ವಿಚಾರಣೆಯನ್ನು ನಾಳೆಗೆ ಮುಂದೂಡಿದ ಸುಪ್ರೀಂ ಕೋರ್ಟ್, ಮುಂದುವರೆಯಲಿದೆ ಬೃಹನ್ನಾಟಕ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಜು.22-ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿ ಅವರಿಗೆ ಇಂದು ಸಂಜೆಯೊಳಗೆ ವಿಶ್ವಾಸಮತ ಯಾಚಿಸಲು ಸೂಚನೆ ನೀಡಬೇಕೆಂದು ಪಕ್ಷೇತರ ಶಾಸಕರು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಳ್ಳಲು ಸುಪ್ರೀಂಕೋರ್ಟ್ ನಿರಾಕರಿಸಿದ್ದು, ಸರ್ಕಾರ ಉಳಿಸಿಕೊಳ್ಳುವ / ಉರುಳಿಸುವ ರಾಜಕೀಯ ಮೇಲಾಟ ಇನ್ನೂ ಮುಂದುವರೆಯುವ ಸಾಧ್ಯತೆ ಇದೆ.

ನ್ಯಾಯಾಲಯ ಅರ್ಜಿ ವಿಚಾರಣೆಯನ್ನು ಇಂದೇ ಕೈಗೆತ್ತಿಕೊಳ್ಳಲು ನಿರಾಕರಿಸಿರುವುದರಿಂದ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರ ಸ್ವಾಮಿಯವರು ಬಹುನಿರೀಕ್ಷಿತ ವಿಶ್ವಾಸಮತ ಯಾಚನೆಯನ್ನು ನಾಳೆಗೆ ಮುಂದೂಡಬಹುದು.

ಆದರೆ, ಅಂತಿಮವಾಗಿ ವಿಧಾನಸಭೆ ಸ್ಪೀಕರ್ ಕೆ.ಆರ್.ರಮೇಶ್‍ಕುಮಾರ್ ಅವರ ತೆಗೆದುಕೊಳ್ಳುವ ನಿರ್ಧಾರದ ಮೇಲೆ ದೋಸ್ತಿ ಸರ್ಕಾರದ ಅಳಿವು-ಉಳಿವಿನ ಭವಿಷ್ಯ ನಿಂತಿದೆ. ಶುಕ್ರವಾರ ಕಲಾಪವನ್ನು ಮುಂದೂಡುವ ವೇಳೆ ಸೋಮವಾರಕ್ಕೆ ತೆರೆ ಎಳೆಯುವುದಾಗಿ ಸದನದಲ್ಲಿ ಹೇಳಿದ್ದರು. ಹೀಗಾಗಿ ಅವರ ಒಂದು ತೀರ್ಮಾನ ಸಮ್ಮಿಶ್ರ ಸರ್ಕಾರದ ಭವಿಷ್ಯವನ್ನು ತೀರ್ಮಾನಿಸಲಿದೆ.

ಪಕ್ಷೇತರ ಶಾಸಕರಾದ ಎಚ್.ನಾಗೇಶ್ ಮತ್ತು ಆರ್.ಶಂಕರ್ ಅವರು ಇಂದು ಸಂಜೆ 5 ಗಂಟೆಯೊಳಗೆ ಬಹುಮತ ಸಾಬೀತುಪಡಿಸಲು ಕರ್ನಾಟಕದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗೆ ನಿರ್ದೇಶನ ನೀಡಬೇಕೆಂದು ಮೇಲ್ಮನವಿ ಸಲ್ಲಿಸಿದ್ದರು.

