ಅ.23ಕ್ಕೆ ವಿಚಾರಣೆ ಮುಂದೂಡಿದ ಸುಪ್ರೀಂ, ಅನರ್ಹರಿಗೆ ನಿರಾಸೆ..!

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ, ಅ. 21-ನಾಳೆ ನಡೆಯಬೇಕಿದ್ದ ಅನರ್ಹ ಶಾಸಕರ ವಿಚಾರಣೆಯನ್ನು ಸುಪ್ರೀಂಕೋರ್ಟ್ ಅ.23ಕ್ಕೆ ಮುಂದೂಡಿದೆ. ಈ ಮೂಲಕ ಅನರ್ಹ ಶಾಸಕರಿಗೆ ಕೊಂಚ ನಿರಾಸೆಯಾದಂತಾಗಿದೆ.

ಸ್ಪೀಕರ್ ಆದೇಶ ಕ್ರಮ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗಿದ್ದ 17 ಮಂದಿ ಅನರ್ಹ ಶಾಸಕರ ಮುಂದೂಡಲ್ಪಟ್ಟ ವಿಚಾರಣೆ ನ್ಯಾಯಮೂರ್ತಿ ಎನ್.ವಿ.ರಮಣ ಅವರ ನೇತೃತ್ವದ ತ್ರಿಸದಸ್ಯ ಪೀಠದಲ್ಲಿ ನಾಳೆಯಿಂದ ಆರಂಭವಾಗಬೇಕಿತ್ತು.

ಕಾಂಗ್ರೆಸ್ ಪರ ವಕೀಲರಾದ ಕಪಿಲ್ ಸಿಬಾಲ್ ಅವರು ಆಕ್ಷೇಪಣೆ ಸಲ್ಲಿಸಲು ಒಂದು ವಾರ ಕಾಲಾವಕಾಶ ಬೇಕೆಂದು ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಒಂದು ದಿನ ಕಾಲಾವಕಾಶ ನೀಡಿ ವಿಚಾರಣೆಯನ್ನು ಮುಂದೂಡಲಾಗಿದೆ. ಈಗಾಗಲೇ ಸಾಕಷ್ಟು ಸಮಯವಾಗಿದೆ. ಒಂದು ವಾರ ಕಾಲಾವಕಾಶ ನೀಡಲು ಆಗುವುದಿಲ್ಲ. ಒಂದು ದಿನ ಕಾಲಾವಕಾಶ ನೀಡುತ್ತೇವೆ. ಅಷ್ಟರಲ್ಲಿ ನಿಮ್ಮ ಆಕ್ಷೇಪಣೆ ಸಲ್ಲಿಸಿ ಎಂದು ನಾಳೆಯ ವಿಚಾರಣೆಯನ್ನು ಅ.23ಕ್ಕೆ ಸುಪ್ರೀಂಕೋರ್ಟ್ ಮುಂದೂಡಿದೆ.

17 ಅನರ್ಹ ಶಾಸಕರ ಕ್ಷೇತ್ರಗಳ ಪೈಕಿ 15 ಕ್ಷೇತ್ರಗಳಲ್ಲಿ ಈಗಾಗಲೇ ಉಪಚುನಾವಣೆ ಘೋಷಣೆಯಾಗಿದೆ. ನಾವು ನೀಡಿರುವ ರಾಜೀನಾಮೆ ಅಂಗೀಕರಿಸಿ ನಮಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡಬೇಕೆಂಬುದು ಅನರ್ಹರ ವಾದವಾಗಿದೆ.

ಅಧಿಕಾರ ಮತ್ತು ಇನ್ನಿತರ ಆಮಿಷಕ್ಕೆ ಒಳಗಾಗಿ ಶಾಸಕರು ರಾಜೀನಾಮೆ ನೀಡಿದ್ದಾರೆ. ಸ್ಪೀಕರ್ ಅವರ ಅನರ್ಹತೆ ಕ್ರಮವನ್ನು ಎತ್ತಿ ಹಿಡಿಯಬೇಕೆಂಬುದು ಕಾಂಗ್ರೆಸ್ ಪರ ವಾದವಾಗಿದೆ.
ನಾಳೆಯಿಂದ ವಿಚಾರಣೆ ಆರಂಭವಾಗಲಿದ್ದು, ನ್ಯಾಯಾಲಯ ಯಾವ ತೀರ್ಪು ನೀಡಲಿದೆ ಎಂಬುದು ಕಾದು ನೋಡಬೇಕು.

ಡಿ.5 ರಂದು ಉಪಚುನಾವಣೆ ಘೋಷಣೆಯಾಗಿದ್ದು, ಅನರ್ಹ ಕ್ಷೇತ್ರಗಳಲ್ಲಿ ಈಗಾಗಲೇ ಬಿರುಸಿನ ರಾಜಕೀಯ ಚಟುವಟಿಕೆಗಳು ನಡೆಯುತ್ತಿವೆ. ಅಧಿಸೂಚನೆ ಹೊರಡಿಸುವ ಮುನ್ನವೇ ಚುನಾವಣಾ ಪ್ರಚಾರ ಪ್ರಾರಂಭಗೊಂಡಿದೆ. ಅನರ್ಹರು ತಮ್ಮ ಪರವಾಗಿ ತೀರ್ಪು ಬರುತ್ತದೆ ಎಂದು ತೀವ್ರ ವಿಶ್ವಾಸದಲ್ಲಿದ್ದಾರೆ.

ಬಿಜೆಪಿಯಿಂದ ಸ್ಪರ್ಧಿಸಲು ಸಾಕಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಹಲವು ಕ್ಷೇತ್ರಗಳಲ್ಲಿ ಕೆಲವರಿಗೆ ಬಿಜೆಪಿಯಿಂದ ಸ್ಪರ್ಧಿಸಲು ಬಿಜೆಪಿ ಪಕ್ಷದವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. 17 ಮಂದಿ ರಾಜೀನಾಮೆ ನೀಡಿದ್ದರಿಂದಲೇ ಅಧಿಕಾರಕ್ಕೆ ಬಂದಿದ್ದು, ಅವರಿಗೆ ಸಾಥ್ ನೀಡಬೇಕಾದುದು ನಮ್ಮ ಕರ್ತವ್ಯ ಎಂದು ಮನವೊಲಿಕೆ ಯತ್ನಗಳು ನಡೆಯುತ್ತಿವೆ.
ಈ ನಡುವೆ ನ್ಯಾಯಾಲಯ ಯಾವ ತೀರ್ಮಾನ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕು.

Facebook Comments

Sri Raghav

Admin