ಚಲನಚಿತ್ರ ವಾಣಿಜ್ಯ ಮಂಡಳಿಯ ಸಭೆಯಲ್ಲಿ ಗೊಂದಲದ ವಾತಾವರಣ

ಈ ಸುದ್ದಿಯನ್ನು ಶೇರ್ ಮಾಡಿ

ಬೆಂಗಳೂರು,ಜೂ.29- ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ 63ನೇ ವಾರ್ಷಿಕ ಸರ್ವಸದಸ್ಯರ ಸಭೆಯಲ್ಲಿ ಕೆಲಕಾಲ ಗೊಂದಲದ ವಾತಾವರಣ ನಿರ್ಮಾಣವಾಯಿತು.  ಇಂದು ನಡೆಯುತ್ತಿರುವ ಸಂಘದ ಪದಾಧಿಕಾರಿಗಳ ಚುನಾವಣೆಗೆ ಸ್ಪರ್ಧಿಸಿರುವ ಸ್ಪಧಾರ್ಥಿಗಳ ದೂರವಾಣಿ ಸಂಖ್ಯೆ ನಮೂದಿಸುವಲ್ಲಿ ಅಕ್ರಮ ನಡೆದಿದೆ ಎಂದು ಗೌರವ ಕಾರ್ಯದರ್ಶಿ ಸ್ಥಾನದ ಅಭ್ಯರ್ಥಿ ಟೇಶಿ ವೆಂಕಟೇಶ್ ಆರೋಪಿಸಿದ ಹಿನ್ನೆಲೆಯಲ್ಲಿ ಕೆಲ ಕಾಲ ವಾಗ್ವಾದ ನಡೆಯಿತು.

ಈ ವೇಳೆ ಪರ-ವಿರೋಧ ವಾಗ್ವಾದ ಕೇಳಿಬಂದು ಅಕ್ರಮ ನಡೆದಿದ್ದರೆ ಆ ಬಗ್ಗೆ ತನಿಖೆ ನಡೆಸಲಾಗುವುದು. ಇಂದು ಚುನಾವಣೆ ಇರುವ ಹಿನ್ನೆಲೆಯಲ್ಲಿ ಯಾವುದೇ ಕ್ರಮ ತೆಗೆದುಕೊಳ್ಳಲು ಬರುವುದಿಲ್ಲ. ಒಂದು ವಾರದಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಲಾಯಿತು.

ಮಾಜಿ ಅಧ್ಯಕ್ಷರಾದ ಎಸ್.ಎ.ಚಿನ್ನೇಗೌಡರು, ಕೆ.ವಿ.ಚಂದ್ರಶೇಖರ್ ಹಾಗೂ ಚುನಾವಣಾಧಿಕಾರಿಯಾಗಿರುವ ಕೆ.ಸಿ.ಎನ್.ಚಂದ್ರಶೇಖರ್ ಸಮ್ಮುಖದಲ್ಲಿ ಇಂದು ಸರ್ವಸದಸ್ಯರ ಸಭೆ ನಡೆದು ಒಂದು ವರ್ಷದ ಅವಧಿಯಲ್ಲಿ ವಾಣಿಜ್ಯ ಮಂಡಳಿಯ ಕಾರ್ಯ ವೈಖರಿ ಸೇರಿದಂತೆ ಎಲ್ಲ ವಿಷಯಗಳ ಚರ್ಚೆ ನಡೆಯಿತು.

ಚುನಾವಣೆ: ಚಲನಚಿತ್ರ ವಾಣಿಜ್ಯ ಮಂಡಳಿಯ ವಿವಿಧ ವಿಭಾಗಗಳಿಗೆ ನಡೆಯಲಿರುವ ಚುನಾವಣೆ ವಾಣಿಜ್ಯ ಮಂಡಳಿ ಸಮೀಪದ ಗುರುರಾಜ ಕಲ್ಯಾಣ ಮಂಟಪದಲ್ಲಿ ಮಧ್ಯಾಹ್ನ 2ರಿಂದ ಸಂಜೆ 6ರವರೆಗೆ ನಡೆಯಲಿದೆ. ಚುನಾವಣೆಯಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಲಾಗುತ್ತಿದೆ.

6 ಗಂಟೆ ನಂತರ ಫಲಿತಾಂಶ ಪ್ರಕಟಗೊಳ್ಳಲಿದ್ದು, ನೂತನ ಪದಾಧಿಕಾರಿಗಳ ಆಯ್ಕೆ ನಡೆಯಲಿದ್ದು, ನಾಳೆ ಮಂಡಳಿಯಲ್ಲಿ ಅಧಿಕೃತವಾಗಿ ನೂತನ ಸದಸ್ಯರ ಪದಗ್ರಹಣ ಕಾರ್ಯಕ್ರಮ ನೆರವೇರಲಿದೆ.

Facebook Comments

( ಎಚ್ಚರಿಕೆ..! : ಈ ಸಂಜೆ ಸುದ್ದಿಗಳನ್ನು ನಕಲು ಮಾಡುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ) > #ವಾಟ್ಸಾಪ್‌ನಲ್ಲಿ ಸುದ್ದಿಗಳನ್ನು ಪಡೆಯಲು 7795582478 ಸಂಖ್ಯೆಯನ್ನು ನಿಮ್ಮ ಮೊಬೈಲ್ ನಲ್ಲಿ SAVE ಮಾಡಿಕೊಂಡು HI EESANJE ಎಂದು ಸಂದೇಶ ಕಳಿಸಿ