಿದರು. ವಿಧಾನ ಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು, ವಿಶ್ವಾಸ ಮತಯಾಚನೆ ನಿರ್ಣಯ ಕುರಿತು ಮಾತನಾಡುವಾಗ ರಾಜೀನಾಮೆ ನೀಡಿರುವ ಶಾಸಕ ಎಚ್ ವಿಶ್ವನಾಥ್ ಅವರು ಸಭಾಧ್ಯಕ್ಷರು ಕುಮ್ಮಕ್ಕು ನೀಡುತ್ತಿದ್ದಾರೆಂದು ಆರೋಪಿಸಿದ್ದಾರೆ ಎಂದಾಗ ಮಧ್ಯ ಪ್ರವೇಶಿಸಿದ ಸಭಾಧ್ಯಕ್ಷರು ಭಾವುಕರಾಗಿ ಇಂದು ಮತ್ತೆ ಅಧಿವೇಶನದ ಕಲಾಪ ಮುಂದಕ್ಕೆ ಹೋದರೆ, ಮಾತಿಗೆ ತಪ್ಪಿದ ಆರೋಪಕ್ಕೆ ಗುರಿಯಾಗಬಾರದು ಎಂಬ ಕಾರಣಕ್ಕೆ ರಾಜೀನಾಮೆ ಪತ್ರಕ್ಕೆ ಸಹಿ ಮಾಡಿ ಸಿದ್ಧ ಮಾಡಿಕೊಂಡೇ ಬಂದಿದ್ದೇನೆ ಎಂದರು.

ಜೇಬಿನಲ್ಲೇ ಇದ್ದ ರಾಜೀನಾಮೆ ಪತ್ರವನ್ನು ಸದನದಲ್ಲಿ ಪ್ರದರ್ಶಿಸಿ, ಈ ಪತ್ರವನ್ನು ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರಿಗೆ ತಲುಪಿಸಿ. ನನ್ನ ತರ ಬದುಕಲು ನೂರು ಜನ್ಮ ಎತ್ತಬೇಕು ಎಂದು ತೀಕ್ಷಣವಾಗಿ ಪ್ರತಿಕ್ರಿಯಿಸಿದರು. ಛಲದಿಂದ ಸ್ವಾಭೀಮಾನದಿಂದ ಬದುಕುವವರ ಸಂಖ್ಯೆ ಕಡಿಮೆಯಾಗಿದೆ. ಮಾಜಿ ಮುಖ್ಯಮಂತ್ರಿ ದಿ.ದೇವರಾಜ್ ಅರಸು ಹಾಗೂ ಮಾಜಿ ಸಚಿವ ಕೆ.ಎಚ್.ರಂಗನಾಥ್ ಅವರ ನೆರಳಲ್ಲಿ ಬೆಳೆದಿದ್ದೇನೆ.

ಸಭಾಧ್ಯಕ್ಷರನ್ನು ಕುರಿತು ವಿಶ್ವನಾಥ್ ಅವರು ಮಾಡಿರುವ ಆರೋಪ ಸಭಾ ನಿಂದನೆ ಆಗಿದೆ. ಸಂಸದರು, ಸಚಿವರು, ಶಾಸಕರು ಆಗಿದ್ದ ವಿಶ್ವನಾಥ್ ಅವರಿಗೆ ನಿಯಮಾವಳಿ ಪ್ರಕಾರ ನಿಗದಿತ ನಮೂನೆಯಲ್ಲಿ ರಾಜೀನಾಮೆ ಕೊಡದವರು ಸಭಾಧ್ಯಕ್ಷರ ಮೇಲೆ ಆರೋಪ ಮಾಡುತ್ತಾರೆ. ಜಗತ್ತಿಗೆ ಗೊತ್ತಿರಲ್ಲಿ ನನ್ನ ಕ್ಷೇತ್ರದಲ್ಲಿ ಜಾತಿ ಬಲವಿಲ್ಲ. ಹಣ ಬಲವೂ ಇಲ್ಲ ಎಂದರು.