ಶಾಸಕರ ಪರ ಮೇಲ್ಮನವಿ ಸಲ್ಲಿಸಿದ್ದ ಸುಪ್ರೀಂಕೋರ್ಟ್‍ನ ಹಿರಿಯ ವಕೀಲ ಮುಕುಲ್ ರೋಹ್ಟಗಿ ತಕ್ಷಣವೇ ಅರ್ಜಿ ಕೈಗೆತ್ತಿಕೊಳ್ಳುವಂತೆ ಮುಖ್ಯ ನ್ಯಾಯಮೂರ್ತಿಗಳಾದ ರಂಜನ್‍ಗೊಗಾಯ್, ದೀಪಕ್ ಗುಪ್ತಾ ಹಾಗೂ ಅನಿರುದ್ಧ್ ಬೋಸ್ ಅವರ ತ್ರಿಸದಸ್ಯ ಪೀಠಕ್ಕೆ ಮನವಿ ಮಾಡಿದರು.

ಆದರೆ ಇಂದು ಅರ್ಜಿ ವಿಚಾರಣೆಯನ್ನು ತುರ್ತಾಗಿ ಕೈಗೆತ್ತಿಕೊಳ್ಳಲು ನಿರಾಕರಿಸಿದ ನ್ಯಾಯಪೀಠ ತರಾತುರಿಯಲ್ಲಿ ಅರ್ಜಿ ವಿಚಾರಣೆ ನಡೆಸಲು ಸಾಧ್ಯವಿಲ್ಲ. ನಾಳೆ ಬೇಕಾದರೆ ನೋಡೋಣ ಎಂದು ವಿಚಾರಣೆಯನ್ನು ಮುಂದೂಡಿತು.

ಈ ಹಿಂದೆ 2018ರ ಮೇ 18 ರಂದು ಸುಪ್ರೀಂಕೋರ್ಟ್ ಒಂದೇ ದಿನದಲ್ಲಿ ಬಹುಮತ ಸಾಬೀತುಪಡಿಸಬೇಕೆಂದು ಆದೇಶ ನೀಡಿತ್ತು. ಈಗ ಅದೇ ರೀತಿಯ ಆದೇಶವನ್ನು ನಮಗೂ ನೀಡಿ ಎಂದು ನ್ಯಾಯಾಲಯಕ್ಕೆ ರೋಹ್ಟಗಿ ಮನವಿ ಮಾಡಿದರು.

ರಾಜ್ಯಪಾಲರು ಎರಡು ಬಾರಿ ಬಹುಮತ ಸಾಬೀತುಪಡಿಸಿ ಎಂದು ಸೂಚನೆ ನೀಡಿದ್ದರೂ ಮುಖ್ಯಮಂತ್ರಿ ಪಾಲನೆ ಮಾಡಿಲ್ಲ. ನ್ಯಾಯಾಲಯವೇ ನಿರ್ದೇಶನ ನೀಡಬೇಕಾದ ಅಗತ್ಯವಿದೆ ಎಂದು ಮನವರಿಕೆ ಮಾಡಿಕೊಟ್ಟರು.

ಆದರೆ ಇದನ್ನು ಒಪ್ಪದ ನ್ಯಾಯಾಲಯ ಇಂದೇ ಅರ್ಜಿ ವಿಚಾರಣೆ ನಡೆಸಲು ಸಾಧ್ಯವಿಲ್ಲ. ನಾಳೆ ಮೊದಲನೆ ಪ್ರಕರಣವನ್ನಾಗಿ ಪರಿಗಣಿಸಲು ಯತ್ನಿಸುತ್ತೇವೆ. ಇಂದು ಸದನದಲ್ಲಿ ಯಾವ ರೀತಿಯ ಕಲಾಪಗಳು ನಡೆಯುತ್ತವೆ ಎಂಬುದು ಗಮನಿಸುತ್ತೇವೆ. ಯಾರು ಹೇಗೆ ನಡೆದುಕೊಳ್ಳುತ್ತಾರೆ ನೋಡೋಣ. ತಕ್ಷಣವೇ ಆದೇಶ ನೀಡಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.

