ಸಾಲ ಮನ್ನಾ ವಿಚಾರದಲ್ಲಿ ರೈತರಿಗೆ ಮತ್ತೊಂದು ಸಿಹಿಸುದ್ದಿ..!

ಈ ಸುದ್ದಿಯನ್ನು ಶೇರ್ ಮಾಡಿ

Bandeppa-Kasyampur--01

ಬೆಂಗಳೂರು, ಆ.20- ಒಂದು ಕುಟುಂಬಕ್ಕೆ ಒಬ್ಬರಿಗೆ ಮಾತ್ರ ಕೃಷಿ ಸಾಲ ಮನ್ನಾ ಸೌಲಭ್ಯ ಎಂಬ ನಿಯಮವನ್ನು ತಿದ್ದುಪಡಿ ಮಾಡಿ ಕುಟುಂಬದ ಎಷ್ಟೇ ಮಂದಿ ಸಾಲ ಪಡೆದಿದ್ದರೂ ಅವರಿಗೆ ಈ ಸೌಲಭ್ಯ ಅನ್ವಯವಾಗುವಂತೆ ತಿದ್ದುಪಡಿ ಮಾಡಲಾಗಿದೆ ಎಂದು ಸಹಕಾರ ಸಚಿವ ಬಂಡೆಪ್ಪ ಕಾಶಂಪುರ್ ಹೇಳಿದರು. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ 103ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನಸೌಧದ ಮುಂದಿರುವ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೈತರ ಸಾಲ ಮನ್ನಾ ಆದೇಶ ಹೊರಡಿಸುವಾಗ ಕುಟುಂಬದಲ್ಲಿ ಒಬ್ಬರಿಗೆ ಮಾತ್ರ ಸಾಲ ಮನ್ನಾ ಎಂಬ ಆದೇಶ ನಿಯಮವನ್ನು ಸೇರಿಸಲಾಗಿದೆ. ಅದನ್ನು ಮಾರ್ಪಾಡು ಮಾಡಿ ಪರಿಷ್ಕøತ ಆದೇಶ ಹೊರಡಿಸಲು ಕಾಲಾವಕಾಶ ಅಗತ್ಯವಿದ್ದ ಕಾರಣ ಯಥಾವತ್ತು ಪ್ರಕಟಣೆ ಮಾಡಲಾಗಿದೆ. ಆದರೆ, ನಮ್ಮ ಸರ್ಕಾರ ರೈತರ ಋಣಮುಕ್ತ ಗುರಿ ಹೊಂದಿದ್ದು, ಕುಟುಂಬದ ಎಷ್ಟೇ ಮಂದಿ ಸಾಲ ಪಡೆದಿದ್ದರೂ ಎಲ್ಲವನ್ನು ಮನ್ನಾ ಮಾಡಲು ನಿರ್ಧಾರಿಸಸಲಾಗಿದೆ ಎಂದರು.

ಈ ಮೊದಲು ಹೊರಡಿಸಿದ್ದ ಆದೇಶದಲ್ಲಿದ್ದ ಕುಟುಂಬದ ಒಬ್ಬರಿಗೆ ಎಂಬ ಪದವನ್ನು ತೆಗೆಯಲು ಈಗಾಗಲೇ ಸಂಪುಟದಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿದೆ. ಶೀಘ್ರವೇ ಪರಿಷ್ಕøತ ಆದೇಶ ಹೊರಡಿಸಲಾಗುವುದು ಎಂದು ಮಾಹಿತಿ ನೀಡಿದರು. ನೆರೆ ಪೀಡಿತ ಸಂತ್ರಸ್ಥರಿಗೆ ಎಚ್.ಡಿ.ರೇವಣ್ಣ ಬಿಸ್ಕೇಟ್ ಎಸೆದಿಲ್ಲ. ಅವರು ಅಂತಃಕರಣ ಉಳ್ಳವರು. ಮಾನವೀಯತೆಯಿಂದ ಕೆಲಸ ಮಾಡುತ್ತಾರೆ. ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ವೈಮಾನಿಕ ಸಮೀಕ್ಷೆ ವೇಳೆ ಪತ್ರಿಕೆ ಓದುತ್ತಾ ಕುಳಿತಿದ್ದರು ಎಂಬ ಅಪಪ್ರಚಾರ ನಡೆಯುತ್ತಿದೆ. ಕುಮಾರಸ್ವಾಮಿ ಅವರು ಎರಡು ದಿನ ನೆರೆ ಪೀಡಿತ ಭಾಗದಲ್ಲೇ ವಾಸ್ತವ್ಯಹೂಡಿ ಪರಿಶೀಲನೆ ನಡೆಸಿದ್ದಾರೆ. ಪರಿಹಾರ ಕಾರ್ಯಗಳನ್ನು ನೋಡಿಕೊಂಡಿದ್ದಾರೆ. ಅಪಪ್ರಚಾರ ನಡೆಸುವುದು ಸರಿಯಲ್ಲ ಎಂದರು.