ಜುಲೈ 6ರಂದು ಸಮಯವೂ ಕೇಳಿರಲಿಲ್ಲ. ಬರುವುದಾಗಿಯೂ ಹೇಳಿರಲಿಲ್ಲ. ಆದರೂ ರಾಜೀನಾಮೆ ಪತ್ರ ಸ್ವೀಕರಿಸಿ ಸ್ವೀಕೃತಿ ಪತ್ರ ನೀಡಲಾಗಿದೆ. ಆದರೂ ಅವರು ಸುಪ್ರೀಂ ಕೋರ್ಟ್ ಮೋರೆ ಹೋಗಿದ್ದಾರೆ. ಸುಪ್ರೀಂ ಕೋರ್ಟ್ ಬಗ್ಗೆ ನನ್ನಗೆ ಅಪಾರ ಗೌರವವಿದೆ ಎಂದು ಹೇಳಿದರು.

# “ಯಡಿಯೂರಪ್ಪ ಸಿಎಂ ಆದರೆ ಹೇಗೆ ಕಂಟ್ರೋಲ್ ಮಾಡಬೇಕೆಂಬುದು ನನಗೆ ಗೊತ್ತು”


ಬೆಂಗಳೂರು, ಜು.23-ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರೆ ಹೇಗೆ ಕಂಟ್ರೋಲ್ ಮಾಡಬೇಕು ಎಂಬುದು ಗೊತ್ತಿದೆ ಎಂದು ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಹೇಳಿದಾಗ ಇಡೀ ಸದನ ನಗೆಗಡಲಲ್ಲಿ ತೇಲಿತು.

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿದ ವಿಶ್ವಾಸಮತ ಯಾಚನೆ ನಿರ್ಣಯವನ್ನು ಬೆಂಬಲಿಸಿ ಮಾತನಾಡುತ್ತಿದ್ದ ಸಚಿವರು ಯಡಿಯೂರಪ್ಪ ಅವರಿಗೆ ಒಳ್ಳೆಯದಾಗಲಿ ಎಂದು ಹೇಳುತ್ತಾ ಮೇಲಿನಂತೆ ಪ್ರತಿಕ್ರಿಯಿಸಿದಾಗ, ಮಧ್ಯೆ ಪ್ರವೇಶಿಸಿದ ಜಲ ಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್, ರೇವಣ್ಣ ಅವರ ಆಶೀರ್ವಾದ ಇದೆ ಎಂದ ಮೇಲೆ ನಾವೇನು ಮಾಡಲು ಆಗುವುದಿಲ್ಲ.

ಪಿಎಚ್ಡಿ ಮಾಡಿದವರು ನಿಮ್ಮ ಮುಂದೇ ಏನೇನೂ ಇಲ್ಲ ಎಂದರು. ಮಾತು ಮುಂದುವರೆಸಿದ ರೇವರ್ಣಣ ಅವರು, ಜಗದೀಶ ಶೆಟ್ಟರ ಮುಖ್ಯಮಂತ್ರಿಯಾಗಿದ್ದಾಗ ಅವರ ಬಜೆಟ್‍ಗೂ ಮುಹೂರ್ತ (ಟೈಂ) ಇಟ್ಟುಕೊಟ್ಟವನು ನಾನೇ ಎಂದು ಅವರು ಹೇಳಿದಾಗ ಶೆಟ್ಟರ ಸೇರಿದಂತೆ ಎಲ್ಲರೂ ನಗುತ್ತಿದ್ದರು.

ತಮ್ಮ ಕುಟುಂಬ ಯಾರಿಗೂ ಅನ್ಯಾಯ ಮಾಡಿಲ್ಲ ಎಂದ ಅವರು, ಎಚ್.ವಿಶ್ವನಾಥ ಸೇರಿದಂತೆ ರಾಜೀನಾಮೆ ನೀಡಿದ ಶಾಸಕರ ಕ್ಷೇತ್ರಗಳಿಗೆ ನೀಡಿರುವ ಹಾಗೂ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಅನುದಾನದ ಮಾಹಿತಿ ನೀಡಿದರು.

