ಇದೇ 16ರಂದು ಅರಮನೆ ಮೈದಾನದಲ್ಲಿ ಚಿತ್ರರಂಗದಿಂದ ಅಪ್ಪುಗೆ ನಮನ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ನ.3- ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕ ಫಿಲಂ ಚೇಂಬರ್ ವತಿಯಿಂದ ಇದೇ 16ರಂದು ಅರಮನೆ ಮೈದಾನದಲ್ಲಿ ವಿಶೇಷ ಸಂಗೀತ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಸಂಗೀತ ನಿರ್ದೇಶಕ ಗುರುಕಿರಣ್ ಪುನೀತ್‍ರಾಜ್‍ಕುಮಾರ್ ಅವರ ಚಿತ್ರದ ಹಾಡುಗಳನ್ನು ಹಾಡಲಿದ್ದಾರೆ.

ಬಾಲಿವುಡ್ ಸೇರಿದಂತೆ ಎಲ್ಲಾ ಚಿತ್ರರಂಗದ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಪುನೀತ್ ಅವರು ಕೊನೆಯದಾಗಿ ನನ್ನ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಎಲ್ಲರೊಂದಿಗೂ ಬೆರೆತಿದ್ದರು. ಆ ಕ್ಷಣಗಳನ್ನು ಮರೆಯಲು ಆಗುತ್ತಿಲ್ಲ. ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಅವರಿಲ್ಲ ಎಂಬ ವಿಷಯ ತಿಳಿದು ಆಘಾತವಾಯಿತು.

ಮಾತೇ ಹೊರಡದೆ ಚಿಂತೆಗೊಳಗಾದೆ. ಅಪ್ಪು ಅವರೊಂದಿಗೆ ಕಳೆದ ಆ ಸುಮಧುರ ಕ್ಷಣಗಳು ಅವರ ಸೌಮ್ಯತೆ ಹಾಗೂ ಆದರ್ಶ ಗುಣಗಳನ್ನು ಎಂದೆಗೂ ಮರೆಯಲು ಸಾಧ್ಯವಿಲ್ಲ ಎಂದು ಸಂಗೀತ ನಿರ್ದೇಶಕ ಗುರುಕಿರಣ್ ಹೇಳಿದ್ದಾರೆ.

ಅವರು ವಾಸ್ತವವಾಗಿ ಇಲ್ಲವಾದರೂ ನಮ್ಮೊಂದಿಗೆ ಸದಾ ಇರುತ್ತಾರೆ. ಅವರಿಗೊಂದು ಭಾವಪೂರ್ಣ ನಮನ ಸಲ್ಲಿಸುವ ಸೌಭಾಗ್ಯ ನನಗೆ ಸಿಗುತ್ತಿದೆ. ಹಾಡಿನ ಮೂಲಕ ಅವರಿಗೆ ನಮನ ಸಲ್ಲಿಸುವ ಒಂದು ವಿಶೇಷ ಕಾರ್ಯಕ್ರಮವನ್ನು ಚಿತ್ರರಂಗದ ಗಣ್ಯರು ಮಾಡುತ್ತಿದ್ದಾರೆ ಎಂದರು.

ತಾರಾ ದಂಡು: ಈ ಅಭೂತಪೂರ್ವ ಕಾರ್ಯಕ್ರಮದಲ್ಲಿ ಭಾರತದ ಬಹುತೇಕ ಎಲ್ಲಾ ಚಿತ್ರರಂಗದ ತಾರೆಯರು ಭಾಗವಹಿಸುವ ಸಾಧ್ಯತೆ ಇದೆ. ರಾಜ್ಯ ಸರ್ಕಾರ ಸಹಕಾರದ ಭರವಸೆ ನೀಡಿರುವ ಹಿನ್ನೆಲೆಯಲ್ಲಿ ಎಂದೂ ಮರೆಯಲಾಗದಂತಹ ವಿಶೇಷ ಕಾರ್ಯಕ್ರಮ ಇದಾಗಲಿದೆ ಎಂದು ಹೇಳಲಾಗುತ್ತಿದೆ. ಅಂದು (ನ.16) ಮಧ್ಯಾಹ್ನ 3 ಗಂಟೆಯಿಂದ ತಡರಾತ್ರಿವರೆಗೂ ಈ ಕಾರ್ಯಕ್ರಮ ನಡೆಯಲಿದೆ ಎಂದು ತಿಳಿಸಿದ್ದಾರೆ.

Facebook Comments