ಇಂದೇ ಅನರ್ಹ ಶಾಸಕರ ವಾದ-ಪ್ರತಿವಾದ ಪೂರ್ಣಗೊಳಿಸುವಂತೆ ಸುಪ್ರೀಂ ಸೂಚನೆ

ಈ ಸುದ್ದಿಯನ್ನು ಶೇರ್ ಮಾಡಿ

ನವದೆಹಲಿ,ಅ.23- ಅನರ್ಹ ಶಾಸಕರ ವಾದ ಮತ್ತು ಪ್ರತಿವಾದವನ್ನು ಇಂದೇ ಎರಡು ಕಡೆಯ ವಕೀಲರು ಪೂರ್ಣಗೊಳಿಸಬೇಕೆಂದು ಸುಪ್ರೀಂಕೋರ್ಟ್ ನ್ಯಾಯಾಧೀಶರು ಕಟ್ಟುನಿಟ್ಟಿನ ಸೂಚನೆಯನ್ನು ನೀಡಿದ ಪ್ರಸಂಗ ನಡೆಯಿತು.

ಬೆಳಗ್ಗೆ 11 ಗಂಟೆಗೆ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಎನ್.ವಿ. ರಮಣ ನೇತೃತ್ವದ ಸಂಜೀವ್ ಖನ್ನಾ, ಕೃಷ್ಣಮುರುಳಿ ಅವರಿದ್ದ ತ್ರಿಸದಸ್ಯ ಪೀಠದ ಮುಂದೆ ಎರಡೂ ಕಡೆಯ ವಕೀಲರು ವಾದ ಮಂಡಿಸಲು ಇನ್ನಷ್ಟು ಸಮಯಾವಕಾಶ ಬೇಕೆಂದು ಮನವಿ ಮಾಡಿದಾಗ, ನ್ಯಾಯಮೂರ್ತಿಗಳು ಸಿಡಿಮಿಡಿಗೊಂಡರು.

ಒಂದೇ ಪ್ರಕರಣವನ್ನು ವಾರಗಟ್ಟಲೇ ಎಳೆದಾಡಲು ಸಾಧ್ಯವಿಲ್ಲ. ಈಗಾಗಲೇ ಕೊಟ್ಟಿರುವ ಸಮಯವೇ ಹೆಚ್ಚಾಗಿದೆ. ಇನ್ನು ಹೆಚ್ಚಿನ ಸಮಯ ನೀಡಬೇಕೆಂದರೆ ಬೇರೆ ಪ್ರಕರಣಗಳನ್ನು ಇತ್ಯರ್ಥ ಮಾಡುವುದು ಬೇಡವೆ? ಇಂದೇ ಎರಡೂ ಕಡೆ ವಕೀಲರು ವಾದ-ಪ್ರತಿವಾದವನ್ನು ಮುಗಿಸಬೇಕೆಂದು ನ್ಯಾಯಮೂರ್ತಿ ರಮಣ ಅವರು ಸೂಚನೆ ಕೊಟ್ಟರು.

ಸ್ಪೀಕರ್ ಪರವಾಗಿ ವಾದ ಮಂಡಿಸಿದ್ದ ಹಿರಿಯ ವಕೀಲ ಕಪಿಲ್ ಸಿಬಾಲ್ ಕಲಾಪ ಆರಂಭವಾದಾಗ ಗೈರು ಹಾಜರಾಗಿದ್ದರು. ಈ ಬಗ್ಗೆ ನ್ಯಾಯಾಧೀಶರು ಗಮನಸೆಳೆದಾಗ ಅವರು ಮಧ್ಯಾಹ್ನ 2 ಗಂಟೆಗೆ ಬರುತ್ತಾರೆ. ವಾದ ಮಂಡನೆಗೆ ಇನ್ನಷ್ಟು ಸಮಯಾವಕಾಶ ನೀಡುವಂತೆ ಅವರ ಪರ ವಕೀಲರು ಮನವಿ ಮಾಡಿದರು.

ಇದರಿಂದ ಅಸಮಾಧಾನಗೊಂಡ ನ್ಯಾಯಮೂರ್ತಿಗಳು ಕೆಲಹೊತ್ತು ಅರ್ಜಿ ವಿಚಾರಣೆಯನ್ನು ಮುಂದೂಡಿ ಪುನಃ ಕೈಗೆತ್ತಿಕೊಂಡರು. ಈ ವೇಳೆ ಜೆಡಿಎಸ್ ಪರವಾಗಿ ಹಿರಿಯ ವಕೀಲ ಧವನ್, ನನಗೆ ವಾದ ಮಂಡಿಸಲು ಸಾಕಷ್ಟು ಸಮಯಾವಕಾಶ ಬೇಕು. ಪ್ರತಿಯೊಂದು ಕೂಲಂಕಷವಾಗಿ ಅಧ್ಯಯನ ಮಾಡುತ್ತಿದ್ದೇನೆ ಎಂದು ನ್ಯಾಯಾಧೀಶರ ಗಮನಸೆಳೆದರು.

ನಾವು ಯಾರೊಬ್ಬರಿಗೂ ಹೆಚ್ಚಿನ ಸಮಯವನ್ನು ನೀಡುವುದಿಲ್ಲ. ವಾರಗಟ್ಟಲೇ ಯಾವ ಪ್ರಕರಣದ ವಾದವನ್ನು ಮಾಡಲು ಸಾಧ್ಯವಿಲ್ಲ. ಕಪಿಲ್ ಸಿಬಾಲ್, ಧವನ್ ಹಾಗೂ ನ್ಯಾಯಾಂಗ ಪರ ವಕೀಲ ಸುಂದರ್ ಸೇರಿದಂತೆ ಎಲ್ಲರೂ ತಮ್ಮ ವಾದ-ವಿವಾದವನ್ನು ಪೂರ್ಣಗೊಳಿಸಬೇಕೆಂದು ತಾಕೀತು ಮಾಡಿ ವಿಚಾರಣೆಯನ್ನು 2 ಗಂಟೆಗೆ ಮುಂದೂಡಿದರು.

ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಕಾಂಗ್ರೆಸ್‍ನ 13, ಜೆಡಿಎಸ್‍ನ ಮೂರು ಹಾಗೂ ಓರ್ವ ಪಕ್ಷೇತರ ಶಾಸಕನನ್ನು ನಿಕಟಪೂರ್ವ ವಿಧಾನಸಭೆ ಸ್ಪೀಕರ್ ರಮೇಶ್‍ಕುಮಾರ್ ಅನರ್ಹಗೊಳಿಸಿದ್ದರು.

ಸ್ಪೀಕರ್ ಅವರ ಆದೇಶವನ್ನು ಪ್ರಶ್ನಿಸಿ ಅನರ್ಹರು ಸುಪ್ರೀಂಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದು, ಡಿ.5ರಂದು ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದ್ದು, ಅಷ್ಟರೊಳಗೆ ಪ್ರಕರಣ ಇತ್ಯರ್ಥಗೊಂಡರೆ ಅನರ್ಹರಿಗೆ ತಮ್ಮ ಕ್ಷೇತ್ರಗಳಲ್ಲಿ ಸ್ಪರ್ಧಿಸುವ ಅವಕಾಶ ಸಿಗಲಿದೆ. ಹೀಗಾಗಿ ಅಷ್ಟರೊಳಗೆ ತೀರ್ಪು ಹೊರಬೀಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

Facebook Comments

Sri Raghav

Admin