ರಾಜೀನಾಮೆ ನೀಡಿರುವ ಹದಿನೈದು ಶಾಸಕರು ಒಬ್ಬರೇ ಒಬ್ಬರು ದೇವರಾಣೆ ಗೆದ್ದು ಬರಲ್ಲ ಎಂದರು, ಇಂಥ ಶಾಸಕರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆಯಡಿ ಕ್ರಮಕೈಗೊಂಡು ವಿಶ್ವಾಸ ಮತವನ್ನು ಮತಕ್ಕೆ ಹಾಕುವ ಮುನ್ನ ನಿರ್ಣಯ ಕೈಗೊಳ್ಳಬೇಕು ಎಂದು ಸಭಾಧ್ಯಕ್ಷರಲ್ಲಿ ಒತ್ತಾಯಿಸಿದರು. ಮಾಜಿ ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಅವರನ್ನು ಮಂತ್ರಿಯನ್ನಾಗಿ ಮಾಡುವ ಮೂಲಕ ಶಾಪ ವಿಮೋಚನೆ ಮಾಡಬೇಕು ಎಂದು ಬಿಜೆಪಿಗೆ ಒತ್ತಾಯಿಸಿದರು.

# ಪಕ್ಷಾಂತರ ಪ್ರಜಾಪ್ರಭುತ್ವಕ್ಕೆ ಗಂಡಾಂತರ : ಸದನದಲ್ಲಿ ಸಿದ್ದು ಭಾಷಣ :
ಬೆಂಗಳೂರು, ಜು.23-ಬಿಜೆಪಿಯ ಆಪರೇಷನ್ ಕಮಲ ಮುಂದಿನ ಆರು ತಿಂಗಳಲ್ಲಿ ತಿರುಗುಬಾಣವಾಗಲಿದೆ. ನಿಮ್ಮ ಪಕ್ಷ ಸೇರಲಿರುವ ಅತೃಪ್ತರು ನಿಮಗೂ ಕೈ ಕೊಡಲಿದ್ದಾರೆ ಎಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಇಂದು ಹೇಳಿದ್ದಾರೆ.

ವಿಶ್ವಾಸಮತ ಯಾಚಿಸಿದ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜೀನಾಮೆ ನೀಡಿರುವವರ ವಿರುದ್ಧ ಪಕ್ಷಾಂತರ ನಿಷೇಧ ಕಾಯ್ದೆ ಅಡಿ ಕ್ರಮಗಳನ್ನು ಕೈಗೊಳ್ಳಲು ಸೂಕ್ತವಾಗಿದೆ.

2008ರಲ್ಲಿ ಪಕ್ಷ ವಿರೋಧ ಚಟುವಟಿಕೆ ನಡೆಸಿದ್ದ ಆಗಿನ ಶಾಸಕರಿಗೆ ಆದ ಗತಿಯೇ ಅತೃಪ್ತ ಶಾಸಕರಿಗೂ ಆಗುತ್ತದೆ, ಅದು ಆಗಲೇಬೇಕು ಎಂದು ಸಿದ್ದರಾಮಯ್ಯ ತಿಳಿಸಿದರು. ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಅಧಿಕಾರ ದುರುಪಯೋಗ ಮಾಡಿಕೊಂಡು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಿದೆ.

ಅತೃಪ್ತ ಶಾಸಕರನ್ನು ದಾರಿ ತಪ್ಪಿಸಿ ರಾಜಕೀಯ ಸಮಾಧಿ ಮಾಡಿದ್ದೀರಿ ಎಂದು ಮಾಜಿ ಮುಖ್ಯಮಂತ್ರಿ ವಿಷಾದಿಸಿದರು.