ಇಂದಿನ ಅದೆಷ್ಟೋ ರಾಜಕಾರಣಿಗಳಿಗೆ ದೇವರಾಜ ಅರಸು ಅವರು ಮಾದರಿಯಾಗಿದ್ದವರು. ಯುವಕರನ್ನು ಗುರುತಿಸಿ ರಾಜಕಾರಣದಲ್ಲಿ ಅವಕಾಶ ಮಾಡಿಕೊಟ್ಟರು. ಹಿಂದುಳಿದ ಮತ್ತು ದಲಿತ ವರ್ಗಗಳ ಸಬಲೀಕರಣಕ್ಕೆ ಮುಂದಾದವರು ಎಂದು ಹೇಳಿದರು. ಅಂದಿನ ಕಾಲದಲ್ಲೇ ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನದ ಪರಿಕಲ್ಪನೆ ಹುಟ್ಟುಹಾಕಿದ್ದ ಅರಸು ಅವರು, ಸಾಮಾಜಿಕ ನ್ಯಾಯದ ಹರಿಕಾರರಾಗಿದ್ದರು. ಅವರ ಆಲೋಚನೆಯಿಂದ ರಾಜ್ಯದ ಅಭಿವೃದ್ಧಿ ಗೆ ಕಾರಣವಾಯಿತು. ಅಂತಹವರ ಹುಟ್ಟುಹಬ್ಬವನ್ನು ಆಚರಿಸುವುದು ಸ್ಮರಣೀಯ ಎಂದು ಅಭಿಪ್ರಾಯಪಟ್ಟರು.

ಅರಸು ಕಾರು ಪ್ರದರ್ಶನ:
ದೇವರಾಜ ಅರಸು ಅವರು ಬಳಸುತ್ತಿದ್ದ ಕಾರನ್ನು ಮತ್ತೆ ಸರ್ಕಾರ ಖರೀದಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಬಂಡೆಪ್ಪ ಕಾಶ್ಯಂಪುರ್ ತಿಳಿಸಿದರು. ದೇವರಾಜ ಅರಸು ಅವರು 1973ರಲ್ಲಿ ಬಳಸುತ್ತಿದ್ದ ಮರ್ಸಿಡೀಸ್ ಬೆಂಜ್ ಕಾರನ್ನು ಸಾರಿಗೆ ಕ್ಷೇತ್ರದ ಉದ್ಯಮಿ ಮಹದೇವನ್ ಬಾಬು ಖರೀದಿಸಿದ್ದು, ಅದನ್ನು ಇಂದು ಅವರ ಹುಟ್ಟುಹಬ್ಬದ ಅಂಗವಾಗಿ ಪ್ರದರ್ಶನಕ್ಕೆ ಇರಿಸಲಾಗಿತ್ತು. ಈ ಕಾರಿನಲ್ಲಿ ಮೇಯರ್ ಸಂಪತ್‍ರಾಜ್ ಸೇರಿದಂತೆ ವಿವಿಧ ಗಣ್ಯರು ವಿಧಾನಸೌಧದ ಸುತ್ತ ಒಂದು ಸುತ್ತು ಹಾಕಿದರು.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ

Sri Raghav

Admin