ಕಳೆದ ವಾರ ರಾಜೀನಾಮೆ ನೀಡಿರುವ 15 ಮಂದಿ ಶಾಸಕರ ಪ್ರಕರಣ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ಮಧ್ಯಂತರ ಆದೇಶದ ವಿರುದ್ಧ ಈಗಾಗಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರ ವಕೀಲರು ಮೇಲ್ಮನವಿ ಸಲ್ಲಿಸಿದ್ದಾರೆ.

ಪಕ್ಷಾಂತರ ನಿಷೇಧ ಕಾಯ್ದೆ ಷೆಡ್ಯೂಲ್ 10ರ ಪ್ರಕಾರ ವಿಪ್ ಉಲ್ಲಂಘನೆ ಮಾಡುವ ಶಾಸಕರ ಸದಸ್ಯತ್ವವನ್ನು ಅನರ್ಹಗೊಳಿಸುವ ಸಂಬಂಧ ನ್ಯಾಯಾಲಯ ಸ್ಪಷ್ಟನೆ ನೀಡಬೇಕೆಂದು ಕೆಪಿಸಿಸಿ ಪ್ರತ್ಯೇಕವಾದ ಅರ್ಜಿಯನ್ನು ಸಲ್ಲಿಸಿದೆ.

ಇದರ ಜೊತೆಗೆ ರಾಜ್ಯಪಾಲರು ವಿಶ್ವಾಸಮತ ಯಾಚನೆ ಮಾಡಲು ನೀಡುತ್ತಿರುವ ಗಡುವು ಪ್ರಶ್ನಿಸಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪರ ಹಿರಿಯ ವಕೀಲ ರಾಜೀವ್ ದವನ್ ಈಗಾಗಲೇ ಅರ್ಜಿಯನ್ನು ಸಲ್ಲಿಕೆ ಮಾಡಿದ್ದಾರೆ. ಕೆಪಿಸಿಸಿ ಪರ ಹಿರಿಯ ವಕೀಲ ಕಪಿಲ್ ಸಿಬಾಲ್ ವಾದ ಮಂಡಿಸಲಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್‍ನ 15 ಮಂದಿ ಶಾಸಕರು ಕಳೆದ ಜು.6 ರಂದು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ತಮ್ಮ ರಾಜೀನಾಮೆಯನ್ನು ತಕ್ಷಣ ಅಂಗೀಕರಿಸುವಂತೆ ವಿಧಾನಸಭೆ ಸ್ಪೀಕರ್‍ಗೆ ನಿರ್ದೇಶನ ನೀಡಬೇಕೆಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು.

ಆದರೆ ಸ್ಪೀಕರ್‍ಗೆ ನಿರ್ದೇಶನ ನೀಡಲು ನಿರಾಕರಿಸಿದ ನ್ಯಾಯಾಲಯ ರಾಜೀನಾಮೆ ನೀಡಿರುವ ಶಾಸಕರು ಕಡ್ಡಾಯವಾಗಿ ಸದನಕ್ಕೆ ಬರುವಂತೆ ಒತ್ತಡ ಹೇರುವಂತಿಲ್ಲ ಹಾಗೂ ಅವರನ್ನು ಅನರ್ಹಗೊಳಿಸುವಂತಿಲ್ಲ ಎಂದು ಮಧ್ಯಂತರ ಆದೇಶದಲ್ಲಿ ತಿಳಿಸಿತ್ತು. ಈ ಆದೇಶದಲ್ಲಿ ಕೆಲವು ಗೊಂದಲಗಳಿರುವುದರಿಂದ ಸ್ಪಷ್ಟನೆ ಕೋರಿ ಕೆಪಿಸಿಸಿ ಮೇಲ್ಮನವಿ ಸಲ್ಲಿಸಿದೆ. ಇದರ ನಡುವೆ ಶಾಸಕರನ್ನು ಮನವೊಲಿಸುವ ಕಸರತ್ತು ಮುಂದುವರೆದಿದೆ.

Facebook Comments

Sri Raghav

Admin