ಈ ರಾಜಕೀಯ ಬೆಳವಣಿಗೆಗೆ, ಆಪರೇಷನ್ ಕಮಲಕ್ಕೆ ಬಿಜೆಪಿಯೇ ನೇರ ಕಾರಣ. ಹಣದ ಆಮಿಷವೊಡ್ಡಿ ವಾಮಮಾರ್ಗದ ಮೂಲಕ ಅಧಿಕಾರ ಹಿಡಿಯುವ ಪ್ರಯತ್ನ ಪ್ರಜಾಪ್ರಭುತ್ವಕ್ಕೆ ಮಾರಕ ಎಂದು ಅವರು ಆರೋಪಿಸಿದರು.

#ಪಕ್ಷೇತರ ಶಾಸಕರಿಗಾಗಿ ಬಿಜೆಪಿ-ಕೈ ಕಾರ್ಯಕರ್ತರ ಕಿತ್ತಾಟ..!
ಬೆಂಗಳೂರು, ಜು.23-ರಾಜ್ಯ ರಾಜಕೀಯ ಬಿಕ್ಕಟ್ಟಿಗೆ ಕಾರಣವಾದ ಪಕ್ಷೇತರ ಶಾಸಕರು ಅಪಾರ್ಟ್‍ಮೆಂಟ್‍ನಲ್ಲಿದ್ದಾರೆ ಎಂಬ ಮಾಹಿತಿ ಪಡೆದು ಕಾಂಗ್ರೆಸ್ ಕಾರ್ಯಕರ್ತರು ರೇಸ್‍ಕೋರ್ಸ್ ರಸ್ತೆಯ ಸ್ಥಳಕ್ಕೆ ಬಿಜೆಪಿ ಕಾರ್ಯಕರ್ತರು ಮತ್ತು ಬಿಬಿಎಂಪಿ ಸದಸ್ಯರು ಆಗಮಿಸಿದಾಗ ಪರಸ್ಪರ ಮಾತಿನ ಚಕಮಕಿ ನಡೆದು ಕೈ-ಕೈ ಮಿಲಾಯಿಸಿದ ಘಟನೆ ಇಂದು ಸಂಜೆ ನಡೆದಿದೆ.

ವಿಧಾನಸಭೆಯಲ್ಲಿ ವಿಶ್ವಾಸಮತ ಕುರಿತ ಕ್ಲೈಮ್ಯಾಕ್ಸ್ ಹಂತದ ಚರ್ಚೆ ನಡೆಯುತ್ತಿದ್ದರೆ ಇತ್ತ ಹೈಗ್ರೌಂಡ್ಸ್ ಪೊಲೀಸ್ ಠಾಣೆ ವ್ಯಾಪ್ತಿಯ ರೇಸ್ ಕೋರ್ಸ್ ರಸ್ತೆಯ ಅಪಾರ್ಟ್‍ಮೆಂಟ್ ಬಳಿ ಸಂಜೆ 5 ಗಂಟೆಗೆ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಘರ್ಷಣೆ ನಡೆದು ಕೆಲಕಾಲ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.

ಹೈಗ್ರೌಂಡ್ಸ್ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿ ಪರಿಸ್ಥಿತಿಯನ್ನು ನಿಯಂತ್ರಿಸಿದರು. ಆ ಪ್ರದೇಶದಲ್ಲಿ ಕೆಲಕಾಲ ಬಿಗುವಿನ ವಾತಾವರಣವಿತ್ತು. ಮುನ್ನೆಚ್ಚರಿಕೆ ಕ್ರಮವಾಗ ಪೊಲೀಸರು ವ್ಯಾಪಕ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

# ‘ಇಂದೇ ಎಲ್ಲವೂ ಕೊನೆಯಾಗಲಿದೆ’ : ಸ್ಪೀಕರ್  : 
ವಿಶ್ವಾಸಮತ ಪ್ರಕ್ರಿಯೆ ಸೇರಿದಂತೆ ಇಂದು ಎಲ್ಲ ಪ್ರಕ್ರಿಯೆಗೆ ತೆರೆ ಎಳೆಯಬೇಕಾಗಿದೆ ಎಂದು ಸ್ಪೀಕರ್ ರಮೇಶ್‍ಕುಮಾರ್ ಸ್ಪಷ್ಟಪಡಿಸಿದರು. ದೊಮ್ಮಲೂರಿನ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದು ನಿಗದಿಯಂತೆ ವಿಶ್ವಾಸಮತ ಪ್ರಕ್ರಿಯೆಯನ್ನು ಪೂರ್ಣಗೊಳಿಸಲಾಗುವುದು. ಈ ಸಂಬಂಧ ನಿನ್ನೆ ಸದನದಲ್ಲಿ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ನಡೆದುಕೊಳ್ಳಲಾಗುವುದು ಎಂದು ಹೇಳಿದರು.

ಅತೃಪ್ತ ಶಾಸಕರ ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿದ ಅವರು, ಈ ಸಂಬಂಧ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಲಾಗಿದೆ. ಅವರಿಗೆ ತಿಳುವಳಿಕೆ ಕೊರತೆ ಇದ್ದರೆ ನಾನೇನು ಮಾಡಲು ಆಗುವುದಿಲ್ಲ. ಅವರೇನು ನನಗೆ ದಾಯಾದಿಗಳಲ್ಲ.

ರಾಜೀನಾಮೆ ಹೇಗೆ ನೀಡಬೇಕು ಎಂಬುದು ಗೊತ್ತಿಲ್ಲದಿದ್ದರೆ ನಾನೇನು ಮಾಡಲು ಆಗುತ್ತದೆ. ನೋಟಿಸ್ ಏಕೆ ಕೊಡುತ್ತೇವೆ ಎಂದು ತಿಳಿದುಕೊಳ್ಳದ ಕನಿಷ್ಠ ಜ್ಞಾನ ಇಲ್ಲದವರು ಶಾಸಕರಾಗಿದ್ದಾರೆ ಎಂದು ಸ್ಪೀಕರ್ ಗರಂ ಆದರು.

ಶಾಸಕರು ಬರದಿದ್ದರೆ ನಾನೇನು ಮಾಡಲು ಆಗುವುದಿಲ್ಲ. ನನ್ನ ಪಾಲಿನ ಕೆಲಸವನ್ನು ನಾನು ಮಾಡುತ್ತೇನೆ ಎಂದು ಸ್ಪೀಕರ್ ಹೇಳಿದರು. ಈ ನಡುವೆ ಅತೃಪ್ತ ಶಾಸಕರು ವಿಚಾರಣೆಗೆ ಹಾಜರಾಗುವಂತೆ ಸ್ಪೀಕರ್ ನೋಟಿಸ್ ನೀಡಿದ್ದು, ಇದಕ್ಕೆ ಸಂಬಂಧಿಸಿದಂತೆ ಇಂದು ವಿಚಾರಣೆಗೆ ಬರಲು ಸಾಧ್ಯವಿಲ್ಲ ಎಂದು ಅತೃಪ್ತ ಶಾಸಕರು ಪತ್ರ ಬರೆದಿದ್ದು, ವಿಚಾರಣೆಗೆ ಹಾಜರಾಗಲು ನಾಲ್ಕು ವಾರಗಳ ಕಾಲಾವಕಾಶ ನೀಡಲು ಮನವಿ ಮಾಡಿದ್ದಾರೆ.

ವಿಚಾರಣೆಗೆ ಹಾಜರಾಗುವ ಪ್ರಕ್ರಿಯೆಗೆ ಏಳು ದಿನಗಳ ಕಾಲಾವಕಾಶ ನೀಡಬೇಕು. ನಮಗೆ ಪಕ್ಷದಿಂದ ನೀಡಿರುವ ದೂರು ಹಾಗೂ ಆರೋಪದ ದಾಖಲೆಗಳು ದೊರೆತಿಲ್ಲ. ನಾವು ಅನಿವಾರ್ಯ ಕಾರಣಗಳಿಂದ ಬೇರೆಡೆ ಇದ್ದು, ವಿಚಾರಣೆಗೆ ಕಾಲಾವಕಾಶ ನೀಡಬೇಕೆಂದು ಶಾಸಕರು ಮನವಿ ಮಾಡಿದ್ದಾರೆ. ಅತೃಪ್ತ ಶಾಸಕರ ಪರವಾಗಿ ವಿಚಾರಣೆಗೆ ವಕೀಲರು ಸ್ಪೀಕರ್ ಮುಂದೆ ಹಾಜರಾಗಲಿದ್ದಾರೆ.

# ವಿಚಾರಣೆಗೆ ಹಾಜರಾಗಲು 4 ವಾರಗಳ ಸಮಯ ಕೇಳಿದ ಅತೃಪ್ತರು :
ಇಂದು ವಿಚಾರಣೆಗೆ ಹಾಜರಾಗುವಂತೆ ಅತೃಪ್ತ ಶಾಸಕರಿಗೆ ಸ್ಪೀಕರ್ ರಮೇಶ್ ಕುಮಾರ್ ಸೂಚಿಸಿರುವ ಹಿನ್ನೆಲೆಯಲ್ಲಿ, ತಮಗೆ ನಾಲ್ಕು ವಾರಗಳ ಸಮಯ ಬೇಕೆಂದು ಭಿನಮತೀಯರು ಕೇಳಿಕೊಂಡಿದ್ದಾರೆ.  ಮುಂಬೈನ ರೆಸಾರ್ಟ್ ನಿಂದಲೇ ಸ್ಪೀಕರ್ ರಮೇಶ್ ಕುಮಾರ್ ಅವರಿಗೆ ಪತ್ರ ಮುಖೇನ ಮನವಿ ಮಾಡಿರುವ ಅತೃಪ್ತ ಶಾಸಕರು, ಕಾನೂನಿನ ಪ್ರಕಾರವೇ ರಾಜೀನಾಮೆ ಬಳಿಕ ಆ ಸಂಬಂಧ ಉತ್ತರಿಸಲು 7 ದಿನಗಳ ಕಾಲಾವಕಾಶವಿದೆ.

ಪ್ರಸ್ತುತ ನಾವು ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಅನರ್ಹತೆ ವಿಚಾರಕ್ಕೆ ಸಂಬಂಧಿಸಿದಂತೆ ನಾವು ನಮ್ಮ ವಕೀಲರೊಂದಿಗೆ ಚರ್ಚಿಸಬೇಕು. ಹೀಗಾಗಿ ನಮಗೆ ಮತ್ತಷ್ಟು ದಿನಗಳ ಕಾಲ ಕಾಲಾವಕಾಶ ಬೇಕಿದೆ ಎಂದು ತಿಳಿಸಿದ್ದಾರೆ.

ಅನರ್ಹತೆ ವಿಚಾರ ಸಂಬಂಧ ಪಕ್ಷದ ಕಡೆಯಿಂದ ಯಾವುದೇ ನೋಟಿಸ್ ಬಂದಿಲ್ಲ. ಆದರೆ ನೀವು ಇಂದು ಹಾಜರಾಗಿ ನೋಟಿಸ್ ನೀಡಿದ್ದೀರಿ. ಕೆಲ ಅನಿವಾರ್ಯ ಕಾರಣಗಳಿಂದ ನಾವು ಹೊರಗಡೆ ಇದ್ದು ನಿಮ್ಮ ಪ್ರಶ್ನೆಗೆ ಉತ್ತರಿಸಲು ನಮಗೆ 4 ವಾರಗಳ ಗಡವು ಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ.

 

Facebook Comments

Sri Raghav

Admin